ADVERTISEMENT

ಬೇಡಿಕೆ ಹಕ್ಕು ಎಲ್ಲರದು...

ಪ್ರತಾಪ್ ಸಿಂಹ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ನೀವು ಯಾರನ್ನೇ ಕೇಳಿ, ‘ಅಯ್ಯೋ, ಎಲ್ಲಿ ಸಾಲುತ್ತೆ ಸಂಬಳ?’ ಈ ರೀತಿಯ ಪ್ರತಿಕ್ರಿಯೆ ಹೆಚ್ಚೂಕಡಿಮೆ ಎಲ್ಲರ ಬಾಯಿಂದಲೂ ಬರುತ್ತದೆ. ‘ಇತ್ತೀಚೆಗೆ ಬಾಡಿಗೆ ತುಂಬಾ ಜಾಸ್ತಿಯಾಗಿದೆ’, ‘ತರಕಾರಿ, ದಿನಸಿ ಬೆಲೆ ಮುಟ್ಟೋಕಾಗೊಲ್ಲ’, ‘ಮಕ್ಕಳ ಫೀಸು ದೇವರೇ ಗತಿ’, ‘ಒಂದೇ ಮಗು ಸಾಕು ರೀ, ಎಜುಕೇಶನ್ ತುಂಬಾ ಕಾಸ್ಟ್ಲಿಯಾಗಿದೆ’, ‘ಈ ಬೆಂಗಳೂರಿನ ಟ್ರಾಫಿಕ್ಕು, ಹೊಗೆಯಲ್ಲಿ ಬೈಕಲ್ಲಿ ಹೋಗೋದು ಬಹಳ ಕಷ್ಟ, ಒಂದು ಸಣ್ಣ ಕಾರನ್ನಾದರೂ ತೆಗೆದುಕೊಳ್ಳಬೇಕು’, ‘ಬೆಂಗಳೂರಿಗೆ ಬಂದು 15 ವರ್ಷ ಆಯ್ತು, ಒಂದು ಸಣ್ಣ ಸೈಟೂ ತಗೋಳೋಕಾಗಿಲ್ಲ. ಬರೋ ಸಂಬಳದಲ್ಲಿ ಏನೂ ಅಂಥ ಮಾಡೋಕಾಗುತ್ತೆ?’

ಹೌದು, ಯಾರಿಗೆ ಸಾಲುತ್ತೆ ಸಂಬಳ? ಆದರೆ ಸಂಬಳ ಸಾಕಾಗುತ್ತಿಲ್ಲ ಎಂದು ಕೊರಗುವ, ಕಷ್ಟ ತೋಡಿಕೊಳ್ಳುವ, ಹೆಚ್ಚು ಸಂಬಳಕ್ಕಾಗಿ ಒತ್ತಾಯಿಸುವ ಹಕ್ಕು, ಅರ್ಹತೆ ಈ ದೇಶದಲ್ಲಿರುವ ಎಲ್ಲರಿಗೂ ಇದೆ, ಸಂಸದ ಶಾಸಕರನ್ನು ಬಿಟ್ಟು! ಶಾಸಕ, ಸಂಸದರ ಸಂಬಳ ಹೆಚ್ಚಳದ ವಿಷಯ ಬಂದಾಗ ಮೈಮೇಲೆ ಭೂತ ಪ್ರವೇಶವಾದಂತೆ ಎಲ್ಲರೂ ಎರಗುತ್ತಾರೆ! ಏಕೆ? ವಿಐಪಿ ರೇಸಿಸಂ, ಗೂಟದ ಕಾರು, ಲಾಲ್ ಬತ್ತಿ ವಿಚಾರ ಬಂದಾಗ ‘ಈ ಸಂಸದ, ಶಾಸಕರೂ ಸಾಮಾನ್ಯ ವ್ಯಕ್ತಿಗಳೇ, ಅವರಿಗೇಕೆ ಇಂಥ ಸವಲತ್ತು’ ಎಂದು ಪ್ರಶ್ನಿಸುವವರಿಗೆ, ಒಬ್ಬ ಸಾಮಾನ್ಯ ಮನುಷ್ಯ ಎದುರಿಸುವ ಸಮಸ್ಯೆಗಳನ್ನು, ಹಣಕಾಸಿನ ತೊಂದರೆಯನ್ನು ಒಬ್ಬ ಪ್ರಾಮಾಣಿಕ ಶಾಸಕ, ಸಂಸದ ಕೂಡ ಎದುರಿಸುತ್ತಾನೆ, ಅವನಿಗೂ ಸಾಮಾನ್ಯರಂತೆ ಹೆಚ್ಚಿನ ಸಂಬಳ ಬೇಕಿದೆ ಎಂದೇಕೆ ಅನಿಸುವುದಿಲ್ಲ?

‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆಯಲ್ಲಿ (ಅಂತರಾಳ, ಅ. 3) ಈಗ ಕೊಡುತ್ತಿರುವ ಸಂಬಳ ಏನಕ್ಕೂ ಸಾಕಾಗುವುದಿಲ್ಲ, ಮೂರು ಲಕ್ಷವಾದರೂ ಕೊಡಬೇಕು ಎಂದು ನಾನು ಹೇಳಿದ್ದರ ಬಗ್ಗೆ ಬಗೆಬಗೆಯ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರಂತೂ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಪ್ರಾಮಾಣಿಕತೆಯನ್ನು ಸರಿಯಾಗಿ ಇಟ್ಟುಕೊಳ್ಳದವರು ಸಂಬಳಕ್ಕಾಗಿ ಒತ್ತಾಯಿಸುವುದಿಲ್ಲ. ಅವರಿಗೆ ಸಂಸದರ ಕ್ಷೇತ್ರಾಭಿವೃದ್ಧಿಗೆ ಪ್ರತಿ ವರ್ಷ ಸಿಗುವ ₹ 5 ಕೋಟಿ ಮೊತ್ತದ ಅನುದಾನದಲ್ಲಿಯೇ ಬದುಕು ನಡೆಸುವ, ಭವಿಷ್ಯಕ್ಕೆ ಕೂಡಿಟ್ಟುಕೊಳ್ಳುವ ಚಾಕಚಕ್ಯತೆ ಇರುತ್ತದೆ!

ಇಷ್ಟಕ್ಕೂ ನಾನೇಕೆ ಅಂದಾಜು ₹ 3 ಲಕ್ಷ ಸಂಬಳ ಕೊಡಬೇಕೆಂದೆ? ಒಬ್ಬ ಸಂಸದನಿಗೆ ಸಿಗುವ ಮಾಸಿಕ ಸಂಬಳ ₹ 50 ಸಾವಿರ. ಕರ್ನಾಟಕದ ಒಬ್ಬ ಶಾಸಕನಿಗೆ ಸಿಗುವ ಸಂಬಳ ₹ 25 ಸಾವಿರ. ಸಂಬಳದಾಚೆ ನಮಗೆ ವರ್ಷಕ್ಕೆ 34 ವಿಮಾನ ಟಿಕೆಟ್ ಕೊಡುತ್ತಾರೆ. ಅಂದರೆ 17 ಸಲ ದೆಹಲಿಗೆ ಹೋಗಿ ಬರಬಹುದು. ಅದರಲ್ಲಿ ಪತ್ನಿ, ಮಕ್ಕಳ ಪ್ರಯಾಣವೂ ಸೇರಿದೆ.

ವರ್ಷಕ್ಕೆ ಕನಿಷ್ಠ 120 ದಿನಗಳು, ನಾಲ್ಕು ಹಂತದಲ್ಲಿ 16  ವಾರಗಳ ಕಾಲ ಸಂಸತ್ ಅಧಿವೇಶನ ನಡೆಯುತ್ತದೆ. ನಾಲ್ಕು ಸಾರಿ ಹೋಗಿ ಬರಲು ಒದಗಿಸುವ ಹೆಚ್ಚುವರಿ ಟಿಕೆಟ್ ಹೊರತುಪಡಿಸಿದರೆ ವಾರವಾರವೂ ಕ್ಷೇತ್ರಕ್ಕೆ ಬರಬೇಕಾದ ಅನಿವಾರ್ಯದಿಂದಾಗಿ 17ರಲ್ಲಿ 12 ಯಾತ್ರೆಗಳು ಖೋತಾ ಆಗಿ ಉಳಿಯುವುದು 5. ನಿಮ್ಮ ಪತ್ನಿ ಹಾಗೂ ಇಬ್ಬರು (ಅಂದಾಜು) ಮಕ್ಕಳನ್ನು ಎರಡು ಬಾರಿ ಅಧಿವೇಶನಕ್ಕೆ ಕರೆದುಕೊಂಡು ಹೋದರೆ (ಕನಿಷ್ಠ ಅಷ್ಟಾದರೂ ಸಂಸಾರಕ್ಕೆ ನ್ಯಾಯ ಒದಗಿಸಬೇಕಲ್ಲವೆ?) ಒಮ್ಮೆಗೆ ಒಬ್ಬರನ್ನು ನಿಮ್ಮ ಖರ್ಚಿನಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ!

ಇನ್ನು 34 ಟಿಕೆಟ್‌ಗಳಿವೆಯಲ್ಲ ಅವುಗಳನ್ನು ಬಳಸಿಕೊಂಡು ಊರು ತಿರುಗಲು ಸಾಧ್ಯವಿಲ್ಲ. ನಿಮ್ಮ ಕ್ಷೇತ್ರದಿಂದ ದಿಲ್ಲಿಗೆ ಬಂದರಷ್ಟೇ ಲೆಕ್ಕ! ಕಿ.ಮೀ.ಗೆ 16 ರೂಪಾಯಿಯ ವಿಚಾರಕ್ಕೆ ಬನ್ನಿ. ಅಧಿವೇಶನ ಅಥವಾ ಕಮಿಟಿ ಮೀಟಿಂಗ್‌ಗೆ ತೆರಳುವಾಗ ಏರ್‌ಪೋರ್ಟ್ ಹಾಗೂ ರೈಲು ನಿಲ್ದಾಣಕ್ಕೆ ತೆರಳಿದರೆ ಈ 16 ರೂಪಾಯಿ ಕೊಡುತ್ತಾರೆಯೇ ಹೊರತು ನಿಮ್ಮ ಪತ್ನಿ ಜತೆ, ಗೆಳೆಯರೊಂದಿಗೆ ವಿಹಾರಕ್ಕೆ ಹೋದಾಗ ಕೊಡುವುದಿಲ್ಲ.

ರಾಜ್ಯ ಸರ್ಕಾರ ಡೀಸೆಲ್, ಕಾರು ಕೊಟ್ಟಿರುವುದೂ ಕ್ಷೇತ್ರ ಪ್ರವಾಸಕ್ಕೇ ಹೊರತು ವೈಯ್ಯಕ್ತಿಕ ಬಳಕೆಗಲ್ಲ. ಸರ್ಕಾರ ನೀಡುವ ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್, ಐ-ಪ್ಯಾಡ್, ಪ್ರಿಂಟರ್ ಇದ್ಯಾವುದೂ ವೈಯಕ್ತಿಕ ಸೌಲಭ್ಯಗಳಲ್ಲ, ಅಗತ್ಯಗಳಷ್ಟೇ. 120 ದಿನ ಅಧಿವೇಶನ, ವರ್ಷವಿಡೀ ಮತದಾರರು, ಪಕ್ಷ ಹಾಗೂ ಕಾರ್ಯಕರ್ತರ ಕೆಲಸ, ಕ್ಷೇತ್ರ ಪ್ರವಾಸ, ಕಮಿಟಿ ಮೀಟಿಂಗ್, ವಿಜಿಲೆನ್ಸ್ ಕಮಿಟಿ ಮೀಟಿಂಗ್ ನಡುವೆ ವೈಯಕ್ತಿಕ ಬದುಕನ್ನೇ ಕಳೆದುಕೊಂಡು, ಉಚಿತ ರೈಲು ಟಿಕೆಟ್ ಇಟ್ಟುಕೊಂಡು ಏನು ಮಾಡುತ್ತೀರಿ? ಹಾಗಾಗಿ ಕ್ಷೇತ್ರದ ಅಗತ್ಯಗಳನ್ನು ಸೌಲಭ್ಯಗಳೆಂದು ಭಾವಿಸಬೇಡಿ.

ದಿಲ್ಲಿಯಲ್ಲಿ ಆಪ್ತ ಸಹಾಯಕನನ್ನು ಇಟ್ಟುಕೊಳ್ಳಲು ₹ 30 ಸಾವಿರವನ್ನು ನೇರವಾಗಿ ಆತನ ಅಕೌಂಟ್‌ಗೆ ಕೊಡುತ್ತಾರೆ. ಒಂದು ಕೊಟ್ಟಿಗೆಯಂಥ ಫ್ಲ್ಯಾಟ್ ಕೊಡುತ್ತಾರೆ. ನಮ್ಮ ನಮ್ಮ ಕ್ಷೇತ್ರದಿಂದ ದಿಲ್ಲಿಗೆ ಯಾರೇ ಬಂದರೂ ಅವರಿಗೆ ಕಾಣುವುದು ಸಂಸದನ ಫ್ಲ್ಯಾಟ್. ಹಾಗೆ ವಾರವಾರವೂ ಬರುವ ಅತಿಥಿಗಳಿಗೆ ಅಡುಗೆ ಮಾಡಲು ಕುಕ್ ಇಡಬೇಕು, ದಿನಸಿ ಖರೀದಿಸಿ ಕೊಡಬೇಕು. ಇದಕ್ಕೆ ಯಾರು ಹಣ ಕೊಡುತ್ತಾರೆ?

ಅದಿರಲಿ, ಸೌಜನ್ಯದ ವಿಚಾರ ಮರೆತು ಬಿಟ್ಟಿರಾ? ನಿಮ್ಮ ಮನೆಗೆ ಬಂದರೆ ಕಾಫಿ, ಟೀ ಬೇಕೇ ಎಂದು ಕೇಳುವುದಿಲ್ಲವೆ? ನಾನು 17.41 ಲಕ್ಷ ಮತದಾರರನ್ನು 29 ಲಕ್ಷ ಜನರನ್ನು ಪ್ರತಿನಿಧಿಸುತ್ತೇನೆ. ಒಂದು ದಿನಕ್ಕೆ ನನ್ನ ಬಳಿ ಸರಾಸರಿ ಎಷ್ಟು ಜನ ಬರಬಹುದು, ಎಷ್ಟು ಖರ್ಚಾಗುತ್ತೆ ಯೋಚನೆ ಮಾಡಿ. ಒಬ್ಬ ಆಪ್ತ ಸಹಾಯಕ, ಒಬ್ಬ ಟೈಪಿಸ್ಟ್‌ ಇಟ್ಟುಕೊಂಡು 2 ಜಿಲ್ಲೆ ಹಾಗೂ 8 ವಿಧಾನಸಭಾ ಕ್ಷೇತ್ರಗಳು, 30ಕ್ಕೂ ಹೆಚ್ಚು ಕೇಂದ್ರ ಪುರಸ್ಕೃತ ಯೋಜನೆಗಳ ಮೇಲೆ ನಿಗಾ ಇಡಲು, ಕಡತದ ಬೆಂಬತ್ತಿ  ಕಾರ್ಯರೂಪಕ್ಕೆ ತರಲು ಸಾಧ್ಯವಿದೆಯೇ?

ವಾರಕ್ಕೆ ಎಷ್ಟು ಮದುವೆ, ಮುಂಜಿ, ನಾಮಕರಣಕ್ಕೆ ಹೋಗಬೇಕು ಯೋಚಿಸಿ? ಹೋಗುವಾಗ ಒಂದು ಹೂಗುಚ್ಛವಾದರೂ ನೀಡಬೇಕಲ್ಲವೆ? ಒಂದಕ್ಕೆ ಕನಿಷ್ಠ ₹ 250– 300  ಆಗುತ್ತದೆ. ಸಾವಿಗೆ ಹೋದರೆ ಕನಿಷ್ಠ ಸುಗಂಧರಾಜ ಹಾರವನ್ನಾದರೂ ಹಾಕಬೇಕು. ಇದಕ್ಕೆಲ್ಲ ಯಾರು ಹಣ ಕೊಡುತ್ತಾರೆ? ಇವೆಲ್ಲ ಸಾಮಾಜಿಕ ಜೀವನದಲ್ಲಿ ಬಹಳ ಮುಖ್ಯ. ಈ ಕಾರಣಕ್ಕಾಗೇ ಜನಪ್ರತಿನಿಧಿಗಳಿಗೆ ಹೆಚ್ಚಿನ ಸಂಬಳ ನೀಡಬೇಕೆಂದು ಒತ್ತಾಯಿಸಿದೆ. ರಾಜಕೀಯದಲ್ಲೂ ವೃತ್ತಿಪರತೆ ಬರಬೇಕು. ಹೊಸಬರು ರಾಜಕೀಯಕ್ಕೆ ಬರಬೇಕು. ಯುವಕರು ಬರಬೇಕು.

ಈಗಿರುವವರಲ್ಲಿ 95 ಭಾಗ, ಎಲ್ಲವನ್ನೂ ಸಿದ್ಧವಾಗಿ ಪಡೆದುಕೊಂಡು ರಾಜಕೀಯ ಪ್ರವೇಶ ಮಾಡುತ್ತಾರೆ. ಬಡ ಹಿನ್ನೆಲೆಯ ಹಾಗೂ ಹೊಸ ಮುಖಗಳು ಬರಬೇಕಾದರೆ ರಾಜಕೀಯವನ್ನೂ  ಗೌರವಯುತ ಕೆರಿಯರ್ ಆಪ್ಷನ್ ಆಗಿ ಮಾಡಬೇಕು. ಪ್ರಾಮಾಣಿಕರಾಗಿರುವುದೂ ರಿಸ್ಕ್ ತೆಗೆದುಕೊಂಡಂತೆ. ಹಾಗಾಗಿ ಒಳ್ಳೇ ಸಂಬಳ, ಒಳ್ಳೇ ಕೆಲಸ ಮಾಡಿ ಸೋತರೂ ಗೌರವಯುತ ಬದುಕು ನಡೆಸಲು ಸೂಕ್ತ ಪಿಂಚಣಿ  ಬೇಕು. ಆನಂತರ ಹೊಣೆಗಾರಿಕೆಯನ್ನು ಕೇಳಬೇಕು.

ಕಡೆಯದಾಗಿ, ನಾನು ಸಂಸದರ ಸಂಬಳದ ಬಗ್ಗೆ ಮಾತ್ರ ಧ್ವನಿಯೆತ್ತಿಲ್ಲ. ಕಾನ್‌ಸ್ಟೆಬಲ್‌ಗಳಿಗೆ ತಿಂಗಳಿಗೆ ಕನಿಷ್ಠ ₹ 25 ಸಾವಿರ ಸಂಬಳ ಕೊಡಬೇಕು, ಕಡ್ಡಾಯವಾಗಿ ವಸತಿ ಕಲ್ಪಿಸಬೇಕು, ಎಸ್ಪಿ ಹಂತದವರೆಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕೆಂದು ಒತ್ತಾಯಿಸಿದ್ದೇನೆ. ಯೂನಿವರ್ಸಲ್ ಹೆಲ್ತ್ ಇನ್ಶೂರೆನ್ಸ್ ನೀಡಬೇಕು ಎಂದಿದ್ದೇನೆ. ಎಂಬಿಬಿಎಸ್ ಪದವಿ ಪೂರೈಸಿದವರಿಗೆ ಸರ್ಕಾರ ಕೊಡುವ ಕಳಪೆ ಸ್ಟೈಫಂಡ್‌  ಬಗ್ಗೆಯೂ ಬರೆದಿದ್ದೇನೆ. ಈ ನಡುವೆ ಮತ್ತೊಬ್ಬ ವ್ಯಕ್ತಿ, ‘ನಿಮ್ಮ ಮಗಳನ್ನು ಏಕೆ ಸರ್ಕಾರಿ ಶಾಲೆಗೆ ಕಳುಹಿಸಬಾರದು’ ಎಂದು ಪ್ರಶ್ನಿಸಿದ್ದಾರೆ.

ನನಗೆ ದೇವರು ಅಂಥ ಸ್ಥಾನ ಕೊಟ್ಟಾಗ ಖಂಡಿತ ಸರ್ಕಾರಿ ಶಾಲೆಗೆ ಜನ ಮಕ್ಕಳನ್ನು ಕಳುಹಿಸುವಂಥ ವಾತಾವರಣವನ್ನು ಸೃಷ್ಟಿಸುತ್ತೇನೆ. ಆದರೆ ಇವತ್ತು ಪರಿಸ್ಥಿತಿ ಹೇಗಿದೆಯೆಂದರೆ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ತುಡಿತ ಒಬ್ಬ ಹಳ್ಳಿಯವನಲ್ಲೂ ಇದೆ, ಆತನ ದೃಷ್ಟಿ ಯಾವ ಕಾರಣಕ್ಕೂ ಸರ್ಕಾರಿ ಶಾಲೆಯತ್ತ ಹೊರಳುವುದಿಲ್ಲ. ಸಂಸದನಿಗಿಂತ ಮೊದಲು ನಾನೊಬ್ಬ ತಂದೆ ಹಾಗೂ ನಾನೂ ಒಬ್ಬ ಸಾಮಾನ್ಯನಂತೇ ಯೋಚಿಸುತ್ತೇನೆ. ಮೂರೂವರೆ ಸಾವಿರ ರೂಪಾಯಿಗೆ 4 ವರ್ಷ ಕೆಲಸ ಮಾಡಿದ ಅನುಭವ ನನಗಿದೆ.

ಈ ದೇಶದಲ್ಲಿ ಭಯೋತ್ಪಾದಕರಿಂದ ಅಪಾಯಕ್ಕೊಳಗಾದ ಏಕಮಾತ್ರ ಪತ್ರಕರ್ತ ನಾನು. ದಯವಿಟ್ಟು ಪ್ರಾಮಾಣಿಕತೆ, ನಿಷ್ಠೆ, ದೇಶಪ್ರೇಮದ ಬೋಧನೆಯನ್ನು ನನಗೆ ಕೊಡಬೇಡಿ. ಇಷ್ಟಕ್ಕೂ ಭ್ರಷ್ಟರು ಸಂಬಳ ಹೆಚ್ಚಿಸಿ ಎಂದು ಕೇಳುವುದಿಲ್ಲ ಸ್ವಾಮಿ. ಬೂತ್‌ಗೆ ಬಂದು ವೋಟು ಹಾಕುವುದಕ್ಕೂ ಸೋಮಾರಿತನ ತೋರಿ, ಆನ್‌ಲೈನ್ ವೋಟಿಂಗ್ ಬೇಕೆಂದು ಪ್ರತಿಪಾದಿಸುತ್ತಾ ಜನಪ್ರತಿನಿಧಿಗಳಿಗೆ ಬೋಧನೆ ಕೊಡುವ ಫೇಸ್‌ಬುಕ್ ಪಂಡಿತರಿಗೆ ಇದೆಲ್ಲಿ ಅರ್ಥವಾದೀತು?

ಲೇಖಕ ಬಿಜೆಪಿ ಸಂಸತ್‌ ಸದಸ್ಯ, ಮೈಸೂರು– ಕೊಡಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.