ADVERTISEMENT

ಮೀಸಲು ಅರಣ್ಯ ಹಾಗೂ ಪ್ರಭುತ್ವ

ಡಾ.ರಾಜೇಗೌಡ ಹೊಸಹಳ್ಳಿ
Published 28 ಡಿಸೆಂಬರ್ 2016, 19:30 IST
Last Updated 28 ಡಿಸೆಂಬರ್ 2016, 19:30 IST

ಅದು ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ ಕಾಲ. ಮತದಾರರ ಮುಂದಾಳೊಬ್ಬರು ಊರಿಗೊಂದು ಟಾರ್ ರಸ್ತೆ ಬೇಕೆಂದು ಕೋರಿಕೆ ಇಟ್ಟರು. ಇದರ ಹಿಂದಿನ ಮರ್ಮ ಅರಿತ ಬಂಗಾರಪ್ಪ, ‘ನಿನಗೆ ಕಾರು ಇದೆಯೆ? ಚಕ್ಕಡಿ ಗಾಡಿಗೇಕೆ ಟಾರ್ ರಸ್ತೆ? ಆ ಕಾರಿರುವ ಒಡೇರು ಕಳುಹಿಸಿದರೆ?’ ಎಂದು ಕೇಳಿದರು. ರಾಜಕೀಯ, ಇಂದು ಆ ಸೂಕ್ಷ್ಮವನ್ನು ಮರೆತಿದೆ.

ವಾರಾಹಿ ಅಣೆ ಪ್ರಾರಂಭ ದೇವರಾಜ ಅರಸು ಕಾಲದ್ದು. ಅಲ್ಲಿನ ಭಾರಿ ಕುಳವೂ ಆದ ಪ್ರಭಾವಿ ಜನಪ್ರತಿನಿಧಿಯೊಬ್ಬರ ಪ್ರಭಾವದಿಂದ ಜಗತ್ತಿನ ಮಹಾ ಕತ್ತಲು ಅರಣ್ಯ ಸಂಕುಲ ಮುಳುಗಿತು. ಅವರ ಭಾರಿ ಮನೆ ಹಾಗೂ ಜಮೀನಿಗೆ ಅಪಾರ ಹಣ ದೊರಕಿತು. ಅವರು ನಗರ ಸೇರಿದರು. ಕೇವಲ ರೇಡಿಯೊ ಆಲಿಕೆಯಲ್ಲಿ ನೆಮ್ಮದಿಯಾಗಿದ್ದ ರೈತರು ಬೆಂಗಾಡಿಗೆ ಬಂದು ಬಿದ್ದರು.

ಹಾಗಾದರೆ ಅಭಿವೃದ್ಧಿ ಎಂದರೇನು? ರಸ್ತೆಯೇ? ವಿದ್ಯುತ್ತೇ? ವಾಹನಗಳೇ? ‘ಹೌದು’ ಎಂದಾದರೆ, ಕೆಲವರು ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ತಡೆಗೆ, ಪಶ್ಚಿಮಘಟ್ಟದ ಒಡಲಿನ ಬಾಳೂರು ಮೀಸಲು ಅರಣ್ಯದೊಳಗೆ ಭೈರಾಪುರ- ಶಿಶಿಲ ರಸ್ತೆ ನಿರ್ಮಾಣ ತಡೆಗೆ ಸಮರ ಸಾರಿದ್ದಾರಲ್ಲ! ಹಾಗಾದರೆ ಇದೇನು? ‘ನಾಗರಿಕತೆಯ ಶಾಖ ತಗುಲಿದವನು ಕನಸು ಬಿದ್ದ ಮನುಷ್ಯನ ಹಾಗೆ. ಒಳ್ಳೆಯದಕ್ಕೆ ಇರುವೆ ವೇಗ, ಪಾಪಕ್ಕೆ ರೆಕ್ಕೆಗಳಿವೆ’ ಹೀಗೆಲ್ಲಾ ಗಾಂಧಿ ಚಿಂತನೆಗಳು ಏನು ಹೇಳುತ್ತವೆ?

ಆಗಿದ್ದು ಆಗಿಹೋಗಿದೆ. ಆಕಾಶ ಹರಿದ ಕೊಡೆಯಾಗಿದೆ. ಶೀತಸಾಗರಗಳು ಕುಸಿದು ಬೀಳುತ್ತಿವೆ. ಸಮುದ್ರಗಳು ಏಳೆಡೆ ನಾಲಿಗೆ ಚಾಚುತ್ತಿವೆ. ಆದಾಗ್ಯೂ ಈ ಮುನಿದಿರುವ ಮಹಾಮುನಿಯಮ್ಮ ಭೂಮಾತೆ, ತನ್ನೆದುರು ನಿಂತು ಬೇಡುವ ಜೀವಿಗಳನ್ನು ಕ್ಷಮಿಸಬಲ್ಲಳು. ಅದು ತಾಯ್ಗುಣ. ಆಕೆ ಆದ ಗಾಯವನ್ನು ನೆಕ್ಕುತ್ತಾ ಮಾಯಿಸಿಕೊಳ್ಳುವ ಮಾರ್ಜಾಲ ಮಾತೆ. ಇದೆಲ್ಲದರ ಅರಿವೇ ಪರಿಸರ ರಕ್ಷಣೆ.

ಪಶ್ಚಿಮಘಟ್ಟ ಎಂಬುದು ಸುಮ್ಮನೆ ತಪಸ್ಸಿಗೆ ಕುಳಿತಿರುವ ಮೌನಮುನಿಯಲ್ಲ. ಇತ್ತ ಕೇರಳ ತುದಿ, ಅತ್ತ ಗಾಂಧಿ ನಾಡಿನ ತುದಿವರೆಗೆ 1500 ಕಿ.ಮೀ. ಉಳ್ಳ ಆದಿಶೇಷ ಶಯನ.

ಈ ಸಹ್ಯಾದ್ರಿಯ ಶೇ 60 ಭಾಗ ಒಡೆತನ ಹಾಗೂ ಜವಾಬ್ದಾರಿ ನಮ್ಮ ರಾಜ್ಯದ್ದು. ಅದರ ಗಿರಿಕಂದರ ಮಲೆನಾಡು ಸಹಿತ ನೂರಾರು ಕಿ.ಮೀ ಅಗಲದಲ್ಲಿ ಪವಡಿಸಿದ ಹಾಸಿಗೆಯೊಳಗೆ ಜಗತ್ತಿನ ಜೀವವೈವಿಧ್ಯಗಳೆಲ್ಲ ಅಡಗಿವೆ. ಅಲ್ಲಿ ಸುರಿವ ಮಹಾಮಳೆಗೆ ಗಂಗಮ್ಮನ ಮಕ್ಕಳು ಮರಿಗಳೆಲ್ಲ ಚಿಲ್ಲೊಡೆದು ನಾಡೊಳಗೆ ನೀರಾಗಿ ಚಲಿಸುವ ದಾರಿಗೆ ಮತ್ತು  ಭೂಮಂಡಲಕ್ಕೂ ನಭೋಮಂಡಲಕ್ಕೂ ಸರಪಳಿ ತೂಗುಯ್ಯಾಲೆಯ ನಂಟುಂಟು.

ಅಲ್ಲಿನ ಜೀವಜಾಲಗಳಿಗೆ ರಸ್ತೆ ಬೇಕೇ? ಅಡವಿ ಬಂಧುಗಳಿಗೆ ರಸ್ತೆ ಬೇಕೇ? ಇಲ್ಲ. ನಾಗರಿಕತೆಯ ಶಾಖ ತಾಗಿಸಲು ಕಂಪೆನಿ ಮಾಲೀಕರು, ಫೈಲು ಹಿಡಿದ ಬಲಿಷ್ಠರು ಅಲ್ಲಿ ತೂಗುಸೇತುವೆ, ಫ್ಲೈಓವರ್ ಮಾಡುತ್ತಾರೆ. ಶೋಲಾ ಅರಣ್ಯದಲ್ಲಿ ಉದ್ಯಾನ ಮಾಡಿ ಜಾರುಗುಪ್ಪೆಯಲಿ ಜಾರಿಸುತ್ತಾರೆ. ದತ್ತಾತ್ರೇಯ ಬಾಬಾ ಬುಡನ್ ಗಿರಿ ಮೇಲೆ ಟ್ರಾಮ್‌ವೇ ಮೂಲಕ ಪ್ರಭುತ್ವವನ್ನು ತೂಗಿ ಆಡಿಸುತ್ತಾರೆ. ಸಂಸದರು, ಶಾಸಕರು, ಭಾವಿ ಶಾಸಕರು, ಯಾತ್ರಾ ಸ್ಥಳಗಳ ಮಾಲೀಕರು ಎಲ್ಲರೂ ಹೀಗೆ ‘ಅಭಿವೃದ್ಧಿಪಡಿಸುತ್ತೇವೆ’ ಎಂದು ಹೊರಟಿದ್ದಾರೆ.

ಭೈರಾಪುರ- ಶಿಶಿಲ ರಸ್ತೆಗೆ ಆಗಲೇ ₹ 56 ಕೋಟಿ ಅನುದಾನ ನಿಗದಿಯಾಗಿದೆ. ₹ 15 ಲಕ್ಷ ಈಗಾಗಲೆ ಸರ್ವೆಗೆ ಖರ್ಚಾಗಿದೆ. ಇದಕ್ಕೆ ತಕ್ಕಂತೆ ಅರಣ್ಯ ಇಲಾಖೆ ಕೋಣನ ಮುಂದೆ ಕಿನ್ನರಿ ಬಾರಿಸುತ್ತಿದೆ. ಪರಿಸರ ಸಂರಕ್ಷಣಾ ಪೀಠ ತುತ್ತೂರಿ ಊದುತ್ತಿದೆ. ರಾಜಕಾರಣಿಗಳು, ಪುಡಿಲಾಭಕೋರರು ಗಂಟೆ ಬಾರಿಸುತ್ತಿದ್ದಾರೆ. ಪೂಜೆ ಭರದಿಂದ ಸಾಗುತ್ತಿದೆ.

ಈಗಾಗಲೇ ಶಿರಾಡಿಯಿಂದ ಶೃಂಗೇರಿವರೆಗೆ ಘಟ್ಟದ ಮೇಲಿನ ಮತ್ತು ಘಟ್ಟದ ಕೆಳಗಿನ ದೇವರ ದರ್ಶನಕ್ಕೆ ಬರುವವರಿಗೆ ಹಾಗೂ ವ್ಯಾಪಾರಸ್ಥರ ಸರಕು ಸಾಗಾಣಿಕೆಗೆ 5 ರಸ್ತೆಗಳು ಇವೆ. ಘಟ್ಟದ ಕಳ್ಳುಪಚ್ಚಿಗಳನ್ನೆಲ್ಲ ಬಗೆದು, ಹರವಿ ರಸ್ತೆ ಬದಿಯಲ್ಲಿ ಬಿಸಾಕಿವೆ. ಈಗ ಮಾಡ ಹೊರಟಿರುವ ರಸ್ತೆ ಇಂತಹ ಭವಿಷ್ಯದ ಮತ್ತೊಂದು ಮಹಾನ್ ದೈತ್ಯಕೃತ್ಯ. ‘ತುಂಗಾ ಉಳಿಸಿ, ಕುದುರೆಮುಖ ಉಳಿಸಿ, ಬಳ್ಳಾರಿ ಉಳಿಸಿ’ ಇತ್ಯಾದಿ ನಡೆಗಳನ್ನು ಪುನಃ ಕೆಣಕುತ್ತಿರುವ ಮಾದರಿಗಳಿವು. ಇದಕ್ಕೆ ಈಗ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂಬ ಕಪ್ಪತಗುಡ್ಡ ಗಣಿ ಕುಣಿಕೆ, ಶಿಂಷಾ ಬಳಿಯ ಗಜಪಥ ಕತ್ತರಿಸುವಿಕೆ ಇವೆಲ್ಲ ಸೇರುತ್ತವೆ.

ಪ್ರಭುತ್ವಕ್ಕೆ ಸಾಮಾಜಿಕ ಎಚ್ಚರವಿರಬೇಕು ಇಲ್ಲವೇ ನಾಚಿಕೆ ಇರಬೇಕು. ಇವೆಲ್ಲವನ್ನೂ ನಿರಾಕರಿಸಿ ಬೆತ್ತಲೆ ಹೊರಟರೆ ಮರ್ಯಾದಸ್ಥರು ನೋಡುವುದು ಹೇಗೆ?  ಇರುವುದೊಂದೇ ಮಾರ್ಗ; ಅದು ಹರತಾಳ. ‘ಸತ್ಯಾಗ್ರಹ ನಿಯಮದಲ್ಲಿ ಸೋಲೆಂಬುದೇ ಇಲ್ಲ. ಈ ಸಂದೇಶ ಹರಡಲು ಸೆರೆಮನೆಯೇ ಒಂದು ಸಾಧನ’ ಎಂಬ ನುಡಿ, ‘ಮಾಡು ಇಲ್ಲವೆ ಮಡಿ’ ಎಂಬ ಗಾಂಧಿ ನಡಿಗೆ ವಿದೇಶಿಯರನ್ನೆಲ್ಲ ಓಡಿಸಿತ್ತು. ಆದರೆ ಇಂದು ದೇಶಿಯರನ್ನು ಇಂತಹ ಕಾರ್ಯಗಳಿಂದ ಓಡಿಸಬೇಕಾಗಿದೆ ಎಂಬುದು ದುರ್ದೈವ.

ಪ್ರಾಣಿಗಳ ಜಾಡು ಮನುಷ್ಯನಿಗೆ ಕಾಲ್ದಾರಿ. ಆ ಜಾಡು ಪಶುಪಾಲನೆಯ ಗ್ರಾಮ-ಗ್ರಾಮಗಳ ಕೂಡು ದಾರಿ. ಅವೆಲ್ಲವೂ ಕೂಡಿಕೊಳ್ಳುತ್ತ ಹೋದದ್ದೆ ಗಾಡಿಜಾಡು. ಅದು ಜಲ್ಲಿ ರಸ್ತೆಯಾಗಿ ಟಾರು ರಸ್ತೆಯಾಗಿ ಹೋದಂತೆಲ್ಲಾ ಮನುಷ್ಯನ ಹಮ್ಮು ಮುಗಿಲಿಗೇರಿತು. ಮುಗಿಲು ಮುನಿಯಿತು. ನೆಲ ಬಾಯಾರಿತು.

ನೆಲದ ಮೇಲಿನ ಜೀವಜಾಲಗಳು ಇಂದು ನೀರಿಲ್ಲದೆ ಬಾಯಾರಿವೆ. ರಸ್ತೆ ಎಂಬ ಕಲ್ಪನೆಯೇ ಆರಾಮ ವ್ಯವಸ್ಥೆಯದು. ಅಂದು ಮಣ್ಣು ರಸ್ತೆಯ ಮೇಲೆ ಎತ್ತಿನ ಗಾಡಿ ಪಯಣ ಮೈನೋಯಿಸುತ್ತಿರಲಿಲ್ಲ. ಅಡವಿ ನಡುವೆ ಹುಲ್ಲುಮನೆ ಧಗೆ ಹೆಚ್ಚಿಸುತ್ತಿರಲಿಲ್ಲ. ಕುರುಕ್ಷೇತ್ರ-ಸೀತಾ ಪರಿತ್ಯಾಗ ಅದರೊಳಗಾಗಲಿಲ್ಲ. ಈ ಅರಿವಿನ ಹಂದರದೊಳಗೆ ಬದುಕು ಇದೆ. ಇಂದು ಕುಲುಕುವ ರಸ್ತೆಯಲ್ಲಿ, ಸಾಧಾರಣ ಕಾರಲ್ಲಿ ಹೊರಟರೆ ಕಾರೊಳಗೆ ಮೈನೋಯುತ್ತದೆ.

ಎಲ್ಲರನ್ನೂ ಈಗೊಂದು ನಿರಾಶೆ ಕಾಡುತ್ತಿದೆ. ಅದೇನೆಂದರೆ ‘ಎಲ್ಲರಿಗೂ ಆದದ್ದು ನಮಗೂ ಆಗುತ್ತದೆ. ತಡೆಯಲು ಆಗುತ್ತದೆಯೇ’ ಎಂದು. ಹಾಗೆಂದು ಕುಳಿತಿದ್ದರೆ, ಅಂದು ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ. ಕಳಿಂಗ ಸಮರದ ನಂತರದ ಅಶೋಕನ ಅಹಿಂಸಾ ಶಾಸನಗಳೂ ಇರುತ್ತಿರಲಿಲ್ಲ. ಎಲ್ಲದಕ್ಕೂ ಅಂತ್ಯವಿದೆ. ಪ್ರಾರಂಭವೂ ಇದೆ. ಜಗವು ನಾಗರಿಕತೆಯ ಅಂತ್ಯಕ್ಕೆ ಸಮೀಪಿಸುತ್ತದೆ. ಆರಂಭವೂ ಪ್ರಾರಂಭವಾಗುತ್ತದೆ. ಅದೇ ಈಗಿನ ಪ್ಯಾರಿಸ್ 196 ದೇಶಗಳ ಒಪ್ಪಂದ.

ಬದುಕುವುದೆಂದರೆ ಪರಿಸರದೊಂದಿಗೆ ಮನುಷ್ಯನೂ ಬೆಸೆದುಕೊಳ್ಳುವ ವಿಧಾನ. ಅದೇ ಕೂಡು ಬದುಕು. ಈ ನಡುವೆ ತುರ್ತಾಗಿ ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ತಾಣವಾಗಿ ಉಳಿಸಿ ಬೆಳೆಸಿಕೊಂಡರೆ ಈ ನಾಡಿನ ಬದುಕಿಗೊಂದು ಗೌರವ. ಇಲ್ಲದಿದ್ದರೆ ಅದೊಂದು, ಹುರುಳಿ ಹೊಲ ಮೇಯಲು ಬಂದ ಇಂದ್ರನ ಬಿಳಿ ಆನೆಯ ಬಾಲ ಹಿಡಿದು, ಸ್ವರ್ಗಕ್ಕೆ ಹೋಗುತ್ತೇನೆಂದು ಹೊರಟ ಹೆಡ್ಡನ ಕುರಿತು ಅಜ್ಜಿ ಹೇಳುವ ಕತೆಯಂತಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.