ADVERTISEMENT

ನಕಲಿ ವೈದ್ಯರಿಗೆ ಬೇಕು ಕಾನೂನಿನ ‘ಚಿಕಿತ್ಸೆ’!

ಶಿವಾನಂದ ಕಳವೆ
Published 28 ನವೆಂಬರ್ 2013, 19:30 IST
Last Updated 28 ನವೆಂಬರ್ 2013, 19:30 IST

ನೀರಾವರಿ ಕ್ಷೇತ್ರಗಳು ನಕಲಿ ವೈದ್ಯರ ಸಮೃದ್ಧ ನೆಲೆ. ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಮದ್ಯದ ಅಂಗಡಿ, ನಕಲಿ ಕ್ಲಿನಿಕ್‌ಗಳ ಪೈಪೋಟಿ ನೋಡಬಹುದು.

‘ಬಿ.ಕಾಂ. ಓದಿದ ನಾನು ಡಾಕ್ಟರ್ ಆಗಬಹುದೇ?’ ಉತ್ತರ ಕನ್ನಡದ ಯಲ್ಲಾಪುರದ ಮೈನಳ್ಳಿ ಗೌಳಿ ವಾಡಾದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಯುವಕನಲ್ಲಿ ಹತ್ತು ವರ್ಷ ಹಿಂದೆ ಪ್ರಶ್ನಿಸಿದ್ದೆ. ‘ಆಗಬಹುದು, ಐದು ಸಾವಿರ ನೀಡಿದರೆ ವೆಸ್ಟ್ ಬೆಂಗಾಲ್ ಹೆಲ್ತ್‌ಕೇರ್ ಇನ್‌ ಸ್ಟಿಟ್ಯೂಟ್‌ನಿಂದ ಪ್ರಮಾಣ ಪತ್ರ ಪಡೆಯಬಹುದು’ ಎಂದು ಸಲಹೆ ನೀಡಿದ.

ಬಿದಿರಿನ ಗುಡಿಸಲು ಆತನ ಚಿಕಿತ್ಸಾಲಯ. ಯುವಕ ತಜ್ಞ ವೈದ್ಯನೆಂದು ಬೋರ್ಡು ಹಾಕಿ ಕೊಂಡಿದ್ದ. ಸರಿ, ನಾನು ಡಾಕ್ಟರ್ ಆಗಬೇಕೆಂದು ಕನಸು ಬಿಚ್ಚಿಟ್ಟಿದ್ದರಿಂದ ಸಲುಗೆ ಬೆಳೆಯಿತು. ಕ್ಲಿನಿಕ್(!) ನೋಡುವ ಅಪೂರ್ವ ಅವಕಾಶ ದೊರೆಯಿತು. ಒಂದು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಒಂದಿಷ್ಟು ಔಷಧದ ಬಾಟಲ್ ಮುಳುಗಿಸಿ ಇಟ್ಟಿದ್ದ. ವಿದ್ಯುತ್ ಇಲ್ಲದ್ದರಿಂದ ಫ್ರಿಜ್ ಇರಲಿಲ್ಲ. ಔಷಧ ಕೆಡಬಾರದೆಂದು ತಣ್ಣೀರಲ್ಲಿ ಬಾಟಲ್ ಇಟ್ಟಿರುವುದಾಗಿ ವಿವರಿಸಿದ. ರೋಗಿಗಳಿಗೆಲ್ಲ ಇಂಜೆಕ್ಷನ್ ಕೊಡಬೇಕು, ಕುಡಿಯಲು ಕೆಂಪು ಬಣ್ಣದ ಔಷಧಿ ನೀಡಬೇಕು. ವನವಾಸಿಗರು ಆಗ ಮಾತ್ರ ಡಾಕ್ಟರ್‌ರನ್ನು ನಂಬುತ್ತಾರೆಂದು ತಮ್ಮ ಗೆಲುವಿನ ರಹಸ್ಯ ವಿವರಿಸಿದ. ಕ್ಲಿನಿಕ್‌ನ ಚಿತ್ರ ತೆಗೆದೆ. ನಕಲಿ ವೈದ್ಯನ ಬಗೆಗೆ ದೂರು ಸಲ್ಲಿಸಿದೆ, ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು. ಮೈನಳ್ಳಿಯ ವೈದ್ಯ ರಾತ್ರಿ ಬೆಳಗಾಗುವುದರೊಳಗೆ ಜಾಗ ಖಾಲಿ ಮಾಡಿದ. ವಿಚಾರಿಸಿದರೆ ಧಾರವಾಡದ ಕಲಘಟಗಿಯಲ್ಲಿ  ಆತ ಮತ್ತೆ ಕ್ಲಿನಿಕ್ ಆರಂಭಿಸಿದನೆಂದು ಮಾಹಿತಿ ದೊರೆಯಿತು. ನಕಲಿಗಳು ಹೇಗೆ ಬೇರು ಬಿಡುತ್ತಾರೆಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಷ್ಟೇ !

ಶರಾವತಿ ಟೇಲರೇಸ್ ಜಲವಿದ್ಯುತ್ ಯೋಜನೆ ಕಾಮಗಾರಿ ಜೋರಾಗಿ ನಡೆಯುತ್ತಿರುವಾಗ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ೮-೧೦ ಜನ ಇಂಥದೇ ನಕಲಿಗಳು ವೈದ್ಯರಂತೆ ಕಾರ್ಯ ನಿರ್ವಹಿಸುತ್ತಿದ್ದರು. ವಿಶೇಷವೆಂದರೆ ಯೋಜನೆ ಕಾಮಗಾರಿ ಆರಂಭವಾಗುತ್ತಿದ್ದಂತೆ  ಎಲ್ಲಿಂದಲೋ ಬಂದು ಕ್ಲಿನಿಕ್ ತೆಗೆದಿದ್ದರು. ಎ.ಎಮ್.ಬಿ.ಎಸ್, ಬಿ.ಎ.ಎಮ್.ಎಸ್, ಎಲ್.ಎ.ಎಮ್. ಎಸ್, ಬಿ.ಎಚ್.ಎಮ್.ಎಸ್ ಎಂದು ಇವರ ಹೆಸರಿನ ಜೊತೆ ಪದವಿಗಳಿದ್ದವು.

ಹೆಸರಿನ ಹಿಂದೆ ‘ಡಾ. ’ ಎಂದು ಸೇರಿಸಿದರೆ ನಮ್ಮ ಹಳ್ಳಿಗರು ವಿಶೇಷ ಗೌರವ ನೀಡಲು ಶುರು ಮಾಡುತ್ತಾರೆ, ಅವರನ್ನು ಪ್ರಶ್ನಿಸುವವರು ಕಡಿಮೆ. ಇವರು ಎಲ್ಲಿ ವೈದ್ಯಕೀಯ ಓದಿದ್ದಾರೆ? ಯಾವ ಪ್ರಮಾಣ ಪತ್ರ ಪಡೆದಿದ್ದಾರೆ? ಎಲ್ಲಿ ನೋಂದಾಯಿಸಿದ್ದಾರೆ? ಯಾವುದನ್ನೂ  ಅವರ ಕ್ಲಿನಿಕ್ ಹೇಳುವುದಿಲ್ಲ. ಚರ್ಮವ್ಯಾಧಿ, ಮೂಲ ವ್ಯಾಧಿ, ಜ್ವರ, ಹಲ್ಲುನೋವು, ಹೊಟ್ಟೆನೋವು, ತಲೆನೋವು ಹೀಗೆ ಸಕಲ ರೋಗಗಳಿಗೂ ಚಿಕಿತ್ಸೆ ನೀಡಲು ಸಿದ್ಧರಿದ್ದರು. ಯಾವ ವೈದ್ಯಕೀಯ ಶಿಕ್ಷಣ ಪಡೆಯದೇ ವೈದ್ಯರಾದವರು ಕೆಲವರು, ಆಯುರ್ವೇದ, ಹೋಮಿಯೋಪಥಿ ಓದಿ ಅಲೋಪಥಿ ಔಷಧ ನೀಡುವವರು ಇನ್ನಷ್ಟು ಜನ. ಬಡ ಕಾರ್ಮಿಕರಿಗೆ ಕಾಯಿಲೆಗೆ ಸುಲಭದಲ್ಲಿ ಡಾಕ್ಟರ್ ಬೇಕು. ಕೆಲಸದ ಪರಿಸರದಲ್ಲಿ ಅಗ್ಗದ ಔಷಧಿ ಸಿಕ್ಕಿದರೆ ಸಾಕು. ಚಿಕಿತ್ಸೆ ಪಡೆದ ಎಷ್ಟು ಜನರಿಗೆ ಯಾವೆಲ್ಲ ಪರಿಣಾಮವಾಗಿದೆ ಎಂಬ ಮಾಹಿತಿ ದೊರೆಯುವುದಿಲ್ಲ. ಸಾವು-ನೋವು ಸಂಭವಿಸಿದರೂ ವರದಿಯಾಗುವುದಿಲ್ಲ.

ರಾಜ್ಯದ ನೀರಾವರಿ ಕ್ಷೇತ್ರಗಳು ನಕಲಿ ವೈದ್ಯರ ಸಮೃದ್ಧ ನೆಲೆ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಮದ್ಯದ ಅಂಗಡಿ ಹಾಗೂ ನಕಲಿ ಕ್ಲಿನಿಕ್‌ಗಳ ಪೈಪೋಟಿ ನೋಡಬಹುದು. ಸಿಂಧನೂರು, ಗಂಗಾವತಿ ಒಳಗೊಂಡಂತೆ ಭತ್ತ ಬೆಳೆಯುವ ಯಾವುದೇ ಪ್ರದೇಶಕ್ಕೆ ಹೋದರೂ ಕೀಟನಾಶಕ ಗಳ ಬಳಕೆ ಬಹಳವಿದೆ. ಕಾರ್ಮಿಕರ ಕ್ಯಾಂಪ್‌ಗಳಲ್ಲಿ ಇವರ ಕ್ಲಿನಿಕ್‌ಗಳಿವೆ. ಆಸ್ತಮಾ, ಮೂಲ ವ್ಯಾಧಿ, ಕ್ಯಾನ್ಸರ್, ಏಡ್ಸ್ ಚಿಕಿತ್ಸೆ ನೀಡುವುದಾಗಿ ಹೇಳುವವರಂತೂ ರಾಜ್ಯದ ಎಲ್ಲೆಡೆ ಸಿಗುತ್ತಾರೆ. ಸಂಚಾರಿ ವೈದ್ಯರಾಗಿ ವಸತಿಗೃಹಗಳ  ಕೊಠಡಿಗಳಲ್ಲಿ ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಾರೆ! ಗುಪ್ತರೋಗ, ನಪುಂಸಕತ್ವ ನಿವಾರಣೆಗೆ ಪರಿಣಾಮಕಾರಿ  ಚಿಕಿತ್ಸೆ ನೀಡುವುದಾಗಿ ಘೋಷಿಸಿ ಕರಪತ್ರ ಹಂಚುತ್ತಾರೆ. ಇವರಲ್ಲಿ ಶೇಕಡ ೯೯ ಜನ ನಕಲಿಗಳಾದರೂ ಪೊಲೀಸ್ ವ್ಯವಸ್ಥೆ ಇಂಥವರನ್ನು ಹಿಡಿಯಲು ಹಿಂಜರಿಯುತ್ತದೆ.

ಒಂದು ಆಸ್ಪತ್ರೆಯಲ್ಲಿ ಆಗಷ್ಟೇ ಪ್ಯಾಕ್ ಒಡೆದ ಸಿರಿಂಜ್ ತುದಿಯಲ್ಲಿ ರಕ್ತದ ಗುರುತುಗಳಿದ್ದವು. ಸುಳಿವು ಬೆನ್ನುಹತ್ತಿ ಹೋದರೆ ಭಯಾನಕ ಸಂಗತಿ ತಿಳಿಯಿತು. ಬಳಸಿ ಬಿಸಾಕಿದ ಸಿರಿಂಜ್‌ಗಳನ್ನು ಕಿಲೋ ಲೆಕ್ಕದಲ್ಲಿ ಖರೀದಿಸಲಾಗುತ್ತದೆ. ಅವನ್ನು ತೊಳೆದು ಪುನಃ ಪ್ಯಾಕ್ ಮಾಡಿ ಮಾರುವ ಜಾಲ ಕಾರ್ಯನಿರ್ವಹಿಸುತ್ತಿದೆ. ಅವಧಿ ಮೀರಿದ ಮಾತ್ರೆಗಳ ಹೊದಿಕೆ ಹರಿದು ಅವನ್ನು ನಕಲಿ ವೈದ್ಯರಿಗೆ ಒದಗಿಸಲಾಗುತ್ತದೆ! ಅಗ್ಗದ ಔಷಧಿ ಖರೀದಿಸಿದ ನಕಲಿಗಳು ವೃತ್ತಿ ನಡೆಸುತ್ತಾರೆ. ಇಂಥ ಮಾತ್ರೆ, ಸಿರಿಂಜ್ ಬಳಸಿದರೆ ರೋಗಿಯ ಜೀವ ಖಂಡಿತಾ ತೊಂದರೆಗೆ ಸಿಲುಕುತ್ತದೆ.

ವನವಾಸಿ ಕೇರಿಗಳಲ್ಲಿ ‘ಕಂಪೌಂಡ್ ಡಾಕ್ಟರು’ಗಳಲ್ಲಿ ಔಷಧಿ ಪಡೆಯುತ್ತಿರುವುದಾಗಿ ಒಬ್ಬರು ಹೇಳಿದರು. ವಿಚಾರಿಸಿದರೆ ನಗರದ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿದ್ದ ವ್ಯಕ್ತಿ ಆ ಹಳ್ಳಿಯಲ್ಲಿ ವೈದ್ಯನಾಗಿ ಚಿಕಿತ್ಸೆ ನೀಡುತ್ತಿದ್ದ. ಕೆಲವರಂತೂ ೨೦–-೨೫ ವರ್ಷಗಳಿಂದ ನಕಲಿ ವೃತ್ತಿ ನಡೆಸುತ್ತ ತಜ್ಞ ವೈದ್ಯರಿಗೆ ಮೀರಿದ ವ್ಯವಹಾರ ನಡೆಸುತ್ತಾರೆ. ಅಪ್ಪ ಬಿ.ಎ. ಎಮ್.ಎಸ್, ಬಿ.ಎಮ್.ಎಸ್ ಓದಿ ವೈದ್ಯ ವೃತ್ತಿ ಯಲ್ಲಿ ಜನಮನ್ನಣೆ ಗಳಿಸಿದರೆ ಸಾಕು. ಎಸ್ ಎಸ್ಎಲ್‌ಸಿ ಓದದ ಮಗನೂ ಅಪ್ಪನ ಆಸ್ಪತ್ರೆ ಮುನ್ನಡೆಸುತ್ತಾನೆ. ಗಂಡ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ವೈದ್ಯಕೀಯ ಓದದ ಅವನ ಹೆಂಡತಿ ವೈದ್ಯೆಯಾದ ಉದಾಹರಣೆಗಳು ಸಿಗುತ್ತವೆ. 

‘ಯುನಿಸೆಫ್’ ಪ್ರಕಟಿಸಿದ ವರದಿ ಪ್ರಕಾರ ಶೇಕಡ ೮೮ರಷ್ಟು ಹಳ್ಳಿಗಳಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎರಡು ಕಿಲೋಮೀಟರ್‌ಗಿಂತ ದೂರವಿದೆ. ಶೇಕಡ ೭೪ರಷ್ಟು ಹಳ್ಳಿಗರಿಗೆ ಈ ದೂರದಲ್ಲಿ ಬೇರಾವ ಆಸ್ಪತ್ರೆಯೂ ಇಲ್ಲ. ಆಸ್ಪತ್ರೆ ಕಟ್ಟಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ವೈದ್ಯರಿಗೆ ಹಳ್ಳಿಗಾಡಿನಲ್ಲಿ ವೃತ್ತಿ ನಡೆಸಲು ಇಷ್ಟವಿಲ್ಲ. ವೈದ್ಯಕೀಯ ಶಿಕ್ಷಣ ವೆಚ್ಚ ಮಿತಿಮೀರಿ ಬೆಳೆದಿರುವುದರಿಂದ ಕಲಿತವರು ನಗರಗಳಲ್ಲಿ ದುಡಿಯಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ಹಳ್ಳಿ ಸೇವೆಯನ್ನು ಕಡ್ಡಾಯ ಮಾಡಿದ್ದರೂ ಚಾಪೆಯ ಕೆಳಗಡೆ ನುಸುಳುವ ದಾರಿ ಹುಡುಕುತ್ತಾರೆ. ವೈದ್ಯರಿಲ್ಲದೆಡೆಯ ಅವಕಾಶವನ್ನು ನಕಲಿಗಳು ಸಮರ್ಥವಾಗಿ ಬಳಸಿ ಕೊಂಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ಕಳೆದ ನಾಲ್ಕು ದಶಕಗಳಿಂದ ನಕಲಿ ವೈದ್ಯರ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ. ಭಾರತೀಯ ವೈದ್ಯಕೀಯ ಮಂಡಳಿಯ ಕಾಯ್ದೆ ೧೯೫೬ ಕಲಂ ೧೫-೧, ೧೫-೨(ಬಿ), ಕರ್ನಾಟಕ ವೈದ್ಯಕೀಯ ಮಂಡಳಿಯ ಕಾಯ್ದೆಯ ಕಲಂ ೪೦, ಅಲೋಪಥಿ ಮತ್ತು ಆಯುರ್ವೇದಿಕ್ ಕಾಯ್ದೆ ೧೯೬೧ರ ಕಲಂ ೩೬ರ ಪ್ರಕಾರವೂ ಕ್ರಮ ಜರುಗಿಸಲು ಅವಕಾಶವಿದೆ.

ವೈದ್ಯಕೀಯ ಜ್ಞಾನ ಬೆಳೆದಿದೆ; ಕಾನೂನಿನ ಅರಿವು ಹೆಚ್ಚುತ್ತಿದೆ. ಆದರೂ ದೂರು ನೀಡಲು ಉದಾಸೀನತೆಯಿದೆ. ಕಟ್ಟುನಿಟ್ಟಿನ ಕ್ರಮ ಶುರುವಾದರೆ ಭಾರತೀಯ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡುವವರನ್ನು ಅವಮಾನಿಸಲಾಗುತ್ತಿದೆ ಎಂಬ ಬೊಬ್ಬೆ ಶುರುವಾಗುತ್ತದೆ. 
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಅಧಿಕಾರಿಗಳು ಈಗ ವಿವಿಧೆಡೆ ದಾಳಿ ನಡೆಸಿದ್ದಾರೆ. ನಕಲಿಗಳಿಗೆ ಭಯ ಹುಟ್ಟಿಸಿದ್ದಾರೆ. ಇದು ಒಮ್ಮೆಗೆ ಮುಗಿಯುವ ಕೆಲಸವಲ್ಲ. ಕ್ಲಿನಿಕ್‌ನ ಪರಿಶೀಲನೆ, ವೈದ್ಯರ ಅರ್ಹತೆ, ನೋಂದಣಿ ಪತ್ರ ಪರಿಶೀಲನೆ, ದೂರು ಸ್ವೀಕೃತಿಗೆ ಕಾರ್ಯಪಡೆ ಇನ್ನೂ ಚುರುಕಾಗ ಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT