ADVERTISEMENT

ವೃತ್ತಿಯಾಗಿಸದೆ, ಬೇರೊಂದು ವೃತ್ತಿ ದೊರಕಿಸಿಕೊಡಿ

ಡಾ.ಕಿರಣ್ ಎಂ ಗಾಜನೂರು ಶಿವಮೊಗ್ಗ
Published 25 ಸೆಪ್ಟೆಂಬರ್ 2014, 19:30 IST
Last Updated 25 ಸೆಪ್ಟೆಂಬರ್ 2014, 19:30 IST

ಗುರುವಾರದ (ಸೆ.25) ‘ಪ್ರಜಾವಾಣಿ’ ಸಂಚಿಕೆಯು ಸಮಕಾಲೀನವಾಗಿ ವಿರೋಧಾಭಾಸ ಅನ್ನಿಸಿದರೂ, ನಮ್ಮ ನಡುವಿನ ವಾಸ್ತವಗಳೇ ಆಗಿರುವ ಎರಡು ವಿಷಯ­ಗಳನ್ನು ಒಟ್ಟೊಟ್ಟಿಗೆ ಪ್ರಕಟಿಸಿದೆ. ಒಂದು: ಮಂಗಳಯಾನ ಯಶಸ್ವಿ­ಯಾದ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹಿಳಾ  ವಿಜ್ಞಾನಿಗಳು   ಸಂತೋಷ ಹಂಚಿಕೊಳ್ಳುತ್ತಿರುವ ಚಿತ್ರ ಮತ್ತು ವರದಿ.

ಇನ್ನೊಂದು: ವೇಶ್ಯಾವೃತ್ತಿಯನ್ನು ಕಾನೂನುಬದ್ಧ­ಗೊಳಿಸಿ ತಮ್ಮನ್ನು ಹಿಂಸೆ ಮತ್ತು ದೌರ್ಜನ್ಯದಿಂದ ರಕ್ಷಿಸಿ ಎಂದು ಆ ವೃತ್ತಿಯಲ್ಲಿರುವ ಮಹಿಳೆಯರ ಕೂಗನ್ನು ಗುರುತಿಸಲು ಪ್ರಯತ್ನಿಸಿರುವ ಲೇಖನ. ಈ ಎರಡು ವಿಷಯಗಳು ಆಧರಿಸಿರುವುದು ‘ಮಹಿಳೆ­ಯರನ್ನು’. ಆದರೆ ಎರಡರ ನಡುವಿನ ವ್ಯತ್ಯಾಸ ಆಕಾಶ– ಭೂಮಿಯಷ್ಟಿದೆ. ನಮ್ಮ ನಡುವೆಯೇ ಇರುವ ಈ ವೈರುಧ್ಯವು ಮಹಿಳಾ ಸಬಲೀಕರಣದ ಕುರಿತು ನಾವು ಯೋಚಿಸಬೇಕಾದ ದಾರಿ ಮತ್ತು ನಡೆಯಬೇಕಾದ ದಿಕ್ಕನ್ನು ನಿರ್ಧರಿಸಬೇಕಿದೆ.

ಒಂದು ಕಡೆ ಇಸ್ರೊದಂತಹ ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರಿದ್ದರೆ, ಇನ್ನೊಂದು ಕಡೆ ಮೈ ಮಾರಿ­ಕೊಳ್ಳುವುದನ್ನು ಕಾನೂನುಬದ್ಧಗೊಳಿಸಿ ಎಂದು ಪ್ರಭುತ್ವ­ವನ್ನು ಒತ್ತಾಯಿಸುತ್ತಿರುವ ಮಹಿಳಾ ಗುಂಪುಗಳಿವೆ. ಭಾರತದ ಮಹಿಳೆಯರ ಕುರಿತಂತೆ ವಾಸ್ತವ ಆಗಿರುವ ಈ ಎರಡು ಸಂಗತಿ­ಗಳ ನಡುವಿನ ಅಂತರಕ್ಕೆ ಇರುವ ಕಾರಣಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸರ್ಕಾರ ಪ್ರಯತ್ನಿಸಿ ಯಶಸ್ವಿಯಾದರೆ ನಿಜವಾದ ಅರ್ಥದಲ್ಲಿ ಮಹಿಳಾ ಸಬಲೀಕರಣ ಸಾಧಿಸ­ಬಹುದು.

ಇಲ್ಲಿ ತಿಳಿಸಿದ ಕಾರಣಗಳನ್ನು ಮಹಿಳಾ ಅಧ್ಯಯನಗಳು ‘ಲಿಂಗ ಅಸಮಾನತೆ’ ಎಂಬ ವಿದ್ಯಮಾನವಾಗಿ ಬಹಳ ಹಿಂದೆಯೇ ಗುರುತಿಸಿವೆ. ಲಿಂಗ ಅಸಮಾನತೆಯ ಬೇರುಗಳು ಅತ್ಯಂತ ಆಳವಾಗಿವೆ. ಲಿಂಗ ಅಸಮಾನತೆ ಆಯಾ ಸಮಾಜದ ಸಂಸ್ಕೃತಿ,  ಸಂಪ್ರದಾಯದ ಭಾಗವೆಂಬಂತೆ ವಿವರಿಸಲಾಗಿದೆ. ಅವು ಸಹಜವಾಗಿ ಬೆಳೆದು ಇಂದು ಸಮುದಾಯಗಳು ಒಪ್ಪಿರುವ ಸಾಮಾಜಿಕ ಮೌಲ್ಯಗಳಾಗಿ ಬದ­ಲಾಗಿವೆ ಎಂಬು­ದನ್ನು ಈ ಅಧ್ಯಯನಗಳು ದಾಖಲಿಸಿವೆ.

ಈ ವಿದ್ಯಮಾನ ಮಹಿಳೆ­ಯರನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಗ್ರಹಿಸುತ್ತದೆ ಮತ್ತು ವಿವರಿಸುತ್ತದೆ. ೨೧ನೇ ಶತಮಾನದಲ್ಲಿ ಭಾರತ­ದಂತಹ ಸಂಪ್ರ­ದಾಯ ಪ್ರಧಾನ ದೇಶಗಳ ಪರಿಸ್ಥಿತಿ ಹೇಗಿದೆ ಎಂದರೆ ‘ಮಹಿಳೆ­ಯರ ಕುರಿತು ಹಲವು ತಲೆ­ಮಾರಿನಿಂದ ಸಂಪ್ರದಾಯಗಳು ಒಪ್ಪಿರುವ ನೀತಿಗಳು, ಸಾಮಾಜಿಕ ಮೌಲ್ಯಗಳ ಹೆಸರಿನಲ್ಲಿ ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಆಧುನಿಕತೆಯ ಕೊಡುಗೆಯಾದ ಮಹಿಳಾ ಶಿಕ್ಷಣ, ಸಬಲೀಕರಣದಂತಹ ಅವ­ಕಾಶ­ಗಳಿವೆ’. ಜೊತೆಗೆ ತಮ್ಮದೇ ಕಾರಣಕ್ಕಾಗಿ ಎರಡನ್ನೂ ಬೆಂಬ­ಲಿ­ಸುವ ಗುಂಪುಗಳಿವೆ, ಇವೆಲ್ಲದರ ನಡುವೆ ‘ಮಹಿಳೆ’ ಇದ್ದಾಳೆ.

ಪರಿಣಾಮವೆಂದರೆ, ಮಹಿಳೆ ಇತ್ತ ಸಂಪೂರ್ಣವಾಗಿ ಸಂಪ್ರ­ದಾ­ಯಸ್ಥೆಯಾಗಿಯೂ ಇರಲಾರದೆ, ಅತ್ತ ಪೂರ್ಣ­ಪ್ರಮಾ­ಣದ ಆಧುನಿಕತೆಯನ್ನು ಒಪ್ಪಿ ಬದುಕಲು ಆಗದ ದ್ವಂದ್ವಕ್ಕೆ ಒಳಗಾಗಿ­ದ್ದಾಳೆ. ಇದರ ಅರ್ಥ ಮಹಿಳೆ ತನ್ನ ಸಮಸ್ಯೆಗಳನ್ನು ಜಗತ್ತಿ­ನೆದುರು ವ್ಯಕ್ತಪಡಿಸಲು ಮೇಲಿನ ಯಾವುದಾದರೂ ಒಂದು ಗುಂಪಿನ ಬೆಂಬಲ ನಿರೀಕ್ಷಿಸುವ ಸ್ಥಿತಿಯಲ್ಲಿ ಇದ್ದಾಳೆ. ಮಹಿಳೆಯ ಈ ಪರಾವಲಂಬನೆ ಮತ್ತು ದ್ವಂದ್ವದ ಸ್ಥಿತಿಯನ್ನು ಒಪ್ಪಿ­ಕೊಂಡಿರುವ ನಮ್ಮ ಸಮಾಜ ಯಾವಾಗಲೂ ಮಹಿಳೆ­ಯರ ಸಮಸ್ಯೆಗಳನ್ನು ಪರ–ವಿರೋಧಗಳೆಂಬ ತೆಳುವಾದ ಚೌಕಟ್ಟಿನಲ್ಲಿ ನೋಡುತ್ತಿದೆ.

ಆದ್ದರಿಂದ ವೇಶ್ಯಾವಾಟಿಕೆಯನ್ನು ಕಾನೂನು­ಬದ್ಧ­ಗೊಳಿಸಿ ಎಂಬ ಚರ್ಚೆಯು ವೇಶ್ಯೆಯರ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವುದಕ್ಕಿಂತ ‘ವೇಶ್ಯಾ­ವಾಟಿಕೆ ಸಮಾಜಕ್ಕೆ ಬೇಕೋ? ಬೇಡವೋ?’ ಎಂಬ ಸಂಕುಚಿತ ಮತ್ತು ನಕಾರಾತ್ಮಕ ಚರ್ಚೆಯಾಗಿ ಮಾರ್ಪಡಿಸಿದೆ. ಈ ಚರ್ಚೆಯು ವೇಶ್ಯಾವಾಟಿಕೆ ಮಾಡಿ­ಕೊಂಡಿ­ರುವ ಮಹಿಳೆಯರ ಸಮಸ್ಯೆಗಳನ್ನು ಗುರು­ತಿಸಿ ಅವುಗಳನ್ನು ಪರಿಹರಿಸಲು ಸರ್ಕಾರ­ವನ್ನು ಒತ್ತಾಯಿಸಬೇಕಾಗಿತ್ತು, ಆದರೆ ಅದಕ್ಕೆ ಬದಲಾಗಿ ಈ ಚರ್ಚೆ ಆ ವೃತ್ತಿಗೆ ಕಾನೂನು ಮಾನ್ಯತೆ ಕೊಡಬೇಕೋ ಬೇಡವೋ ಎಂಬ ಚರ್ಚೆಯಾಗಿ ಮಾರ್ಪಟ್ಟಿದೆ.

ಕಾನೂನು ಮಾನ್ಯತೆ ಕೊಟ್ಟಾಕ್ಷಣ ಆ ವೃತ್ತಿ­ಯಲ್ಲಿ­ರುವ ಮಹಿಳೆಯರ ಸಮಸ್ಯೆಗಳು ಪರಿಹಾರ ಆಗಿಬಿಡು­ತ್ತವೆಯೆ? ಈ ಪ್ರಶ್ನೆ ಕೇಳಿದರೆ ಜಾಣ ಮೌನ ಉತ್ತರವಾಗಿ ದೊರೆ­ಯುತ್ತದೆ. ಆದ್ದರಿಂದ ಈ ಚರ್ಚೆ­ಯನ್ನು ವೇಶ್ಯಾವೃತ್ತಿಗೆ ಕಾನೂನು ಮಾನ್ಯತೆ ಕೊಡಬೇಕೋ, ಬೇಡವೋ ಎಂಬ ಸರಳ ನೆಲೆಯಲ್ಲಿ ಬೆಳೆಸದೆ ವೇಶ್ಯೆಯರ ಸಾಮಾ­ಜಿಕ ಸ್ಥಿತಿಯನ್ನೇ ಒಂದು ಸಮಸ್ಯೆಯಾಗಿ ನೋಡ­ಬೇಕಿದೆ.
ಆ ದೃಷ್ಟಿಯಿಂದ ನೋಡಿದಾಗ ವೇಶ್ಯೆಯರ ಬದುಕು ಬದ­ಲಾಯಿಸುವ ಕುರಿತು ನಮಗೆ ಕೆಲವೊಂದು ಹೊಳಹುಗಳು ದೊರೆ­ಯುತ್ತವೆ.

ಅದರಲ್ಲಿ ಮುಖ್ಯವಾದುದು ‘ವೇಶ್ಯಾವಾಟಿಕೆ­ಯನ್ನು ಒಂದು ವೃತ್ತಿಯಾಗಿಸದೆ, ವೇಶ್ಯೆಯರಿಗೆ ಒಂದು ವೃತ್ತಿ­ಯನ್ನು ದೊರಕಿಸಿಕೊಡಬೇಕು’ ಎಂಬುದು. ಒಂದು ಅಂದಾ­ಜಿನ ಪ್ರಕಾರ ಈ ವೃತ್ತಿಯಲ್ಲಿ ಇರುವವರು ಸರಿಸುಮಾರು ೨೦ ರಿಂದ ೪೦ ವರ್ಷ ವಯಸ್ಸಿನವರು. ಇವರು ಎಲ್ಲರಂತೆ ಈ ದೇಶದ ಮಾನವ ಸಂಪನ್ಮೂಲ. ಯಾರೂ ಇಷ್ಟಪಟ್ಟು ಈ ವೃತ್ತಿ ಆಯ್ಕೆ ಮಾಡಿಕೊಂಡಿಲ್ಲ. ಬದುಕಿನ ಅನಿವಾರ್ಯ ಅವ­ರನ್ನು ಈ ವೃತ್ತಿಗೆ ತಂದಿದೆ. ಆ ವಯೋಮಾನದ ಎಲ್ಲರಲ್ಲೂ ದುಡಿಯುವ ಶಕ್ತಿ ಮತ್ತು  ಕೌಶಲ ಇರುತ್ತದೆ.

ಸರ್ಕಾರ ಅದನ್ನು ಗುರುತಿಸುವ ಮೂಲಕ ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ನೆಲೆ ಕಲ್ಪಿಸಬೇಕಿದೆ. ಇದರ ಬದಲು ಈ ವೃತ್ತಿ­ಯನ್ನು ಕಾನೂನು ವ್ಯಾಪ್ತಿಗೆ ತಂದರೆ ಅದು ವ್ಯಾಪಾರವಾಗಿ ಬದಲಾಗುತ್ತದೆ, ಎಲ್ಲಾ ವ್ಯಾಪಾರದಂತೆ ಈ ವ್ಯಾಪಾರವೂ ಸಮಾಜದ ಮೇಲೆ ಕೆಲವು ದುಷ್ಪರಿಣಾಮಗಳನ್ನು ಬಿರುತ್ತದೆ. ಈ ವೃತ್ತಿಯಲ್ಲಿ ಇರುವವರನ್ನು ಗುರುತಿಸಿ ಅವರನ್ನು ಸಹಜ ಸಾಮಾಜಿಕ ಬದುಕಿಗೆ ತರುವ ಮಹತ್ವದ ಕೆಲಸವನ್ನು ಕೈ­ಗೊಳ್ಳ­ಬೇಕಿದೆ. ಹಾಗೆ ಕೈಗೊಳ್ಳುವ ಮೂಲಕ ವೇಶ್ಯಾವಾಟಿಕೆ ಎಂಬುದು ಎಲ್ಲಾ ವೃತ್ತಿಗಳಂತೆ ಒಂದು ವೃತ್ತಿ ಎಂದು ಶುಷ್ಕ­ವಾಗಿ ವಾದಿಸುತ್ತಿರುವ­ವರಿಗೆ ಉತ್ತರಿಸಬೇಕಿದೆ.

ಅದೂ ಅಲ್ಲದೆ ಇಂದು ಮಹಿಳೆಗೆ ಬಂದೊದಗಿದ ಈ ಸ್ಥಿತಿಗೆ ಸಮಾಜವೇ ಕಾರ­ಣವಾಗಿರುವು­ದ­ರಿಂದ ಸಮಾಜವೇ ಅವರನ್ನು ಮುಖ್ಯವಾಹಿನಿ­ಯಲ್ಲಿ ಒಪ್ಪಿ­ಕೊಳ್ಳಲು ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸಬೇಕು. ವೇಶ್ಯಾವಾಟಿಕೆ ಎಲ್ಲಾ ವೃತ್ತಿಗಳಂತೆ ಅಲ್ಲ. ಇದು ಪುರುಷ ಪ್ರಧಾನ ವ್ಯವಸ್ಥೆ ರೂಪಿಸಿದ ಅಡ್ಡದಾರಿಯ ಭೋಗ. ಹಾಗಾ­ಗಿಯೇ ಹಿಂದಿನಿಂದಲೂ ಇದನ್ನು ಮಹಿಳೆಯರಿಗೆ ಮಾತ್ರ ಮೀಸಲಾಗಿರಿಸಿ ಚರ್ಚಿಸಲಾಗುತ್ತಿದೆ!

ಇಂದಿನ ಕಾಲಘಟ್ಟದಲ್ಲಿ ಪುರುಷರಂತೆಯೇ ಮಹಿಳೆ ಕೂಡ ಸ್ವೇಚ್ಛೆಗೆ ಅರ್ಹಳು, ಆದ್ದರಿಂದ ‘ಪುರುಷ ವೇಶ್ಯಾ ವೃತ್ತಿಯನ್ನು ಗುರುತಿಸಿ ಅದನ್ನು ಕಾನೂನು ವ್ಯಾಪ್ತಿಗೆ ತನ್ನಿ’ ಎಂಬ ವಾದ­ವನ್ನು ಮಹಿಳೆಯರು ಮುಂದಿಟ್ಟಿದ್ದರೆ ಸಮಾಜ ಯಾವ ರೀತಿ  ಪ್ರತಿಕ್ರಿಯಿಸುತ್ತಿತ್ತು ಎಂಬು­ದನ್ನು ಆಲೋಚಿಸಬೇಕು. ಏಕೆಂದರೆ ನಾವು ಮಾಡುವ ವೃತ್ತಿ ನಮಗೆ ಸಮಾಜದಲ್ಲಿ ಸಕಾರಾತ್ಮಕ ಗುರುತಿಸುವಿಕೆ ತಂದುಕೊಡಬೇಕು. ವೇಶ್ಯಾವಾಟಿಕೆಯಲ್ಲಿ ಇದು ಇಲ್ಲ. ಈ ವಿಚಾರದ ಬಗ್ಗೆ ಜವಾಬ್ದಾರಿಯುತವಾಗಿ, ಮಾನ­ವೀಯ ನೆಲೆಯಲ್ಲಿ ಯೋಚಿಸಬೇಕು, ಶುಷ್ಕ ಮನಸ್ಸಿನಿಂದ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.