ADVERTISEMENT

ಸಂತನ ಸೋಗಿನಲ್ಲಿ ವಂಚನೆ ಕಾನೂನಿಗೆ ಯಾರೂ ಅತೀತರಲ್ಲ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:48 IST
Last Updated 26 ಏಪ್ರಿಲ್ 2018, 19:48 IST
ಸಂತನ ಸೋಗಿನಲ್ಲಿ ವಂಚನೆ ಕಾನೂನಿಗೆ ಯಾರೂ ಅತೀತರಲ್ಲ
ಸಂತನ ಸೋಗಿನಲ್ಲಿ ವಂಚನೆ ಕಾನೂನಿಗೆ ಯಾರೂ ಅತೀತರಲ್ಲ   

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಅಕ್ರಮವಾಗಿ ಕೂಡಿ ಹಾಕಿದ ಮತ್ತು ಕ್ರಿಮಿನಲ್‌ ಸಂಚು ರೂಪಿಸಿದ ಆರೋಪದ ವಿಚಾರಣೆ ನಡೆಸಿದ ಜೋಧಪುರದ ನ್ಯಾಯಾಲಯವು ಆಸಾರಾಂ ಬಾಪು ಎಂಬ ಸ್ವಘೋಷಿತ ದೇವಮಾನವನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ 2013ರಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಆಸಾರಾಂ, ಸಾಯುವವರೆಗೆ ಜೈಲುಶಿಕ್ಷೆ ಅನುಭವಿಸಬೇಕೆಂದು ಕೋರ್ಟ್‌ ತೀರ್ಪಿತ್ತಿದೆ. ಆಸಾರಾಂನ ಇಬ್ಬರು ಸಹಚರರೂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಆರೋಪಪಟ್ಟಿಯಲ್ಲಿ ಹೆಸರಿದ್ದ ಇನ್ನಿಬ್ಬರು ಸಾಕ್ಷ್ಯದ ಕೊರತೆಯಿಂದ ಬಿಡುಗಡೆ ಹೊಂದಿದ್ದಾರೆ. ₹ 10 ಸಾವಿರ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಹೊಂದಿದ್ದು ಸಹಸ್ರಾರು ಅಂಧಾನುಯಾಯಿಗಳ ಬೆಂಬಲ ಹೊಂದಿರುವ ಆಸಾರಾಂನ ಈ ಅಕೃತ್ಯದ ತನಿಖೆಯನ್ನು ಬೆದರಿಕೆಯ ನಡುವೆಯೂ ಅತ್ಯಂತ ನಿರ್ಭೀತಿಯಿಂದ ಕೈಗೊಂಡ ಪೊಲೀಸ್‌ ಅಧಿಕಾರಿಗಳು ಅಭಿನಂದನಾರ್ಹರು. ತಪ್ಪು ಮಾಡಿದವರು ಎಷ್ಟೇ ಪ್ರತಿಷ್ಠಿತರಾದರೂ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ನ್ಯಾಯಾಲಯದ ಈ ತೀರ್ಪು ಸಾಬೀತುಪಡಿಸಿದೆ. ಧರ್ಮದ ಹೆಸರಿನಲ್ಲಿ ಅತ್ಯಾಚಾರ, ಮೋಸ, ವಂಚನೆ ಮಾಡುವ ಇಂತಹ ವಂಚಕರ ಬಗ್ಗೆ ಜನರು ಯಾವುದೇ ಕರುಣೆ ತೋರಿಸಬೇಕಾದ ಅಗತ್ಯವಿಲ್ಲ.

‘ಆಸಾರಾಂ, ಸಂತ್ರಸ್ತೆಯು ತನ್ನ ಮೇಲಿಟ್ಟಿದ್ದ ನಂಬಿಕೆಗೆ ದ್ರೋಹ ಮಾಡಿದ್ದು ಮಾತ್ರವಲ್ಲ, ಸಮಾಜದಲ್ಲಿ ಸಂತರ ಕುರಿತು ಇರುವ ಗೌರವಾರ್ಹ ಭಾವನೆಗೂ ಕಳಂಕ ತಂದಿದ್ದಾರೆ’ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದ್ದು ಸರಿಯಾಗಿಯೇ ಇದೆ. ಆರೋಪಿಯ ಪರವಾಗಿ ಹೈಕೋರ್ಟ್‌ಗೆ ಅಪೀಲು ಸಲ್ಲಿಸುವುದಾಗಿ ಆಸಾರಾಂ ಪರ ವಕೀಲರು ಹೇಳಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣ ಬಿದ್ದುಹೋಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಈಗ ಸರ್ಕಾರದ ಮೇಲಿದೆ. ಜೋಧಪುರ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಆರಂಭವಾದ ಬಳಿಕ ಪ್ರಕರಣದ ಮೂವರು ಸಾಕ್ಷಿಗಳು ಕೊಲೆಯಾಗಿದ್ದು, ತನಿಖೆ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿಯೂ ಅಂಧಾನುಯಾಯಿಗಳಿಂದ ಬೆದರಿಕೆ ಎದುರಿಸಿದ್ದರು. ಈ ಕೊಲೆ ಪ್ರಕರಣಗಳಲ್ಲೂ ಸಂತ್ರಸ್ತರಿಗೆ ಶೀಘ್ರ ನ್ಯಾಯ ದೊರಕಬೇಕಿದೆ. ಆಸಾರಾಂ ಜೊತೆಗೆ ಬಹುತೇಕ ಅಧಿಕಾರಸ್ಥರು ಮತ್ತು ರಾಜಕೀಯ ನಾಯಕರು ನಿಕಟ ಸಂಪರ್ಕ ಹೊಂದಿರುವುದು, ನಮ್ಮ ಸಮಾಜದಲ್ಲಿ ರಾಜಕಾರಣಿಗಳು ಮತ್ತು ಸ್ವಘೋಷಿತ ದೇವಮಾನವರ ನಡುವೆ ಹಣಕಾಸಿನ ಅಕ್ರಮ ಸಂಬಂಧ ಇರುವುದನ್ನೂ ಬಯಲು ಮಾಡಿದೆ. ನಮ್ಮ ಧರ್ಮಕೇಂದ್ರಗಳಲ್ಲಿ ಅಪಾರ ಪ್ರಮಾಣದ ಸಂಪತ್ತು ಕ್ರೋಡೀಕರಣ ಆಗುವುದರ ಬಗ್ಗೆ ಸೂಕ್ತ ತನಿಖೆ ನಡೆಸಿದರೆ, ರಾಜಕಾರಣಿಗಳ ಕಪ್ಪುಹಣದ ಇನ್ನೊಂದು ಮುಖವೂ ಬಯಲಾಗಬಹುದು. ಏನೇ ಆದರೂ ಈ ಪ್ರಕರಣದಲ್ಲಿ ನ್ಯಾಯಾಂಗ ತನ್ನ ನಿಷ್ಪಕ್ಷಪಾತ ಹಾಗೂ ನಿಷ್ಠುರ ನಡೆಯ ಮೂಲಕ ಜನರಲ್ಲಿ ಕಾನೂನುಬದ್ಧ ಆಡಳಿತದ ಬಗ್ಗೆ ಇನ್ನೂ ಉಳಿದಿರುವ ನಂಬಿಕೆಯನ್ನು ದೃಢಪಡಿಸಿರುವುದು ಸ್ವಾಗತಾರ್ಹ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT