ADVERTISEMENT

ಉದಾತ್ತವನ್ನೂ ಮಲಿನಗೊಳಿಸಬಲ್ಲ ಮನಸ್ಸುಗಳು...

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST
ಉದಾತ್ತವನ್ನೂ ಮಲಿನಗೊಳಿಸಬಲ್ಲ ಮನಸ್ಸುಗಳು...
ಉದಾತ್ತವನ್ನೂ ಮಲಿನಗೊಳಿಸಬಲ್ಲ ಮನಸ್ಸುಗಳು...   

ಯಾವುದೇ ನಾಗರಿಕತೆಗೆ ರಾಷ್ಟ್ರೀ­ಯತೆ ಒಂದು ಪಿಡುಗಾ­ಗಿರುತ್ತದೆ ಎಂಬುದು ಈಗಾ­ಗಲೇ ಸಾಬೀತಾಗಿದೆ. ಕಳೆದ ಶತಮಾನದಲ್ಲಿ ನಡೆದ ಎರಡು ಮಹಾ­ಯುದ್ಧಗಳು ಇದನ್ನು ಸಾಬೀತುಗೊಳಿಸಿವೆ. ಇಂದು ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಸಿರುವ ಉಗ್ರರ ಬೆದರಿಕೆಯ ಹಿಂದೆಯೂ ರಾಷ್ಟ್ರೀಯತೆಯ ಪ್ರೇರಣೆಯೇ ಕೆಲಸ ಮಾಡುತ್ತಿದೆ. ಒಂದು ಜನಾಂಗವು ತನಗೆ ವಿಶಿಷ್ಟವಾದ ದೇವರು, ಧರ್ಮಗ್ರಂಥ, ಪ್ರವಾದಿ, ಜಾತಿ, ವರ್ಗ ಇತ್ಯಾದಿ­ಗಳನ್ನು ಗುರುತಿಸಿಕೊಳ್ಳುವ ಮೂಲಕ ರಾಷ್ಟ್ರೀಯ­ತೆಯ ಮೂಲ ಧಾತುಗಳು ನಿರ್ಮಾಣವಾಗು­ತ್ತವೆ. ಹೀಗಿರುವಾಗ ಭಾರತದ ನೆಲದಲ್ಲಿ ಈ ಪಿಡುಗಿನ ಮೂಲಧಾತುಗಳನ್ನು ಬಿತ್ತಲು ಮುಂದಾಗಿರುವ ನಮ್ಮ ನಾಯಕರ ನಿಲುವು ನಿಜಕ್ಕೂ ಅನರ್ಥಕಾರಕವಾಗಿದೆ. 

