ADVERTISEMENT

ಅಹಿಂಸೆ ಮನುಷ್ಯಕೇಂದ್ರಿತವಾಗಲಿ

ಅಭಿವೃದ್ಧಿಗೂ ಪ್ರಾಣಿ ಹಿಂಸೆಗೂ ಸಂಬಂಧ ಕಲ್ಪಿಸಲು ಅವಕಾಶ ಇದೆ

ಎಚ್.ಕೆ.ಶರತ್
Published 25 ಮೇ 2016, 19:32 IST
Last Updated 25 ಮೇ 2016, 19:32 IST

ಅಹಿಂಸಾ ತತ್ವವೆನ್ನುವುದು ಮನುಷ್ಯ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ ಎನ್ನುವ ನಂಬಿಕೆ ಸಮಾಜದಲ್ಲಿ ಬೇರೂರಿರುವುದು ಢಾಳಾಗಿಯೇ ಗೋಚರಿಸುತ್ತದೆ. ಆದರೆ, ಅಹಿಂಸಾ ತತ್ವದ ಅನುಸರಣೆ ಯಾವ ನೆಲೆಗಟ್ಟಿಗೆ ಸೀಮಿತಗೊಂಡಿದೆ ಎಂಬುದನ್ನು ಪರಿಶೀಲಿಸಲು ಹೊರಟಾಗ ಇದರಲ್ಲಿ ಕೆಲ ವರ್ಗಗಳು ಮತ್ತು ಸಮುದಾಯಗಳ ಹಿತಾಸಕ್ತಿ ಅಡಗಿರುವ ಅನುಮಾನ ಮೂಡದಿರದು.

ಗಾಂಧಿ ಜಯಂತಿ, ಬಸವ ಜಯಂತಿ, ಮಹಾವೀರ ಜಯಂತಿಯಲ್ಲದೆ ಅಂಬೇಡ್ಕರ್ ಜಯಂತಿಯಂದೂ  ಪ್ರಾಣಿ ವಧೆಗೆ ನಿಷೇಧ ಹೇರುವುದು ಸಾಕಷ್ಟು ಪ್ರಶ್ನೆಗಳಿಗೆ ಮೂಲದ್ರವ್ಯ ಒದಗಿಸುತ್ತದೆ. ಮಹಾಪುರುಷರ ಜಯಂತಿ ದಿನ ಸರ್ಕಾರವೇ ತನ್ನ ಆದೇಶದ ಮೂಲಕ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸುವುದು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿರಬಹುದು? ‘ಮಾಂಸಾಹಾರ ಸೇವನೆ ಕೆಲವರನ್ನು ಆವರಿಸಿರುವ ದೌರ್ಬಲ್ಯ. ಕೊನೇಪಕ್ಷ ಮಹಾಪುರುಷರ ಜನ್ಮದಿನದಂದು ಆ ದೌರ್ಬಲ್ಯದಿಂದ ಹೊರಬರಲು ಪ್ರಯತ್ನಿಸಲಿ’ ಎನ್ನುವುದು ಸರ್ಕಾರದ ನಿಲುವೇ?

ಯಾರ್‌್ಯಾರಿಗೆ ಮಹಾಪುರುಷರು ಸಾರಿದ ಅಹಿಂಸಾ ತತ್ವದೆಡೆಗೆ ಅಪರಿಮಿತ ಗೌರವವಿದೆಯೋ ಮತ್ತು ಆ ಗೌರವವನ್ನು ಮಾಂಸಾಹಾರ ಸೇವಿಸದೆ ಇರುವ ಮೂಲಕ ಪಾಲಿಸಬೇಕೆನ್ನುವ ತುಡಿತವಿದೆಯೋ ಅಂತಹವರು ತಮ್ಮ ಪಾಡಿಗೆ ತಾವು ಮಾಂಸಾಹಾರ ಸೇವನೆ ತ್ಯಜಿಸಲಿ.

ಆದರೆ ಸರ್ಕಾರ ಇದರಲ್ಲಿ ಮೂಗು ತೂರಿಸುವ ಅಗತ್ಯ ಇದೆಯೇ? ಮಾಂಸ ಸೇವನೆಯನ್ನು ಮದ್ಯಪಾನದೊಂದಿಗೆ ಸಮೀಕರಿಸುವ ಧೋರಣೆ ಸ್ವಾಗತಾರ್ಹವೇ? ನಾನಾ ಜಯಂತಿಗಳಂದು ಬೇಕಿದ್ದರೆ ಮದ್ಯ ಮಾರಾಟ ನಿಷೇಧಿಸಲಿ. ಆದರೆ ಮದ್ಯದೊಂದಿಗೆ ಮಾಂಸ ಮಾರಾಟಕ್ಕೂ ಕಡಿವಾಣ ಹೇರುವುದು ಮಾಂಸಾಹಾರಿಗಳಿಗೆ ಮಾಡುವ ಅಪಮಾನವಲ್ಲವೇ?

