ADVERTISEMENT

ಕಣ್ಣುರಿಸುತ್ತಿದೆ ಈರುಳ್ಳಿ

ಮಂಜುನಾಥ ಉಲುವತ್ತಿ ಶೆಟ್ಟರ್
Published 25 ಆಗಸ್ಟ್ 2015, 19:35 IST
Last Updated 25 ಆಗಸ್ಟ್ 2015, 19:35 IST

ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರ ಕಣ್ಣುಗಳಲ್ಲಿ ನೀರು ಬರುವಂತಾಗಿದೆ. ಹಣ್ಣುಗಳ ಮಾರುಕಟ್ಟೆಯಲ್ಲಿ ಸೇಬಿನ ಬೆಲೆ ಕೆ.ಜಿ.ಗೆ ₨ 60 ಇದ್ದರೆ, ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿ.ಗೆ ₨ 60ರಿಂದ ₨ 80ರ ವರೆಗೂ ಮಾರಾಟವಾಗುತ್ತಿದೆ. ಸದ್ಯದ ಬೆಲೆ ಏರಿಕೆಯು ಈರುಳ್ಳಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. ಆದರೆ ಈರುಳ್ಳಿ ಕೊಳ್ಳುವ ಗ್ರಾಹಕ ಮಾತ್ರ ಮುಖ ಊದಿಸಿಕೊಂಡು ವ್ಯಾಪಾರ ಮಾಡಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಇದೇ ರೀತಿ ಬೆಲೆ ಏರಿಕೆಯಾಗಿದ್ದರಿಂದ ಬೆಳೆಗಾರರು ಒಂದಿಷ್ಟು ಲಾಭ ಮಾಡಿಕೊಂಡಿದ್ದರು. ಬಲ್ಲವರು ಈ ಮಾರುಕಟ್ಟೆ ಬೆಲೆಯ ಸ್ಥಿತಿಗತಿಯನ್ನು ಮರಣಕ್ಕೆ ಹೋಲಿಸುತ್ತಾರೆ (ಮರಣ ಮತ್ತು ಬೆಲೆ ಯಾರ ಕೈಗೂ ಸಿಗುವುದಿಲ್ಲ ಎಂಬುದು ಇದರ ತಾತ್ಪರ್ಯ). ಮಾರುಕಟ್ಟೆಯ ಬೆಲೆಗೆ ಯಾವುದೇ ಭೇದಭಾವವಿಲ್ಲ. ಬಡವ, ಬಲ್ಲಿದ, ಕೂಲಿಕಾರರು, ಹೋಟೆಲ್‌ ಉದ್ಯಮಿಗಳು,  ಸಾಮಾನ್ಯರು, ಐ.ಟಿ. ಉದ್ಯೋಗಿಗಳು ಅಥವಾ ಮಧ್ಯಮ ವರ್ಗದವರು ಎಂಬುದು ಏರುವ ಬೆಲೆಗೆ ಗೊತ್ತಿಲ್ಲ. ಹೀಗಾಗಿ,  ಗಗನಮುಖಿ ಧಾರಣೆಯಲ್ಲಿ ಈರುಳ್ಳಿ ಸರ್ವರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಕ ಮಾಡುತ್ತಾ ಸಮತೋಲನವನ್ನು ಉಳಿಸಿಕೊಂಡಿದೆ!

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಮರಾಠವಾಡ ಭಾಗದಲ್ಲಿ ವಾಡಿಕೆಗಿಂತ ಶೇ 46ರಷ್ಟು ಮತ್ತು ಅಖಂಡ ಮಹಾರಾಷ್ಟ್ರದಲ್ಲಿ ಶೇ 36ರಷ್ಟು ಕಡಿಮೆ ಮಳೆ ಬಿದ್ದಿದೆ. ಅದೇ ರೀತಿ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಶೇ 44ರಷ್ಟು ಮತ್ತು ಆಂಧ್ರ ಪ್ರದೇಶದ ರಾಯಲಸೀಮಾದಲ್ಲಿ ಶೇ 32ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ. ಮಳೆ ಅಭಾವದಿಂದ ಈ ಬಾರಿ ಶೇ 60ರಷ್ಟು ಭೂಪ್ರದೇಶವು ಬಿತ್ತನೆಯಾಗಿಲ್ಲ. ಹೀಗಾಗಿ ಬೆಳೆ ಕಡಿಮೆಯಾಗಿರುವುದರಿಂದ ಈ ವರ್ಷ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ.  ಇದರ ಜೊತೆಗೆ, ಇರುವ ಉತ್ಪನ್ನದಲ್ಲಿ ಅಲ್ಪಸ್ವಲ್ಪ ಈರುಳ್ಳಿಯನ್ನು ಮಧ್ಯವರ್ತಿಗಳು ಸಂಗ್ರಹಿಸಿಟ್ಟುಕೊಂಡಿದ್ದಾರೆ.

ಹೊಸ ಬೆಳೆ ಬಂದಾಗ ಬೆಲೆ ಇಳಿಕೆ ಸಹಜ. ಈ ಅಭಾವದ ಕಾಲಘಟ್ಟದಲ್ಲಿ ಸರ್ಕಾರ ಖರೀದಿಸಿ ಬೆಲೆಯ ಸಮತೋಲನ ಕಾಪಾಡಿಕೊಂಡರೆ ರೈತರಿಗೆ ಕೊಂಚಮಟ್ಟಿನ ಲಾಭವಾಗುತ್ತದೆ. ಏಷ್ಯಾದಲ್ಲೇ ಅತಿ ದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆ ಎಂದೇ ಖ್ಯಾತವಾಗಿರುವ ಮಹಾರಾಷ್ಟ್ರದ ಲಸಾಲ್‌ಗಾಂವ್‌ನಲ್ಲಿಯೇ ಒಂದು ಕೆ.ಜಿ. ಈರುಳ್ಳಿ 54 ರೂಪಾಯಿಗೆ ಮಾರಾಟವಾಗಿದೆಯೆಂದರೆ, ದೇಶದ ಉಳಿದ ಭಾಗಗಳಲ್ಲಿ ಬೆಲೆ ಏರಿಕೆಯು ಜನಸಾಮಾನ್ಯರನ್ನು ತಾಕದೆ ಬಿಟ್ಟೀತೆ?

ತುಂಬ ಹಿಂದಿನಿಂದಲೂ ಆಹಾರ ತಯಾರಿಕೆಯಲ್ಲಿ ಈರುಳ್ಳಿಯದು ಮೊದಲ ಸ್ಥಾನ. ಅದರಲ್ಲೂ ಆಗ್ನೇಯ ಏಷ್ಯಾ ದೇಶಗಳಾದ ಚೀನಾ, ಭಾರತದಂಥ ಹೆಚ್ಚು ಜನಸಂಖ್ಯೆ ಇರುವೆಡೆ ಆಹಾರ ತಯಾರಿಕೆಯಲ್ಲಿ ಈರುಳ್ಳಿಯ ಪಾತ್ರ ಬಹು ದೊಡ್ಡದು. ಜಗತ್ತಿನ ಕೆಲವೆಡೆ ಅನೇಕ ಬಗೆಯ ನೆಲದ ಮೇಲೆ ಸೊಗಸಾಗಿ ಬೆಳೆಯುವ ಈರುಳ್ಳಿಯ ವೈವಿಧ್ಯಮಯ ಹೊಂದಾಣಿಕೆಯೇ ಅದು ಜಗತ್ತನ್ನು ಆವರಿಸುವಂತೆ ಮಾಡಿದೆ. ಒಂದು ಸಣ್ಣ ಹುಲ್ಲಿನ ಕುಲವೊಂದು ಇಂತಹ ಶಕ್ತಿಯ ಮೂಲಕ ಬೆಲೆಯ ರೂಪದಲ್ಲಿ ಪವಾಡ ಮಾಡುವ ಶಕ್ತಿ ಪಡೆದಿರುವುದು ನಿಜಕ್ಕೂ ವಿಸ್ಮಯ.

ಪ್ರಸಕ್ತ ವರ್ಷ ಬಿತ್ತನೆ ಮಾಡಿದ ಈರುಳ್ಳಿ ಬೀಜವು ಭೂಮಿಯಲ್ಲಿಯೇ ಉಳಿದುಕೊಂಡಿರುವುದರಿಂದ ಇದರ ಬೆಲೆ ಈಗ ಗಗನಮುಖಿಯಾಗಿದೆ. ಸದ್ಯದ ಬೆಲೆ ಏರಿಕೆ ಸ್ಥಿತಿಯು ಸಮತೋಲನಕ್ಕೆ ಬರಬೇಕಾದರೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ. ನಮ್ಮ ಮುಂಗಾರಿನ ಅಕಾಲಿಕ ಸನ್ನಿವೇಶವನ್ನು ಮನಗಂಡ ಕೇಂದ್ರ ಸರ್ಕಾರ ಮುಂಜಾಗ್ರತೆ ದೃಷ್ಟಿಯಿಂದ ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಮೊದಲ ಯತ್ನ ವಿಫಲವಾಗಿರುವುದೇ ಇದಕ್ಕೆ ಕಾರಣ. ದೇಶದಲ್ಲಿನ ಸದ್ಯದ ಈರುಳ್ಳಿ ದಾಸ್ತಾನಿನ ಸಂಗ್ರಹ 30 ಲಕ್ಷ ಟನ್‌ಗಳಿಗಿಂತಲೂ ಕಡಿಮೆ ಇರುವುದನ್ನು ಗಮನಿಸಿದ ಸರ್ಕಾರ, ವಿವಿಧ ದೇಶಗಳಿಂದ 10 ಸಾವಿರ ಟನ್ ದಾಸ್ತಾನನ್ನು ಅಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ ಕೆಲವು ತಾಂತ್ರಿಕ ತೊಡಕುಗಳಿಂದ ಈ ಪ್ರಯತ್ನ ಕೈಗೂಡಿಲ್ಲ. ಇನ್ನೊಂದೆಡೆ, ರುಚಿ ರುಚಿಯ ಆಹಾರ ತಯಾರು ಮಾಡುವ ಹಬ್ಬಹರಿದಿನಗಳ ಸರಣಿಯೇ ನಮ್ಮ ಕಣ್ಣೆದುರಿಗೆ ರಾಚುತ್ತಿದೆ. ಇದರಿಂದ ಸಹಜವಾಗಿ ಈರುಳ್ಳಿ ಬೆಲೆ ಏರುತ್ತಲೇ ಇದೆ.

10 ಸಾವಿರ ಟನ್ ಈರುಳ್ಳಿ ಪೂರೈಕೆಗೆ ನಫೆಡ್ (ರಾಷ್ಟ್ರೀಯ ಕೃಷಿ ಸಹಕಾರಿ ಮತ್ತು ಮಾರಾಟ ಒಕ್ಕೂಟ) ಮತ್ತೆ ಈಗ ಟೆಂಡರ್ ಕರೆದಿದೆ. ‘ಈ ಮೊದಲು ಕರೆದಿದ್ದ ಟೆಂಡರ್‌ಗೆ ಪಾಕಿಸ್ತಾನ, ಚೀನಾ, ಈಜಿಪ್ಟ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿಯನ್ನು ಉತ್ಪಾದಿಸುವ ರಾಷ್ಟ್ರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದೇ ಇದ್ದುದರಿಂದ, ಮತ್ತೊಂದು ಟೆಂಡರ್‌ ಕರೆಯುವುದು ಅನಿವಾರ್ಯವಾಯಿತು’ ಎಂದು ಕೇಂದ್ರ ಸರ್ಕಾರದ ಕೃಷಿ ಕಾರ್ಯದರ್ಶಿ ಸಿರಾಜ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.

ಬೆಳೆಗಾರರು, ಪೂರೈಕೆದಾರರು ಮತ್ತು ಸಂಗ್ರಹಕಾರರು ಈರುಳ್ಳಿಯನ್ನು ಮಾರುಕಟ್ಟೆಗೆ ತರದೇ, ಭವಿಷ್ಯದಲ್ಲಿ ಧಾರಣೆ ಇನ್ನೂ ಏರುತ್ತದೆಯೇನೋ ಎಂದು ಕಾದು ನೋಡುವ ಆಲೋಚನೆಯಲ್ಲಿರುವುದೇ ಈರುಳ್ಳಿ ಬೆಲೆ ಗರಿಷ್ಠ ಪ್ರಮಾಣದಲ್ಲಿ ಏರಲು ಮತ್ತೊಂದು ಕಾರಣವಾಗಿದೆ. ಸದ್ಯ ನಮ್ಮಲ್ಲಿ ದಾಸ್ತಾನಿರುವ ಈರುಳ್ಳಿಯನ್ನು ಸೆಪ್ಟೆಂಬರ್‌ವರೆಗೆ ಮಾತ್ರ ದೇಶದ ಮಾರುಕಟ್ಟೆ ಬೇಡಿಕೆಗೆ ಪೂರೈಸಬಹುದಾಗಿದೆ. ಹಿಂದಿನ ವರ್ಷದಲ್ಲಿ 1.94 ಕೋಟಿ ಟನ್ ಈರುಳ್ಳಿ ಉತ್ಪಾದನೆಯಾಗಿತ್ತು. ಈ ವರ್ಷವೂ ಇಷ್ಟೇ ಪ್ರಮಾಣದ ಉತ್ಪಾದನೆಯಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಅಗಾಧ ಬೇಡಿಕೆಯಿದ್ದು ಪೂರೈಕೆ  ಪ್ರಮಾಣ ಕಡಿಮೆಯಿರುವುದು ಸಂದಿಗ್ಧ ಸೃಷ್ಟಿಸಿದೆ.

ಈಗಾಗಲೇ ಈರುಳ್ಳಿ ಚಿಲ್ಲರೆ ಧಾರಣೆಗೆ ಸರಕು ಸಿಗದೇ ಇರುವುದರಿಂದ ದೆಹಲಿಯಲ್ಲಿ ಕೆ.ಜಿ.ಗೆ 80 ರೂಪಾಯಿಗಿಂತ ಹೆಚ್ಚಾಗಿದೆ. ಒಂದು ಕಾಲದಲ್ಲಿ ಈರುಳ್ಳಿ ಬೆಲೆ ಏರಿಕೆಯ ಪ್ರಭಾವವು ದೆಹಲಿಯ ರಾಜ್ಯ ಸರ್ಕಾರವನ್ನೇ ಅಲ್ಲಾಡಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಈರುಳ್ಳಿ ಬೆಲೆ ಏರಿಕೆ ನಿರ್ಲಕ್ಷ್ಯ ಯಾವ ಕಾಲಕ್ಕೂ ಸಲ್ಲದು.

ದಿನೇದಿನೇ ಈರುಳ್ಳಿ ದಾಸ್ತಾನು ಕುಸಿಯುತ್ತಿದೆ. ಈ ವರ್ಷದ ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಖಾರಿಫ್ ಬೆಳೆ ಕುಂಠಿತವಾಗುವ ನಿರೀಕ್ಷೆಯೂ ಇದೆ. ಹೀಗಾಗಿ ಪೂರೈಕೆ  ಕೊರತೆಯ ಆತಂಕ ಹೆಚ್ಚಾಗುತ್ತಿದೆ.

ನಮ್ಮ ದೇಶದಲ್ಲಿ ತಾಜಾ ತರಕಾರಿ ನಶಿಸಿ ಹೋಗುವಷ್ಟು ಪ್ರಮಾಣದಲ್ಲಿ ಪ್ರಪಂಚದ ಯಾವುದೇ ಭಾಗದಲ್ಲಿ ನಾಶವಾಗುವುದನ್ನು ನಾವು ಕಾಣಲಿಕ್ಕೆ ಸಾಧ್ಯವಿಲ್ಲ. ನಮ್ಮ ಭೂಮಿಯಲ್ಲಿ ಉತ್ಪಾದಿಸುತ್ತಿರುವ ಆಹಾರ ಧಾನ್ಯ, ತರಕಾರಿ ಮತ್ತು ಸೊಪ್ಪುಗಳು ಮೂಲತಃ ಜವಾರಿ (ದೇಶಿ) ಬೀಜಗಳಿಂದ ಕೂಡಿವೆ. ಹೀಗಾಗಿ ಇವು ದೇಹದ ಸಮತೋಲಿತ ಬೆಳವಣಿಗೆಗೆ ಸಹಕಾರಿಯಾಗಿವೆ. ಆದರೆ ಹಸಿರುಕ್ರಾಂತಿಯಿಂದಾಗಿ ಜವಾರಿ ಬೀಜಗಳ ಬಳಕೆ ಕ್ಷೀಣಿಸುತ್ತಿದೆ.

ಯಥೇಚ್ಛವಾಗಿ ಉತ್ಪಾದಿಸುವ ನೆಪದಲ್ಲಿ ಹೊಸ ಆರ್ಥಿಕ ನೀತಿಯನ್ನು ದೇಶ  ಒಪ್ಪಿಕೊಂಡ ಮೇಲೆ ಎಲ್ಲವೂ ಪ್ಯಾಕೆಟ್‌ಮಯವಾಗಿ ಹೈಬ್ರಿಡ್ ಆಹಾರದ ಬಳಕೆಯೂ ಹೆಚ್ಚಾಗಿದೆ. ಇದರಿಂದ ಮನುಕುಲದ ಬದುಕುವ ಸರಾಸರಿ ಆಯುಷ್ಯ ಕಡಿಮೆಯಾಗುತ್ತಿದೆ. ಈಗಾಗಲೇ ಪ್ಯಾಕೆಟ್‌ನಲ್ಲಿ ದೊರಕುವ ವಸ್ತುಗಳನ್ನು ಮೊಹರು ಮಾಡಿದಷ್ಟು  ಬೆಲೆ ಕೊಟ್ಟು ಕೊಳ್ಳುವ ಕಾಲ ಬಂದಿದೆ. ಈಗ ಆಹಾರ ಪದಾರ್ಥಗಳ ಬೆಲೆಯನ್ನು ಸರ್ಕಾರ ಹತೋಟಿಯಲ್ಲಿ ಇಟ್ಟುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.