ADVERTISEMENT

ಎಫ್‌ಡಿಐ ಉದಾರೀಕರಣ ನೀತಿ ಸರಿಯಾದ ದಿಕ್ಕಿನಲ್ಲಿಟ್ಟ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
ಎಫ್‌ಡಿಐ ಉದಾರೀಕರಣ ನೀತಿ ಸರಿಯಾದ ದಿಕ್ಕಿನಲ್ಲಿಟ್ಟ ಹೆಜ್ಜೆ
ಎಫ್‌ಡಿಐ ಉದಾರೀಕರಣ ನೀತಿ ಸರಿಯಾದ ದಿಕ್ಕಿನಲ್ಲಿಟ್ಟ ಹೆಜ್ಜೆ   

ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಕುರಿತು ಕೇಂದ್ರ ಸರ್ಕಾರ ತನ್ನ ಬಿಗಿ ‍ಪಟ್ಟನ್ನು ಸಡಿಲಿಸಿದೆ. ಕೇಂದ್ರ ಮುಂಗಡಪತ್ರ ಮಂಡನೆಗೆ ಮುನ್ನ ಕೈಗೊಳ್ಳಲಾಗುತ್ತಿರುವ ದೊಡ್ಡ ಉದಾರೀಕರಣ ನೀತಿ ಕ್ರಮ ಇದು. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದಲ್ಲಿ (ಎಐ) ವಿದೇಶಿ ವಿಮಾನಯಾನ ಸಂಸ್ಥೆಗಳು ಶೇ 49ರಷ್ಟು ಪಾಲು ಬಂಡವಾಳ ಹೊಂದಲು ಇದೇ ಮೊದಲ ಬಾರಿಗೆ ಅನುಮತಿ ನೀಡಲಾಗಿದೆ. ಹಾಗೆಯೇ, ಸಿಂಗಲ್‌ಬ್ರ್ಯಾಂಡ್‌ ರಿಟೇಲ್‌ ವಹಿವಾಟಿನಲ್ಲಿ ಶೇ 100ರಷ್ಟು ಎಫ್‌ಡಿಐ, ಸರ್ಕಾರದ ಅನುಮತಿಗಾಗಿ ಕಾಯದೆ ಸ್ವಯಂಚಾಲಿತವಾಗಿ ಜಾರಿಗೆ ಬರುವುದಕ್ಕೆ  ಅನುಮತಿ ನೀಡಿರುವುದು ದೇಶಿ ಆರ್ಥಿಕತೆ ಪಾಲಿಗೆ ಚೇತೋಹಾರಿ. ಈ ಕ್ರಮಗಳು ದೂರಗಾಮಿ ಪರಿಣಾಮಗಳನ್ನು ಬೀರಲಿವೆ. ಚಿಲ್ಲರೆ ಮಾರಾಟ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಳಗೊಳ್ಳಲಿವೆ. ಸಿಂಗಲ್‌ಬ್ರ್ಯಾಂಡ್‌ ರಿಟೇಲ್‌ ವಹಿವಾಟಿನಲ್ಲಿ ಶೇ 100ರಷ್ಟು ಎಫ್‌ಡಿಐಗೆ ಈ ಹಿಂದೆ ಬಿಜೆಪಿ ವಿರೋಧಿಸಿತ್ತು. ಆದರೆ ಬಹುಪಾಲು ಸಾಮಾಜಿಕ, ಆರ್ಥಿಕ ನೀತಿಗಳು ಆಡಳಿತಕ್ಕೆ ಮೂಲಭೂತವಾದವು ಎಂಬುದನ್ನು ಮರೆಯಲಾಗದು. ಯಾವುದೇ ಪಕ್ಷದ ಸರ್ಕಾರ ಇರಲಿ, ಮುಂದುವರಿಸಿಕೊಂಡು ಹೋಗಬೇಕಾದುದು ಅಗತ್ಯ ಎಂಬುದನ್ನು ಮನಗಾಣಬೇಕು.

‘ಏರ್ ಇಂಡಿಯಾ ಖಾಸಗೀಕರಣ ಬೇಡ. ಪುನಶ್ಚೇತನಗೊಳ್ಳಲು ಐದಾರು ವರ್ಷಗಳ ಕಾಲಾವಕಾಶ ನೀಡಬೇಕು’ ಎಂದು ಸಂಸದೀಯ ಸ್ಥಾಯಿ ಸಮಿತಿ ವರದಿ ನೀಡಿದ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಹೊರ ಬಿದ್ದಿದೆ. ಅಂದರೆ, ಏರ್ ಇಂಡಿಯಾ ಖಾಸಗೀಕರಣದತ್ತ ಸಣ್ಣ ಹೆಜ್ಜೆ ಇರಿಸಿದಂತಾಗಿದೆ. ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಶೇ 49 ಪಾಲು ಬಂಡವಾಳ ಹೊಂದಲು ಅವಕಾಶ ಮಾಡಿಕೊಟ್ಟಿರುವುದರಿಂದ ಅಗತ್ಯವಾದ ಬಂಡವಾಳ ಕ್ರೋಡೀಕರಣಕ್ಕೆ ನೆರವಾಗಲಿದೆ. ₹ 50 ಸಾವಿರ ಕೋಟಿಗಳಷ್ಟು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿರುವ  ಏರ್ ಇಂಡಿಯಾ ಪುನಶ್ಚೇತನಕ್ಕೆ ಇದರಿಂದ ಪ್ರಯೋಜನ ಆಗಲಿದೆ. ಹಾಗೆಯೇ ಸಂಸ್ಥೆಯ ಒಡೆತನವು ದೇಶಿ ಸಂಸ್ಥೆಯ ನಿಯಂತ್ರಣದಲ್ಲಿಯೇ ಇರಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನವಾಗದು.

ಏರ್ ಇಂಡಿಯಾ ನಷ್ಟದ ಸುಳಿಗೆ ಸಿಲುಕಲು ಅಧಿಕಾರಶಾಹಿ ಮತ್ತು ರಾಜಕಾರಣಿಗಳೇ ಕಾರಣ.  ‘ಬಿಸಿನೆಸ್‌ನಲ್ಲಿರುವುದು ಸರ್ಕಾರದ ಬಿಸಿನೆಸ್ ಅಲ್ಲ’ ಎನ್ನುವ ಪ್ರಧಾನಿ ಮೋದಿ ಅವರ ಆಶಯ ಸಂಪೂರ್ಣ ಸಾಕಾರಗೊಳ್ಳಬೇಕಿದ್ದರೆ, ಏರ್ ಇಂಡಿಯಾ ಸಂಪೂರ್ಣ ಖಾಸಗೀಕರಣಗೊಳ್ಳಬೇಕು. ಸರ್ಕಾರದ ನಿಯಂತ್ರಣ ಇಟ್ಟುಕೊಳ್ಳಲು ಅವಕಾಶವೇ ಇರಬಾರದು. ರಾಜಕಾರಣಿಗಳು ಮತ್ತು ಅಧಿಕಾರಿಗಳ ಅನುಕೂಲಕ್ಕೆಂದು ಬಿಳಿಯಾನೆಯನ್ನು ಸರ್ಕಾರದ ಸುಪರ್ದಿಯಲ್ಲಿ ಉಳಿಸಿಕೊಳ್ಳುವುದು ಬೇಡವೇ ಬೇಡ.

ADVERTISEMENT

ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ ಮುಕ್ತಗೊಳಿಸಿದಂತೆ ಬಹುಬ್ರ್ಯಾಂಡ್‌ ರಿಟೇಲ್‌ನಲ್ಲಿಯೂ ಇದೇ ಬಗೆಯ ದಿಟ್ಟತನ ತೋರಬೇಕಾಗಿದೆ. ಈ ಸುಧಾರಣಾ ಕ್ರಮವು ಇ–ಕಾಮರ್ಸ್‌ ಜತೆ ಬಹುಬ್ರ್ಯಾಂಡ್‌ ರಿಟೇಲ್‌ ವಹಿವಾಟು ಸಮಾನ ಅವಕಾಶ ಪಡೆಯಲು ಅನುವು ಮಾಡಿಕೊಡಲಿದೆ. ಇದರಿಂದ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಕೇಂದ್ರ ಸರ್ಕಾರವು ವಿದೇಶಿ ಹೂಡಿಕೆಯ ಅಡೆತಡೆಗಳನ್ನು ನಿವಾರಿಸಿದ್ದಕ್ಕೆ ಪೂರಕವಾಗಿ ರಾಜ್ಯ ಸರ್ಕಾರಗಳೂ ಪೂರಕ ಪರಿಸರ ಕಲ್ಪಿಸಬೇಕು. ಹಾಗಾದಾಗ ಭಾರತ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.