ADVERTISEMENT

ಕೆಪಿಎಸ್‌ಸಿ ಪಟ್ಟಿ: ಶಂಕಾಸ್ಪದ ನಡೆ

ಸಂಗತ

ರವೀಂದ್ರ ಭಟ್ಟ
Published 8 ಫೆಬ್ರುವರಿ 2017, 19:30 IST
Last Updated 8 ಫೆಬ್ರುವರಿ 2017, 19:30 IST
‘ರಾಯರ ಕುದುರೆ ಬರಬರುತ್ತಾ ಕತ್ತೆಯಾಯ್ತು’ ಎನ್ನುವುದು ಒಂದು ಗಾದೆ. ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ ರಾಜ್ಯ ಸರ್ಕಾರದ ಈಗಿನ ಧೋರಣೆಯನ್ನು ನೋಡಿದರೆ ಈ ಗಾದೆ ನೆನಪಾಗುತ್ತದೆ. 2013ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಸೇವಾ ಆಯೋಗಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾಗಿದ್ದು ಸುಳ್ಳಲ್ಲ. ‘ಹೊಸ ಅಗಸ ಬಟ್ಟೆಯನ್ನು ಎತ್ತಿ ಎತ್ತಿ ಒಗೆದ’ ಎನ್ನುವ ರೀತಿಯಲ್ಲಿಯೇ ಹಲವಾರು ಕ್ರಮಗಳನ್ನು ಮುಖ್ಯಮಂತ್ರಿ ಕೈಗೊಂಡಿದ್ದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಕೂಡ ಅದಕ್ಕೆ ಸಾಥ್ ನೀಡಿದ್ದರು. ಸಿದ್ದರಾಮಯ್ಯ ಅವರ ಪರಮ ಆಪ್ತ ಉಗ್ರಪ್ಪ ಅಂತೂ ಕೆಪಿಎಸ್‌ಸಿ ಬಗ್ಗೆ ಉಗ್ರವಾಗಿಯೇ ಮಾತನಾಡುತ್ತಿದ್ದರು. ಆದರೆ ಈಗ ನಾಲ್ಕು ವರ್ಷಗಳ ನಂತರ ಎಲ್ಲರೂ ಸುಮ್ಮನಾಗಿಬಿಟ್ಟಿದ್ದಾರೆ. ಯಾಕೆ ಹೀಗೆ?
 
2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವುದು ಗೊತ್ತಾದ ತಕ್ಷಣವೇ ಮುಖ್ಯಮಂತ್ರಿ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದರು. ಲೋಕಸೇವಾ ಆಯೋಗದ ಸದಸ್ಯೆಯೊಬ್ಬರು ಅಭ್ಯರ್ಥಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವ ಆರೋಪದ ಮೇಲೆ, ಆ ಸದಸ್ಯೆಯನ್ನು ಅಮಾನತು ಮಾಡಿದ್ದರು. ಸಿಐಡಿ ವರದಿಯ ಆಧಾರದಲ್ಲಿ, ಆಯೋಗದಲ್ಲಿ ಇರುವ ಎಲ್ಲ ಸದಸ್ಯರ ವಿರುದ್ಧ ಕ್ರಮಕ್ಕೂ ಮುಂದಾಗಿದ್ದ ರಾಜ್ಯ ಸರ್ಕಾರ, ಅವರನ್ನು ಅಮಾನತುಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಾಷ್ಟ್ರಪತಿ ಅವರಿಗೂ ಪತ್ರ ಬರೆಯಲಾಗಿತ್ತು. ಈ ವೀರಾವೇಶ ಈಗ  ತಟಕ್ಕನೆ ನಿಂತು ಹೋಗಿದ್ದು ಯಾಕೆ? 
 
ಕೆಪಿಎಸ್‌ಸಿ ಹಗರಣದ ಬಗ್ಗೆ ತನಿಖೆ ನಡೆಸಿದ ಸಿಐಡಿ, ಪ್ರಾಥಮಿಕ ವರದಿ ನೀಡಿದ ನಂತರ 2011ನೇ ಸಾಲಿನ ಆಯ್ಕೆ ಪಟ್ಟಿಯನ್ನೇ ರಾಜ್ಯ ಸರ್ಕಾರ ರದ್ದು ಮಾಡಿತು.  ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ಗೊತ್ತಾದ ಮೇಲೆ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ ನಡೆಸುವಂತೆಯೂ ಸರ್ಕಾರ ಆಯೋಗವನ್ನು ಕೇಳಿಕೊಂಡಿತ್ತು. ಆದರೆ ಕರ್ನಾಟಕ ಲೋಕಸೇವಾ ಆಯೋಗ ಶಾಸನಬದ್ಧ ಸಂಸ್ಥೆಯಾಗಿದ್ದು ಅದರ ಕರ್ತವ್ಯದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತೆ ಇಲ್ಲ. ನೇಮಕಾತಿ ನಡೆಸುವ ಜವಾಬ್ದಾರಿಯನ್ನು ಆಯೋಗಕ್ಕೆ ನೀಡಲಾಗಿದೆ. ಹೇಗೆ ನೇಮಕಾತಿ ನಡೆಸಬೇಕು ಎನ್ನುವುದು ಆಯೋಗಕ್ಕೆ ಬಿಟ್ಟ ವಿಚಾರ. ಆಯೋಗ ನೇಮಕಾತಿ ಪ್ರಕ್ರಿಯೆ ನಡೆಸಿ ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ನೀಡುತ್ತದೆ. ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆಯೇ ವಿನಾ ನೇಮಕಾತಿ ಪ್ರಕ್ರಿಯೆಯನ್ನು ಹೀಗೆಯೇ ನಡೆಸಬೇಕು ಎಂದು ಸೂಚಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿತು. ಆದರೆ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ ನಡೆಸುವಂತೆ ನ್ಯಾಯಾಲಯ ಆದೇಶಿಸಿದರೆ ಅದಕ್ಕೆ ತಾನು ತಲೆಬಾಗುವುದಾಗಿಯೂ ಆಯೋಗ ಹೇಳಿತ್ತು. ಇದರಿಂದಾಗಿಯೇ ಅನ್ಯಮಾರ್ಗ ಇಲ್ಲದೆ ಸರ್ಕಾರ 2011ನೇ ಸಾಲಿನ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿತ್ತು.
 
ಇದನ್ನು ಕೆಲವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಪ್ರಶ್ನೆ ಮಾಡಿದ್ದರು. ಕೆಲವರು ಅಕ್ರಮ ನಡೆಸಿದ್ದಾರೆ ಎನ್ನುವ ಕಾರಣಕ್ಕೆ ಇಡೀ ಪಟ್ಟಿಯನ್ನೇ ರದ್ದು ಮಾಡಿದ್ದು ಸರಿಯಲ್ಲ. ಅಕ್ರಮ ನಡೆಸಿದವರನ್ನು ಬಿಟ್ಟು ಉಳಿದವರಿಗೆ ನೇಮಕಾತಿ ನೀಡುವಂತೆ ಕೆಎಟಿ ಸೂಚಿಸಿ ಈಗ ತಿಂಗಳುಗಳೇ ಕಳೆದಿವೆ. ಈ ಆದೇಶವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕಿತ್ತು. ಕೆಎಟಿ ಆದೇಶಕ್ಕೆ ತಡೆಯಾಜ್ಞೆಯನ್ನಾದರೂ ತರಬೇಕಿತ್ತು. ಇಲ್ಲವೇ ಕೆಎಟಿ ನೀಡಿದ ಆದೇಶದಂತೆ ನೇಮಕಾತಿ ಆದೇಶವನ್ನಾದರೂ ನೀಡಬೇಕಿತ್ತು. ಇದ್ಯಾವುದರ ಗೋಜಿಗೂ ಹೋಗದ ಸರ್ಕಾರ ಸುಮ್ಮನೆ ಕುಳಿತಿದೆ.
 
2011ನೇ ಸಾಲಿನ ಆಯ್ಕೆ ಪಟ್ಟಿ ಕುರಿತಂತೆ ಯಾವುದೇ ಪ್ರಶ್ನೆ ಬಂದರೂ ‘ಈ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಸಲಹೆ ಕೇಳಲಾಗಿದೆ’ ಎಂದು ಕಾನೂನು ಸಚಿವರು ಹೇಳುತ್ತಾರೆ. ಅಡ್ವೊಕೇಟ್ ಜನರಲ್ ಅವರು 46 ಮಂದಿಯನ್ನು ಕೈಬಿಟ್ಟು ಉಳಿದವರಿಗೆ ನೇಮಕಾತಿ ನೀಡಬಹುದು ಎಂಬ ಅಭಿಪ್ರಾಯವನ್ನು ನೀಡಿದ್ದಾರೆ. ಅತ್ಯಂತ ತಮಾಷೆಯ ಸಂಗತಿ ಎಂದರೆ, 2011ನೇ ಸಾಲಿನಲ್ಲಿ ನಡೆದ ಅಕ್ರಮ ಬಹಿರಂಗವಾಗಲು ಕಾರಣರಾದ ಡಾ. ಮೈತ್ರಿ ಅವರ ಹೆಸರೂ ಅಡ್ವೊಕೇಟ್ ಜನರಲ್ ಅವರ ಪಟ್ಟಿಯಲ್ಲಿ ಇದೆ. ಅಂದರೆ ಅವರಿಗೂ ನೇಮಕಾತಿ ನಿರಾಕರಿಸಿದಂತೆ ಆಗಿದೆ. ಇದರಿಂದ ಸರ್ಕಾರ ಯಾವ ಸಂದೇಶವನ್ನು ನೀಡುತ್ತದೆ? ಅಕ್ರಮದ ವಿರುದ್ಧ ಹೋರಾಡಿದರೆ ಎಂತಹ ಫಲ ಸಿಗುತ್ತದೆ ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಲು ಅದು ಮುಂದಾಗಿದೆಯೇ?
 
ಸರ್ಕಾರ ತಾನೇ ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯಲು ಕಾರಣ ಏನು? ಕೆಪಿಎಸ್‌ಸಿ ಸದಸ್ಯರ ಅಮಾನತಿನ ಕತೆ ಏನು? ತಪ್ಪು ಮಾಡಿದ್ದಾರೆ ಎಂದು ಆಗ ಆರೋಪಿಸಿದ ವ್ಯಕ್ತಿಗಳು ಈಗ ಮೌನಕ್ಕೆ ಶರಣಾಗಿರುವುದರ ಹಿಂದಿನ ಗುಟ್ಟು ಏನು? ಆಯೋಗಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದು ಯಾಕೆ ಮತ್ತು ಈಗ ಅದನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದು ಯಾಕೆ ಎನ್ನುವುದಕ್ಕೂ ಸರ್ಕಾರ ಉತ್ತರ ಹೇಳಬೇಕಾಗುತ್ತದೆ.
 
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಾಯಕಲ್ಪ ನೀಡುವುದಕ್ಕಾಗಿಯೇ ಕೇಂದ್ರ ಲೋಕಸೇವಾ ಆಯೋಗದ ವಿಶ್ರಾಂತ ಅಧ್ಯಕ್ಷ ಪಿ.ಸಿ.ಹೋಟಾ ಅವರ ಸಮಿತಿ ರಚಿಸಲಾಯಿತು. ಈ ಸಮಿತಿ ನೀಡಿದ ಹಲವಾರು ಶಿಫಾರಸುಗಳನ್ನೂ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಕೆಲವು ಮಹತ್ವದ ಶಿಫಾರಸುಗಳನ್ನು ಒಪ್ಪಿಕೊಂಡಿಲ್ಲ ಎನ್ನಬಹುದಾದರೂ ಕೆಪಿಎಸ್‌ಸಿ ಕಾಯಕಲ್ಪದ ಕಡೆಗೆ ಸಣ್ಣ ಹೆಜ್ಜೆಯನ್ನಂತೂ ಸರ್ಕಾರ ಇಟ್ಟಿದ್ದು ನಿಜ. ಆದರೆ ಈಗ ದಿಢೀರನೆ ಹಿಂದೆ ಸರಿಯಲು ಯಾವ ಪ್ರಭಾವ ಕಾರಣ?
 
‘2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿಚಾರವನ್ನು ಇನ್ನಷ್ಟು ಜಗ್ಗುವುದು ಬೇಡ. ಏನಾದರೂ ಒಂದು ತೀರ್ಮಾನ ಮಾಡಿಬಿಡೋಣ.
ಕೆಲವರಿಂದ ಬಹಳ ಒತ್ತಡ ಬರುತ್ತಿದೆ. ರಾಜ್ಯದ ಹಿರಿಯ ರಾಜಕಾರಣಿಯೊಬ್ಬರಂತೂ ಕಣ್ಣೀರು ಹಾಕುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಖಾಸಗಿಯಾಗಿ ಹೇಳುತ್ತಿದ್ದಾರಂತೆ. ನೇಮಕಾತಿ ಪತ್ರ ಕೊಟ್ಟುಬಿಡಿ ಎಂದು ಒತ್ತಡ ಹೇರುವವರಿಗೆ ಇದರಿಂದ ಯಾವುದೇ ಚಿಂತೆ ಇಲ್ಲ. ಆದರೆ ಸಿದ್ದರಾಮಯ್ಯ ಅವರ ಕತೆ? ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಕತ್ತಿ ಜಳಪಿಸಿದವರು ಈಗ ಕತ್ತಿಯನ್ನು ಬದಿಗಿಟ್ಟು ಹೊಂದಾಣಿಕೆ ಮಾಡಿಕೊಂಡರು ಎಂಬ ಆರೋಪ ಅವರ ಬೆನ್ನಿಗೆ ಶಾಶ್ವತವಾಗಿ ಅಂಟಿಕೊಳ್ಳುತ್ತದೆ. ಯುದ್ಧದಿಂದ ಅರ್ಧಕ್ಕೇ ಹಿಂದೆ ಸರಿಯುವುದು ಯಾವ ಯೋಧನಿಗೂ ಶೋಭೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.