ಮಾಂಸಾಹಾರದ ಕುರಿತು ಅಸಹನೆ ತೋರ್ಪಡಿಸಲು ಕೆಲವರ ಪಾಲಿಗೆ ಅಹಿಂಸಾ ತತ್ವ ಕೈಗೆಟಕುವ ಸುಲಭ ಅಸ್ತ್ರವಾಗಿ ಪರಿಣಮಿಸುತ್ತದೆ. ತಿನ್ನುವುದಕ್ಕೇ ಆದರೂ ಪ್ರಾಣಿ ಹತ್ಯೆ ಮಾಡುವುದು ಕೂಡ ಹಿಂಸೆಯೇ ಎಂದು ಹಲವರು ವಾದಿಸುತ್ತಾರೆ.

ಸಸ್ಯಕ್ಕೂ ಜೀವವಿದೆ. ಹಾಗಾಗಿ ಸಸ್ಯಾಹಾರವೂ ಅಹಿಂಸಾ ತತ್ವಕ್ಕೆ ವಿರುದ್ಧವಾದುದೇ ಎನ್ನುವ ಜನಜನಿತ ಅನಿಸಿಕೆಯನ್ನು ಪಕ್ಕಕ್ಕೆ ಸರಿಸಿ, ಮಾಂಸಾಹಾರ ಮತ್ತು ಪ್ರಾಣಿ ಹಿಂಸೆಗೂ ಇರುವ ಸಂಬಂಧ ಪರಿಶೀಲಿಸಲು ಹೊರಟರೂ ಸಾಕಷ್ಟು ದ್ವಂದ್ವಗಳು ಮತ್ತು ಅನುಕೂಲಸಿಂಧುತ್ವವುಳ್ಳ ವರ್ತನೆಗಳು ಎದುರಾಗುತ್ತ ಹೋಗುತ್ತವೆ.

ಹಿಂಸೆ ಎನ್ನುವುದು ಯಾವುದೇ ಪ್ರಾಣಿಯನ್ನು ವಧಿಸುವ ಕ್ರಿಯೆಗೆ ಮಾತ್ರ ಸೀಮಿತವಾಗಿದೆಯೇ? ಪ್ರಾಣಿ ಹಿಂಸೆಯನ್ನು ಮಾಂಸಾಹಾರದೊಂದಿಗೆ ತಳಕು ಹಾಕುವವರು ಬೊಟ್ಟು ಮಾಡಿ ತೋರಿಸುವುದು ಕೊಂದು ತಿನ್ನುವ ಚಟುವಟಿಕೆಯನ್ನಷ್ಟೆ. ಆದರೆ ಕೊಲ್ಲದೆಯೂ ಹಿಂಸಿಸುವ ಇನ್ನಿತರ ಚಟುವಟಿಕೆಗಳೆಡೆಗೆ ಅಹಿಂಸಾವಾದಿಗಳ ದೃಷ್ಟಿ ಅಷ್ಟು ತೀಕ್ಷ್ಣವಾಗಿ ಹರಿಯದಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.

ಉದಾಹರಣೆಗೆ, ‘ಮನುಷ್ಯತ್ವವಿರುವವರು ದೇವರ ಸಮಾನವಾದ ಗೋವನ್ನು ಕೊಂದು ತಿನ್ನುವುದುಂಟೇ? ಹಾಗೆ ಮಾಡುವುದು ಕಟುಕತನವಲ್ಲದೇ ಮತ್ತಿನ್ನೇನು?’ ಎಂದು ಗೋಹತ್ಯೆಯನ್ನು ವಿರೋಧಿಸುವವರು ಹಾಗೂ ಗೋಮಾಂಸ ಮಾರಾಟ ಮತ್ತು ಸೇವನೆಗೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದೆಂದು ವಾದಿಸುವವರು ಹೇಳುತ್ತಾರೆ.

