ADVERTISEMENT

ಹಿಂಬಾಲಿಸುವಿಕೆ: ಗಂಭೀರ ಅಪರಾಧವಾಗಿ ಪರಿಗಣಿಸಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2017, 19:30 IST
Last Updated 8 ಆಗಸ್ಟ್ 2017, 19:30 IST
ಹಿಂಬಾಲಿಸುವಿಕೆ: ಗಂಭೀರ ಅಪರಾಧವಾಗಿ ಪರಿಗಣಿಸಿ
ಹಿಂಬಾಲಿಸುವಿಕೆ: ಗಂಭೀರ ಅಪರಾಧವಾಗಿ ಪರಿಗಣಿಸಿ   

ಮಹಿಳೆಯ ಸುರಕ್ಷತೆ ವಿಚಾರ ಇತ್ತೀಚಿನ ದಿನಗಳಲ್ಲಿ ನಿಯಮಿತವಾಗಿ ರಾಷ್ಟ್ರೀಯ ಸುದ್ದಿಯಾಗುತ್ತಿದೆ. ಚಂಡೀಗಡದಲ್ಲಿ ನಡೆದ ಹಿಂಬಾಲಿಸುವಿಕೆ ಪ್ರಕರಣ ಈಗ ರಾಷ್ಟ್ರದ ಗಮನ ಸೆಳೆದುಕೊಂಡಿದೆ. ಈ ಪ್ರಕರಣದ ಸಂತ್ರಸ್ತೆ ಹಾಗೂ ಆರೋಪಿಗಳು ಪ್ರಭಾವಿ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಸಂತ್ರಸ್ತೆ ವರ್ಣಿಕಾ,  ಹಿರಿಯ ಐಎಎಸ್ ಅಧಿಕಾರಿಯ ಪುತ್ರಿ. ಆರೋಪಿ ವಿಕಾಸ್, ಬಿಜೆಪಿ ಹರಿಯಾಣ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಅವರ ಪುತ್ರ. ಕಾರಿನಲ್ಲಿ ಒಂಟಿಯಾಗಿ ಸಾಗುತ್ತಿದ್ದ ವರ್ಣಿಕಾರನ್ನು ತಮ್ಮ ಕಾರಿನಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ ಆರೋಪವನ್ನು ವಿಕಾಸ್ ಹಾಗೂ ಅವರ ಸ್ನೇಹಿತ ಅಶೀಷ್ ಕುಮಾರ್ ಎದುರಿಸುತ್ತಿದ್ದಾರೆ. ತಡರಾತ್ರಿಯಲ್ಲಿ ಹಿಂಬಾಲಿಸುವಿಕೆಯ ಕಿರುಕುಳಕ್ಕೆ ಒಳಗಾದ ವರ್ಣಿಕಾ, ಪೊಲೀಸರಿಗೆ ಫೋನ್ ಮಾಡಿ ನೆರವು ಪಡೆದುಕೊಳ್ಳುವಲ್ಲಿ ಸಮಯಪ್ರಜ್ಞೆ ಪ್ರದರ್ಶಿಸಿರುವುದು ಮೆಚ್ಚುಗೆಯ ವಿಚಾರ. ಹಾಗೆಯೇ, ಚಂಡೀಗಡ ಪೊಲೀಸರೂ ವರ್ಣಿಕಾ ಕರೆಗೆ ತ್ವರಿತವಾಗಿ ಸ್ಪಂದಿಸಿ ರಕ್ಷಿಸಿರುವುದು ಶ್ಲಾಘನೀಯ. ಭಾರತೀಯ ದಂಡ ಸಂಹಿತೆ (ಐಪಿಸಿ) 354ಡಿ ಸೆಕ್ಷನ್ ಅನ್ವಯ ಹಿಂಬಾಲಿಸುವಿಕೆ ಜಾಮೀನು ನೀಡಬಹುದಾದ ಅಪರಾಧ. ಹೀಗಾಗಿ, ಒಂದೇ ದಿನದಲ್ಲಿ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಶಂಕಿತರಲ್ಲಿ ಒಬ್ಬಾತ ಹುಡುಗಿಯ ಕಾರು ಬಾಗಿಲು ತೆರೆಯಲು ಯತ್ನಿಸಿರುವುದರಿಂದ ಇದು ಬರೀ ಹಿಂಬಾಲಿಸುವಿಕೆಯ ಮೊಕದ್ದಮೆ ಆಗುವುದಿಲ್ಲ. ಜೊತೆಗೆ ಅಪಹರಣ ಯತ್ನದ ಆರೋಪವನ್ನು ಸಂತ್ರಸ್ತೆಯೂ ಮಾಡಿದ್ದಾರೆ. ಹೀಗಿದ್ದೂ ಅಪಹರಣ ಆರೋಪವನ್ನು ದಾಖಲಿಸಿಕೊಳ್ಳುವಲ್ಲಿ ಪೊಲೀಸರ ವೈಫಲ್ಯ ಪ್ರಶ್ನಾರ್ಹ. ಅಪಹರಣ ಯತ್ನದ ಆರೋಪ ಇದ್ದಾಗಲೂ ಆರೋಪಿಗಳಿಗೆ ಜಾಮೀನು ತಕ್ಷಣ ನೀಡಿರುವುದು ಸಲ್ಲದು. ಆರೋಪಿಗಳನ್ನು ಹೆಚ್ಚಿನ ಶಿಕ್ಷೆಯಿಂದ ತಪ್ಪಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡದಂತೆ ಪೊಲೀಸರು ಎಚ್ಚರ ವಹಿಸಬೇಕು. ಘಟನೆಯಲ್ಲಿ ರಾಜಕಾರಣಿಯ ಮಗ ಒಳಗೊಂಡಿರುವುದರಿಂದ ರಾಜಕಾರಣವೂ ಈ ಪ್ರಕರಣದಲ್ಲಿ ನುಸುಳಿದೆ. ಇದು ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರಬಾರದು ಅಥವಾ ಒತ್ತಡ ಸೃಷ್ಟಿಸಬಾರದು.

ಹಿಂಬಾಲಿಸುವಿಕೆ ಅಪರಾಧದ ಬಗ್ಗೆ ದೂರು ನೀಡಲು ಹುಡುಗಿಯರು ಮುಂದೆ ಬರುವುದೇ ಕಡಿಮೆ. ಪೊಲೀಸ್ ವ್ಯವಸ್ಥೆಯ ದೋಷ ಹಾಗೂ ಕೋರ್ಟ್‌ನಲ್ಲಿ ಕೇಸ್ ಮುಂದುವರಿಸುವ ಕಷ್ಟಗಳಿಂದಾಗಿ ದೂರು ನೀಡಲು ಹಿಂಜರಿಯುವುದು ಸಾಮಾನ್ಯ. ಹಿಂಬಾಲಿಸುವಿಕೆಯನ್ನು ಮಾಮೂಲು ಕಿರುಕುಳ ಎಂದು ಇದುವರೆಗೆ ಕಡೆಗಣಿಸಿಕೊಂಡೇ ಬರಲಾಗಿತ್ತು. ಆದರೆ, 2013ರಲ್ಲಿ ರಾಷ್ಟ್ರದಲ್ಲಿ ಜಾರಿಯಾದ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯಲ್ಲಿ ಹಿಂಬಾಲಿಸುವಿಕೆಯನ್ನು ನಿರ್ದಿಷ್ಟ ಅಪರಾಧವಾಗಿ ಸೇರ್ಪಡೆ ಮಾಡಲಾಗಿದೆ. ಆ ನಂತರ ರಾಷ್ಟ್ರದಲ್ಲಿ ವರದಿಯಾಗುತ್ತಿರುವ ಹಿಂಬಾಲಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು ಜಾರಿಯಾದ ವರ್ಷವಾದ 2013ರಲ್ಲಿ ಸೆಕ್ಷನ್ 354 ಡಿ ಅಡಿ ಅಂಕಿಅಂಶಗಳನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಮಾಡಿಲ್ಲ. ಆದರೆ 2014ರ ಆರಂಭದಲ್ಲಿ 346 ಎಫ್‌ಐಆರ್‌ಗಳು ಪೊಲೀಸ್ ತನಿಖೆಗೆ ಕಾದಿವೆ ಎಂದು ಎನ್‌ಸಿಆರ್‌ಬಿ ಹೇಳಿತ್ತು. ಆ ನಂತರ ಆ ವರ್ಷ 4,699 ಹಿಂಬಾಲಿಸುವಿಕೆ ಪ್ರಕರಣಗಳು ದಾಖಲಾದವು. 2015ರಲ್ಲಿ 6,266 ಪ್ರಕರಣಗಳು ದಾಖಲಾಗಿವೆ. ಆದರೆ ಶಿಕ್ಷೆಯಾಗಿರುವ ಪ್ರಮಾಣ ಕಡಿಮೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಆರೋಪಪಟ್ಟಿ ದಾಖಲಾಗುವ ಮೊದಲೇ ಆರೋಪಿಗಳು ಜಾಮೀನು ಪಡೆದುಕೊಂಡಿದ್ದೂ ಇದೆ. 2015ರಲ್ಲಿ ಶೇ 26ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 2014ರಲ್ಲಿ ಶೇ 35ರಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು ಎಂದು ವರದಿಗಳು ಹೇಳುತ್ತವೆ.

ದಿನನಿತ್ಯ ಎದುರಾಗುವ ಇಂತಹ ಕಿರುಕುಳಗಳ ಬಗ್ಗೆ ಹೆಣ್ಣುಮಕ್ಕಳು ಇನ್ನು ಮೌನ ತಾಳುವುದು ಸಲ್ಲದು. ಇಂತಹ ಅಪರಾಧಗಳನ್ನು ನಿರ್ವಹಿಸುವಲ್ಲಿ ಪೊಲೀಸರೂ ಸೂಕ್ಷ್ಮತೆ ಪ್ರದರ್ಶಿಸಬೇಕು. ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಅವರು, ಸದ್ಯದ ಘಟನೆ ವ್ಯಕ್ತಿಗತವಾದದ್ದು ಎಂದು ಬಿಂಬಿಸಲು ಯತ್ನಿಸಿದ್ದಾರೆ. ಹಿರಿಯ ರಾಜಕೀಯ ಸಹೋದ್ಯೋಗಿಯ ಪುತ್ರನೇ ಆರೋಪಿಯಾಗಿರುವ ಸಂದರ್ಭದಲ್ಲಿ ‘ತಪ್ಪಿದ್ದಲ್ಲಿ ಆರೋಪಿಗೆ ಶಿಕ್ಷೆಯಾಗುತ್ತದೆ’ ಎಂದು ಯಾವುದಕ್ಕೂ ಬದ್ಧವಾಗದೆ ಮಾಮೂಲು ಹೇಳಿಕೆ ನೀಡುವುದರಿಂದ ವಿಶ್ವಾಸ ಹೆಚ್ಚುವುದಿಲ್ಲ. ನಿಷ್ಪಕ್ಷಪಾತವಾದ ತನಿಖೆಯಾಗುವುದು ಇಲ್ಲಿ ಅವಶ್ಯ. ಹೆಣ್ಣು ಭ್ರೂಣ ಹತ್ಯೆ ಹೆಚ್ಚಿರುವ ಹರಿಯಾಣದಲ್ಲಿ ವಿಶೇಷವಾಗಿ ಮಹಿಳೆಯರು ಹೆಚ್ಚು ಸುರಕ್ಷಿತ ಭಾವವನ್ನು ಹೊಂದುವುದು ಅಗತ್ಯ. ಹಾಗಾದಾಗ ರಾಜ್ಯದಲ್ಲಿ ಜಾರಿಯಲ್ಲಿರುವ ‘ಬೇಟಿ ಬಚಾವೊ’ ಪ್ರಚಾರಾಂದೋಲನ ಹೆಚ್ಚು ಅರ್ಥಪೂರ್ಣವಾಗುತ್ತದೆ ಮತ್ತು ಆ ಬಗ್ಗೆ ಮಾತನಾಡಲು ನೈತಿಕ ಹಕ್ಕಿರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.