ಗೀತೆ ಒಂದು ಉದಾತ್ತ ಗ್ರಂಥವೆಂಬುದು ನಿರ್ವಿವಾದ. ಆದರೆ ಮನುಷ್ಯ ಬುದ್ಧಿ ಎಂತಹ ಉದಾತ್ತವಾದುದನ್ನೂ ವಿರೂಪಗೊಳಿಸುವ ಚಾಣಾ­­ಕ್ಷತೆ ಪಡೆದಿರುತ್ತದೆ. ‘ಮುಂಬರುವ ದಿನಗಳಲ್ಲಿ ಆತ್ಮಬಲವಿಲ್ಲದವರು ನಿರ್ನಾಮ­ವಾಗ­ಲಿ­ರುವರು’ ಎಂದು ಘೋಷಿಸಿದ ಜರ್ಮನಿಯ ತತ್ವಜ್ಞಾನಿ ಫ್ರೆಡರಿಕ್ ನೀಷೆಯ ‘ಝರತುಷ್ಟ್ರನ ವಚನಗಳು’ (Thus Spake Zarathustra)  ಎಂಬ ಉದಾತ್ತ ಕೃತಿಯನ್ನು ಜರ್ಮನಿ ದೇಶದ ರಾಷ್ಟ್ರೀಯ ಗ್ರಂಥವನ್ನಾಗಿಸಿದ ಅಡಾಲ್ಫ್ ಹಿಟ್ಲರ್ ಕ್ರಿಶ್ಚಿಯನ್ನರ ಅಹಂಕಾರ ಹಿಗ್ಗುವ ಹಾಗೆ ಝರತುಷ್ಟ್ರನ ನುಡಿಗಳನ್ನು ಅಪವ್ಯಾಖ್ಯಾನಿಸಿ ಲಕ್ಷ ಲಕ್ಷ ಯಹೂದಿಗಳನ್ನು ಕಗ್ಗೊಲೆ ಮಾಡಲಿಲ್ಲವೇ? ಆದ್ದರಿಂದ ಇಲ್ಲಿ ಗೀತೆ ರಾಷ್ಟ್ರೀಯ ಗ್ರಂಥವಾಗ­ಬೇಕೇ ಬೇಡವೇ ಎಂಬ ಪ್ರಶ್ನೆ ಮುಖ್ಯವಲ್ಲ. ಹಳೆಯ ಕಾಲದ ಗೀತೆಯನ್ನು ಬಿಟ್ಟು ಇಂದಿನ ಯುಗದ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರುವ ಗೀತೆಗಳನ್ನೋ ಅಥವಾ ಟ್ಯಾಗೋರರ ‘ಗೀತಾಂಜಲಿ’ಯನ್ನೋ ರಾಷ್ಟ್ರೀಯ ಗ್ರಂಥವೆಂದು ಘೋಷಿಸಿದರೂ ಅದರಲ್ಲೂ ಮನುಷ್ಯನ ನೀಚತನ, ಹವಣಿಕೆ ಮತ್ತು ಹುನ್ನಾರಗಳು ತನ್ನ ಹಾದಿಗಳನ್ನು ಕಂಡುಕೊಳ್ಳಬಲ್ಲವು. ರಾಷ್ಟ್ರೀ­ಯತೆ ಪ್ರಜೆಗಳ ಭಾವನಾತ್ಮಕ ನೆಲೆಗಳಲ್ಲಿ ಕ್ರಿಯಾಶೀಲವಾಗಲು ಆಸ್ಪದ ನೀಡದೆ ತಮ್ಮ ತುತ್ತಿನ­ಚೀಲವನ್ನು ತುಂಬಿಸಬಲ್ಲ ಅಭಿ­ವೃದ್ಧಿಯ ಹಾದಿಯಲ್ಲಿ ಪ್ರಜೆ­ಗ­ಳನ್ನು ನಡೆಸುವ ಮಟ್ಟಿಗೆ ಸೀಮಿತ­ವಾಗಿಸಿಕೊಂಡಾಗ ರಾಷ್ಟ್ರೀಯತೆಯ ದೋಷಗಳು ನಿವಾರಣೆಯಾದೀತು.
-ಟಿ.ಎನ್.ವಾಸುದೇವ ಮೂರ್ತಿ,ಬೆಂಗಳೂರು
****
ಗೀತೆಯ ಘನತೆಗೆ ಚ್ಯುತಿ ಇಲ್ಲ
ವೆಂಕಟೇಶ್‌ ಕೆ. ಜನಾದ್ರಿಯವರು ಅರ್ಜುನ­ನಿಗೆ ಯುದ್ಧದ ಬದಲು ಶ್ರೀಕೃಷ್ಣ ಶಾಂತಿ ಬೋಧಿಸಿ­ದ್ದರೆ ಹೆಚ್ಚು ಸಮಂಜಸವಾಗಿರುತ್ತಿತ್ತು ಎಂದಿ­ದ್ದಾರೆ (ವಾ.ವಾ., ಡಿ.11). ಇದು ಯುದ್ಧದ ಹಿನ್ನೆಲೆಯನ್ನಾಗಲಿ  ಗೀತೆಯ­ನ್ನಾಗಲಿ ಅಧ್ಯಯನ ಮಾಡದೇ ಆಡಿರುವ ಮಾತು­ಗಳು. ಯುದ್ಧಕ್ಕೂ ಮುನ್ನ ಕೃಷ್ಣ, ದುರ್ಯೋ­­ಧನನ ಬಳಿಗೆ ಶಾಂತಿ­ದೂತನಾಗಿ ಹೋಗಿ ವಿಫಲನಾದ. ಅರ್ಜುನನು ರಾಜ್ಯದ ಆಸೆ­ಯಿಂದ ಹೋರಾಡದೆ ಅವನ ಹಕ್ಕಿನ ರಾಜ್ಯಕ್ಕಾಗಿ ಹೋರಾಡಿದ. ಅರ್ಜುನನ ಪಾಲಿಗೆ ಬಂದ ಕ್ಷತ್ರಿಯ ಧರ್ಮವನ್ನು ಪಾಲಿಸಲು ಅವನನ್ನು ಕೃಷ್ಣ ಪ್ರೇರೇಪಿಸಿದ ಅಷ್ಟೆ.

ಜಗತ್ತಿನಲ್ಲಿರುವ ಯಾವುದೇ ಧರ್ಮಗ್ರಂಥ­ಗಳಾ­ಗಲಿ ಅವು ಸಮಸ್ತ ಮಾನವಕುಲದ ಒಳಿತಿ­ಗಾಗಿ ರಚನೆಯಾಗಿವೆ. ಒಂದೊಂದು ಗ್ರಂಥವನ್ನು ಒಂದೊಂದು ವರ್ಗಕ್ಕೆ ಸೀಮಿತ­ಗೊಳಿಸುವುದು ಮಾನವರ ಸಂಕುಚಿತ ಮನೋಭಾವಕ್ಕೆ ಕೈಗನ್ನಡಿ. ಗಾಂಧಿ ಅವರು ವಿಶ್ವದ ಯಾವುದೇ ಮೂಲೆ­ಯಲ್ಲಿ ಒಳ್ಳೆಯ ವಿಷಯವಿದ್ದರೆ ಅದನ್ನು ಕಲಿಯಲು ಪ್ರೇರೇಪಿಸುತ್ತಿದ್ದರು. ಆದ್ದರಿಂದ ಗೀತೆಯನ್ನು ಹಿಂದೂ ಧರ್ಮಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಇದು ಸಮಸ್ತ ವಿಶ್ವಕ್ಕೆ ಕೃಷ್ಣ ನೀಡಿರುವ ಕೊಡುಗೆ. ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಲಿ, ಬಿಡಲಿ ಅದರ ಘನತೆಗೆ ಯಾವುದೇ ಚ್ಯುತಿ ಇಲ್ಲ.
-ಬಿ.ಎನ್‌. ಉಷಪ್ರದ, ಬೆಂಗಳೂರು
****
ಸಾರ್ವಕಾಲಿಕ ಗ್ರಂಥ

‘ಭಗವದ್ಗೀತೆ’ ಎಲ್ಲಾ ಕಾಲಕ್ಕೂ ಸರಿ­ಹೊಂದುವ ಗ್ರಂಥವಾಗಿದೆ. ಭಗವದ್ಗೀತೆಯಲ್ಲಿ ಮೊದಲಿಂದ ಕೊನೆಯವರೆಗೆ   ಯಾವ ಧರ್ಮ ವನ್ನಾಗಲಿ, ಜನಾಂಗವನ್ನಾಗಲಿ ತೆಗಳುವ ಮಾತುಗಳಿಲ್ಲ.  ಆದರೆ ಚರ್ಚೆಯ ನೆಪದಲ್ಲಿ ಅಭಿ­ವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ಯಾವ ದೋಷ ಇಲ್ಲದಿದ್ದರೂ ನಮ್ಮಲ್ಲಿ ಬೇಜವಾ­ಬ್ದಾ­ರಿಯ ಹೇಳಿಕೆಗಳನ್ನು  ಕೊಟ್ಟು ಸಮಸ್ಯೆ ಜೀವಂತ­ವಾಗಿಡುವುದು ಅನೇಕರ ಹವ್ಯಾಸವಾಗಿದೆ.
ಸ್ವಾಮಿ ವಿವೇಕಾನಂದರ ಹತ್ತಿರ ಯಾವಾ­ಗಲೂ ಎರಡೂ ಪುಸ್ತಕಗಳೂ ಇರುತ್ತಿದ್ದವು. ಒಂದು ‘ಭಗವದ್ಗೀತೆ’ ಮತ್ತೊಂದು ಥಾಮಸ್‌ ಕೆಂಪಿಸ್‌ನ ‘ಇಮಿಟೇಶನ್ ಆಫ್ ಕ್ರೈಸ್ಟ್’. ಮಹರ್ಷಿ ಅರವಿಂದರು ಭಗವದ್ಗೀತೆ ಕುರಿತಂತೆ ‘ಭಗವದ್ಗೀತೆಯು ಹೊಸ ಸಂದೇಶವನ್ನು ಪ್ರತಿ ಯುಗಕ್ಕೂ ಮತ್ತು ಹೊಸ ಸಂದೇಶವನ್ನು ಪ್ರತಿ ನಾಗರಿಕತೆಗೂ ಕೊಡುತ್ತದೆ’ ಎಂದಿದ್ದಾರೆ.

ಮಹಾತ್ಮ ಗಾಂಧಿ ಅವರು ಗೀತೆ ಕುರಿತು ಹೀಗೆ ಹೇಳು­ತ್ತಾರೆ: ‘ಮನಸ್ಸಿಗೆ ಬೇಸರವಾ­ದಾಗ ಭಗವದ್ಗೀತೆ ತೆಗೆದು ಕೆಲವು ಶ್ಲೋಕಗಳನ್ನು ಓದಿ­ದಾಗ ನನ್ನ ಮನಸ್ಸಿನ ದುಗುಡ ಎಲ್ಲಾ ಮಾಯವಾಗಿ ಬಿಡು­ತ್ತಿತ್ತು,  ಮತ್ತೆ ನಾನು  ಚೈತನ್ಯ­ದಿಂದ ಕಾರ್ಯ ತತ್ಪರನಾಗುತ್ತಿದ್ದೆ.’
ಭಾರತದ ಮೊದಲ ಪ್ರಧಾನಿ ಜವಾಹರ­ಲಾಲ್ ನೆಹರೂ,  ‘ಮಾನವ ಅಸ್ತಿತ್ವದ ಆಧ್ಯಾ­ತ್ಮಿಕ ಅಡಿಪಾಯದ  ಜೊತೆಗೆ ಮೂಲ­ಭೂತ­ವಾಗಿ ಭಗವದ್ಗೀತೆ ವ್ಯವಹರಿ­ಸುತ್ತದೆ. ಇದು ಜವಾ­ಬ್ದಾರಿ ಮತ್ತು ಜೀವನದ ಕರ್ತವ್ಯ­ಗ­ಳನ್ನು ಪೂರೈಸಲು ಸಹಾಯಕ­ವಾಗಿದೆ’ ಎಂದಿದ್ದರು.  
ಹರ್ಮನ್ ಹೆಸ್‌ ಅವರ ಪ್ರಕಾರ ‘ಭಗವದ್ಗೀತೆಯು  ಧರ್ಮ ವಿಕಸಿತ­ಗೊಳ್ಳಲು ಸಹಾ­ಯಕ. ಬದುಕಿನ ವಿವೇಕವೇ  ಅದರ ನಿಜ­ವಾದ ಸುಂದರ ಬಹಿರಂಗ ಎಂಬುದನ್ನು  ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ.

ಆದ್ದರಿಂದ ದೇಶದಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡುವುದರಿಂದ ಯಾವುದೇ ಧರ್ಮದವರಿಗೂ ಅನ್ಯಾಯವಾಗು­ವು­ದಿಲ್ಲ. ಅರ್ಜುನ ಯುದ್ಧ ಮಾಡುವುದಿಲ್ಲ ಎಂದು ಶಸ್ತ್ರ ತ್ಯಾಗ ಮಾಡಿ ಕುಳಿತಾಗ ಕೃಷ್ಣ ಅರ್ಜುನನಿಗೆ ‘ಅಧರ್ಮ, ಅನ್ಯಾ­ಯದ ವಿರುದ್ಧ ಹೋರಾಟ ಮಾಡ­ದಿ­ದ್ದರೆ ಅನ್ಯಾಯವೇ ಗೆಲ್ಲುತ್ತದೆ’ ಎಂದು ಹೇಳುತ್ತಾನೆ. ಯುದ್ಧ ಎನ್ನು­ವುದು ಬರೀ ಕೌರವ ಪಾಂಡವರ ಯುದ್ಧವಲ್ಲ. ಈಗ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹಾಗೂ ನಮ್ಮ ನಡುವೆ ನಡೆಯುತ್ತಿರುವ ಅನೇಕ ಅಂತರಿಕ ಶತ್ರುಗಳಾದ ಅರಿಷಡ್ವರ್ಗಗಳ ವಿರುದ್ಧ ಮಾಡುವ ಯುದ್ಧವೇ ಆಗಿದೆ ಎಂದು ಬೋಧಿಸು­ತ್ತಾನೆ. ಕೃಷ್ಣ ಅರ್ಜುನರ ನಡುವಿನ ಅಂದಿನ ಸಂಭಾ­ಷಣೆಯಿಂದ ಕೂಡಿರುವ ಗ್ರಂಥ ಇದಾ­ದರೂ, ಎಂದೆಂದಿಗೂ ನಡೆ­ಯುತ್ತಿರುವ ಸಂಘ­ರ್ಷಕ್ಕೆ ಪರಿಹಾರ ಸೂಚಿಸುವ ಗ್ರಂಥವಾಗಿದೆ. ಇದು ಮನುಷ್ಯನನ್ನು ಕಾರ್ಯ ತತ್ಪರನನ್ನಾ­ಗಿಯೂ, ಕರ್ತವ್ಯ ಪರಾಯಣ ನನ್ನಾಗಿಯೂ ಮಾಡಲು ಸಹಾಯಕವಾದ ಗ್ರಂಥವಾಗಿದೆ. ಭಗ­ವದ್ಗೀತೆ ನಮ್ಮ ದೇಶದ ಕೃತಿ ಎಂದು ಮುಂದೊಂದು ದಿನ ಪ್ರಪಂಚದ ಯಾವುದೋ ದೇಶ ಪೇಟೆಂಟ್ ಮಾಡಿಕೊಂಡರೆ ಏನು ಮಾಡಬೇಕು?
-ಎಂ.  ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು ತಾಲ್ಲೂಕು
****
ಕೃಷ್ಣನನ್ನು ಅರ್ಥಮಾಡಿಕೊಳ್ಳಿ

‘ರಾಷ್ಟ್ರೀಯ ಗ್ರಂಥವಾಗಬೇಕೇ?’ ಎಂಬ (ವಾ. ವಾ, ಡಿ. 11) ಪತ್ರಕ್ಕೆ ಉತ್ತರ. ಕೃಷ್ಣ ಅರ್ಜುನನಿಗೆ ‘ಯುದ್ಧ ಮಾಡು’ ಎಂಬ ಪ್ರಚೋದನೆ ನೀಡುವ ಮೊದಲು  ದುರ್ಯೋ­ಧನ­ನಲ್ಲಿಗೆ ಶಾಂತಿ ಸಂಧಾನಕ್ಕಾಗಿ ಹೋಗಿದ್ದ­ನೆಂಬುದನ್ನು ಮರೆಯಬಾರದು. ‘ಸೆಣಸು ಸೇರದ ದೇವ’ ಅಂತ ಕೃಷ್ಣನನ್ನು ಕುಮಾರವ್ಯಾಸ ವರ್ಣಿಸಿರುವುದನ್ನು ಇಲ್ಲಿ ನೆನೆಯಬಹುದು.

ಕೃಷ್ಣನು ಕ್ರಿಸ್ತನಂತಯೋ, ಬುದ್ಧನಂತೆಯೋ ಬೋಧನೆ  ಮಾಡಿ ಯುದ್ಧವನ್ನು ತಡೆದೇಬಿ­ಟ್ಟ­ನೆಂದು ಕೊಂಡರೆ ಆಗೇನಾಗುತ್ತಿತ್ತು? ಧರ್ಮಿಷ್ಟ­ರಾದ ಪಾಂಡವರು ಪುನಃ ವನವಾಸಕ್ಕೆ ಹೋಗ­ಬೇಕಿತ್ತು! ಶಾಂತಿಯ ಮುಖವಾಡ ಧರಿಸಿ ಯುದ್ಧ­­ದಿಂದ ವಿಮುಖನಾಗುವ ಅಸಹಾಯಕತೆ ಕೃಷ್ಣನಿಗಿರಲಿಲ್ಲ!

‘ಯುದ್ಧ ಮಾಡು’ ಅಂತ ಕೃಷ್ಣ  ಬೋಧಿಸಿದ್ದು ಯುದ್ಧ­ರಂಗ­ದಲ್ಲಿ. ಅದಾಗಲೇ ಎರಡು ಬಣಗಳು ಯುದ್ಧ ಸನ್ನದ್ಧರಾಗಿ ನಿಂತಿದ್ದವು. ಈ ಮಹಾ ಸಂಗ್ರಾಮಕ್ಕಾಗಿ ಮಾಡಿಕೊಂಡ ಸಿದ್ಧತೆಗಳನ್ನು ಪರಿಗಣಿಸಬೇಕು.

ಕ್ರಿಸ್ತನ, ಬುದ್ಧನ ಅಹಿಂಸಾತ್ಮಕ ಬೋಧನೆ­ಯನ್ನು ಕೇಳುವುದಕ್ಕೆ ಚೆನ್ನಾಗಿರುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಕಳ್ಳ, ಖದೀಮ ಕೊಲೆಗಾರರನ್ನೆಲ್ಲಾ ಕ್ಷಮಿಸಬೇಕು. ಹೀಗಾದಾಗ ಸಾಮಾಜಿಕ ಸ್ವಾಸ್ಥ್ಯ ಎಲ್ಲಿ ಉಳಿದೀತು? ಇನ್ನು ಬುದ್ಧನ ‘ಆಸೆಯೇ ದುಃಖಕ್ಕೆ ಕಾರಣ’ ಎಂಬ ಬೋಧನೆಯ ವಿಚಾರ.

ಆಸೆಯೇ ದುಃಖಕ್ಕೆ  ಕಾರಣ ಎನ್ನುವುದಕ್ಕಿಂತ ‘ಅತ್ಯಾಸೆಯೇ ದುಃಖಕ್ಕೆ ಕಾರಣ’ ಎನ್ನಬಹುದು. ಆದರೆ, ಆಸೆಯೇ ಇಲ್ಲದಿದ್ದರೆ ಜಗತ್ತು ಇದ್ದಲ್ಲೇ ಇರುತ್ತಿತ್ತು.
-ಜಿ.ವಿ. ಗಣೇಶಯ್ಯ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.