ADVERTISEMENT

ಮಾಹಿತಿ ಇದೆ; ಪಕ್ಕಾ ಲೆಕ್ಕಾಚಾರವೆಲ್ಲಿ?

ಆನಂದತೀರ್ಥ ಪ್ಯಾಟಿ
Published 7 ಏಪ್ರಿಲ್ 2017, 19:30 IST
Last Updated 7 ಏಪ್ರಿಲ್ 2017, 19:30 IST

‘ಈ ವರ್ಷ ಮಳೆ ಪ್ರಮಾಣ ಕಡಿಮೆಯಂತೆ. ಹೀಗಾಗಿ ನನಗೆ ಖುಷಿಯಾಗಿದೆ’ ಎಂಬ ಸ್ನೇಹಿತನೊಬ್ಬನ ಫೇಸ್‌ಬುಕ್ ಸ್ಟೇಟಸ್ ನೋಡಿ ಕೋಪ ಬಂದಿತು. ಆದರೆ ಅದರ ಕೆಳಗೇ ‘ಮಳೆ ಪ್ರಮಾಣ ಕಡಿಮೆಯಾಗಲಿದೆ ಅಂತ ಹೇಳಿದ್ದು ಹವಾಮಾನ ಇಲಾಖೆ. ಹೀಗಾಗಿ ಅದು ನಿಜವಾಗುವುದಿಲ್ಲ ಎಂಬುದು ಗ್ಯಾರಂಟಿ. ಅದಕ್ಕೇ ಖುಷಿಯಾಗಿದೆ’ ಎಂಬ ಕೊಸರು ಸೇರಿಸಿದ್ದ!

ಹವಾಮಾನ ಇಲಾಖೆ ಮುನ್ಸೂಚನೆಗೂ, ಮಳೆ ಸುರಿಯುವುದಕ್ಕೂ ಏನೇನೂ ಸಂಬಂಧವಿಲ್ಲ ಎಂದರೆ ಬಹುತೇಕ ಜನ ಖಂಡಿತವಾಗಿ ಒಪ್ಪುತ್ತಾರೆ. ಕಳೆದ ವರ್ಷ ಇಲಾಖೆ ಅಂದಾಜಿಸಿದ್ದ ‘ಶೇ 120ರಷ್ಟು ಹೆಚ್ಚು ಮಳೆ’ ಲೆಕ್ಕಾಚಾರ ಕೈಕೊಟ್ಟಿರುವುದಂತೂ ಹೌದು. ಈ ಸಲ ಏನಿದೆಯೋ? ಸ್ನೇಹಿತನ ಊಹೆಯ ಪ್ರಕಾರ ನಡೆದರೆ ಅದು ಎಲ್ಲರಿಗೂ ಖುಷಿ ಕೊಡುವಂಥದ್ದೇ ಆಗುತ್ತದೆ.

ಜನವರಿ ಅಥವಾ ಫೆಬ್ರುವರಿಯಲ್ಲಿ ಹವಾಮಾನ ಇಲಾಖೆ ಕೊಡುವ ಮುಂಗಾರಿನ ಮುನ್ಸೂಚನೆ ಮೇಲೆ ವರ್ಷದ ಕೃಷಿ ಭವಿಷ್ಯ ರೂಪು ತಳೆಯುತ್ತದೆ. ಮಳೆ ಕೊರತೆಯಾದರೆ ಏನು ಮಾಡಬೇಕು ಎಂಬ ದಾರಿ ಕಂಡುಕೊಳ್ಳಲು ಈ ಅಂಶ ನೆರವಾಗುತ್ತದೆ. ಆದರೆ ಹವಾಮಾನ ಇಲಾಖೆಯ ಮುನ್ಸೂಚನೆಗಳು ಕಾಟಾಚಾರಕ್ಕೆ ಕೊಡುವ ಅಂಶಗಳೆಂದು ಪರಿಗಣಿತವಾಗುತ್ತಿವೆಯೇ ಹೊರತು ಗಂಭೀರವಾಗಿ ಯಾರೂ ತೆಗೆದುಕೊಳ್ಳುತ್ತಲೇ ಇಲ್ಲ. ಇದಕ್ಕೆ ತಕ್ಕಂತೆ, ಆ ‘ಭವಿಷ್ಯವಾಣಿ’ಯ ಸ್ವರೂಪವೂ ವಿಚಿತ್ರವಾಗಿ ಇರುತ್ತದೆ!

ಮುಂಗಾರು ಮಳೆ ಎಂದರೆ ಒಂದರ್ಥದಲ್ಲಿ ಜೂಜು ಇದ್ದಂತೆ. ಎರಡೇ ಆಯ್ಕೆ; ಬಂದೀತು ಅಥವಾ ಇಲ್ಲ. ಇದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಬದಲಾಗಿ ಸಂಭವನೀಯತೆ ಹೇಳಬಹುದಷ್ಟೇ. ಆದರೆ ಈಗ ಸಿಗುತ್ತಿರುವ ಮುನ್ಸೂಚನೆಗಳನ್ನು ಪರಿಶೀಲಿಸಿದರೆ, ಆ ಸಂಭವನೀಯತೆಯನ್ನೂ ನಂಬುವಂತಿಲ್ಲ ಎಂಬಂತಾಗಿದೆ.

ಹವಾಮಾನ ಇಲಾಖೆ ಬಳಿ ದತ್ತಾಂಶಗಳ ಹೇರಳ ಸಂಗ್ರಹ ಇದೆ. ಅದನ್ನು ವಿಶ್ಲೇಷಿಸಿ, ಒಂದು ಅಂದಾಜನ್ನು ಮಾತ್ರ ಕೊಡಲು ಇಲಾಖೆಗೆ ಸಾಧ್ಯವಿದೆ. ಆದರೆ ಅದು ಸಿಗುವ ಸ್ವರೂಪವನ್ನು ಗಮನಿಸಿದರೆ, ಇದೆಂಥ ಲೆಕ್ಕಾಚಾರ ಎಂದು ಗಾಬರಿಯಾಗುತ್ತದೆ. ಕಳೆದ ವರ್ಷ ಕೊಪ್ಪಳದ ನೈಋತ್ಯ ಭಾಗದ ಕೆಲವು ಹಳ್ಳಿಗಳಲ್ಲಿ ಮಾತ್ರ ಭಾರಿ ಮಳೆ ಸುರಿದಾಗ, ಅದನ್ನು ಸರಾಸರಿ ಆಧಾರದ ಮೇಲೆ ಲೆಕ್ಕಾಚಾರ ಮಾಡಿ, ‘ಕೊಪ್ಪಳ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ’ ಎಂಬ ವರದಿ ಕೊಡಲಾಗಿತ್ತು! ಅದೂ ನೂರಾರು ಹಳ್ಳಿಗಳಿಗೆ ಹನಿ ಮಳೆಯೂ ಸುರಿಯದಿದ್ದಾಗ...!

ಇದು ಹವಾಮಾನ ಇಲಾಖೆಯ ವೈಫಲ್ಯವೇನಲ್ಲ. ಅದನ್ನು ನಿರ್ವಹಿಸುವ ವಿಧಾನದ ಸೋಲು ಅಷ್ಟೇ. ‘ಉತ್ತರ ಒಳನಾಡಿನಲ್ಲಿ ಮಳೆ’ ಎಂದು ಮುನ್ಸೂಚನೆ ಕೊಟ್ಟರೆ ಅದು ಎಲ್ಲಿಂದ ಎಲ್ಲಿಯವರೆಗೆ ಎಂದು ಅರ್ಥ ಮಾಡಿಕೊಳ್ಳಬೇಕು? ನಿರ್ದಿಷ್ಟ ಪ್ರದೇಶದ ಹವಾಮಾನ ಮುನ್ಸೂಚನೆ ಕೊಡಲು ಇರುವ ಸಮಸ್ಯೆಯಾದರೂ ಏನು?

ಥಾಯ್ಲೆಂಡಿನ ಚೆಚಾಂಗ್ಸಾಒ ಪ್ರಾಂತ್ಯಕ್ಕೆ ಭೇಟಿ ನೀಡಿದಾಗ, ಅಲ್ಲಿನ ಒಂದಷ್ಟು ಹಳ್ಳಿಗಳಿಗೆ ಗ್ರಾಮಮಟ್ಟದಲ್ಲಿ ಹವಾಮಾನ ಸೂಚನೆ ಕೊಡುವ ವ್ಯವಸ್ಥೆ ನೋಡಿ ಅಚ್ಚರಿಯ ಜತೆಗೆ ಖುಷಿಯೂ ಆಗಿತ್ತು. ಆಧುನಿಕ ತಂತ್ರಜ್ಞಾನದ ಜತೆ ಸರಳ ಸಾಧನಗಳನ್ನು ಬಳಸಿ, ಜನರಿಂದಲೇ ಮಾಹಿತಿ ಸಂಗ್ರಹಿಸಿ ಹಳ್ಳಿ ಮಟ್ಟದಲ್ಲಿ ಎಸ್ಎಂಎಸ್ ಹಾಗೂ ಎಫ್ಎಂ ರೇಡಿಯೊದಲ್ಲಿ ಸಂದೇಶ ಕೊಡುವ ವ್ಯವಸ್ಥೆ ಯಶಸ್ವಿಯಾಗಿದೆ.

ಅದರ ಆಧಾರದ ಮೇಲೆಯೇ ಅಲ್ಲಿ ಬೇಸಾಯ ಹಾಗೂ ಅದರ ಸಂಬಂಧಿ ಚಟುವಟಿಕೆ ನಡೆಯುತ್ತವೆ. ಸಾಂಪ್ರದಾಯಿಕ ಜ್ಞಾನದ ಭಂಡಾರವೇ ನಮ್ಮಲ್ಲಿರುವಾಗ, ಇದಕ್ಕೊಂದಷ್ಟು ಆಧುನಿಕ ತಂತ್ರಜ್ಞಾನದ ಸ್ಪರ್ಶ ಕೊಟ್ಟರೆ ಅತ್ಯುತ್ತಮ ಫಲಿತಾಂಶ ಸಿಕ್ಕೀತು.

ಆದರೆ ಸಾಂಪ್ರದಾಯಿಕ ಜ್ಞಾನವನ್ನು ಹೀಗಳೆಯುವ ಮನೋಭಾವ ಹೆಚ್ಚಾಗಿದ್ದರಿಂದಲೇ, ಒಂದು ಪೀಳಿಗೆ ಅದರಿಂದ ದೂರವುಳಿದಿದೆ. ಪ್ರಕೃತಿಯಲ್ಲಿನ ವಿದ್ಯಮಾನಗಳು, ಸೂಕ್ಷ್ಮ ಬದಲಾವಣೆಯನ್ನು ಅರಿಯುವ ಸಂವೇದನೆಯನ್ನು ನಾವು ಕಳೆದುಕೊಂಡಿದ್ದೇವೆ. ಮುಂಗಾರಿಗೂ ಮುನ್ನ ಸುರಿಯುವ ‘ಅಡ್ಡ ಮಳೆ’ಯಾಗಲೀ, ಕಾಡಿನಲ್ಲಿ ಬಿಡುವ ಹೂಗಳಾಗಲೀ ಅಥವಾ ಆಗಸದಲ್ಲಿ ಸಂಜೆ ಹೊತ್ತಿಗೆ ಕಾಣಿಸುವ ವಿವಿಧ ಬಣ್ಣ-ಆಕಾರದ ಮೋಡಗಳಾಗಲೀ ಯಾವ ಸಂದೇಶ ಕೊಡುತ್ತವೆ ಎಂಬ ಅಪೂರ್ವ ಜ್ಞಾನ ಕಣ್ಮರೆಯಾಗಿಬಿಟ್ಟಿದೆ.

ಇದನ್ನೇ ಆಧರಿಸಿ ಮಾಡುವ ಮಳೆ ಲೆಕ್ಕಾಚಾರ ಪರಿಪೂರ್ಣವೆಂದು ಪ್ರತಿಪಾದಿಸಬೇಕಿಲ್ಲ. ಹಾಗೆಂದು ನೂರಾರು ವರ್ಷಗಳಿಂದ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದ ಈ ಜ್ಞಾನ ಸಾಫಲ್ಯ ಕಾಣದೇ ಇದ್ದರೆ ಅದು ಉಳಿಯುತ್ತಿತ್ತೇ ಎಂಬುದನ್ನೂ ಗಮನಿಸಬೇಕು.

ಸಾಂಪ್ರದಾಯಿಕ ಜ್ಞಾನವೆಲ್ಲ ಮೌಢ್ಯ ಎಂದು ಹೇಳುವವರು ಇದ್ದಾರೆ. ಇರಲಿ. ಆಧುನಿಕ ತಂತ್ರಜ್ಞಾನ ಬಳಸಿ ಕೊಡುವ ಮುನ್ಸೂಚನೆಯೂ ಪರಿಪೂರ್ಣವೇನಲ್ಲವಲ್ಲ? ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ಬರುವ ನೂರಾರು ವ್ಯಂಗ್ಯಚಿತ್ರ ಹಾಗೂ ನಗೆಚಟಾಕಿಗಳೇ ಇದಕ್ಕೆ ಸಾಕ್ಷಿ! ಅತ್ತ ಹಳೆಯ ಜ್ಞಾನವನ್ನು ಮೂಲೆಗೆಸೆದಿದ್ದಾಯಿತು. ಇತ್ತ ಹೊಚ್ಚಹೊಸ ಆಧುನಿಕ ತಂತ್ರಜ್ಞಾನ ನೆರವಿಗೆ ಬಾರದಂತಾಯಿತು.

ಹವಾಮಾನ ಬದಲಾವಣೆ ಗುಮ್ಮ ದಿನನಿತ್ಯ ಕಾಣಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿ ಧಾರಾಕಾರ ಮಳೆ; ಮಳೆಗಾಲದಲ್ಲಿ ವರುಣ ನಾಪತ್ತೆ. ಬರಬೇಕಾದ ಸಮಯದಲ್ಲಿ ಬಾರದ ಮಳೆಯಿಂದ ಕಂಗಾಲಾದ ರೈತ ಸಮೂಹ ದಿಕ್ಕೆಟ್ಟಿದೆ. ಸುಮಾರು ಮುಕ್ಕಾಲು ಭಾಗ ಜನಸಂಖ್ಯೆ ಬೇಸಾಯವನ್ನೇ ಅವಲಂಬಿಸಿರುವ ಈ ದೇಶದಲ್ಲಿ ಸಾಂಪ್ರದಾಯಿಕ ಜ್ಞಾನವನ್ನಾಗಲೀ, ತಂತ್ರಜ್ಞಾನವನ್ನಾಗಲೀ ಕೃಷಿ ಅಭಿವೃದ್ಧಿಗೆ ಬಳಸಿಕೊಳ್ಳಲು ವಿಫಲವಾಗಿರುವುದು ದುರಂತ.

ಮಳೆ ಸುರಿದ ಬಳಿಕ ಆ ಪ್ರಮಾಣ ಎಷ್ಟು ಎಂಬುದನ್ನು ಹೇಳಲು ನೂರು ರೂಪಾಯಿಗಿಂತ ಕಡಿಮೆ ಮೊತ್ತದ ಸಲಕರಣೆಯನ್ನು ಖುದ್ದಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಅದನ್ನು ಹೇಳಲು ಲಕ್ಷಗಟ್ಟಲೆ ಹಣ ವ್ಯಯಿಸಬೇಕೇ?

ನಿಸರ್ಗದಲ್ಲಿನ ಬದಲಾವಣೆ ಅಥವಾ ಜೀವಿಗಳ ಚಟುವಟಿಕೆ ಗಮನಿಸಿ ಹವಾಮಾನದ ಬಗ್ಗೆ ಹೇಳಬಲ್ಲ ಅನುಭವಿಗಳು ಹಳ್ಳಿಗಳಲ್ಲಿ ಇನ್ನೂ ಉಳಿದುಕೊಂಡಿದ್ದಾರೆ. ಅವರ ಜ್ಞಾನವನ್ನು ದಾಖಲಿಸಿ, ಪರಿಶೀಲಿಸಿ ಆಧುನಿಕ ತಂತ್ರಜ್ಞಾನದ ನೆರವಿನಿಂದ ಮಳೆ ಲೆಕ್ಕಾಚಾರ ಕೊಡಬೇಕಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಹೋಬಳಿ ಅಥವಾ ಹಳ್ಳಿ ಮಟ್ಟದಲ್ಲಿ ಹವಾಮಾನ ಮಾಹಿತಿ ಒದಗಿಸಲು ಆದ್ಯತೆ ನೀಡಬೇಕು.

ಅಚ್ಚುಕಟ್ಟಾಗಿ ಆಯಾ ಸ್ಥಳದ ಹವಾಮಾನ ಮಾಹಿತಿ ಕೊಡಬಲ್ಲ ಹಲವು ಆ್ಯಪ್‌ಗಳು (ಸ್ಮಾರ್ಟ್ ಫೋನುಗಳಲ್ಲಿ) ಈಗ ಲಭ್ಯ ಇವೆ. ಸರ್ಕಾರಕ್ಕೆ ಹೋಲಿಸಿದರೆ ಈ ಸಂಸ್ಥೆಗಳ ಸಾಮರ್ಥ್ಯ ಎಷ್ಟೋ ಪಟ್ಟು ಕಡಿಮೆ. ಆದರೂ ಅವುಗಳೇ ಹೆಚ್ಚು ನಂಬಿಕೆಗೆ ಅರ್ಹ ಎನಿಸುತ್ತಿವೆ. ತಂತ್ರಜ್ಞಾನ ಹಾಗೂ ಸಂಪನ್ಮೂಲ ಕೊರತೆ ಎದುರಿಸದ ಹವಾಮಾನ ಇಲಾಖೆ ಯಾಕೆ ಇದನ್ನೊಂದು ಸವಾಲಾಗಿ ಸ್ವೀಕರಿಸಬಾರದು?

ದೆಹಲಿಯಲ್ಲಿನ ಗಾಳಿಯಂತ್ರ (ವಿಂಡ್ ಮಿಲ್) ತಯಾರಿಕೆ ಉದ್ದಿಮೆಯೊಂದು ಬೃಹತ್ ಬಿಡಿಭಾಗಗಳನ್ನು ದೊಡ್ಡ ಲಾರಿಗಳಲ್ಲಿ ಕಳಿಸುತ್ತದೆ. ಎಲ್ಲಿಯಾದರೂ ಮಳೆಗೆ ರಸ್ತೆ ಹಾಳು, ಬೆಟ್ಟ ಕುಸಿತ ಎದುರಾದರೆ ಮುಂದೆ ಸಾಗಲು ಆಗದೇ ಲಾರಿ ನಿಂತು ಬಿಡುತ್ತದೆ. ಆರೆಂಟು ತಾಸುಗಳ ಬಳಿಕ ಇನ್ನೊಂದು ಲಾರಿ ಅಲ್ಲಿಗೆ ಬಂದು, ಆಮೇಲೆ ಮತ್ತೊಂದು ಬಂದು... ಹೀಗೆ ಎಲ್ಲವೂ ಸಾಲುಗಟ್ಟಿ ನಿಂತುಬಿಡುತ್ತವೆ.

ಇದರಿಂದ ಲಕ್ಷಾಂತರ ನಷ್ಟವಾಗುತ್ತದೆ. ಇದಕ್ಕೆ ಪರಿಹಾರವಾಗಿ, ಬೆಂಗಳೂರಿನ ಐಟಿ ಕಂಪೆನಿಯೊಂದು ಪ್ರತಿ ಲಾರಿಗೂ ಜಿಪಿಎಸ್ ಜತೆ ಹವಾಮಾನ ಮಾಹಿತಿ ಸಂಗ್ರಹ- ರವಾನೆ ಸಾಧನವನ್ನು ಜೋಡಿಸಿತು. ಅದರಿಂದಾಗಿ ಕೇಂದ್ರ ಕಚೇರಿಯಲ್ಲೇ ಕುಳಿತುಕೊಳ್ಳುವ ತಜ್ಞರು, ಗಾಳಿ ಮಳೆ ಆರ್ಭಟ ನೋಡಿಕೊಂಡು ಪರ್ಯಾಯ ಮಾರ್ಗದಲ್ಲಿ ಸಾಗಲು ಲಾರಿಗಳಿಗೆ ಸೂಚನೆ ಕೊಡುತ್ತಾರೆ. ಇದರಿಂದ ಕಂಪೆನಿಗೆ ನಷ್ಟವೂ ತಪ್ಪಿದೆ.

‘ಚಿಕ್ಕದು ಸುಂದರ’ ಎಂಬ ಮಾತಿಗೂ ನಮ್ಮ ಆಡಳಿತ ವ್ಯವಸ್ಥೆಗೂ ಯಾವತ್ತೂ ಹೊಂದಿಕೆಯಾಗದು. ಅದೇ ಹಿನ್ನೆಲೆಯಿಂದಾಗಿ ಇಡೀ ರಾಜ್ಯ ಅಥವಾ ಆರೆಂಟು ಜಿಲ್ಲೆಗಳಿಗೆ ಒಂದೇ ಮುನ್ಸೂಚನೆ ಕೊಡುವ ಚಾಳಿ ನಡೆದುಕೊಂಡು ಬಂದಿದೆ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ; ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಪ್ರತಿಭಾವಂತ ವಿಜ್ಞಾನಿಗಳು, ಎಲ್ಲೂ ಸಿಗದಷ್ಟು ತಂತ್ರಜ್ಞಾನಗಳು ಕೈಯಲ್ಲಿದ್ದರೂ ಜನರಿಂದ ತಮಾಷೆಗೆ ಗುರಿಯಾಗುವ ದೌರ್ಭಾಗ್ಯ ಹವಾಮಾನ ಇಲಾಖೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT