ADVERTISEMENT

ನುಡಿ ಬೆಳಗು | ಕೊನೆಯನೆಂದೂ ಮುಟ್ಟದಿರು...

ಕಲೀಮ್ ಉಲ್ಲಾ
Published 13 ಮಾರ್ಚ್ 2024, 0:08 IST
Last Updated 13 ಮಾರ್ಚ್ 2024, 0:08 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಮನೆಗೆ ಬಂದವರು ‘ಅಕ್ಕಾ ನೀವು ಮನೆಯನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದೀರಿ. ಚೆಂದದ ಗಿಡ ಬೆಳೆಸಿದ್ದೀರಿ. ಇಷ್ಟೊಂದು ಸುಂದರವಾಗಿ ಮನೆ ಇಟ್ಟುಕೊಂಡವರನ್ನು ನಾನು ನೋಡೇ ಇಲ್ಲ. ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ’ ಎಂದು ವರ್ಣಿಸಿದರು. ಈ ವಾಕ್ಯಗಳಿಂದ ಪುಳಕಿತರಾದ ಆ ತಾಯಿ ಇಡೀ ಬದುಕನ್ನೇ ಮನೆ ಒರೆಸುತ್ತಾ, ಅದರ ಅಂದ ಚೆಂದ ಹೆಚ್ಚಿಸುತ್ತಾ ಉಳಿದು ಬಿಟ್ಟರು. ಆತ್ಮೀಯರ ಮನೆಗಳಿಗೆ ಹೋದರೂ ರಾತ್ರಿಯೊಳಗೆ ಮನೆ ತಲುಪುವ ರೂಢಿ ಸಿದ್ಧಿಸಿಕೊಂಡರು. ಜನರ ಪ್ರಶಂಸೆಯ ಮಾತಿನ ನಿರೀಕ್ಷೆಯ ದಾಹದಲ್ಲೇ ಐವತ್ತು ವರ್ಷ ಕಳೆದರು.

ಸುಂದರ ಮನೆ ಕಟ್ಟಿಸಿದ ಗೆಳತಿಯೊಬ್ಬರ ಮನೆಗೆ ಹೋಗಿದ್ದೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರು. ಮಗ ದೂರದ ಅಮೆರಿಕದಲ್ಲಿ ವಾಸ. ಬರುವುದು ವರ್ಷಕ್ಕೋ ಎರಡು ವರ್ಷಕ್ಕೋ. ಬಂದರೂ ಕೆಲ ದಿನಗಳ ಅತಿಥಿ. ಅವನಿಗೆಂದು ಮೀಸಲಿಟ್ಟ ರೂಮನ್ನು ದಿನಾ ಗುಡಿಸಿ, ಒರೆಸಿ, ಶ್ರದ್ಧೆಯಿಂದ ಕಾಯುತ್ತಿದ್ದರು. ಈ ಚೆಂದಕ್ಕೆ ಇಷ್ಟು ದೊಡ್ಡ ಮನೆ ಬೇಕಿತ್ತಾ ಎಂದು ನನ್ನನ್ನೇ ಪ್ರಶ್ನಿಸಿದರು. ಬಹುತೇಕ ಮನೆಗಳ ಪರಿಸ್ಥಿತಿ ಈಗ ಹೀಗೆ ಆಗಿದೆ. ಮಕ್ಕಳೊಟ್ಟಿಗೆ ಬದುಕುವಾಗ ಇಕ್ಕಟ್ಟಿನ ಬಾಡಿಗೆ ಮನೆಯಲ್ಲಿ ವಾಸ. ಓನರ್‌ ಕೊಡುವ ಕಿರುಕುಳ, ಹಿಂಸೆಗಳು ಎಲ್ಲರಲ್ಲೂ ಸ್ವಂತ ಸೂರಿನ ಕನಸು ಬಿತ್ತುತ್ತವೆ. ಇದೆಲ್ಲಾ ನನಸಾಗುವ ಹೊತ್ತಿಗೆ ಮಕ್ಕಳು ಮನೆ ಬಿಟ್ಟು ನಡೆದಿರುತ್ತಾರೆ.

ADVERTISEMENT

ಬಿಕೋ ಎನ್ನುವ ಮನೆಗೆ ತಾವೇ ಕಾಯಂ ಕಾವಲುಗಾರರಾಗುತ್ತಾರೆ. ಕಸ ಗುಡಿಸಲಾಗದ, ಎದ್ದು ನಿರ್ವಹಣೆ ಮಾಡಲಾಗದ, ದೊಡ್ಡ ಮನೆ ಪಶ್ಚಾತ್ತಾಪ ಎನಿಸುತ್ತದೆ. ಇಷ್ಟೆಲ್ಲಾ ಗೊತ್ತಿದ್ದರೂ ಮನೆಯ ವ್ಯಾಮೋಹದ ಸುಳಿ ಬಿಡುವುದಿಲ್ಲ. ಬದುಕುವ ಕೆಲವೇ ವರ್ಷ ಬಾಕಿ ಉಳಿದಿದ್ದರೂ ನೂರಾರು ವರ್ಷ ಬಾಳಿಕೆ ಬರುವ ಗಟ್ಟಿ ಮನೆ ಕಟ್ಟುತ್ತೇವೆ.

ಮನೆ ಕಟ್ಟಿಸುವ ಅನೇಕರು ಕಳ್ಳರ ಕಾಟದ ಬಗ್ಗೆ ತುಂಬಾ ಚಿಂತಿಸುತ್ತಾರೆ. ಆತ ತಮ್ಮ ಮನೆಗೆ ಎಲ್ಲೆಲ್ಲಿಂದ ನುಗ್ಗಿ ಬರಬಹುದೆಂದು ತಾವೇ ಊಹಿಸಿ ಅಲ್ಲೆಲ್ಲಾ ಕಬ್ಬಿಣದ ಸರಳುಗಳನ್ನು ನೆಡುತ್ತಾರೆ. ಬಯಲೇ ಆಲಯವೆಂದು ಬದುಕುವ ಆದಿವಾಸಿಗಳು, ಕುರಿಗಾಹಿಗಳು, ಕಟ್ಟಡ ಕಾರ್ಮಿಕರು, ನಿರ್ಗತಿಕರು ಯಾವತ್ತೂ ಇದ್ಯಾವುದರ ಬಗ್ಗೆ ಚಿಂತಿಸುವುದಿಲ್ಲ. ಏಕೆಂದರೆ ಇವರು ಕಳೆದುಕೊಳ್ಳಲು ಬಚ್ಚಿಟ್ಟ ಯಾವ ಸಂಪತ್ತೂ ಇರುವುದಿಲ್ಲ. ಜೊತೆಗೆ ನಮ್ಮಂತೆ ಅವರು ಆಸೆಬುರುಕರೂ ಆಗಿರುವುದಿಲ್ಲ. ವೈಭವದ ಮನೆಯಲ್ಲಿ ನೆಮ್ಮದಿಯಿಂದ ಬದುಕುತ್ತೇವೆ ಎನ್ನುವುದು ಅರ್ಧ ಸತ್ಯದ ನಂಬಿಕೆ.

ನೆಮ್ಮದಿ ಸಂತಸಗಳು ಸುಟ್ಟ ಇಟ್ಟಿಗೆ ಗೋಡೆಯಿಂದ ಹುಟ್ಟುವುದಿಲ್ಲ. ಮೆತ್ತಿದ ಬಣ್ಣಗಳಿಂದ ನಿಗಿನಿಗಿಸುವುದಿಲ್ಲ. ಅವು ನಮ್ಮ ಮನಸ್ಸಿನಿಂದಲೇ ಮೂಡಬೇಕು. ಗುಡಿಸಲಿನಲ್ಲಿ ಬದುಕುವ ಬಡವ ಸದಾ ದುಃಖಿತ ಎಂದು ಬಂಗಲೆಯ ಅಮಲಿನಲ್ಲಿರುವವರು ತಪ್ಪಾಗಿ ಭಾವಿಸುತ್ತಾರೆ. ಕುವೆಂಪು ಹೇಳಿದಂತೆ ಎಲ್ಲಿಯೂ ನಿಲ್ಲದ, ಮನೆಯನೆಂದು ಕಟ್ಟದ, ಕೊನೆಯನೆಂದು ಮುಟ್ಟದ ಅನೇಕ ಚೇತನಗಳು ನಮ್ಮ ನಡುವೆಯೇ ಪರಮಸುಖದಲ್ಲಿ ಬಾಳುತ್ತಿವೆ. ನಾವು ಕಂಡಿಲ್ಲ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.