ADVERTISEMENT

ಹುಲಿ ಸಾವು ಆತಂಕಕಾರಿ ಸೂಕ್ತ ತನಿಖೆ ಆಗಬೇಕು

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 19:30 IST
Last Updated 23 ಜನವರಿ 2017, 19:30 IST
ಹುಲಿ ಸಾವು ಆತಂಕಕಾರಿ ಸೂಕ್ತ ತನಿಖೆ ಆಗಬೇಕು
ಹುಲಿ ಸಾವು ಆತಂಕಕಾರಿ ಸೂಕ್ತ ತನಿಖೆ ಆಗಬೇಕು   

ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೆ, ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನ ಎಂಬ ಹಿರಿಮೆಗೆ ಒಳಗಾದ ರಾಜ್ಯದ ಕೀರ್ತಿಗೆ ಚ್ಯುತಿ ತರುವಂತಹ ಘಟನೆಗಳು ಈಚೆಗೆ ನಡೆದಿವೆ. ಒಂದೇ ತಿಂಗಳಲ್ಲಿ ಐದು ಹುಲಿಗಳ ಸಾವು  ಸಂಭವಿಸಿರುವುದು ಆಘಾತಕಾರಿ. ಇವುಗಳ ಪೈಕಿ ಎರಡು ಹುಲಿಗಳ ಸಾವನ್ನು ತಪ್ಪಿಸಬಹುದಿತ್ತು. ಇವುಗಳ ಸಾವನ್ನು ಕೆಲವು ಪರಿಸರವಾದಿಗಳು,  ‘ಅಧಿಕಾರಿಗಳಿಂದ ಆಗಿರುವ ಕೊಲೆ’ ಎಂದೇ ವಾದಿಸುತ್ತಿದ್ದಾರೆ.

ಹುಲಿಯನ್ನು ಅಳಿವಿನ ಅಂಚಿಗೆ ಸರಿಯುತ್ತಿರುವ  ಪ್ರಾಣಿ ಎಂದೇ ಪರಿಗಣಿಸಲಾಗಿದೆ. ಹುಲಿಗಳ ಸಂಖ್ಯೆ ಹೆಚ್ಚಿದೆ ಎಂದರೆ ಬಲಿಪ್ರಾಣಿಗಳ ಸಂಖ್ಯೆಯೂ ಹೆಚ್ಚಿದೆ  ಎಂದೇ ಅರ್ಥ. ಇದು ಕಾಡಿನ ಆರೋಗ್ಯದ ಸಂಕೇತ. ವಿಶ್ವದ ಶೇ 70ರಷ್ಟು ಹುಲಿಗಳು ಭಾರತದಲ್ಲೇ ಇವೆ. ಇತ್ತೀಚಿನ ಹುಲಿ ಗಣತಿಯ ಪ್ರಕಾರ ವ್ಯಾಘ್ರಗಳ ಸಂಖ್ಯೆ ಕರ್ನಾಟಕದಲ್ಲೇ ಅತಿ ಹೆಚ್ಚು. ಬಂಡಿಪುರ– ನಾಗರಹೊಳೆ– ಬಿಳಿಗಿರಿರಂಗನಬೆಟ್ಟ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಕಾಡಿನ ವಿಸ್ತೀರ್ಣ ಹೆಚ್ಚಾಗದೆ ಹುಲಿ ಸಂಖ್ಯೆ ಮಾತ್ರವೇ ಹೆಚ್ಚಾದರೆ ಮಾನವ– ವನ್ಯಜೀವಿ ಸಂಘರ್ಷ ತಪ್ಪಿದ್ದಲ್ಲ. ಇಂತಹ  ಇಕ್ಕಟ್ಟಿನ ಸ್ಥಿತಿಯಲ್ಲಿ ಕಾಡಿನ ರಾಜನಿಗೆ ಯಾವ ರೀತಿ ರಕ್ಷಣೆ ನೀಡಬೇಕು, ಸಂಘರ್ಷವನ್ನು ಹೇಗೆ ಹತೋಟಿಗೆ ತರಬೇಕು ಎನ್ನುವುದನ್ನು ಅರಣ್ಯ ಇಲಾಖೆ ಮರೆತಂತಿದೆ.

ನಾಗರಹೊಳೆ ಹುಲಿ ಅಭಯಾರಣ್ಯದ ಅಂತರಸಂತೆಯ ಗುಂಡತ್ತೂರು ಮೇಳದ ಹಾಡಿಯಲ್ಲಿ ಹಸುವೊಂದರ ಮೇಲೆ ದಾಳಿ ನಡೆಸಿ ಸಾಯಿಸಿ ತಿನ್ನುತ್ತಿದ್ದ ಒಂಬತ್ತು ವರ್ಷದ ಹುಲಿಗೆ ನಿಯಮ ಮೀರಿ ಮನಸ್ಸಿಗೆ ಬಂದಂತೆ ಅರಿವಳಿಕೆ ನೀಡಲಾಗಿದೆ ಎನ್ನುವ ಆರೋಪವನ್ನು ಹಿರಿಯ ಅಧಿಕಾರಿಗಳೇ ಒಪ್ಪಿದ್ದಾರೆ.  ಹುಲಿಗೆ ರಾತ್ರಿ ವೇಳೆ ಎರಡನೇ ಬಾರಿ ಅರಿವಳಿಕೆ ನೀಡಿ ಅದನ್ನು  ಹಿಡಿದು ಬೋನಿಗೆ ಹಾಕಿದ್ದಾರೆ.

ಅದು ಸತ್ತಿರುವ ವಿಚಾರ ಮುಂಜಾನೆ ಗೊತ್ತಾಗಿದೆ.  ರಾತ್ರಿ ವೇಳೆ ಹಿಡಿದಾಗಲೇ ಪ್ರಜ್ಞೆ ಬರುವಂತೆ ಮಾಡಿದ್ದರೆ ಹುಲಿಯ ಸಾವು ತಪ್ಪುತ್ತಿತ್ತು. ಅರಣ್ಯದ ಅಂಚಿನ ಗ್ರಾಮಕ್ಕೆ ನುಗ್ಗಿದ್ದ ಹುಲಿ ಹಿಡಿಯುವ ಕಾರ್ಯಾಚರಣೆಯ ಉದ್ದೇಶ ಒಳ್ಳೆಯದಾದರೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದ ಪ್ರಕಾರ ಅರಿವಳಿಕೆ ನೀಡುವ ಕಾರ್ಯಾಚರಣೆ ರಾತ್ರಿ ವೇಳೆ ನಡೆಸುವಂತಿಲ್ಲ. ರಾತ್ರಿ ಕಾರ್ಯಾಚರಣೆ ಅಪಾಯಕಾರಿ. ಕಾಡು ಪ್ರಾಣಿಗಳು ರಾತ್ರಿ ವೇಳೆ ಸರಿಯಾಗಿ ಗೋಚರಿಸುವುದಿಲ್ಲ ಎನ್ನುವುದೇ ಇದರ ಹಿಂದಿನ ತರ್ಕ.  ಈ ನಿಯಮವನ್ನೇ ಗಾಳಿಗೆ ತೂರಲಾಗಿದೆ.  

ಈ ಅವಘಡದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಆದರೆ ಅರಣ್ಯ ಸಚಿವರು ಅಂಥ ಕ್ರಮಕ್ಕೆ ಮುಂದಾಗಿಲ್ಲ. ಇದು ತೀವ್ರ ಲೋಪ. ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ವೈದ್ಯರ ಕೇಡರ್‌ ಎನ್ನುವುದೇ ಇಲ್ಲ. ಇರುವ ವೈದ್ಯರು ಪಶುಸಂಗೋಪನಾ ಇಲಾಖೆಯಿಂದ ಎರವಲು ಸೇವೆಯ ಮೇಲೆ ಬಂದವರು. ಇವರಿಗೆ ಕಾಡಿನ ಪರಿಸರದಲ್ಲಿ ಕೆಲಸ ಮಾಡಿದ ಅನುಭವ ಕಡಿಮೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈಗಲಾದರೂ ವನ್ಯಜೀವಿ ಕೇಡರ್‌  ಸೃಷ್ಟಿಸಬೇಕು. ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.