ADVERTISEMENT

ನೈತಿಕ ಚೌಕಟ್ಟು ಮತ್ತು ವರ್ತಮಾನದ ಬಿಕ್ಕಟ್ಟು

ಎಚ್.ಕೆ.ಶರತ್
Published 18 ಡಿಸೆಂಬರ್ 2017, 19:30 IST
Last Updated 18 ಡಿಸೆಂಬರ್ 2017, 19:30 IST

ಮನುಷ್ಯನ ತೀರಾ ಖಾಸಗಿ ವಿಚಾರವಾದ ಲೈಂಗಿಕತೆಯ ಸುತ್ತ ನೈತಿಕ ಕಟ್ಟುಪಾಡು ವಿಧಿಸುವ ನೆವದಲ್ಲಿ ಸಮಾಜ ನಡೆಸುವ ಹಸ್ತಕ್ಷೇಪ, ಮತ್ತದರ ದುಷ್ಪರಿಣಾಮಗಳ ಕುರಿತು ಸಂಯಮದಿಂದ ಪರಿಶೀಲಿಸುವ ಅಗತ್ಯವಿದೆ

ಮೊನ್ನೆ ಅಚಾನಕ್ಕಾಗಿ ಸಿಕ್ಕ ಪರಿಚಿತರೊಬ್ಬರು, ‘ನಿಂಗೆ ಮದ್ವೆ ಆಗಿದ್ಯಾ’ ಅಂತ ಪ್ರಶ್ನಿಸಿದರು. ‘ಇನ್ನೂ ಆಗಿಲ್ಲ’ ಅಂದೆ. ನನ್ನ ತಂದೆಯ ಹೆಸರಿನಲ್ಲಿರುವ ಜಾತಿಸೂಚಕ ಪದದ ಮೂಲಕವೇ ನನ್ನ ಜಾತಿ ಯಾವುದೆಂದು ಊಹಿಸಿದ್ದ ಅವರು, ‘ಡಿ’ನಾ ‘ಎಮ್ಮಾ’ ಅಂತ ಪ್ರಶ್ನಿಸಿದರು. ನಾನು ಯಾವುದೂ ಅಲ್ಲ ಅಂತೇಳಿ ಅವರನ್ನು ಸಾಗಹಾಕಲು ಪ್ರಯತ್ನಿಸಿದೆ. ‘ನಿಂಗೊಂದು ಹುಡ್ಗಿ ತೋರ್ಸೋಣ ಅಂತಿದ್ರೆ ನೀನು ಹಿಂಗಾಡ್ತಿಯಲ್ಲಯ್ಯ’ ಅಂತ ಗೊಣಗಿಕೊಂಡೇ ಹೋದರು.
* * *
ಮೂರ್ನಾಲ್ಕು ವರ್ಷಗಳ ಹಿಂದಷ್ಟೆ ಮದುವೆಯಾಗಿರುವ ಸ್ನೇಹಿತ, ‘ಈ ಅರೇಂಜ್ಡ್‌ ಮ್ಯಾರೇಜ್ ಅನ್ನೋದು ಒಂಥರ ವಿಚಿತ್ರ ಆಟ ಇದ್ದ ಹಾಗೆ. ಹೇಗೋ ಮ್ಯಾನೇಜ್ ಮಾಡ್ಕೊಂಡು ಹೋಗ್ತೀವಿ ಅನ್ನೋದ್ ಬಿಟ್ರೆ, ಎಲ್ಲದರ ಹಿಂದೆಯೂ ಒಂದು ಲೆಕ್ಕಾಚಾರ ಇದ್ದೇ ಇರುತ್ತೆ. ಆ ಕಾರಣಕ್ಕೆ ಗಂಡ-ಹೆಂಡತಿ ಇಬ್ರೂ ಪ್ರಾಮಾಣಿಕವಾಗಿ ಬೆರೆಯೋದು ಅಸಾಧ್ಯವೇನೊ ಅನಿಸುತ್ತೆ. ಈಗ ನಂದೇ ತಗೋ, ನಾನು ನೋಡೋಕೆ ಅಷ್ಟು ಚೆನ್ನಾಗಿಲ್ದಿದ್ರೂ ನಮಗಿರೋ ಆಸ್ತಿ ನೋಡಿ ಇವಳು ನನ್ನನ್ನು ಮದ್ವೆ ಆಗಿದ್ದಾಳೆ. ಅದುನ್ನ ಅವ್ಳು ನೇರವಾಗಿ ಹೇಳ್ದೆ ಇದ್ರೂ, ಅವಳು ವರ್ತಿಸುವ ರೀತಿಯಿಂದಲೇ ಎಲ್ಲ ಅರ್ಥವಾಗುತ್ತೆ. ಯಾರೇ ಆಗ್ಲಿ ಲವ್ ಮಾಡಿ ಮದ್ವೆ ಆಗೋದೆ ಒಳ್ಳೇದು’ ಅಂತ ಇತ್ತೀಚೆಗೆ ಸಿಕ್ಕಾಗಲೆಲ್ಲ ತನ್ನ ವೈವಾಹಿಕ ಬದುಕಿನ ಇತಿಮಿತಿಗಳ ಕುರಿತು ವರದಿ ಒಪ್ಪಿಸುತ್ತಿರುತ್ತಾನೆ.
* * *
ಹದಿನೆಂಟರಿಂದ ಇಪ್ಪತ್ತರ ವಯೋಮಾನದ ಹುಡುಗ-ಹುಡುಗಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಗೆಟ್ ಟುಗೆದರ್ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದವರ ನಡುವೆ ‘ಇಲ್ಲಿ ಯಾರೆಲ್ಲ ವರ್ಜಿನಿಟಿ (ಕನ್ಯತ್ವ) ಕಳೆದುಕೊಂಡಿದ್ದಾರೆ’ ಎನ್ನುವ ಕುರಿತು ಚರ್ಚೆ ಶುರುವಾಯಿತು. ಅಲ್ಲಿದ್ದ ಕೆಲವರು ಕೈ ಎತ್ತುವ ಮೂಲಕ ತಾವು ವರ್ಜಿನ್ ಅಲ್ಲ ಅಂತ ಘೋಷಿಸಿಕೊಂಡರು. ಈ ಗೆಟ್ ಟುಗೆದರ್ ಪಾರ್ಟಿ ನಡೆಯುತ್ತಿದ್ದದ್ದು ಯಾವುದೋ ಮೆಟ್ರೊಪಾಲಿಟನ್ ನಗರದಲ್ಲಲ್ಲ, ಹಾಸನದಂತಹ ಪುಟ್ಟ ನಗರದಲ್ಲಿ.
* * *
ಕಳೆದ ವಾರ ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯೊಂದು ನನ್ನಲ್ಲಿ ವಿಷಾದದ ಭಾವ ಸುಳಿದಾಡಲು ಕಾರಣವಾಯಿತು. ವಿಧವೆಯೊಬ್ಬರು ಪರಿಚಿತ ವ್ಯಕ್ತಿಯೊಂದಿಗೆ ತಮ್ಮ ಮನೆಯಲ್ಲಿದ್ದಾಗ, ಅಲ್ಲಿಗೆ ಭೇಟಿ ನೀಡಿದ ಅವರ ಸಹೋದರ, ಅವರಿಬ್ಬರೂ ಅನೈತಿಕ ಸಂಬಂಧವಿಟ್ಟುಕೊಂಡಿದ್ದು, ಇದೀಗ ತನ್ನ ಕೈಗೆ ಸಿಕ್ಕಿಬಿದ್ದಿದ್ದಾರೆಂದು ಹಿಡಿದು ಬಡಿಯಲು ಮುಂದಾಗಿದ್ದ. ಇದರಿಂದ ಮನನೊಂದಿದ್ದ ಅವರಿಬ್ಬರೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು.
* * *
ಇತ್ತೀಚೆಗೆ ನೋಡಿದ ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾ ಕೆಲ ಮಿತಿಗಳ ನಡುವೆಯೂ ಇಷ್ಟವಾಯಿತು. ಅದು ಕಟ್ಟಿಕೊಟ್ಟ ಕಥಾನಕಗಳು ವರ್ತಮಾನದ ಬದುಕಿಗೆ ಕನ್ನಡಿ ಹಿಡಿದಂತೆಯೂ ಭಾಸವಾಯಿತು. ಪ್ರೇಮ, ಕಾಮ, ಮದುವೆ, ಜಾತಿ ಸಂಘರ್ಷ, ಸಮಾಜದ ಕಟ್ಟುಪಾಡುಗಳು, ಅವನ್ನೆಲ್ಲ ಮೀರುವವರಲ್ಲಿನ ಜೀವನ ಪ್ರೀತಿ, ಅನೈತಿಕತೆಗೆ ನೈತಿಕತೆಯ ಪೋಷಾಕು ತೊಡಿಸಿ ಬೀಗುವ ಸಮಾಜ, ಹೇಗೆ ಹಲವರ ಪಾಲಿನ ನೆಮ್ಮದಿಯ ನೆಲೆಗಳನ್ನೇ ನಾಶ ಮಾಡುವ ಉಮೇದು ತೋರುತ್ತಿದೆ ಎಂಬುದನ್ನು ನಮ್ಮೆದುರು ಇಡುವ ಪ್ರಯತ್ನದಂತೆ ತೋರಿತು.
* * *
ಮೇಲಿನ ಬಿಡಿ ಪ್ರಸಂಗಗಳನ್ನೆಲ್ಲ ನಾವು ಜೀವಿಸುತ್ತಿರುವ ಸಮಾಜ ಮತ್ತದರ ಚೌಕಟ್ಟಿನೊಳಗಿಟ್ಟು ನೋಡಿದರೆ, ನಮ್ಮನ್ನು ಸುತ್ತುವರೆದಿರುವ ಸಂಕೀರ್ಣ ಸಿಕ್ಕುಗಳ ಪರಿಚಯವಾಗಬಹುದು.

ಪಾವಿತ್ರ್ಯ, ಶೀಲ, ಕನ್ಯತ್ವವೆಂಬ ಅಂಶಗಳನ್ನು ತಮ್ಮ ಬದುಕಿನ ಹಾದಿಯಲ್ಲಿ ಜರುಗುವ ಪ್ರೇಮದ ಮೂಲಕ ಮೆಟ್ಟಿನಿಲ್ಲುವ ಯುವ ಸಮುದಾಯ, ಅದೇ ಮದುವೆ ಆಗುವ ವಿಚಾರ ಬಂದಾಗ ‘ಹಿಂದೇನೂ ನಡೆದೇ ಇಲ್ಲ’ವೆಂಬಂತೆ ಮತ್ತದೇ ಜಾತಿ, ಜಾತಕ, ಅಂತಸ್ತು, ಒಳ್ಳೆ ಮನೆತನಗಳೆಂಬ ಸೂತ್ರಕ್ಕೆ ಜೋತು ಬೀಳುವ ವಿಪರ್ಯಾಸವನ್ನೂ ಗಮನಿಸಬಹುದಾಗಿದೆ. ಪ್ರೇಮ ಮತ್ತು ಮದುವೆ ಎರಡೂ ಹಂತದಲ್ಲೂ ಕಟ್ಟುಪಾಡುಗಳನ್ನು ಮೀರುವ ನಿದರ್ಶನಗಳು ಇವೆಯಾದರೂ ಅವುಗಳ ಸಂಖ್ಯೆ ಅತ್ಯಲ್ಪವೆನ್ನುವುದು ‘ಆಧುನಿಕ’ರಾಗಿಯೂ ಆತ್ಮವಂಚಕರಾಗಿಯೇ ಉಳಿದುಬಿಡುವ ಸಾಧ್ಯತೆಯತ್ತ ನಮ್ಮನ್ನು ಸೆಳೆಯುತ್ತದೆ.

ADVERTISEMENT

ಮನುಷ್ಯನ ತೀರಾ ಖಾಸಗಿ ವಿಚಾರವಾದ ಲೈಂಗಿಕತೆಯ ಸುತ್ತ ನೈತಿಕ ಕಟ್ಟುಪಾಡು ವಿಧಿಸುವ ನೆವದಲ್ಲಿ ಸಮಾಜ ನಡೆಸುವ ಹಸ್ತಕ್ಷೇಪ, ಮತ್ತದರ ದುಷ್ಪರಿಣಾಮಗಳ ಕುರಿತು ಸಂಯಮದಿಂದ ಪರಿಶೀಲಿಸುವ ಅಗತ್ಯವಿದೆ. ತನ್ನ ಪಾಲಿಗೆ ಅನೈತಿಕವೆಂದು ಪರಿಗಣಿತವಾಗುವ ಲೈಂಗಿಕ ಸಂಬಂಧವೊಂದನ್ನು ಯಾವುದೇ ವ್ಯಕ್ತಿ ಹೊಂದಿದ್ದಾರೆಂಬ ಕಾರಣಕ್ಕೆ ಅವರಿಗೆ ಬದುಕುವ ಹಕ್ಕೂ ಇಲ್ಲವೆನ್ನುವಂತೆ ನಿರ್ದಯವಾಗಿ ವರ್ತಿಸುವುದು, ಅವರನ್ನು ನಿಕೃಷ್ಟವಾಗಿ ಕಾಣುವುದು ಇನ್ನೂ ಮುಂದುವರೆಯಬೇಕೆ? ಕಾನೂನು ಪ್ರಕಾರ ಸಮ್ಮತವಾದ ಪರಸ್ಪರ ಒಪ್ಪಿಗೆಯ ಮೇಲೆ ಜರುಗುವ ಪ್ರಾಪ್ತ ವಯಸ್ಕರಿಬ್ಬರ ನಡುವಿನ ಸಂಬಂಧಕ್ಕೂ ಅನೈತಿಕತೆಯ ಪೋಷಾಕು ತೊಡಿಸುವ ಹಕ್ಕು ನಮಗಿದೆಯೇ?

ಸಮಾಜದ ಸ್ವಾಸ್ಥ್ಯ ಹದಗೆಡಿಸಲು ಕೊಡುಗೆ ನೀಡುವ ಎಷ್ಟೋ ಸಂಗತಿಗಳನ್ನು ಸಹಜವೆಂಬಂತೆ ಸಹಿಸಿಕೊಳ್ಳುವ ನಾವು, ವಿವಾಹದಾಚೆಗಿನ ಲೈಂಗಿಕ ಸಂಬಂಧಗಳ ಕುರಿತು ತೋರುವ ಅತಿಯಾದ ಮಡಿವಂತಿಕೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬಿಕ್ಕಟ್ಟುಗಳಿಗೆ ಆಸ್ಪದ ನೀಡಬಹುದೇ ವಿನಾ, ನೈತಿಕ ಗೂಂಡಾಗಿರಿಯ ಮೂಲಕ ‘ನಾವು ವರ್ಜಿನ್ ಅಲ್ಲ’ ಅಂತ ಬಿಡುಬೀಸಾಗಿ ಘೋಷಿಸಿಕೊಳ್ಳಬಲ್ಲ ಯುವ ಸಮುದಾಯವನ್ನು ನಿರ್ಬಂಧಿಸಲು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.