ADVERTISEMENT

ನುಡಿ ಬೆಳಗು: ನಮ್ಮ ಭವಿಷ್ಯ ನಮ್ಮ ಕೈಯಲ್ಲೇ

ಎಚ್.ಎಸ್.ನವೀನಕುಮಾರ್
Published 24 ಮಾರ್ಚ್ 2024, 21:22 IST
Last Updated 24 ಮಾರ್ಚ್ 2024, 21:22 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ನವೀನ ಕುಮಾರ್‌ ಹೊಸದುರ್ಗ

ಒಂದು ಊರಿನಲ್ಲಿ ಒಬ್ಬ ತತ್ವಜ್ಞಾನಿ ಇದ್ದ. ಅವನು ಹೇಳಿದ್ದೆಲ್ಲ ನಿಜವಾಗುತ್ತಿತ್ತು. ಆ ಊರಿನ ಇಬ್ಬರು ಕಿಡಿಗೇಡಿ ಹುಡುಗರಿಗೆ ಏನಾದರೂ ಮಾಡಿ ಇವನ ಬಾಯಿಂದ ಸುಳ್ಳು ಹೊರಡಿಸಬೇಕೆಂಬ ಕೆಟ್ಟ ಆಸೆ. ಅದಕ್ಕಾಗಿ ಅವರು ಒಂದು ಉಪಾಯ ಮಾಡಿದರು. ಒಂದು ಪುಟಾಣಿ ಹಕ್ಕಿಮರಿಯನ್ನು ತಮ್ಮ ಮುಷ್ಟಿಯೊಳಗೆ ಹಿಡಿದುಕೊಂಡು ಹೋಗಿ ಇದರೊಳಗೆ ಇರುವುದೇನು ಎಂದು ತತ್ವಜ್ಞಾನಿಯನ್ನು ಪ್ರಶ್ನಿಸಿದರು. ಎಲ್ಲವನ್ನು ಬಲ್ಲವನಾದ ಆತ ‘ಅದೊಂದು ಪುಟ್ಟ ಹಕ್ಕಿಮರಿ’ ಎಂದು ಉತ್ತರಿಸಿದ. ಮುಂದಿನ ಪ್ರಶ್ನೆಗೆ ಅವನು ಕೊಡುವ ಉತ್ತರ ಸುಳ್ಳಾಗಲೇಬೇಕು ಆ ರೀತಿ ಇತ್ತು, ಅವರ ಯೋಜನೆ. ‘ಅದು ಬದುಕಿದೆಯೋ ಇಲ್ಲ ಸತ್ತಿದೆಯೋ’ ಎಂಬುದಾಗಿತ್ತು ಅವರ ಪ್ರಶ್ನೆ. ತತ್ವಜ್ಞಾನಿ ಹೇಳುವ ಉತ್ತರವನ್ನು ಸುಳ್ಳು ಮಾಡಲು ಆತ ಹಕ್ಕಿಮರಿ ಬದುಕಿದೆ ಎಂದರೆ,  ಅದನ್ನು ಆ ಕಿಡಿಗೇಡಿ ಹುಡುಗರು ಮುಷ್ಟಿಯಿಂದ ಹಿಚುಕಿ, ಸಾಯಿಸಿಬಿಡುತ್ತಿದ್ದರು. ಅದು ಸತ್ತಿದೆ ಎಂದರೆ ಹಾಗೆ ಹಾರಲು ಬಿಡುತ್ತಿದ್ದರು.  ಇವರ ಉದ್ದೇಶವನ್ನರಿತ ತತ್ವಜ್ಞಾನಿ ‘ಅದರ ಭವಿಷ್ಯ ನಿಮ್ಮ ಕೈನಲ್ಲೇ ಇದೆ’ ಎಂದು ಉತ್ತರಿಸಿದ.

ADVERTISEMENT

ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಇರುತ್ತದೆ. ಅದನ್ನು ಹಿಸುಕಿ ಸಾಯಿಸುವ ಅಥವಾ ಸ್ವಚ್ಛಂದವಾಗಿ  ಹಾರಿ ಬಿಡುವ ಶಕ್ತಿ  ನಮ್ಮ ಕೈನಲ್ಲೇ ಇದೆ. ನಾವೇ ನಮ್ಮ ಭವಿಷ್ಯದ ಶಿಲ್ಪಿಗಳು. ನಮ್ಮೊಳಗಿರುವ ಶಿಲೆಯನ್ನು ವ್ಯಕ್ತಿತ್ವವೆಂಬ ಸುಂದರ ಶಿಲ್ಪವಾಗಿ ರೂಪಿಸಿಕೊಳ್ಳಬೇಕಾದವರು ನಾವೇ. ಅದಕ್ಕೆ ಅತಿ ಮುಖ್ಯವೆಂದರೆ ಸಿಕ್ಕಿರುವ ಸದವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಮನಃಸ್ಥಿತಿ. ಇದನ್ನು ಇಂಗ್ಲಿಷ್‌ನಲ್ಲಿ Grabbing the opportunity ಎನ್ನುತ್ತಾರೆ. ನಾನು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡುವಾಗ, ಕಾರ್ಯಕ್ರಮ ಮುಗಿದ ನಂತರ ನಿಮ್ಮಲ್ಲಿ ಯಾರಾದರೂ ಕಾರ್ಯಕ್ರಮದ ಕುರಿತು ನಿಮ್ಮ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ಹೇಳಿ ಅಥವಾ ಪ್ರಶ್ನೆಗಳಿದ್ದರೆ ಕೇಳಿ ಎಂದು ಹೇಳುತ್ತೇನೆ. ಆದರೆ ಬಹುಪಾಲು ಕಡೆಗಳಲ್ಲಿ ಈ ಮುಕ್ತ ಆಹ್ವಾನವನ್ನು, ಅವಕಾಶವನ್ನು ಯಾರೂ ಸ್ವೀಕರಿಸುವುದೇ ಇಲ್ಲ. ನಾನೇ ಒತ್ತಾಯ ಮಾಡಿ ಕರೆದ ನಂತರ ಕೆಲವರು ಮುಂದೆ ಬರುತ್ತಾರೆ. 

ಇವೆಲ್ಲವೂ ನಮ್ಮ ಭವಿಷ್ಯವನ್ನು ನಾವು ರೂಪಿಸಿಕೊಳ್ಳಲು ಸಿಗುವ ಚಿಕ್ಕ ಚಿಕ್ಕ ಅವಕಾಶಗಳು.  ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುವವರು ತಮ್ಮ ಭವಿಷ್ಯವನ್ನು ಸಹ ಸುಂದರವಾಗಿ ರೂಪಿಸಿಕೊಳ್ಳುತ್ತಾರೆ. ನಮ್ಮ ಭವಿಷ್ಯ ನಮ್ಮ ಕೈ ರೇಖೆಯಾಗಲಿ, ಹಣೆ ಬರಹದಲ್ಲಾಗಲಿ ಖಂಡಿತ ಅಡಗಿಲ್ಲ. ಅದು ಸೂಕ್ತ ಸಮಯದಲ್ಲಿ ನಾವು ತೆಗೆದುಕೊಳ್ಳುವ ಸರಿಯಾದ ನಿರ್ಧಾರವನ್ನು ಅವಲಂಬಿಸಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.