ADVERTISEMENT

ಹೊಸ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2014, 19:30 IST
Last Updated 3 ಜೂನ್ 2014, 19:30 IST

ಸಾರ್ವಜನಿಕ ಬದುಕಿನಲ್ಲಿ ಪರಿಶುದ್ಧತೆಗೆ, ಪಾರದರ್ಶಕ ಆಡಳಿತಕ್ಕೆ ಹೊಸ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಮಹತ್ವ ನೀಡುತ್ತಿ­ದ್ದಾರೆ. ತಮ್ಮ ಸಂಪುಟದ ಸಚಿವರು ಕೂಡ ಈ ವಿಷಯದಲ್ಲಿ ಮಾದರಿಯಾಗಿ­ರ­ಬೇಕು ಎನ್ನುವುದು ಅವರ ಆಶಯ.

ಇದಕ್ಕೆ ಅನುಗುಣವಾಗಿ ಕೇಂದ್ರ ಸಿಬ್ಬಂದಿ ಇಲಾಖೆ ಎಲ್ಲ ಸಚಿವರಿಗೆ ರವಾನಿಸಿದ ಸುತ್ತೋಲೆಯಲ್ಲಿ ‘ಮಂತ್ರಿ­ಗಳು ತಮ್ಮ ಆಪ್ತ ಸಿಬ್ಬಂದಿ ಹುದ್ದೆಗಳಿಗೆ ಸಂಬಂಧಿಗಳು ಮತ್ತು ನೆಂಟರಿಷ್ಟ­ರನ್ನು ನೇಮಕ ಮಾಡಿಕೊಳ್ಳಬಾರದು, ಯಾವುದೇ ಸಂದರ್ಭದಲ್ಲೂ ಸ್ವಜನ ಪಕ್ಷಪಾತಕ್ಕೆ ಅವಕಾಶ ಕೊಡಬಾರದು, ಸರ್ಕಾರಿ ಕಾಮಗಾರಿಗಳು ಮತ್ತು ಪೂರೈಕೆಗಳ ಗುತ್ತಿಗೆಗಳನ್ನು ಸಂಬಂಧಿಗಳಿಗೆ ಕೊಡಿಸಬಾರದು ಹಾಗೂ ಸಾರ್ವ­­ಜನಿಕ ಜೀವನದಲ್ಲಿ ಶುದ್ಧಹಸ್ತರಾಗಿರಬೇಕು’ ಎಂದು  ಸಲಹೆ ನೀಡಿದೆ.

ಮೋದಿ­ಯವರು ಮಂತ್ರಿಗಳಿಗೆ ಉಪದೇಶ ಮಾಡುತ್ತಿಲ್ಲ. ಸ್ವತಃ ಅದನ್ನು ಪಾಲಿ­ಸು­ತ್ತಿ­ದ್ದಾರೆ. ಅವರು ಮೂರು ಸಲ ಗುಜರಾತ್ ಮುಖ್ಯಮಂತ್ರಿ­ಯಾ­ಗಿದ್ದ ಕಾಲದಲ್ಲೂ ಸಂಬಂಧಿಗಳನ್ನು ಹತ್ತಿರ ಬಿಟ್ಟುಕೊಂಡಿರಲಿಲ್ಲ. ಅಡುಗೆ ಸಹಾಯಕ ಮತ್ತು ಇಬ್ಬರು ಆಪ್ತ ಸಿಬ್ಬಂದಿ ಬಿಟ್ಟರೆ ಅವರ ನಿವಾಸದಲ್ಲಿ ಬೇರೆ ಯಾರೂ ವಾಸವಾಗಿರಲಿಲ್ಲ. ಅವರ ಆಪ್ತ ಸಹಾಯಕರು, ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳಲ್ಲಿ ಒಬ್ಬರೂ ಅವರ ಬಂಧುಬಳಗದವರಿಲ್ಲ.  ಪ್ರಧಾನಿ ಹುದ್ದೆ ಏರಿದ ಬಳಿಕವೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಒಬ್ಬನೇ ಒಬ್ಬ ಸಂಬಂಧಿಯೂ ಜತೆಗಿಲ್ಲದೆ ಅಧಿಕೃತ ನಿವಾಸ ಪ್ರವೇಶಿಸಿದ ಮೊದಲ ಪ್ರಧಾನಿ ಅವರು.

ನಾವೆಲ್ಲ ನೋಡಿದಂತೆ, ಯಾರಾದರೂ ಮಂತ್ರಿಯಾದರೆ ಸಾಕು. ಅವರ ಕುಟುಂಬದ ಸದಸ್ಯರು, ಬಂಧು ಬಳಗದವರು ತಾವೇ ಹಿಂದಿನಿಂದ ಅಧಿಕಾರ ಚಲಾಯಿಸುತ್ತಾರೆ. ತಮ್ಮ ಕೈ ಬಾಯಿ ಕೆಡಿಸಿಕೊಳ್ಳುವುದಲ್ಲದೆ ಮಂತ್ರಿಗೂ ಕೆಟ್ಟ ಹೆಸರು ತರುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕುವ ಮೊದಲ ಹೆಜ್ಜೆ ಈ ಸುತ್ತೋಲೆ.

ಸ್ವಜನ ಪಕ್ಷಪಾತ ಮತ್ತು ಅದರಿಂದ ಬೆಳೆಯುವ ಭ್ರಷ್ಟಾಚಾರ ದೇಶಕ್ಕೆ ಎಷ್ಟು ಹಾನಿ ಮಾಡಿದೆ ಎಂಬುದು ಎಲ್ಲರಿಗೆ ಗೊತ್ತು. ಸರ್ಕಾರಿ ಹುದ್ದೆಗಳಲ್ಲಿ­ದ್ದಾಗ ಅರ್ಹತೆಯನ್ನು ಕಡೆಗಣಿಸಿ ಸಂಬಂಧಿಗಳನ್ನು, ಸ್ವಜಾತಿಯವರನ್ನು ಆಪ್ತ ಸಹಾಯಕರಾಗಿ ನೇಮಕ ಮಾಡಿಕೊಳ್ಳುವುದರಿಂದಲೇ ಈ ಕೆಟ್ಟ ವ್ಯವಸ್ಥೆ ಸುಲಭ­ವಾಗಿ ಚಿಗುರೊಡೆದು ಹುಲುಸಾಗಿ ಬೆಳೆಯುತ್ತಿದೆ. ಹಾಗಾಗಿ ಇಂಥ ನೇಮಕ­­ಗಳಲ್ಲಿ ಅರ್ಹತೆಯೇ ಮಾನದಂಡವಾಗಬೇಕು ಎಂಬ ಮೋದಿ­ಯ­ವರ ಕಳಕಳಿ ಸರಿಯಾಗಿಯೇ ಇದೆ.

ಇದರ ಜತೆಗೆ ಸಾಮಾಜಿಕ ಜಾಲತಾಣ­ಗಳು, ಡಿಜಿಟಲ್‌ ತಂತ್ರಜ್ಞಾನವನ್ನು ಹೆಚ್ಚುಹೆಚ್ಚಾಗಿ ಬಳಸುವಂತೆಯೂ ಅವರು ಮಂತ್ರಿಗಳಿಗೆ, ಅಧಿಕಾರಶಾಹಿಗೆ ಸೂಚಿಸಿದ್ದಾರೆ. ಆಡಳಿತದಲ್ಲಿ ಪಾರ­ದರ್ಶಕತೆ ತರಲು, ಜನರ ಬೇಕು ಬೇಡಗಳಿಗೆ ತ್ವರಿತವಾಗಿ ಸ್ಪಂದಿಸಲು, ಜನಾಭಿಪ್ರಾಯ ಅರಿಯಲು ಇದು ಸಹಕಾರಿ. ಅಲ್ಲದೆ ಪ್ರಗತಿಗೆ ಅಡ್ಡ­ಗಾ­ಲಾ­ಗಿ­ರು­ವ ಕೆಂಪುಪಟ್ಟಿಯ ಪಿಡುಗು ಕಡಿಮೆ ಮಾಡುವುದರ ಜತೆಗೆ ಓಬಿರಾಯನ ಕಾಲದ ಆಡಳಿತ ವ್ಯವಸ್ಥೆಯನ್ನು ಆಧುನಿಕ ದಿನಮಾನಕ್ಕೆ ತಕ್ಕಂತೆ ಸಜ್ಜು­ಗೊಳಿ­ಸುವ ಹಾದಿಯಲ್ಲಿ ಸಕಾರಾತ್ಮಕ ಹೆಜ್ಜೆ.

ಪ್ರಜೆಗಳ ಭಾಗಿದಾರಿಕೆಗೂ ಇಲ್ಲಿ  ಅವ­ಕಾಶ ಸಿಗುತ್ತದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೋದಿಯ­ವರ ಉತ್ಸಾಹಕ್ಕೆ, ವೇಗಕ್ಕೆ ಮಂತ್ರಿಗಳೂ ಸ್ಪಂದಿಸಬೇಕು. ಅದರಿಂದ ಅವರಿಗೂ ಕೀರ್ತಿ, ದೇಶಕ್ಕೂ ಲಾಭವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.