ಇದೇ ವೇಳೆ ಅವರು ಅದೇ ಪೂಜ್ಯ ಭಾವನೆಯಿಂದ ಕಾಣುವ ಗೋವನ್ನು ಸಾಕಿ ಸಲಹಿ ಬೆಳೆಸುವ ವೇಳೆ ಅದಕ್ಕೆ ನೀಡುವ ತರಹೇವಾರಿ ಹಿಂಸೆಗಳೆಡೆಗೆ ಜಾಣಕುರುಡು ಪ್ರದರ್ಶಿಸುತ್ತಾರೆ. ಮೂಗುದಾರ ಬಿಗಿದು ಒಂದೆಡೆ ಕಟ್ಟಿ ಹಾಕುವುದು, ಉಳುಮೆ ವೇಳೆ ಬಾಸುಂಡೆ ಬರುವ ಹಾಗೆ ಬಾರಿಸುವುದು, ಎತ್ತಿನ ಗಾಡಿಯ ಮೇಲೆ ಹೊರಲಾಗದಷ್ಟು ಭಾರ ಹೇರುವುದು, ಗೊರಸು ಸವೆಯದಿರಲೆಂದು ಹಲ್ಲೆ ಕಟ್ಟಿಸುವುದು,

ಕರುವಿನ ಪಾಲಾಗಬೇಕಿದ್ದ ಹಾಲನ್ನು ಹಸು-ಕರು ಎರಡಕ್ಕೂ ವಂಚಿಸಿ ಕರೆದುಕೊಳ್ಳುವುದು... ಹೀಗೆ ಹಲವು ಚಟುವಟಿಕೆಗಳ ಮೂಲಕ ದಿನನಿತ್ಯ ಹಿಂಸಿಸುವುದನ್ನು ಇವರು ಯಾರೂ ಆಕ್ಷೇಪಿಸಲಾರರು. ಹೀಗೆ ಹಿಂಸಿಸುವ ಮೂಲಕವೇ ಪಡೆಯುವ ಹಾಲು-ತುಪ್ಪದ ಸೇವನೆಯನ್ನು ತ್ಯಜಿಸಬೇಕೆಂದು ಅಹಿಂಸಾವಾದಿಗಳೂ ಕರೆ ನೀಡಲಾರರು, ತಾವೂ ಪಾಲಿಸಲಾರರು.

ಪ್ರೀತಿಯಿಂದ ಸಾಕುವ ಹೆಣ್ಣು ನಾಯಿಯಿಂದ ಮರಿಗಳನ್ನು ಬೇರ್ಪಡಿಸಿ ಇನ್ನಿತರರಿಗೆ ನೀಡುವುದು ಅಥವಾ ಮಾರುವುದು ಕೂಡ ಪ್ರಾಣಿ ಹಿಂಸೆ ಎಂದು ನಮಗನಿಸುವುದಿಲ್ಲ. ತಿನ್ನಲೆಂದು ಮೀನು ಕೊಲ್ಲುವುದು ಒಂದೆಡೆ ಹಿಂಸೆಯಾಗಿ ಬಿಂಬಿತವಾಗುತ್ತದೆ.

ಅದೇ ಅಕ್ವೇರಿಯಂನಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿ ಮೀನು ಸಾಕುವುದು ಪ್ರಾಣಿ ಹಿಂಸೆ ಎನಿಸುವುದೇ ಇಲ್ಲ. ಪಂಜರಗಳಲ್ಲಿ ವಿವಿಧ ಪ್ರಾಣಿ ಪಕ್ಷಿಗಳನ್ನು ಬಂಧಿಸಿಡುವವರು ಪ್ರಾಣಿ-ಪಕ್ಷಿ ಪ್ರೇಮಿಗಳಾಗುತ್ತಾರೆ. ತಿನ್ನಲೆಂದು ಕೊಲ್ಲುವವರು ಮಾತ್ರ ಕಟುಕರಾಗುತ್ತಾರೆ.

ಮೇಲಿನ ಎಲ್ಲ ಹೋಲಿಕೆಗಳೂ ಬಾಲಿಶವೆನಿಸಬಹುದು. ಆದರೆ, ಈ ಸಂಗತಿಗಳನ್ನು ಬಾಲಿಶವಾಗಿಸುವ ಮೂಲಕವೇ ಹಲವರು ತಮ್ಮ ಹಿತಾಸಕ್ತಿ ಸಾಧಿಸಿಕೊಂಡು ಹೋಗುತ್ತಿರುವುದನ್ನು ಅಲ್ಲಗಳೆಯಲಾದೀತೆ?

ಅಹಿಂಸಾ ತತ್ವದ ಪರಿಪಾಲನೆ ಕೇವಲ ಪ್ರಾಣಿ ವಧೆ ನಿಷೇಧಕ್ಕಷ್ಟೆ ಸೀಮಿತವಾಗುವುದು ಅನುಕೂಲಸಿಂಧು ಧೋರಣೆಯ ಪ್ರತಿಬಿಂಬವಲ್ಲವೇ? ಮಾಂಸವಷ್ಟೇ ಹಿಂಸೆಯ ಉತ್ಪನ್ನವೇ? ಹಾಲು-ತುಪ್ಪ ಕೂಡ ಪ್ರಾಣಿ ಹಿಂಸೆಯ ಉಪಉತ್ಪನ್ನಗಳಲ್ಲವೇ?

ಯಾಕೆ ಯಾರೂ ಹಾಲು-ತುಪ್ಪ ಸೇವನೆಯನ್ನು ಹಿಂಸೆಯ ವ್ಯಾಪ್ತಿಗೆ ತರುವ ಧೈರ್ಯ ಮಾಡುವುದಿಲ್ಲ? ವಿವಿಧ ಪ್ರಾಣಿಗಳ ಚರ್ಮದಿಂದ ತಯಾರಿಸುವ ಉತ್ಪನ್ನಗಳ ನಿಷೇಧಕ್ಕೂ ಆಗ್ರಹಿಸುವುದಿಲ್ಲ? ಇವೆಲ್ಲವೂ ಅಸಾಧ್ಯವೆನ್ನುವ ಅರಿವಿರುವುದೇ ಕಾರಣವೇ?

ಪ್ರಾಣಿ ಹಿಂಸೆ ಎಂಬ ಅಸ್ತ್ರ ಬಳಸಿ ತಮ್ಮ ಸಹ ಮನುಷ್ಯ ಜೀವಿಗಳನ್ನು ಅಪಮಾನಿಸುವುದು ಅಹಿಂಸಾ ತತ್ವದ ಪರಿಪಾಲನೆಯೇ? ಅಸ್ಪೃಶ್ಯತೆಯ ಆಚರಣೆ ಹಿಂಸೆಯೋ ಅಹಿಂಸೆಯೋ? ಮಾಂಸಾಹಾರಿಗಳು ಸಸ್ಯಾಹಾರಿಗಳೆಂಬ ಭೇದವಿಲ್ಲದೆ ನಾವೆಲ್ಲರೂ ಅಭಿವೃದ್ಧಿಯ ಆರಾಧಕ
ರಾಗಿದ್ದೇವೆ. ಅಭಿವೃದ್ಧಿಗೂ ಪ್ರಾಣಿ ಹಿಂಸೆಗೂ ಸಂಬಂಧ ಕಲ್ಪಿಸಲು ಸಹ ಅಗಾಧ ಸ್ಥಳಾವಕಾಶವಿದೆ.

ರಸ್ತೆ, ನದಿ ಜೋಡಣೆ, ಗಣಿಗಾರಿಕೆ, ಅಣೆಕಟ್ಟೆ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ಕೃಷಿಗೆಂದು ಅರಣ್ಯ ನಾಶ ಮಾಡಿದಂತೆಲ್ಲ ಕಾಡು ಪ್ರಾಣಿಗಳ ಆವಾಸಸ್ಥಾನ ನಾಶವಾಗುವುದಿಲ್ಲವೇ? ಈ ಎಲ್ಲ ಚಟುವಟಿಕೆಗಳೂ ಪ್ರಾಣಿ ಹಿಂಸೆಯಡಿ ಬರಬೇಕಲ್ಲವೇ?

ನಾವು ರೂಪಿಸಿಕೊಳ್ಳುತ್ತ ಬಂದಿರುವ ನಾಗರಿಕ ಜಗತ್ತು ಮನುಷ್ಯ ಕೇಂದ್ರಿತವಾಗಿರುವುದರಿಂದ, ಒಂದಿಷ್ಟು ಸಕಾರಣಗಳಿಗಾಗಿ ನಡೆಯುವ ಪ್ರಾಣಿ ಹಿಂಸೆಯನ್ನು ನಿಸರ್ಗ ನಿಯಮ ಮತ್ತು ನಾವು ರೂಪಿಸಿಕೊಂಡಿರುವ ಮನುಷ್ಯ ಕೇಂದ್ರಿತ ಪರಿಸರ ಪ್ರಜ್ಞೆಯ ಹಿನ್ನೆಲೆಯಲ್ಲಿ ಸಹಜವಾಗಿಯೇ ಸ್ವೀಕರಿಸಬೇಕಾಗುತ್ತದೆ. ಅಹಿಂಸೆ ಕೂಡ ಸಾಧ್ಯವಾದಷ್ಟು ಮನುಷ್ಯ ಕೇಂದ್ರಿತವಾದರೆ, ನಮ್ಮ ಸಮಾಜ ಇನ್ನಷ್ಟು ಸಹನೀಯವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT