ADVERTISEMENT

ಸಬ್ಸಿಡಿ ಪದ್ಧತಿ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST

ಈ ಸಾಲಿನಿಂದ ನೂರ ಇಪ್ಪತ್ತೈದು ಚಲನಚಿತ್ರಗಳಿಗೆ ಸಬ್ಸಿಡಿ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಜತೆಯಲ್ಲೇ, ‘ಸಬ್ಸಿಡಿಗಾಗಿಯೇ ಚಿತ್ರ ತಯಾರಿಸುವವರನ್ನು ಪ್ರೋತ್ಸಾಹಿಸಿದಂತಾಗುತ್ತದೆ’ ಎನ್ನುವ ಟೀಕೆಯೂ ಬಂದಿದೆ.

ನಿಜವೇ, ವರ್ಷದಿಂದ ವರ್ಷಕ್ಕೆ ಹೆಚ್ಚುಹೆಚ್ಚು ಉದಾರತೆ ಪ್ರದರ್ಶಿಸುವ ಸರ್ಕಾರ, ತನ್ನ ಧೋರಣೆಯನ್ನು ಬದಲಿಸುವವರೆಗೆ ದುರುಪಯೋಗ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ನಿಜಕ್ಕೂ ಕನ್ನಡದಲ್ಲಿ ಗುಣಮಟ್ಟದ ಚಲನಚಿತ್ರಗಳು ಬರಬೇಕು ಎನ್ನುವುದೇ ಉದ್ದೇಶವಾಗಿದ್ದರೆ, ಸಹಾಯಧನ ನೀಡುವ ಪದ್ಧತಿ ಬದಲಾಗಬೇಕು.

ಹೇಗಾದರೂ ಚಲನಚಿತ್ರ ತಯಾರಿಸಿಕೊಂಡು ಬನ್ನಿ, ಅವನ್ನು ಒಂದು ಸಮಿತಿ ಅಳೆದು ಸಬ್ಸಿಡಿ ಕೊಡಬೇಕೋ, ಬೇಡವೋ ಎನ್ನುವುದನ್ನು ತೀರ್ಮಾನಿಸುತ್ತದೆ ಎನ್ನುವ ವ್ಯವಸ್ಥೆ  ಕೊನೆಯಾಗಬೇಕು.  ಬದಲಿಗೆ ಚಲನಚಿತ್ರವೊಂದರ ತಯಾರಿಕೆಯ ಹಂತದಲ್ಲಿಯೇ ಇದು ಒಂದು ಉತ್ತಮ ಪ್ರಯತ್ನ ಆಗಲಿದೆ ಎನ್ನುವುದನ್ನು ಸರ್ಕಾರ ಗುರುತಿಸಬೇಕು.

ADVERTISEMENT

ಅದಕ್ಕಾಗಿ, ಪ್ರತೀವರ್ಷ ಸರ್ಕಾರ ಸಿದ್ಧತಾ ಹಂತದಲ್ಲಿರುವ ಚಿತ್ರಕಥೆಗಳನ್ನು ಸ್ಪರ್ಧೆಗೆ ಆಹ್ವಾನಿಸಬೇಕು. ಅವುಗಳಲ್ಲಿ ಸುಮಾರು ಐವತ್ತನ್ನು ಆಯ್ಕೆ ಮಾಡಿ ತಲಾ ₹4 ಲಕ್ಷ ಸ್ಕ್ರಿಪ್ಟ್ ಡೆವಲಪ್‌ಮೆಂಟ್ ಸಪೋರ್ಟ್ ಫಂಡ್ ಕೊಟ್ಟು ಪ್ರೋತ್ಸಾಹಿಸಬೇಕು.

ಆರರಿಂದ ಎಂಟು ತಿಂಗಳ ಸಮಯ ಕೊಟ್ಟು ಆ ಐವತ್ತು ಪೂರ್ಣಗೊಳಿಸಿದ ಚಿತ್ರಕತೆಗಳನ್ನು ತುಲನೆ ಮಾಡಿ, ಅವುಗಳಲ್ಲಿ ಇಪ್ಪತ್ತರಿಂದ ಇಪ್ಪತ್ತೈದನ್ನು  ಆಯ್ಕೆಮಾಡಬೇಕು. ಅವುಗಳ ಚಿತ್ರೀಕರಣಕ್ಕೆ ತಲಾ ₹40 ರಿಂದ 50 ಲಕ್ಷ ಪ್ರೋತ್ಸಾಹಧನ ಒದಗಿಸಬೇಕು.

ಈ ಮೇಲಿನ ಸ್ಪರ್ಧೆಯಲ್ಲಿ ಭಾಗವಹಿಸದ, ತಯಾರಿಕಾ ಹಂತದಲ್ಲಿರುವ ಕೆಲವು ಉತ್ತಮ ಪ್ರಯತ್ನಗಳೂ ಮುಗಿಸುವ ಹಂತದಲ್ಲಿ ಹಣದ ಕೊರತೆ ಅನುಭವಿಸಬಹುದು. ಅಂಥ ಚಿತ್ರಗಳ ರಫ್‌ ಕಟ್‌ಗಳನ್ನು ಸ್ಪರ್ಧೆಗೆ ಆಹ್ವಾನಿಸಿ, ಅವುಗಳಲ್ಲಿ ಕೆಲವನ್ನು ಆಯ್ದು ಫಿನಿಶಿಂಗ್ ಸಪೋರ್ಟ್ ಫಂಡ್ ಒದಗಿಸಬೇಕು. ಇವೆಲ್ಲವೂ ಸಬ್ಸಿಡಿಯ ವಿವಿಧ ರೂಪಗಳಷ್ಟೇ. ಈ ಮೇಲಿನಂತೆ ವಿತರಿಸಿದರೂ ಅದರ ಮೊತ್ತ ಸರ್ಕಾರ ಇಂದು ಸಬ್ಸಿಡಿಗಾಗಿ  ತೆಗೆದಿರಿಸುವ ವಾರ್ಷಿಕ ಬಜೆಟ್‌ಗಿಂತ ಹೆಚ್ಚಾಗುವುದಿಲ್ಲ. ವರ್ಷಕ್ಕೆ ಕನಿಷ್ಠ 20–30 ಉತ್ತಮ ಮಟ್ಟದ ಚಿತ್ರಗಳು ತಯಾರಾಗಿರುತ್ತವೆ.

ಕೊನೆಯದಾಗಿ, ಚಲನಚಿತ್ರ ಅಕಾಡೆಮಿಗೆ ಸ್ವಾಯತ್ತತೆ ಲಭಿಸಬೇಕಿದೆ.  ಅಕಾಡೆಮಿಯೂ ಸಹ ತಾನು ಚಲನಚಿತ್ರ ಮಾಧ್ಯಮದಲ್ಲಿ ಶಾಸ್ತ್ರೀಯ ಅಭ್ಯಾಸ, ಆವಿಷ್ಕಾರಗಳನ್ನು ಉತ್ತೇಜಿಸುವ ಸಂಸ್ಥೆಯಾಗಬೇಕು ಎನ್ನುವುದನ್ನು ಮನಗಾಣಬೇಕು.

ಸರ್ಕಾರ ಈ ನಿಟ್ಟಿನಲ್ಲಿ ಬದಲಾವಣೆ ತಂದು, ತನ್ನ ಪ್ರೋತ್ಸಾಹಕ ನೀತಿಯಲ್ಲಿ ಪ್ರಾಮಾಣಿಕತೆ ಮೆರೆಯುವುದೇ? 
-ಕೇಸರಿ ಹರವೂ, ಚಿತ್ರ ನಿರ್ದೇಶಕ,  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.