ADVERTISEMENT

ಕನಸು ದೊಡ್ಡದಾಗಿರಬೇಕು; ಆದರೆ...

ಚರ್ಚೆ

ವಿಶಾಖ ಎನ್.
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST

ಒಲಿಂಪಿಕ್ಸ್ ಸಿದ್ಧತೆ ಹೇಗಿರಬೇಕು ಎನ್ನುವುದನ್ನು ಕುರಿತ ಗೋವಿಂದ್‌ ಬೆಳಗಾಂವಕರ್ ಅವರ ಬರಹವು (ಪ್ರ.ವಾ., ಆ.25) ಮಧ್ಯಮ ವರ್ಗದವರ ಹತಾಶೆ ಮೂಡಿಸಬಹುದಾದ ಹಲವು ಕನಸುಗಳ ರೂಪಕದಂತೆ ಇದೆ. ಅವರ ಆಶಾವಾದ ಅರ್ಥಪೂರ್ಣವಾದದ್ದೇನೋ ಹೌದು. ಆದರೆ, 30 ಪದಕಗಳನ್ನು ನಮ್ಮ ದೇಶ ಮುಂದಿನ ಒಲಿಂಪಿಕ್ಸ್‌ನಲ್ಲಿ ಗೆಲ್ಲುವ ಸಾಧ್ಯತೆ ಮಾತ್ರ ಉತ್ಪ್ರೇಕ್ಷಿತ. ‘ದೊಡ್ಡ ಕನಸನ್ನೇ ಕಾಣೋಣ’ ಎಂಬ ಕಾರ್ಪೊರೆಟ್‌ ಮಂತ್ರದಂತೆ ನೋಡಿದರೆ ರೋಚಕ ಎನ್ನಿಸೀತು.

ಒಂದು ಬೆಳ್ಳಿ, ಒಂದು ಕಂಚಿಗೆ ನಾವು ಎಷ್ಟೆಲ್ಲಾ ಬೀಗುತ್ತಾ ದೊಡ್ಡ ಮೊತ್ತದ ಬಹುಮಾನಗಳ ಪ್ರಕಟಣೆಯನ್ನು ನೋಡುತ್ತಿದ್ದೇವೆ. ರಿಯೊ ಒಲಿಂಪಿಕ್ಸ್‌ ಪದಕಗಳ ಪಟ್ಟಿಯಲ್ಲಿ ಭಾರತ 67ನೇ ಸ್ಥಾನದಲ್ಲಿ ಇರಬಹುದು; ಜನಸಂಖ್ಯೆ ಹಾಗೂ ತಲಾ ಆದಾಯ ದೃಷ್ಟಿಯಲ್ಲಿ ಇಟ್ಟುಕೊಂಡು ನೋಡಿದರೆ ನಮ್ಮ ದೇಶದ್ದು ಕೊನೆಯ ಸ್ಥಾನ.

ನಮ್ಮ ದೇಶದ ಜನಸಂಖ್ಯೆ 132 ಕೋಟಿಗೂ ಹೆಚ್ಚು. ರಿಯೊದಲ್ಲಿ 207 ತಂಡಗಳು ಸ್ಪರ್ಧಿಸಿದವು. ಅವುಗಳಲ್ಲಿ ನಿರಾಶ್ರಿತರ ತಂಡವೊಂದು ಕೂಡ ಇತ್ತು. 120 ಒಲಿಂಪಿಕ್‌ ಸಂಸ್ಥೆಗಳಿಗೆ ಪ್ರಾತಿನಿಧ್ಯ ಸಿಕ್ಕಂತಾಯಿತು ಎಂದರ್ಥ. ಪಾಕಿಸ್ತಾನಕ್ಕೆ ಒಂದೂ ಪದಕ ಸಿಗದೇಹೋದದ್ದರಿಂದ ಅದರ ಸಾಧನೆ ಶೂನ್ಯ ಎಂದೆವು. ಆದರೆ, ಜನಸಂಖ್ಯೆಯನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಗಮನಿಸಿದರೆ ನಾವು ಎಲ್ಲರಿಗಿಂತ ಹಿಂದೆ ಎನ್ನುವುದು ಕಣ್ಣು ಕುಕ್ಕುತ್ತದೆ.

ನಾಲ್ಕು ವರ್ಷಗಳ ಹಿಂದಿನ ಲಂಡನ್‌  ಒಲಿಂಪಿಕ್ಸ್‌ನಲ್ಲಿ ಭಾರತ ಆರು ಪದಕಗಳನ್ನು ಗೆದ್ದಿತ್ತು. ಅದಕ್ಕೂ ಹಿಂದೆ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಅಭಿನವ್‌ ಬಿಂದ್ರಾ 10 ಮೀಟರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಈ ಸಲ ರಿಯೊ ಒಲಿಂಪಿಕ್ಸ್‌ಗೆ ಮೊದಲು ಎದೆಯುಬ್ಬಿಸಿ ನಿಂತಿದ್ದ ಅಥ್ಲೀಟ್‌ಗಳನ್ನು ತೋರಿಸಿ ಆತ್ಮವಿಶ್ವಾಸದಿಂದ ಭಾರತದ ಕ್ರೀಡಾ ಅಧಿಕಾರಿಗಳು ಮಾತನಾಡಿದ್ದರು.

ಸ್ಟೀಪಲ್‌ಚೇಸ್‌, ಗಾಲ್ಫ್‌, ಶೂಟಿಂಗ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಟೆನಿಸ್‌, ಕುಸ್ತಿ, ಆರ್ಚರಿ, ಡಿಸ್ಕಸ್‌ನಲ್ಲಿ ಪದಕಗಳನ್ನು ಗೆಲ್ಲುವ ಸಾಧ್ಯತೆ ಇದೆಯೆಂದು ಅನೇಕರು ವಾದಿಸಿದ್ದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕ ಇಂಜೆಟಿ ಶ್ರೀನಿವಾಸ್‌ ಅವರಿಗೇ ಹತ್ತರಿಂದ ಹದಿನಾಲ್ಕು ಪದಕಗಳು ಸಿಗುವ ವಿಶ್ವಾಸವಿತ್ತು. ಕಳೆದ ಮಾರ್ಚ್‌ನಲ್ಲಿ ಅವರು ಇದನ್ನು ಹೇಳಿಕೊಂಡಿದ್ದರು. ‘ಕ್ರೀಡೆ ನಮ್ಮಲ್ಲಿ ಜೀವನಶೈಲಿ ಅಲ್ಲ’ ಎಂದು ಬಹಳ ಹಿಂದಿನಿಂದಲೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಹೆಣಗಾಡಿದ ಅಥ್ಲೀಟ್‌ಗಳು ಹೇಳುತ್ತಲೇ ಬಂದಿದ್ದಾರೆ.

ನಮ್ಮಲ್ಲಿ ಅಣಕವಾಡು, ಆತ್ಮರತಿಯ ವ್ಯಕ್ತಿತ್ವ ಇರುವವರು ಕ್ರೀಡೆಯನ್ನೂ ತಮಾಷೆಯ ವಸ್ತುವಾಗಿಸುವುದು ಲಾಗಾಯ್ತಿನಿಂದಲೂ ಇದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರಿಬ್ಬರು ಪದಕ ಗೆದ್ದಾಗ ಪುಂಖಾನುಪುಂಖವಾಗಿ ಹುಟ್ಟಿದ ಜೋಕ್‌ಗಳನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ‘ಸೆಲಬ್ರೇಷನ್‌’ನ ಈ ಮನಸ್ಥಿತಿ ‘ಪ್ರಿಪರೇಷನ್‌’ನ ಮಟ್ಟದಲ್ಲಿ ಇಲ್ಲದೇ ಇರುವುದು ಪದಕಗಳ ಕನಸು ಮಂಕಾಗಲು ಮುಖ್ಯ ಕಾರಣವೆನ್ನಿಸುತ್ತದೆ.

ನಮ್ಮಲ್ಲಿ ಹಣ ತರುವ ಕ್ರೀಡೆಗಳಿಗೆ ಅಭಿಮಾನಿಗಳ ಬಳಗ ದೊಡ್ಡದು. ಜನಪ್ರಿಯರು ಪೋಷಿಸುವ ಕ್ರೀಡಾಕೂಟಗಳಿಗೂ ಪ್ರಚಾರದ ಕೊರತೆ ಇಲ್ಲ. ಉಳಿದಂತೆ, ಕ್ರೀಡಾಕ್ಷೇತ್ರದಲ್ಲಿನ ಅಧಿಕಾರಿಗಳ ಪೈಕಿ ದೊಡ್ಡ ಪ್ರಮಾಣದಲ್ಲಿ ಪ್ರತಿಷ್ಠೆ ಮೆರೆಯುವವರಿದ್ದಾರೆ.

ಭ್ರಷ್ಟಾಚಾರ, ವಶೀಲಿ ಹಾಸುಹೊಕ್ಕು ಎನ್ನುವುದಕ್ಕೆ ದಟ್ಟ ಉದಾಹರಣೆಗಳು ಸಿಗುತ್ತವೆ. ಇವೆಲ್ಲದರ ನಡುವೆಯೂ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಳಿಸಲು ಅಗತ್ಯ ಗುರಿ ಎಷ್ಟು ಎಂದು ನಿಗದಿಪಡಿಸಿಕೊಳ್ಳದೇ ಹೋದದ್ದು ಯಾಕೆ ಎನ್ನುವುದು ಮೂಲ ಪ್ರಶ್ನೆ. ಈ ಬಾರಿ ಭಾರತದ ಎಷ್ಟೋ ಅಥ್ಲೀಟ್‌ಗಳು ಅರ್ಹತಾ ಸುತ್ತಿನಲ್ಲೇ ಎಡವಿದ್ದು ಯಾಕೆ ಎಂದು ಉಲ್ಲೇಖಿಸಿ, ಆ ನ್ಯೂನತೆ ಸರಿಪಡಿಸಿಕೊಳ್ಳುವ ದಾರಿಗಳನ್ನು ತರಬೇತುದಾರರು ಬೇರುಮಟ್ಟದಿಂದ ಹುಡುಕಬೇಕು.

ಇನ್ನು ವರ್ತನೆಯ ವಿಷಯ. ರಿಯೊಗೆ ಹೋಗಿದ್ದ ಅನೇಕ ಅಧಿಕಾರಿಗಳು ರಂಜನೆಯ ಗುಂಗಿಗೆ ಬಿದ್ದ ಬಗೆಗೂ ವರದಿಗಳಾದವು.  ಅಂಥ ಮಹಾ ಕ್ರೀಡಾಕೂಟಕ್ಕೆ ಹೋದವರು ಸೆಲ್ಫಿ ತೆಗೆಸಿಕೊಂಡು, ಸೋತವರನ್ನೂ ನಗಿಸುವ ಗೊಡವೆಗೆ ಹೋಗುವುದೇ ಹಾಸ್ಯಾಸ್ಪದ.

2004ರಿಂದ ಚೀನಾ ಪದಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುತ್ತಿತ್ತು. ಈ ವರ್ಷ ಅದು ಮೂರನೇ ಸ್ಥಾನಕ್ಕೆ ಕುಸಿದದ್ದನ್ನು ಅನೇಕರು ಸೂಕ್ಷ್ಮವಾಗಿ ವಿಮರ್ಶೆಗೆ ಒಳಪಡಿಸತೊಡಗಿದ್ದಾರೆ. 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ 51 ಬಂಗಾರದ ಪದಕಗಳನ್ನು ಗೆದ್ದಿದ್ದ ಆ ದೇಶ ಈ ಬಾರಿ 17 ಚಿನ್ನವನ್ನಷ್ಟೇ ಗೆಲ್ಲಲು ಆದದ್ದು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕೂಡ 38 ಬಂಗಾರಗಳು ಸಂದಿದ್ದವು. ಜನಸಂಖ್ಯೆ ಹೆಚ್ಚಾಗಿರುವ ಆ ದೇಶದಲ್ಲಿ ಕ್ರೀಡಾ ಪ್ರತಿಭಾವಂತರ ಸಂಖ್ಯೆಯೂ ದೊಡ್ಡದು.

ಎರಡು ದಶಕಗಳಿಂದ ಒಲಿಂಪಿಕ್ಸ್‌ಗೆ ತಯಾರಿ ಹೇಗಿರಬೇಕು ಎಂಬ ಸೂಕ್ಷ್ಮವೂ ಅಲ್ಲಿನ ತರಬೇತುದಾರರಿಗೆ ಗೊತ್ತು. ಹಾಗಿದ್ದೂ ಆ ದೇಶ ಕಳೆದ ಒಲಿಂಪಿಕ್ಸ್‌ಗೆ ಹೋಲಿಸಿದರೆ ಈ ಬಾರಿ ಅರ್ಧಕ್ಕಿಂತ ಹೆಚ್ಚು ಬಂಗಾರಗಳನ್ನು ಕಳೆದುಕೊಂಡಿದೆ. ಪದಕಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವ ಅಮೆರಿಕ 28 ಬಂಗಾರಗಳನ್ನು ಮಾತ್ರ ಗೆದ್ದಿದೆ. ಇದರ ಅರ್ಥ ಒಲಿಂಪಿಕ್ಸ್‌ನಿಂದ ಒಲಿಂಪಿಕ್ಸ್‌ಗೆ ಸ್ಪರ್ಧೆ ತುರುಸಾಗುತ್ತಿದೆ. ನಾಲ್ಕು ವರ್ಷಗಳ ಅವಧಿ ಎಷ್ಟು ದೊಡ್ಡದು ಎನ್ನುವುದಕ್ಕೂ ಇದು ಕನ್ನಡಿ.

ಬ್ಯಾಡ್ಮಿಂಟನ್‌, ಜೂಡೊ, ಕುಸ್ತಿ, ಬಾಕ್ಸಿಂಗ್‌ ತರಹದ ಒಳಾಂಗಣ ಕ್ರೀಡೆಗಳಲ್ಲಿ ಏಷ್ಯನ್ನರು ಎದೆಯುಬ್ಬಿಸಿರುವ ಉದಾಹರಣೆಗಳು ಹೆಚ್ಚು. ಭಾರತ ಕೆಲವು ನಿರ್ದಿಷ್ಟ ಕ್ರೀಡೆಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ಒಲಿಂಪಿಕ್ಸ್‌ಗೆ ಅಣಿಯಾಗುವುದು ಒಳಿತು. ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳ ಅನುಪಾತ ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕಾದದ್ದೂ ಮುಖ್ಯ. ಅಮೆರಿಕ, ಇಂಗ್ಲೆಂಡ್‌ನಲ್ಲಿ ಗಂಡು–ಹೆಣ್ಣಿನ ಕ್ರೀಡಾ ಸಮಾನತೆ ಅತ್ಯುತ್ತಮವಾಗಿದೆ.

ಹಾಗೆ ನೋಡಿದರೆ, ಭಾರತ ಬಹಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಹಾಕಿ ಆಟದಲ್ಲಿ ಛಾಪು ಮೂಡಿಸಿತ್ತು. ಆಮೇಲೆ ಒಲಿದ ಪದಕಗಳೆಲ್ಲವೂ ನಮಗೆ ಅಚ್ಚರಿಯ ಸಂಗತಿಗಳಾಗಿ ಕಂಡಿರುವುದೇ ಹೆಚ್ಚು. ಈಜು, ಕಡಿಮೆ ದೂರದ ಓಟಗಳಲ್ಲಿ ಅಮೆರಿಕ ಸ್ಪರ್ಧಿಗಳನ್ನು ತಯಾರು ಮಾಡುತ್ತಲೇ ಬಂದಿದೆ. ಇಂಥ ಗುರಿ ಸ್ಪಷ್ಟತೆ ಭಾರತಕ್ಕೆ ಬರಬೇಕು.

ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಗ್ರೆನೆಡಾ, ಬಹಮಾಸ್‌, ಜಮೈಕಾ, ನ್ಯೂಜಿಲೆಂಡ್‌, ಡೆನ್ಮಾರ್ಕ್‌ ರಿಯೊ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ. ಕೀನ್ಯಾದಂತಹ ದೇಶದ ಹೆಣ್ಣುಮಕ್ಕಳು ವೇಗದ ಓಟದಲ್ಲಿ ಪದಕಗಳನ್ನು ಗೆದ್ದು, ತಮ್ಮ ಕೃಷಿ ಕುಟುಂಬಗಳಲ್ಲಿ ಹೊಸ ಕನಸುಗಳನ್ನು ಬಿತ್ತಿರುವ ಉದಾಹರಣೆಗಳಿವೆ.

ಜನಸಂಖ್ಯಾ ಬಲ ಕಡಿಮೆ ಇರುವ ದೇಶಗಳ ಅಥ್ಲೀಟ್‌ಗಳ ದೈಹಿಕ ಕ್ಷಮತೆ, ಅವರು ಪಡೆಯುವ ತರಬೇತಿಯ ಮಾದರಿ, ಅಲ್ಲಿನ ಕ್ರೀಡಾ ವ್ಯವಸ್ಥೆ ಎಲ್ಲವನ್ನೂ ಕೂಲಂಕಷವಾಗಿ ಗಮನಿಸಿದರೆ, ನಾವು ಎಷ್ಟು ಪದಕಗಳ ಕನಸು ಕಾಣಬಹುದು ಎನ್ನುವುದು ಸ್ಪಷ್ಟವಾದೀತು. ಗೋವಿಂದ್‌ ಬೆಳಗಾಂವಕರ್‌ 15 ಪದಕ, ಅಲ್ಲಿಂದ ಮುಂದೆ 30 ಪದಕಗಳ ದೊಡ್ಡ ಗುರಿಯನ್ನು ಎದುರಲ್ಲಿ ಇಟ್ಟಿದ್ದಾರೆ. ಭಾರತ ಇದುವರೆಗೆ ಒಲಿಂಪಿಕ್ಸ್‌ಗಳಲ್ಲಿ ಗೆದ್ದಿರುವುದು ಕೇವಲ 28 ಪದಕಗಳನ್ನು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.