ADVERTISEMENT

ದಲಿತ ಚಳವಳಿಗೆ ಬೇಕು ಮಾಂತ್ರಿಕ ಸ್ಪರ್ಶ

ಎಚ್‌.ಪಿ.ಅನಿಲ್‌ ಕುಮಾರ್‌ ಬೆಂಗಳೂರು
Published 8 ಸೆಪ್ಟೆಂಬರ್ 2014, 19:30 IST
Last Updated 8 ಸೆಪ್ಟೆಂಬರ್ 2014, 19:30 IST

1970ರಿಂದ ಇಲ್ಲಿಯವರೆಗೆ ನಡೆದು ಬಂದಿರುವ ದಲಿತ ಚಳವಳಿ ಹಾಗೂ ಬಂಡಾಯ ಸಾಹಿತ್ಯ ಚಳ­ವಳಿಯ ಆರಂಭದ ದಿನಗಳವರೆಗೆ ಹಿನ್ನೋಟ ಹರಿ­ಸಿ­ದರೆ, ಬೆಂಗಳೂರಿನ ವೃಷಭಾವತಿ ಎಂಬ ನದಿ ನೀರು ಹೇಗೆ ಮಲಿನವಾಗಿದೆಯೋ ಹಾಗೇ ಇಂದಿನ ಸಾಮಾಜಿಕ ಜೀವನ ಕೂಡ ಗಬ್ಬೆದ್ದು ಹೋಗಿದೆ ಎಂಬುದು ಮನವರಿಕೆ­ಯಾಗುತ್ತದೆ. ದುಸ್ತರವಾದ ಜನಜೀವನಕ್ಕೆ ಯಾವುದರ ವಿರುದ್ಧ ಪ್ರತಿಭಟಿಸಬೇಕು ಎಂಬುದೇ ಮರೆತು ಹೋಗಿ ಅದು ಭ್ರಷ್ಟ ವ್ಯವಸ್ಥೆಯನ್ನು ಸುಮ್ಮನೆ ಒಪ್ಪಿಕೊಂಡಿದೆಯೇನೋ ಅನಿಸದಿರದು.

ಆಗಿನ ಅವಿಭಜಿತ ಕೋಲಾರ ಜಿಲ್ಲೆಯ ಬಂಡಾಯ ಸಾಹಿತ್ಯ–ದಲಿತ ಚಳವಳಿಯು  ಎಡ­ಪಂಥೀಯ ಧೋರಣೆಯ ಮನಸ್ಸುಗಳೊಂದಿಗೆ ತನ್ನ ಸಂಘರ್ಷದ ಮಾರ್ಗ ಕ್ರಮಿಸತೊಡಗಿತ್ತು. ಆಗ ತಾನೇ ಚಿಂತಾಮಣಿಯ ಕಾಲೇಜಿಗೆ ಕಾಲಿ­ರಿಸಿದ್ದ ನನಗೆ ನಾನು ಹುಟ್ಟಿದ ಜಾತಿಯಲ್ಲಿನ ಹಲವಾರು ವೈರುಧ್ಯಗಳೊಂದಿಗೆ, ಸಾಮಾಜಿಕ ಮೌಲ್ಯ­ಗಳಲ್ಲಿನ  ವಿಪರ್ಯಾಸಗಳು ಕಾಡತೊಡ­ಗಿ­ದ್ದವು. ನಮ್ಮ ಕಾಲೇಜಿನ ಕನ್ನಡ ಉಪನ್ಯಾಸ­ಕ­ರಾದ ಕೆ. ನಾರಾಯಣಸ್ವಾಮಿ ಹಾಗೂ ಆರ್.ವಿ.ಎಸ್‌. ಸುಂದರಂ ಅವರು ಕನ್ನಡಕ್ಕೆ ಅನುವಾದಿಸಿದ್ದ ತೆಲುಗಿನ ವಿಪ್ಲವ ಕವಿಗಳ ‘ದಿಗಂಬರ ಕವಿತೆ’ಗಳ ಸಂಕಲನ ಅಂಥ ಹಸಿ, ಬಿಸಿ ಯೌವ­ನದ ದಿನಗಳಲ್ಲಿ ನನಗೆ ಸಿಕ್ಕಿತ್ತು.  ಪಾರಂಪರಿಕ ಪರಿಧಿ ಯಾಚೆಗೆ ಹರಿಯುತ್ತಿರುವ ಹೊಚ್ಚ ಹೊಸ ಧೋರಣೆಗಳ, ಹೊಸ ಭಾಷೆಯ, ಹೊಸ ಆಯಾಮದ ಸುನಾಮಿ ಅಪ್ಪಳಿಸಿತ್ತು.

ಆಗ ಬಿಡುಗಡೆಯಾದ ‘ಸಂಸ್ಕಾರ’,
‘ಕಾಡು’, ‘ಘಟಶ್ರಾದ್ಧ’ ‘ಅನ್ವೇಷಣೆ’, ‘ಅವಸ್ಥೆ’, ‘ಗ್ರಹಣ’­ದಂಥ ಸಿನಿಮಾಗಳು ಹಲವರ ಬೌದ್ಧಿಕ ಲೋಕದ ವಿಸ್ತರಣೆಗೆ ನೀರೆರೆದವು. ಅದರೊಂದಿಗೆ ‘ಪಂಚಮ’, ‘ಶೂದ್ರ’, ‘ವಿಮುಕ್ತ’, ‘ಅನ್ವೇಷಣೆ’, ‘ಆಂದೋಲನ’, ‘ಸಂಕ್ರಮಣ’, ‘ಸಾಕ್ಷಿ’,
‘ರುಜು­ವಾತು’– ಮೊದಲಾದ ಅನೇಕ ಬುದ್ಧಿಜೀವಿ ಪತ್ರಿಕೆ­ಗಳು, ‘ಸಮುದಾಯ’ದಂಥ ಸಾಂಸ್ಕೃತಿಕ ಸಂಘಟನೆಗಳ ಬೀದಿ ನಾಟಕಗಳು ನಾಡಿನ ವಾತಾ­ವರಣದ ಭಾಗವಾಗಿದ್ದವು. ‘ಪ್ರಜಾವಾಣಿ’ ಪತ್ರಿ­ಕೆಯು ಈ ಕಾಲಘಟ್ಟದ ಸಾಂಸ್ಕೃತಿಕ ಪರಿ­ಸರಕ್ಕೆ  ವೇದಿಕೆಯಾಗಿತ್ತು. 

‘ಲಂಕೇಶ್‌ ಪತ್ರಿಕೆ’ ಹೊಸ­ತೊಂದು ಪತ್ರಿಕೋದ್ಯಮದ ಟ್ರೆಂಡ್‌ಗೆ ಕಾರಣ­ವಾಯ್ತು. ಇಂಥ ಸಾಂಸ್ಕೃತಿಕ ಸನ್ನಿವೇಶ­ದಲ್ಲಿ, ಕೋಲಾರದಲ್ಲಿ ‘ಎಲ್ಲಾ ಜಾತಿಯ ಬಡವರು ದಲಿತರೇ’ ಎಂಬ ಘೋಷಣೆಯೊಂದಿಗೆ ದಲಿತ ಚಳ­ವಳಿಯ ಸಂಘರ್ಷದ ದಿನಗಳು ಮೊದಲಾ­ಯಿತು. ಈಗ ಆದಿಮದ ಸಂತನಂತೆ ಕಾಣುವ ಕೋಟಿಗಾನಹಳ್ಳಿ ರಾಮಯ್ಯ, ಆ ದಿನ­ಗಳಲ್ಲಿ ಬ್ಯಾಂಕ್‌ ಉದ್ಯೋಗ ತ್ಯಜಿಸಿ ಹೋರಾಟದ ಸಾಗ­ರಕ್ಕೆ ಸೇರಿದ್ದರು. ಘೋಷಣೆಗಳನ್ನು ಕೂಗುತ್ತಿ­ದ್ದಾ­ಗಿನ  ಅವರ ಕೊರಳಿನ ಉಬ್ಬಿದ ನರಗಳ ಚಿತ್ರ ನನ್ನ ನೆನಪಲ್ಲಿ ಸ್ಥಿರವಾಗಿ ಉಳಿದಿದೆ. ಇಂಥದೊಂದು ಚಳವಳಿಯ ಪ್ರವಾಹದಲ್ಲಿ ಮುಳುಗೆದ್ದ ಅಸಂಖ್ಯಾತರಲ್ಲಿ ನಾನೂ ಒಬ್ಬ.

ಆದರೆ ‘ಎಲ್ಲಾ ಜಾತಿ’ಯವರನ್ನು ಎಂಬ ಧ್ಯೇಯ­ವನ್ನು ತೆಗೆದು ಹಾಕಿ ಅದರ ಬದಲಿಗೆ ಪರಿಶಿಷ್ಟ ಜಾತಿ–ಪಂಗಡಗಳಿಗೆ ಮಾತ್ರವಾದಂತೆ ದಲಿತ ಚಳವಳಿ ಎಡವತೊಡಗಿತು ಎಂಬುದು ನನ್ನ ಅನಿಸಿಕೆ. ಮುಂದಿನ ದಿನಗಳಲ್ಲಿ ದಲಿತ ಚಳವಳಿ ರಾಜಕೀಯದ ಆಮಿಷಗಳಿಗೆ ಮುಖ ಮಾಡದೆ ಸ್ವಾಯತ್ತತೆಯಿಂದಲೂ, ಸಮಗ್ರತೆ­ಯಿಂದಲೂ ಹೋರಾಟದ ನಿರಂತರತೆಯನ್ನು ಕಾಯ್ದುಕೊಳ್ಳಬೇಕಾಗಿತ್ತು. ಎಲ್ಲಾ ಜಾತಿಯ ಬಡ­ವ­ರನ್ನು ಒಳಗೊಂಡಿದ್ದಿದ್ದರೆ ಪರಸ್ಪರ ನಂಬಿ­ಕೆಯ ತಳಹದಿಯ ಮೇಲೆ ದಮನಿತ ಜಾತಿಗಳು ಹಾಗೂ ಇತರರನ್ನು ಅರ್ಥ ಮಾಡಿಕೊಂಡು ಮುಂದುವರಿಯಲು ಅದಕ್ಕೆ ಸಹಕಾರಿ ಆಗುತ್ತಿತ್ತು.

ದಲಿತ ಚಳವಳಿ, ಸರ್ಕಾರಿ ನೌಕರಿಯ ಮೀಸ­ಲಾತಿಗೋ ಅಂಥ ಮತ್ಯಾವುದಕ್ಕೋ ಪ್ರಾಧಾನ್ಯ ಕೊಡದೆ ಮಹತ್ವದ ಗುರಿ ಹೊಂದಿರಬೇಕಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಮೀಸಲಾತಿ ಎಂಬ ಮಾಯಾಮೃಗದ ಹಿಂದೆ ಓಡುವಂತೆ ಮಾಡಿ, ಚಳವಳಿಯನ್ನು ಅಡ್ಡದಾರಿ ಹಿಡಿಸಿದವೇನೋ? ಅಲ್ಲದೆ ಮಾಹಿತಿ ತಂತ್ರಜ್ಞಾನದ ಸ್ಫೋಟ, ಕಂಪ್ಯೂಟರ್‌ ದುರ್ಬಳಕೆ, ದೃಶ್ಯಮಾಧ್ಯಮದ ವಿಜೃಂಭಣೆಗಳ ವರ್ತಮಾನವು ವೈಚಾರಿಕ ಚಿಂತನೆಯ ಆಳ ವಿಸ್ತಾರಗಳಿರುವ ಜಲಾಶಯಕ್ಕೆ ಹೂಳು ತುಂಬುತ್ತಿವೆ. ಚಿಂತನೆಯ ಸಂಘರ್ಷಗಳ ಪ್ರಾಮಾಣಿಕತೆಗಳು ಅನುಮಾನಗಳಿಗೆ ಕಾರಣ­ವಾಗು­ತ್ತಿವೆ. ರಾಜಕೀಯದ ತಕ್ಷಣದ ಆಮಿಷ­ಗಳಿಗೆ ಬಲಿಯಾಗುತ್ತಿವೆ.

ಕೆನೆಪದರದ ದಲಿತರು ಆಳವಾದ ಅಧ್ಯಯನ, ವಿಶಾಲವಾದ ದೂರದೃಷ್ಟಿಯ ಧೋರಣೆಗಳನ್ನು ಬಿಟ್ಟು ಕೊಟ್ಟು, ತಕ್ಷಣದ ರಾಜಕೀಯ ಲಾಭ ಪಡೆ­ಯಲು ಮುಂದಾಗುತ್ತಿದ್ದಾರೇನೋ ಅನಿಸು­ತ್ತಿದೆ.

ಇಂಥ ಒಂದು ಸಂದಿಗ್ಧದಲ್ಲಿ ದಲಿತ ಚಳ­ವಳಿಯು ಹಿಂದಿನ ಈ ಅನುಭವವನ್ನು ಗಮನಿಸಿ­ಕೊಂಡು ಹೊಸ ಪೀಳಿಗೆ  ಮಾತ್ರ ದಲಿತ ಚಳವಳಿಗೆ ಮರುಹುಟ್ಟು ನೀಡಬಹುದೆನಿಸುತ್ತದೆ. ಅಂಬೇಡ್ಕರ್‌ರಂಥ ಸಶಕ್ತ ವ್ಯಕ್ತಿತ್ವದವರ ಮಾಂತ್ರಿಕ ಸ್ಪರ್ಶ ಸಮಕಾಲೀನ ದಲಿತ ಚಳವಳಿಗೆ ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.