ADVERTISEMENT

ಶ್ರೀಲಂಕಾ ಹಿಂಸಾಚಾರ ಕಟ್ಟುನಿಟ್ಟಾಗಿ ನಿಯಂತ್ರಿಸಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಶ್ರೀಲಂಕಾ ಹಿಂಸಾಚಾರ ಕಟ್ಟುನಿಟ್ಟಾಗಿ ನಿಯಂತ್ರಿಸಿ
ಶ್ರೀಲಂಕಾ ಹಿಂಸಾಚಾರ ಕಟ್ಟುನಿಟ್ಟಾಗಿ ನಿಯಂತ್ರಿಸಿ   

ಶ್ರೀಲಂಕಾದಲ್ಲಿ ಹಿಂಸಾಚಾರಗಳು ಮರುಕಳಿಸಿವೆ. ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹಿಂಸಾಚಾರಗಳು ಆತಂಕಕಾರಿ. ಹಿಂಸೆ ಭುಗಿಲೆದ್ದ ನಂತರ ರಾಷ್ಟ್ರದಾದ್ಯಂತ ತುರ್ತು ಪರಿಸ್ಥಿತಿ ಹೇರಲಾಗಿದೆ. ಹೀಗಿದ್ದೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಭಾರತದ ದಕ್ಷಿಣ ಭಾಗದ ತುತ್ತತುದಿಯಲ್ಲಿರುವ ಈ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದೆ. ಕಳೆದ ಆರು ವರ್ಷಗಳಲ್ಲಿ ತುರ್ತುಪರಿಸ್ಥಿತಿ ಹೇರುವಂತಹ ಸ್ಥಿತಿ ಸೃಷ್ಟಿಯಾಗಿದ್ದು ಇದೇ ಮೊದಲು. ರಸ್ತೆ ಮಧ್ಯೆ ನಡೆದ ಕ್ಷುಲ್ಲಕ ಜಗಳವೊಂದು ಹಿಂಸಾಚಾರಕ್ಕೆ ತಿರುಗಿ ಈ ಪರಿ ರಾಷ್ಟ್ರವನ್ನು ವ್ಯಾಪಿಸಿಕೊಂಡಿರುವುದು ಕಳವಳಕಾರಿ. ಶ್ರೀಲಂಕಾದ ಮಧ್ಯಭಾಗದಲ್ಲಿರುವ ಪ್ರವಾಸಿ ಸ್ಥಳ ಕ್ಯಾಂಡಿಯಲ್ಲಿ ಬೌದ್ಧ ಸಿಂಹಳೀಯ ಸಮುದಾಯಕ್ಕೆ ಸೇರಿದ ಟ್ರಕ್ ಚಾಲಕನೊಬ್ಬನ ಜೊತೆ ಮುಸ್ಲಿಂ ಸಮುದಾಯದವರು ನಡೆಸಿದ ಜಗಳ, ಈ ಹಿಂಸಾಚಾರಗಳಿಗೆ ಮೂಲ. ಮಾತಿಗೆ ಮಾತು ಬೆಳೆಯುತ್ತಾ ಹೋಗಿ ಇದು ಹಿಂಸೆಗೆ ತಿರುಗಿದ್ದಲ್ಲದೆ ಆ ಚಾಲಕನ ಸಾವಿಗೂ ಕಾರಣವಾಯಿತು. ನಂತರ ಪೂರ್ವ ಕರಾವಳಿಯ ಅಂಪಾರಾದಲ್ಲಿ ಅಗ್ನಿಗೆ ಆಹುತಿಯಾದ ಕಟ್ಟಡದಲ್ಲಿ ಮುಸ್ಲಿಂ ವ್ಯಕ್ತಿಯ ದೇಹ ಪತ್ತೆಯಾದದ್ದು ಜನಾಂಗೀಯ ದ್ವೇಷದ ಕಿಚ್ಚಿಗೆ ಮತ್ತಷ್ಟು ಪ್ರಚೋದನೆ ನೀಡುವಂತಾದದ್ದು ದುರದೃಷ್ಟಕರ.

ಶ್ರೀಲಂಕಾದಲ್ಲಿ ತಮಿಳು ಪ್ರತ್ಯೇಕತಾವಾದಿಗಳ ಜೊತೆಗಿನ ಅಂತರ್‌ಯುದ್ಧ  2009ರಲ್ಲಷ್ಟೇ ಅಂತ್ಯ ಕಂಡಿದೆ. ಈಗ ಸಿಂಹಳೀಯರು ಹಾಗೂ ಮುಸ್ಲಿಮರು ಎಂಬಂಥ ಧರ್ಮ ವಿಭಜನೆ ಆಧಾರದಲ್ಲಿ ಮತ್ತೆ ಸಂಘರ್ಷ ಆರಂಭವಾಗಿರುವುದು ವಿಷಾದನೀಯ. ಶ್ರೀಲಂಕಾದ 2.12 ಕೋಟಿ ಜನಸಂಖ್ಯೆಯಲ್ಲಿ ಸಿಂಹಳೀಯ ಬೌದ್ಧರು ಶೇ 75ರಷ್ಟಿದ್ದಾರೆ. ಮುಸ್ಲಿಮರು ಶೇ 9ರಿಂದ 10ರಷ್ಟಿದ್ದು ತಮಿಳರ ನಂತರ ರಾಷ್ಟ್ರದಲ್ಲಿರುವ ಮೂರನೇ ಅತಿ ದೊಡ್ಡ ಸಮುದಾಯವಾಗಿದೆ. ಶ್ರೀಲಂಕಾದಲ್ಲಿ ತಮಿಳು ಪ್ರತ್ಯೇಕತಾವಾದಿಗಳ ಜೊತೆಗಿನ ಅಂತರ್‌ಯುದ್ಧ ಅಂತ್ಯವಾಗುತ್ತಿರುವಾಗಲೇ ‘ಬೋದು ಬಲ ಸೇನ’ದಂತಹ ಬೌದ್ಧ ರಾಷ್ಟ್ರೀಯವಾದಿ ಗುಂಪುಗಳು ದೊಡ್ಡದಾಗಿ ಉದಯವಾದವು ಎಂಬುದನ್ನು ಇಲ್ಲಿ ಸ್ಮರಿಸಬೇಕು. ಎಲ್‌ಟಿಟಿಇಯ ಅಂತ್ಯದೊಂದಿಗೆ ಸಿಂಹಳೀಯರ ವಿಜಯದ ವಿಚಾರಧಾರೆ ಹೆಚ್ಚು ಬಲ ಪಡೆದುಕೊಂಡಿತು. ಶ್ರೀಲಂಕಾದ ಸಿಂಹಳೀಯ ಹಾಗೂ ಬೌದ್ಧ ಸ್ವರೂಪಕ್ಕೆ ಬೆದರಿಕೆ ಇದೆ ಎಂಬಂತಹ ಭೀತಿಗಳನ್ನು ಬಿತ್ತುವುದಕ್ಕೆ ಶುರುಮಾಡಲಾಯಿತು. ಇದು ಮುಸ್ಲಿಮರ ವಿರುದ್ಧದ ದ್ವೇಷವಾಗಿಯೂ ಪರಿಣಮಿಸಿದ್ದು ವಿಷಾದನೀಯ. ಮುಸ್ಲಿಮರ ಜನನ ಪ್ರಮಾಣ ಹಾಗೂ ಅವರು ಹೊಂದಿರುವಂತಹ ಸಂಪತ್ತಿನ ಬಗ್ಗೆ ಸಿಂಹಳೀಯ ರಾಷ್ಟ್ರೀಯವಾದಿಗಳು  ಬಿತ್ತಿದ ಸುಳ್ಳು ವದಂತಿಗಳೂ ಹಿಂಸೆಯ ಜ್ವಾಲೆಗೆ ತುಪ್ಪ ಸುರಿದವು ಎಂದು  ವಿಶ್ಲೇಷಣೆಗಳು ಹೇಳಿವೆ. ಶ್ರೀಲಂಕಾದ ಕೇಂದ್ರೀಯ ಹಾಗೂ ಪೂರ್ವ ಭಾಗಗಳಲ್ಲಿ ಹಿಂಸಾಚಾರಗಳು ಒಂದೇ ಬಾರಿ ಆರಂಭವಾಗಿರುವುದು ಹಾಗೂ ವದಂತಿಗಳನ್ನು  ಹಬ್ಬಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡಿರುವ ರೀತಿ ನೋಡಿದರೆ ಈ ಸಂಘರ್ಷ ಪೂರ್ವಯೋಜಿತ ಎಂಬಂತಹ ಭಾವನೆಯನ್ನೂ ಉಂಟುಮಾಡುತ್ತದೆ ಎಂಬ ವ್ಯಾಖ್ಯಾನಗಳಿವೆ. ತಮಿಳರ ಜೊತೆಗಿನ ಜನಾಂಗೀಯ ಸಂಘರ್ಷದ ರಕ್ತಪಾತದ ನೆನಪುಗಳೇ ಇನ್ನೂ ಸ್ಮೃತಿಯಿಂದ ಅಳಿಸಿಲ್ಲ. ಮೂರು ದಶಕಗಳ ಕಾಲ ನಡೆದ ಜನಾಂಗೀಯ ಅಂತರ್ಯುದ್ಧದಿಂದ ಚೇತರಿಸಿಕೊಳ್ಳಲು ರಾಷ್ಟ್ರ ಇನ್ನೂ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ಬಗೆಯ ಸಂಘರ್ಷ, ಮತ್ತೆ ಹುಟ್ಟುಹಾಕಬಹುದಾದ ಅಸ್ಥಿರತೆಯ ಭೀತಿ ದೊಡ್ಡದು. ಹೀಗಾಗಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸಹಿಸುವುದಿಲ್ಲ ಎಂಬ ಸಂದೇಶವನ್ನು ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ಸಾರ್ವಜನಿಕರಿಗೆ ರವಾನಿಸುವುದು ಅಗತ್ಯ. ಜನಾಂಗೀಯ ಸಂಘರ್ಷದ ದೀರ್ಘಾವಧಿ ಪರಿಣಾಮಗಳ ಬಗ್ಗೆ ಶ್ರೀಲಂಕಾ ಅರಿತುಕೊಳ್ಳಬೇಕು. ಈ ಹಿಂದೆ ತಮಿಳು ಸಮುದಾಯದಲ್ಲಾದಂತೆ  ಶ್ರೀಲಂಕಾದ ಮುಸ್ಲಿಂ ಯುವಕರೂ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತಹ ಸ್ಥಿತಿ ಸೃಷ್ಟಿಯಾಗುವುದಕ್ಕೆ ಆಸ್ಪದ ನೀಡಬಾರದು. ಹಿಂಸೆಗೆ ಪ್ರಚೋದಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ದ್ವೀಪರಾಷ್ಟ್ರದ ಅಲ್ಪಸಂಖ್ಯಾತ ಸಮುದಾಯಕ್ಕೆ ಭದ್ರತೆಯ ಭರವಸೆ ಮೂಡಿಸುವುದು ತಕ್ಷಣದ ಅಗತ್ಯ. ಇಂತಹ ಸಂಘರ್ಷದಲ್ಲಿ ರಾಜಕೀಯ ಮಾಡುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT