ADVERTISEMENT

ಬುರ್ಖಾ: ಆಯ್ಕೆಯಾಗಬಾರದು

ಡಾ.ಸುಶಿ ಕಾಡನಕುಪ್ಪೆ
Published 21 ಫೆಬ್ರುವರಿ 2017, 19:30 IST
Last Updated 21 ಫೆಬ್ರುವರಿ 2017, 19:30 IST

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಆರಂಭವಾಗಿದ್ದ ವಸ್ತ್ರಸಂಹಿತೆ ವಿವಾದ ಇತರ ಕಾಲೇಜುಗಳಿಗೂ ಹಬ್ಬಿರುವುದು, ಈ ವಿಚಾರ ಕೇವಲ ವಸ್ತ್ರಸಂಹಿತೆಗಷ್ಟೇ ಸೀಮಿತವಾಗಿಲ್ಲ ಎಂಬುದನ್ನು ತಿಳಿಸುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಬುರ್ಖಾಗೆ ಮುಸ್ಲಿಮೇತರ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಹೊದ್ದು ಪ್ರತಿಭಟನೆ ಸೂಚಿಸಿದ್ದಾರೆ.

ಈ ಪ್ರತಿಭಟನೆ ಶಾಂತ ಸ್ವರೂಪವನ್ನು ಮೀರಿ ಹೊಡೆದಾಟದ ಸ್ವರೂಪ ಪಡೆದುಕೊಂಡಿದ್ದು, ಶಿಕ್ಷಣದ ಕೇಂದ್ರಗಳಾಗಬೇಕಿದ್ದ ಕಾಲೇಜುಗಳಲ್ಲಿ ಎನ್ನುವುದು ವಿಪರ್ಯಾಸ. ಇದರರ್ಥ ಮುಸ್ಲಿಂ ಹೆಣ್ಣು ಮಕ್ಕಳ ಬುರ್ಖಾ ತೊಡುಗೆಗೆ ಪ್ರತಿರೋಧ ವ್ಯಕ್ತವಾಗಿರುವುದು ಧರ್ಮಾತೀತ ಮಾನವೀಯ ಉದ್ದೇಶದಿಂದಲ್ಲ.  ಬದಲಿಗೆ ಧರ್ಮದ ಹೆಸರಿನಲ್ಲಿ ನಡೆಯುವ ಅವೈಜ್ಞಾನಿಕ ಸಂಪ್ರದಾಯಗಳಿಗೆ ಅನಾರೋಗ್ಯಕರ ರೀತಿಯಲ್ಲಿ ಪೈಪೋಟಿ ನೀಡುವ ದುರುದ್ದೇಶ ಈ ಪ್ರತಿಭಟನೆಗಳಿಗಿದೆ.

ನಮ್ಮಲ್ಲಿ ಬುರ್ಖಾಗೆ ಸಂಬಂಧಿಸಿ ಈ ರೀತಿಯ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಪ್ರಪಂಚದಾದ್ಯಂತ ಈ ವಸ್ತ್ರಸಂಹಿತೆಯ ಬಗ್ಗೆ ಹಲವು ರೀತಿಯ ಸ್ಪಂದನೆಗಳು ಹೊರಬರುತ್ತಿವೆ. ಫೆಬ್ರುವರಿ 6ರಂದು ಆಸ್ಟ್ರಿಯಾದಲ್ಲಿ ಸುಮಾರು 3,000 ಮುಸ್ಲಿಂ ಮಹಿಳೆಯರು ಅಲ್ಲಿನ ಸರ್ಕಾರ ಮುಂದಿಟ್ಟಿರುವ ಬುರ್ಖಾ ನಿಷೇಧವನ್ನು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಬುರ್ಖಾ ಪರವಾಗಿ ನಿಂತಿದ್ದಾರೆ.

ಆಸ್ಟ್ರಿಯಾ ಅಲ್ಲದೆ ಯುರೋಪಿನ ಇನ್ನಿತರ ದೇಶಗಳಾದ ಫ್ರಾನ್ಸ್, ಬೆಲ್ಜಿಯಂ, ನೆದರ್ಲೆಂಡ್‌, ಇಟಲಿ, ಸ್ಪೇನ್, ಬ್ರಿಟನ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್‌ ಮತ್ತು ರಷ್ಯಾದಲ್ಲಿ ಬುರ್ಖಾ ತೊಡುಗೆಯ ಮೇಲೆ ಹಲವು ಬಗೆಯ ನಿಷೇಧಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಧರ್ಮಾತೀತ ಅಭಿವ್ಯಕ್ತಿಯನ್ನು ಉಳಿಸಿಕೊಳ್ಳುವುದು ಮುಕ್ತ ಸಮಾಜ ನಿರ್ಮಾಣಕ್ಕೆ ಅನಿವಾರ್ಯ ಎಂಬ ಕಾರಣವನ್ನು ಈ ಸರ್ಕಾರಗಳು ನೀಡಿವೆ.

ಪ್ರಗತಿಪರ ಮುಕ್ತ ಸಮಾಜದ ಪ್ರತೀಕವಾಗಿರುವ ಯುರೋಪ್ ದೇಶಗಳಲ್ಲಿ ಬುರ್ಖಾವನ್ನು ನಿಷೇಧಿಸುವುದು ಕಂಡುಬಂದರೆ,  ಪ್ರಗತಿ ವಿರೋಧಿಯಾದ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯ ವಸ್ತ್ರಸಂಹಿತೆ ಇನ್ನೂ ಹೆಚ್ಚು ಬಿಗಿಯಾಗುತ್ತಿರುವುದನ್ನು ನಾವು ಕಳೆದ ನಾಲ್ಕು ದಶಕಗಳಿಂದ ಗಮನಿಸಬಹುದು.

ಮುಸ್ಲಿಂ ರಾಷ್ಟ್ರಗಳ ಪೈಕಿ ಪ್ರಗತಿಪರ ಎಂದೆನಿಸಿಕೊಂಡಿದ್ದ ಟರ್ಕಿ ದೇಶದಲ್ಲಾದ ಬದಲಾವಣೆಗಳು ನಮ್ಮನ್ನು ಚಿಂತನೆಗೆ ಒಡ್ಡಬೇಕು. ಮುಸ್ತಾಫ ಕೆಮಲ್ ಅತಾತುರ್ಕ್ ಆಡಳಿತದಲ್ಲಿದ್ದ ಟರ್ಕಿ ದೇಶದಲ್ಲಿ ಸುಮಾರು 85 ವರ್ಷಗಳ ಕಾಲ ಮಹಿಳೆಯರ ವಸ್ತ್ರಸಂಹಿತೆ ಹೆಚ್ಚು ಪ್ರಾಮುಖ್ಯ ಪಡೆದುಕೊಂಡಿರಲಿಲ್ಲ. ಮುಸ್ಲಿಂ ಮಹಿಳೆ ಧರಿಸುವ ತಲೆಗವಸು ಅಥವಾ ಬುರ್ಖಾ ಪ್ರಗತಿ ವಿರೋಧಿಯಾದದ್ದು ಎಂದು ಅತಾತುರ್ಕ್ ನಂಬಿದ್ದರು.

ಈಗಲೂ ಸಾರ್ವಜನಿಕ ಸ್ಥಳಗಳಲ್ಲಿ ತಲೆಗವಸು ಧರಿಸುವುದನ್ನು ನಿಷೇಧಿಸುವ ಕಾನೂನು ಇದೆ. ಆದರೆ 2008ರಿಂದ ಈಚೆಗೆ ಬುರ್ಖಾ ನಿಷೇಧವನ್ನು ಸಡಿಲಗೊಳಿಸಲಾಗಿದೆ. ಮಿಲಿಟರಿ ಮತ್ತು ನ್ಯಾಯಾಂಗ ಸಂಸ್ಥೆಗಳನ್ನು ಹೊರತುಪಡಿಸಿ ಟರ್ಕಿಯ ಮಹಿಳೆಯರು ಬುರ್ಖಾ ಧರಿಸಬೇಕಾಗುವ ಅನಿವಾರ್ಯ ಈಗ ಸೃಷ್ಟಿಯಾಗಿದೆ. ಈ ಎಲ್ಲಾ ಬದಲಾವಣೆಗಳಿಗೆ ಕಾರಣ ಈಗ ಸರ್ಕಾರ ನಡೆಸುತ್ತಿರುವ ಎ.ಕೆ. ಪಾರ್ಟಿ, ಇಸ್ಲಾಂ ಮೂಲಭೂತವಾದವನ್ನು ಪ್ರತಿಪಾದಿಸುವುದೇ ಆಗಿದೆ.

ಹಾಗೆಯೇ ಇನ್ನಿತರ ಮುಸ್ಲಿಂ ರಾಷ್ಟ್ರಗಳು ಮಹಿಳೆಯರ ವಸ್ತ್ರಸಂಹಿತೆಯ ಬಗ್ಗೆ ಅತ್ಯಂತ ಕ್ರೂರ ನಿರ್ಧಾರಗಳನ್ನು ಧರ್ಮ ಮತ್ತು ಮಹಿಳೆಯ ರಕ್ಷಣೆಯ ಹೆಸರಿನಲ್ಲಿ ತೆಗೆದುಕೊಳ್ಳುತ್ತಲೇ ಇವೆ. ಮಹಿಳೆಯ ಹಕ್ಕುಗಳನ್ನು ಎಲ್ಲಾ ಧರ್ಮಗಳೂ ಕಸಿದಿವೆ. ಮುಸ್ಲಿಂ ಮತ್ತು ಮುಸ್ಲಿಮೇತರ ದೇಶಗಳಲ್ಲಿ ಮಹಿಳೆಗೆ ಸಾಂಸ್ಕೃತಿಕ, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯ ಅಭಿವ್ಯಕ್ತಿಯಲ್ಲಿ ಇನ್ನೂ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ.

ಇದಕ್ಕೆ ಮೂಲಕಾರಣ ಆಯಾ ದೇಶದ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಧಾರ್ಮಿಕ ಶಕ್ತಿಗಳು. ರಾಜಕೀಯ ವ್ಯವಸ್ಥೆಯನ್ನೂ ಮೀರಿ ಒಂದು ಸಮಾಜದ ಮನಸ್ಸನ್ನು ಸುಲಭವಾಗಿ ನಿಯಂತ್ರಣದಲ್ಲಿಡಲು ಸಾಧ್ಯವಾಗುವುದು ಧರ್ಮಕ್ಕೆ ಮಾತ್ರ. ಆದ್ದರಿಂದಲೇ ಆಸ್ಟ್ರಿಯಾ ಅಥವಾ ಫ್ರಾನ್ಸ್‌ನ ಧರ್ಮಾತೀತ ಸರ್ಕಾರಗಳು ಬುರ್ಖಾ ಎಂಬ ಅವೈಜ್ಞಾನಿಕ ತೊಡುಗೆಯನ್ನು ನಿಷೇಧಿಸಿದರೆ, ಅದಕ್ಕೆ ವಿರುದ್ಧವಾಗಿ ಪ್ರತಿಭಟನೆ ನಡೆಸುವವರು ಈ ಬುರ್ಖಾದಿಂದ ಪಾರಾಗಬೇಕಿರುವ ಮುಸ್ಲಿಂ ಮಹಿಳೆಯರೇ ಆಗಿರುವುದು ದುರಂತವಾಗಿದೆ.

ಬುರ್ಖಾ ತೊಡುವುದನ್ನು ಕೆಲವು ಪ್ರಗತಿಪರ ಚಿಂತಕರು ಮತ್ತು ಮಹಿಳಾವಾದಿಗಳು ಹೆಣ್ಣಿನ ಆಯ್ಕೆಗೆ ಬಿಡಬೇಕೆಂದು ವಾದ ಮಾಡುತ್ತಿರುವುದು ಪ್ರಪಂಚದಾದ್ಯಂತ ಈಗಿರುವ ದ್ವಂದ್ವ ನಿಲುವುಗಳಿಗೆ ಕಾರಣವಾಗುತ್ತಿದೆ. ಬುರ್ಖಾ ತೊಡುಗೆಯನ್ನು ಇನ್ನಿತರ ಆಲಂಕಾರಿಕ ತೊಡುಗೆಗೆ ಹೋಲಿಕೆ ಮಾಡುವುದು ತಾರ್ಕಿಕವಲ್ಲ. ವಸ್ತ್ರಸಂಹಿತೆಯ ಹಲವು ಪ್ರಕಾರಗಳಲ್ಲಿ ಬುರ್ಖಾ ಅತ್ಯಂತ ಅಮಾನವೀಯ ಸ್ವರೂಪದ್ದಾಗಿದೆ.

ಹೆಣ್ಣಿನ ದೇಹದ ಒಂದಿಂಚನ್ನೂ ಬಿಡದೆ ಮುಚ್ಚುವ ಈ ವಸ್ತ್ರದಿಂದ ಆಕೆಯ ಸ್ವತಂತ್ರ ಚಲನವಲನಗಳಿಗೆ ಅಡ್ಡಿಯಾಗುತ್ತದೆ. ಮನುಷ್ಯನ ದೇಹಕ್ಕೆ ಸಿಗಬೇಕಾದ ಸೂರ್ಯನ ಕಿರಣಗಳು ಸಿಗದೆ ಅದೆಷ್ಟೋ ಮುಸ್ಲಿಂ ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ.

ಆರೋಗ್ಯಕ್ಕಷ್ಟೇ ಅಲ್ಲದೆ ಆಕೆಯ ದೈಹಿಕ ಅಭಿವ್ಯಕ್ತಿಗೆ ಕೊಂಚವೂ ಅನುವು ಮಾಡಿಕೊಡದ ಈ ತೊಡುಗೆ ಆಕೆಯ ರಕ್ಷಣೆಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆಯೇ ಆಗಿದೆ. ಆ ಮೂಲಕ ಹೆಣ್ಣಿನ ಸ್ವಾಭಾವಿಕ ಅಭಿವ್ಯಕ್ತಿಯನ್ನು ಕೊಲ್ಲುವ ಈ ತೊಡುಗೆ ಅಮಾನವೀಯವಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆ.

ಮಹಿಳೆಯನ್ನು ನಿಯಂತ್ರಣದಲ್ಲಿಡುವ ಇಂಥ ಕ್ರಮಗಳ ಹಿಂದೆ ಇರುವ ಉದ್ದೇಶಗಳನ್ನು ನಾವು ಅರಿಯಬೇಕಾಗಿದೆ. ಧರ್ಮವನ್ನು ಚಾಚೂತಪ್ಪದೆ ಪಾಲಿಸಬೇಕಾದದ್ದು ಹೆಣ್ಣಿನ ಜವಾಬ್ದಾರಿ ಎಂದು ಎಲ್ಲಾ ಧರ್ಮಗ್ರಂಥಗಳಲ್ಲೂ ಬಿಂಬಿಸಲಾಗುತ್ತದೆ. ಲಿಂಗ ಸಮಾನತೆಗೆ ಬೇಕಾಗುವ ಸಮಾನ ಅಭಿವ್ಯಕ್ತಿಯು ಮೊದಲು ಕುಟುಂಬದ ಸ್ತರದಲ್ಲಿ ಮಹಿಳೆಗೆ ದೊರಕಬೇಕು. ಅದಕ್ಕೆ ಶಿಕ್ಷಣದ ಅವಶ್ಯಕತೆಯಿದೆ.

ಆದರೆ ಶಿಕ್ಷಣದ ಮೂಲಕ ಲಿಂಗ ಸಮಾನತೆಯ ಅರಿವನ್ನು ಮಹಿಳೆಯು ಪಡೆದುಕೊಂಡರೆ ಕುಟುಂಬ ಮತ್ತು ಸಮಾಜದ ಮೇಲಿನ ಧರ್ಮದ ಹಿಡಿತ ಸಡಿಲಗೊಳ್ಳುವ ಅಪಾಯವನ್ನು ಕೋಮುಶಕ್ತಿಗಳು ಮನಗಂಡಿವೆ. ಇದರಿಂದಾಗಿ ಮಹಿಳೆಯ ವೈಚಾರಿಕ ಚಿಂತನೆಯ ಮೇಲೆ ಧರ್ಮವು ಯಶಸ್ವಿಯಾಗಿ ಹಿಡಿತ ಸಾಧಿಸಲು ಹೊರಟಿದೆ.

ಮಹಿಳೆಯ ವೈಚಾರಿಕ ಚಿಂತನೆಯಲ್ಲಿ ದ್ವಂದ್ವಗಳಿವೆ. ಆಕೆ ಶಿಕ್ಷಿತಳಾದರೂ ಧಾರ್ಮಿಕ ಹಿಡಿತದಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಿಲ್ಲ. ಬುರ್ಖಾ ಧರಿಸುವುದನ್ನು ಹೆಣ್ಣಿನ ಆಯ್ಕೆಗೆ ಬಿಡಬೇಕು ಎಂಬ ಮಹಿಳಾವಾದಿಗಳ ವಾದದಿಂದಾಗುವ ಅಪಾಯಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕು. ಸತಿ ಪದ್ಧತಿಯಲ್ಲಾಗಲಿ ಅಥವಾ ದೇವದಾಸಿ ಪದ್ಧತಿಯಲ್ಲಾಗಲಿ ಮಹಿಳೆಗೆ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದು ಈ ಕಾಲಘಟ್ಟದಲ್ಲಿ ಹೇಗೆ ಅತಾರ್ಕಿಕವಾಗಿ ಕಾಣುವುದೋ ಹಾಗೆಯೇ ಬುರ್ಖಾ ತೊಡುವ ಆಯ್ಕೆಯು ಕೂಡ. ಈ ತಿಳಿವಳಿಕೆಯನ್ನು ಮಹಿಳೆ ಶಿಕ್ಷಣದಿಂದಲೇ ಪಡೆಯಬೇಕಾಗಿದೆ.

ಬುರ್ಖಾ ಧರಿಸಿದರಷ್ಟೇ ಶಾಲೆಗೆ ಹೋಗುವ ಅವಕಾಶ ಮುಸ್ಲಿಂ ಹೆಣ್ಣು ಮಕ್ಕಳಿಗಿದೆ ಎಂಬುದು ವಾಸ್ತವ. ಈ ಅಂಶವನ್ನು ಬುರ್ಖಾ ತೊಡುಗೆಯ ಪರವಾಗಿ ವಾದಿಸಲು ಬಳಸುವುದು ಅಸಂಬದ್ಧವಾಗಿದೆ. ಕಲಿತ ಮುಸ್ಲಿಂ ಮಹಿಳೆ ಬುರ್ಖಾ ಧರಿಸುವುದನ್ನು ತಿರಸ್ಕರಿಸುವುದು ಶಿಕ್ಷಣ ತಂದು ಕೊಟ್ಟಿರುವ ಜಾಗೃತಿಯ ಲಕ್ಷಣ. 

ಹಣೆಗೆ ಕುಂಕುಮ ಇಡುವುದು, ಕೈಗೆ ಬಳೆ ತೊಡುವುದು, ಕತ್ತಿಗೆ ಮಾಂಗಲ್ಯ ಶೋಭಿಸುವುದು, ತಲೆಯ ಮೇಲೆ ಪರದೆ, ಎದೆಯ ಮೇಲೆ ದುಪಟ್ಟಾ ಹಾಗೂ ಆಭರಣಗಳ ತೊಡುಗೆ ಮಹಿಳೆಗೆ ಶೋಭೆ ತರುವುದಲ್ಲವೇ? ಇವೆಲ್ಲಾ ಮಹಿಳೆಯ ಭಾವ ಪ್ರಪಂಚದ ಅನುಭೂತಿಗಳಲ್ಲವೇ? ಹೀಗೆ ಪ್ರತಿಪಾದಿಸುವವರು ಹೆಚ್ಚಾಗಿ ಮಹಿಳೆಯರೇ ಎಂಬುದನ್ನು ನಾವು ಗಮನಿಸಬೇಕು.

ಬುರ್ಖಾ ತೊಡುಗೆಯನ್ನು ಈ ಸಾಲಿನಲ್ಲಿ ತಂದು ಮಹಿಳೆಯ ಆಯ್ಕೆಯ ಹಕ್ಕು ಎಂದು ಪ್ರತಿಪಾದಿಸಿದರೆ ಇದಕ್ಕಿಂತ ಹೆಚ್ಚು ದ್ವಂದ್ವ ಇನ್ನೊಂದಿಲ್ಲ. ಬುರ್ಖಾ ಪರವಾಗಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿರುವವರು ಮುಸ್ಲಿಂ ಮೂಲಭೂತವಾದವನ್ನು ನಂಬಿರುವ ಕಲಿತ ಮಹಿಳೆಯರೇ ಆಗಿದ್ದಾರೆ.

ಧಾರ್ಮಿಕ ಮೂಲಭೂತವಾದದ ಪರವಾಗಿ ನಿಂತಿರುವವರು ಮಹಿಳೆಯರು ಎಂಬ ಒಂದೇ ಕಾರಣಕ್ಕೆ ಪ್ರಗತಿಪರ ಮಹಿಳಾವಾದಿಗಳು ಬೆಂಬಲ ಸೂಚಿಸುವುದು ಸಮಂಜಸವಲ್ಲ. ಇದರಿಂದ ಮುಕ್ತ ಸಮಾಜದ ಸ್ಥಾಪನೆಗೆ ಅಡ್ಡಿಯಾಗುವ ಸಣ್ಣ ಬಿರುಕುಗಳು ಪ್ರಪಾತವಾಗುವ ಸಂಭವವೇ ಹೆಚ್ಚು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.