ADVERTISEMENT

ಅಣುವಿದ್ಯುತ್: ಯಾಕಿಷ್ಟು ಆದ್ಯತೆ?

ಕೇಶವ ಎಚ್.ಕೊರ್ಸೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಅಣುವಿದ್ಯುತ್: ಯಾಕಿಷ್ಟು ಆದ್ಯತೆ?
ಅಣುವಿದ್ಯುತ್: ಯಾಕಿಷ್ಟು ಆದ್ಯತೆ?   

ರಾಜ್ಯದ ಕೈಗಾದಲ್ಲಿ ಪ್ರಸ್ತಾಪಿಸಿರುವ 5 ಮತ್ತು 6ನೇ ಘಟಕಗಳೂ ಸೇರಿದಂತೆ, ದೇಶದಲ್ಲಿ ಹತ್ತು ಹೊಸ ಅಣುವಿದ್ಯುತ್ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆಯಷ್ಟೇ. ಈ ಸಂಬಂಧಲ್ಲಿ ‘ಪ್ರಜಾವಾಣಿ’ ಪ್ರಕಟಿಸಿದ ಅಂತರಾಳ (ಮೇ 27) ಬಹುಮುಖಿ ಚಿಂತನೆಯು ಗಂಭೀರವಾದ ಸಾರ್ವಜನಿಕ ಚರ್ಚೆಗೊಂದು ಅವಕಾಶವನ್ನು ನಿರ್ಮಿಸಿದೆ.

ದೇಶದ ಸಾರ್ವಭೌಮತ್ವ ಕಾಪಾಡುವ ರಕ್ಷಣಾ ಕಾರ್ಯತಂತ್ರದ ಭಾಗವಾಗಿ ಅಣುಶಕ್ತಿಯನ್ನು ಅಭಿವೃದ್ಧಿಪಡಿಸುವ ಅನಿವಾರ್ಯತೆಯ ಕುರಿತು ಎಲ್ಲರಿಗೂ ಅರಿವಿದೆ. ಮುಂಚೂಣಿ ಕ್ಷೇತ್ರಗಳ ಸಂಶೋಧನೆ ಮತ್ತು ಕೈಗಾರಿಕೆಗಳಲ್ಲಿ ಇದರ ಹಿತಮಿತ ಬಳಕೆಯನ್ನೂ ಒಪ್ಪುವಂಥದ್ದೆ. ಆದರೆ, ಕೇವಲ ವಿದ್ಯುತ್ ಉತ್ಪಾದನೆಗಾಗಿ ಇಷ್ಟು ಬೃಹತ್ ಪ್ರಮಾಣದ ಅಣುಶಕ್ತಿ ಬಳಕೆಗೆ ಸರ್ಕಾರ ಮುಂದಾಗಿರುವುದು ಚಿಂತೆ ಹುಟ್ಟಿಸುತ್ತಿದೆ. ಈ ಕುರಿತಾದ ಆರೋಗ್ಯಕರ ಸಂವಾದವೊಂದನ್ನು ವಿಸ್ತರಿಸುವ ಆಶಯದಿಂದ ನಾಲ್ಕು ಪ್ರಮುಖ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಮೊದಲನೆಯದು, ವಿದ್ಯುತ್ ಮೂಲವಾಗಿ ಅಣುಶಕ್ತಿಯನ್ನು ಬಳಸುವುದರ ಕುರಿತು. ಪರಿಸರಸ್ನೇಹಿ ವಿಧಾನಗಳ ಮೂಲಕ ವಿದ್ಯುತ್ ಉತ್ಪಾದಿಸುವ ವಿವೇಕಶೀಲ ವಿಧಾನಗಳತ್ತ ಜಗತ್ತು ಹೊರಳುತ್ತಿದೆ. ನವೀಕರಿಸಬಹುದಾದ ಇಂಧನಮೂಲಗಳ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಗೆ ಜಾಗತಿಕ ಆದ್ಯತೆ ದೊರಕುತ್ತಿದೆ. ಈ ಕುರಿತು ಮಾದರಿ ಎನ್ನಬಹುದಾದ ನೀತಿ ಹಾಗೂ ಕಾರ್ಯಕ್ರಮಗಳನ್ನು ನಮ್ಮ ದೇಶವೂ ರೂಪಿಸುತ್ತಿದೆ.

ADVERTISEMENT

ಪವನಶಕ್ತಿ, ಜೈವಿಕ ಇಂಧನ ಹಾಗೂ ಸೌರಶಕ್ತಿಯಂಥ ಕಡಿಮೆ ವೆಚ್ಚದ ಹಾಗೂ ನವೀಕರಿಸಬಹುದಾದ ಮೂಲಗಳ ಮೂಲಕ, 2022ರ ವೇಳೆಗೆ ಸುಮಾರು ಒಂದೂವರೆ ಲಕ್ಷ ಮೆ.ವಾ. ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನೂ ಭಾರತ ಜಾರಿಗೊಳಿಸುತ್ತಿದೆ.

ಭವಿಷ್ಯದ ಇಂಧನ ಸುರಕ್ಷತೆಯನ್ನು ಸಾಧಿಸಲು ಸುರಕ್ಷಿತವಾದ ಹಾಗೂ ವಿಕೇಂದ್ರೀಕೃತ ವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸುತ್ತಿರುವ ಮಹತ್ವದ ಕಾಲಘಟ್ಟವಿದು. ಈ ಮನ್ವಂತರದಲ್ಲಿ ಅಣುಶಕ್ತಿಮೂಲಕ್ಕೆ ಪುನಃ ಮೊರೆಹೋಗುವ ನೀತಿ ಎಷ್ಟು ಸರಿ? ಈ ಶಕ್ತಿಮೂಲ ಆರ್ಥಿಕ ದೃಷ್ಟಿಯಿಂದಾದರೂ  ಒಪ್ಪುವಂಥದ್ದೇ?

ಎರಡನೆಯದು, ಅಣುವಿದ್ಯುತ್  ಕುರಿತ ಪರಿಸರ ಸಂಬಂಧಿ ಅಂಶಗಳು. ನಮ್ಮ ದೇಶದ ಸಂಪೂರ್ಣ ಅಣುಶಕ್ತಿ ಕ್ಷೇತ್ರವೇ ಗೌಪ್ಯತೆಯ ರಕ್ಷಣೆಯಲ್ಲಿದೆ. ಹೀಗಾಗಿ, ಅಣುಶಕ್ತಿಯೊಂದಿಗಿನ ಯಾವ ಪಾರಿಸರಿಕ ಅಂಶಗಳ ಕುರಿತೂ ಮುಕ್ತಚರ್ಚೆ ನಡೆಯುವುದಿಲ್ಲ. ಉದಾಹರಣೆಗೆ, ಕೈಗಾ ಅಣುಸ್ಥಾವರದ 50 ಕಿ.ಮೀ. ಸುತ್ತಳತೆಯ  ಪ್ರದೇಶದಲ್ಲಿನ ಗಾಳಿ, ಮಣ್ಣು, ನೀರು, ಸಸ್ಯಸಂಕುಲ- ಇತ್ಯಾದಿಗಳ ವಿಕಿರಣದ ಪ್ರಮಾಣವನ್ನು ನಿರಂತರವಾಗಿ ಉನ್ನತ ಗುಣಮಟ್ಟದ ಗೀಗರ್-ಮುಲ್ಲರ್ ಮಾಪನಗಳನ್ನು ಬಳಸಿ ಅಳೆಯಲಾಗುತ್ತಿದೆಯೇ?

ಇಲ್ಲಿನ ನೈಸರ್ಗಿಕ ವಿಕಿರಣದ ಪ್ರಮಾಣ ನಿಜಕ್ಕೂ ಸುರಕ್ಷತೆಯ ಮಿತಿಯಲ್ಲಿದೆಯೇ? ಇದರಲ್ಲಿ ಯುರೇನಿಯಂನಂಥ ವಿಕಿರಣಧಾತುಗಳ  ಪಾತ್ರವೆಷ್ಟು? ಈ ಪ್ರದೇಶದ ಕೃಷಿ ಜೀವವೈವಿಧ್ಯ ಹಾಗೂ ಕಾಡಿನ ಜೀವಸಂಕುಲಗಳ ಮೇಲೆ ವಿಕಿರಣದ ದೀರ್ಘಕಾಲೀನ ಪರಿಣಾಮಗಳೇನಿರಬಹುದು?

ನಾಡಿನ ನೀರಿನ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನದಿಮೂಲಗಳುಳ್ಳ ಸೂಕ್ಷ್ಮ ಪರಿಸರದ ಈ ಪಶ್ಚಿಮಘಟ್ಟ ಶ್ರೇಣಿಯಲ್ಲಿ, ಹೊಸ ಅಣುಶಕ್ತಿ ಘಟಕಗಳನ್ನು ಸ್ಥಾಪಿಸುವುದು ಸೂಕ್ತವೇ? ಇಲ್ಲಿಂದ ವಿದ್ಯುತ್ ಸಾಗಿಸಲು ತಂತಿಮಾರ್ಗ ರಚಿಸಲು ಮತ್ತೊಂದಿಷ್ಟು ಕಾಡನ್ನು ಛಿದ್ರಮಾಡಬೇಕಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಿಸುವುದು ದೇಶದ ಅಣುಶಕ್ತಿ ವಲಯದ ಕರ್ತವ್ಯವಾಗಬೇಕಿದೆ.

ಮೂರನೆಯದು, ಕೈಗಾ ಅಣುಸ್ಥಾವರದ ಸುತ್ತಲಿನ ಸಮುದಾಯಗಳ ಆರೋಗ್ಯ ವಿಚಾರ. ಅಣುಸ್ಥಾವರದ ಸುಮಾರು ಐವತ್ತು ಕಿ.ಮೀ. ಸುತ್ತಳತೆಯ ಪ್ರದೇಶದಲ್ಲಿ ಒಂದೂವರೆ ದಶಕಗಳಿಂದ ಸ್ಥಳೀಯ ನಿವಾಸಿಗಳಲ್ಲಿ ಕ್ಯಾನ್ಸರ್, ಗಂಟುನೋವು, ಗ್ರಂಥಿರೋಗಗಳು ಹೆಚ್ಚಿರುವುದು ಎಲ್ಲರ ಅನುಭವಕ್ಕೆ ಬರುತ್ತಿದೆ. ಎರಡು ದಶಕಗಳ ಹಿಂದೆ ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ನಾಗರಿಕ ಅರೋಗ್ಯ ಸಮೀಕ್ಷೆಯಲ್ಲಿ ಕಂಡುಬಂದದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ರೋಗಗಳು ಹೆಚ್ಚುತ್ತಿವೆ ಎಂಬುದು ಅಧ್ಯಯನಕಾರರ ಸ್ಪಷ್ಟ ಅಭಿಪ್ರಾಯ.

ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಸಂಸ್ಥೆಯು ಕೆಲವು ವರ್ಷಗಳ ಹಿಂದೆ ಈ ಕುರಿತು ಅಧ್ಯಯನ ನಡೆಸಿರುವುದಾದರೂ, ಅದರ ಅಂತಿಮ ವರದಿ ಸಾರ್ವಜನಿಕರಿಗೆ ಇನ್ನೂ ಸಿಕ್ಕಿಲ್ಲ. ಈ ಎಲ್ಲ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಗರಿಕ ಸುರಕ್ಷತಾ ಸಮಿತಿಯೊಂದನ್ನು ರಚಿಸಿ, ಕಾಲಕಾಲಕ್ಕೆ ಈ ಕುರಿತು ಸೂಕ್ತ ಸಮಾಲೋಚನೆಗಳನ್ನು ನಡೆಸಬೇಕು ಎಂಬ ಬಹುಕಾಲದ ಬೇಡಿಕೆ ಇಡೇರಿಲ್ಲ. 2009ರಲ್ಲಿ ನಡೆದ ಟ್ರೀಶಿಯಂ ಸೋರಿಕೆ ಘಟನೆಯ ನಂತರವಂತೂ, ಜನರ ಭಯ ಇನ್ನೂ ಹೆಚ್ಚಾಗಿದೆ.

ನಾಲ್ಕನೇಯದು, ಅನಿವಾರ್ಯವಾದ ವಿದೇಶಿ ಅವಲಂಬನೆಯ ವಿಚಾರ.  ಕರ್ನಾಟಕದ ಭೀಮಾನದಿ ಕಣಿವೆಯ ಗೋಗಿ ಹಾಗೂ ಆಂಧ್ರಪ್ರದೇಶ ಕೆಲವು ಪ್ರದೇಶಗಳಲ್ಲಿ ಯುರೇನಿಯಂ ನಿಕ್ಷೇಪಗಳು ದೊರೆತಿವೆಯಾದರೂ, ದೇಶದ ಅಗತ್ಯವನ್ನು ಪೂರೈಸಲು ಇದರ ಅಮದು ಅನಿವಾರ್ಯ. ತಂತ್ರಜ್ಞಾನ, ಯಂತ್ರವ್ಯವಸ್ಥೆ ಮತ್ತು ಇಂಧನ-ಎಲ್ಲಕ್ಕೂ ವಿದೇಶಿ ಖಾಸಗಿ ಸಂಸ್ಥೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಅಣುಶಕ್ತಿ ಕ್ಷೇತ್ರವಿದೆ.

ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ 2010-11ರಲ್ಲಿ ರೂಪಿಸಿದ ಪರಮಾಣು ಬಾಧ್ಯಸ್ಥಿಕೆ ಕಾನೂನಿಗೆ ಈ ವಿದೇಶಿ ಉದ್ಯಮಗಳು ಸ್ವಲ್ಪವೂ ಸ್ಪಂದಿಸದಿರುವದನ್ನು ದೇಶ ಮರೆತಿಲ್ಲ. ಭವಿಷ್ಯದಲ್ಲಿ ಅವಘಡಗಳೇನಾದರೂ ಸಂಭವಿಸಿದರೆ, ಅವುಗಳು ತಮ್ಮ ಆರ್ಥಿಕ ಹಿತಾಸಕ್ತಿಯನ್ನು ಬದಿಗೊತ್ತಿ ಇಲ್ಲಿನ ನಾಗರಿಕರ ಜೀವರಕ್ಷಣೆ, ಆರೋಗ್ಯಪಾಲನೆ ಮತ್ತು ಪರಿಸರ ಸುರಕ್ಷತಾ ಕಾರ್ಯಕ್ಕೆ ಧಾವಿಸಿ ಬರಲಿಕ್ಕಿಲ್ಲ!

ರಕ್ಷಣಾ ಕ್ಷೇತ್ರದಲ್ಲಿ ಅಣುಶಕ್ತಿ ಕ್ಷೇತ್ರದ ಸ್ವಾವಲಂಬನೆಯ ಅಗತ್ಯತೆ ಒಪ್ಪುವ ಸರ್ಕಾರ, ವಿದೇಶಿ ಖಾಸಗಿ ಉದ್ಯಮಗಳನ್ನೇ ಅವಲಂಬಿಸಿ ದೇಶದ ಅಣುಶಕ್ತಿ ಕಾರ್ಯಕ್ರಮ ಮುಂದುವರಿಸುವಂತಿದೆ.

ಆರ್ಥಿಕವಾಗಿ ವೆಚ್ಚದಾಯಕವಾದ, ಪಾರಿಸರಿಕವಾಗಿ ಅಪಾಯಕಾರಿಯಾಗಬಲ್ಲ ಹಾಗೂ ನಾಗರಿಕರ ಅರೋಗ್ಯಕ್ಕೆ ಮಾರಕವಾದ ಅಣುವಿದ್ಯುತ್ತಿಗೆ ಸರ್ಕಾರ ಇಷ್ಟು ಆದ್ಯತೆ ನೀಡುವುದು ಸರಿಯಲ್ಲ. ಈಗಲಾದರೂ, ಅಣುವಿದ್ಯುತ್ ಕುರಿತ ಸಾಮಾಜಿಕ, ಆರ್ಥಿಕ ಮತ್ತು ಪಾರಿಸರಿಕ ಅಂಶಗಳ ವಸ್ತುನಿಷ್ಠ  ವಿಮರ್ಶೆಯಾಗಬೇಕಿದೆ.

ಪ್ರಜಾತಂತ್ರ ಆಡಳಿತವು ಈ ಪ್ರಾಮಾಣಿಕ ಕಾಳಜಿಗಳನ್ನು ‘ಪರಿಸರವಾದಿಗಳು ಅಭಿವೃದ್ಧಿಗೆ ಒಡ್ಡುತ್ತಿರುವ ಅಡ್ಡಗಾಲು’ ಎಂದು ಅಸಡ್ಡೆಮಾಡಿ, ನಾಗರಿಕರ ಬದುಕನ್ನು ಅಪಾಯಕ್ಕೆ ದೂಡದಿರಲಿ. ಕೈಗಾದಲ್ಲಿ ಐದು ಮತ್ತು ಆರನೇ ಘಟಕಗಳನ್ನು ಸ್ಥಾಪಿಸುವ ಮುನ್ನವಾದರೂ, ಇಂಥ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಕಂಡುಕೊಳ್ಳುವ ಸಾರ್ವಜನಿಕ ಚರ್ಚೆಗೆ ಸರ್ಕಾರವು ಮನ್ನಣೆ ನೀಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.