ADVERTISEMENT

ವೈದ್ಯಕೀಯ ಸೀಟು: ನ್ಯಾಯ ಒದಗಿಸಿ

ರಾಜ್ಯ ಸರ್ಕಾರಕ್ಕೆ ದಕ್ಕುವ ಎಲ್ಲಾ ಸೀಟುಗಳಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡುವುದಕ್ಕಾಗಿ ಕೂಡಲೇ ಸುಗ್ರೀವಾಜ್ಞೆ ಹೊರಡಿಸಲಿ

ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ವೈದ್ಯಕೀಯ ಸೀಟು: ನ್ಯಾಯ ಒದಗಿಸಿ
ವೈದ್ಯಕೀಯ ಸೀಟು: ನ್ಯಾಯ ಒದಗಿಸಿ   
ಜನರಿಂದ ಚುನಾಯಿತವಾದ ಸರ್ಕಾರವು ಕಾನೂನು-ತೀರ್ಪುಗಳನ್ನೆಲ್ಲ ಕಡೆಗಣಿಸಿ ಜನಹಿತಕ್ಕೆ ವಿರುದ್ಧವಾಗಿ  ವರ್ತಿಸುವ ಚಾಳಿಯನ್ನು ಮೈಗೂಡಿಸಿಕೊಂಡಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ.
 
ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗದ ಪ್ರವೇಶಾತಿಗೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ  ಪರೀಕ್ಷೆಯೊಂದನ್ನೇ (ನೀಟ್)  ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಹಾಗೂ ಸಂಸತ್ತಿನಲ್ಲಿ ಈ ಸಂಬಂಧ ನೀತಿ ನಿರೂಪಣೆಯಾಗಿದೆ, ಪರೀಕ್ಷೆಯೂ ಮುಗಿದು ಫಲಿತಾಂಶ ಹೊರಬಿದ್ದಿದೆ.

ಎಲ್ಲಾ ಬಗೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ, ಖಾಸಗಿ, ಅನಿವಾಸಿ ಹೀಗೆ ಯಾವುದೇ ಕೋಟಾ  ಸೀಟುಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ನಿಗಾವಣೆಯಲ್ಲಿರುವ ಸಂಸ್ಥೆಗಳ ಮೂಲಕವೇ ಹಂಚಿಕೆ ಮಾಡಬೇಕು.  
 
ಖಾಸಗಿ ಸಂಸ್ಥೆಗಳು ಮಾಡುವಂತಿಲ್ಲ ಎಂದು ಕಳೆದ ಸೆಪ್ಟೆಂಬರ್ 22 ಹಾಗೂ 28ರಂದು  ಸುಪ್ರೀಂ ಕೋರ್ಟ್‌  ಸ್ಪಷ್ಟವಾಗಿ ತೀರ್ಪಿತ್ತಿದೆ. ಆ ಬಳಿಕ ಕೇಂದ್ರ ಸರ್ಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪತ್ರಗಳನ್ನೂ ಬರೆದಿವೆ, ಎಂಸಿಐ ತನ್ನ ನಿಯಮಗಳನ್ನು ಬದಲಿಸಿ ಅದನ್ನು ರಾಜ್ಯಪತ್ರದಲ್ಲೂ ಪ್ರಕಟಿಸಿದೆ.
 
ಇಷ್ಟಾದರೂ ನಮ್ಮ ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಿ ಸೀಟುಗಳನ್ನಷ್ಟೇ ಹಂಚುವುದಾಗಿ ಫೆಬ್ರುವರಿ ಕೊನೆಯ ವಾರದಲ್ಲಿ ತರಾತುರಿಯಿಂದ ಅಧಿಸೂಚನೆ ಹೊರಡಿಸಿತು; ಖಾಸಗಿ ಹಾಗೂ ಡೀಮ್ಡ್ ಸಂಸ್ಥೆಗಳು ತಮ್ಮದೇ ಹಂಚಿಕೆ ಮಾಡಲು ಮುಂದಾದವು. ಆದರೆ, ಎರಡೇ ವಾರಗಳಲ್ಲಿ ಈ ಪ್ರತ್ಯೇಕ ಹಂಚಿಕೆಯ ಪ್ರಕ್ರಿಯೆಯನ್ನು ರದ್ದು ಮಾಡಬೇಕಾಯಿತು.
 
ಇದೀಗ, ಖಾಸಗಿ ಹಾಗೂ ಡೀಮ್ಡ್ ಸಂಸ್ಥೆಗಳ ಕೆಲವು ಸೀಟುಗಳನ್ನು ಪ್ರಾಧಿಕಾರದಿಂದಲೇ ಹಂಚುವುದಾಗಿ ಮತ್ತೊಂದು ಅಧಿಸೂಚನೆ ಹೊರಡಿಸಿದ್ದರೂ, ಅನಿವಾಸಿ ಹಾಗೂ ಆಡಳಿತ ಮಂಡಳಿ ಕೋಟಾದ ಹೆಸರಲ್ಲಿ ಕೆಲವು ಸೀಟುಗಳನ್ನು ಈಗಲೂ ಖಾಸಗಿಯವರ ಸುಪರ್ದಿಗೆ ನೀಡಲಾಗಿದೆ! ಕಾನೂನಿನಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಹಾಗೂ ಖಾಸಗಿ ಆಡಳಿತ ಮಂಡಳಿಗಳು ಇನ್ನೂ ಮುಂದುವರಿಸಿವೆ!
 
ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಶೇಕಡ 50ರಷ್ಟು ಸೀಟುಗಳನ್ನು ತುಂಬುವ ಹಕ್ಕು ಸರ್ಕಾರಕ್ಕಿದೆ ಎನ್ನುವುದನ್ನು ಎಂಸಿಐಯ ಸ್ನಾತಕೋತ್ತರ ವ್ಯಾಸಂಗದ ನಿಯಮಗಳ ಕಂಡಿಕೆ 9 (VI) ರಲ್ಲಿ, ಕೇಂದ್ರ ಆರೋಗ್ಯ ಇಲಾಖೆಯ ಈ ವರ್ಷದ ಫೆಬ್ರುವರಿ 21ರ ಸುತ್ತೋಲೆಯಲ್ಲಿ ಹಾಗೂ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿ ನಿಯಂತ್ರಣದ ಮೂಲ ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
 
ಆದರೆ ನಮ್ಮ ರಾಜ್ಯ ಸರ್ಕಾರವು ಕ್ರಮೇಣ ತನ್ನ ಪಾಲನ್ನು ಶೇ 33ಕ್ಕೆ ಇಳಿಸಿದೆ! ಕಳೆದ ಎರಡು ವರ್ಷಗಳ ಸೀಟು ಹಂಚಿಕೆಯನ್ನು ಗಮನಿಸಿದರೆ, ಸರ್ಕಾರಕ್ಕೆ ದಕ್ಕಿರುವ ಪಾಲು ಶೇ 25ಕ್ಕೂ ಕಡಿಮೆ! ಹೀಗೆ, ಖಾಸಗಿ ಕಾಲೇಜುಗಳ ಶೇ 50ರಷ್ಟು ಸೀಟುಗಳನ್ನು ಸರ್ಕಾರವು ಪಡೆದು ಪ್ರತಿಭಾವಂತರಿಗೆ ನೀಡಬೇಕೆನ್ನುವ ನಿಯಮವೂ ಮೂಲೆ ಸೇರಿದೆ.
 
ಇನ್ನು, ರಾಜ್ಯದ ವಿದ್ಯಾರ್ಥಿಗಳಿಗೆ ಸೇರಬೇಕಾದ ಸರ್ಕಾರಿ ಕೋಟಾದ ಸೀಟುಗಳಲ್ಲಿ ಹೊರರಾಜ್ಯದವರಿಗೂ ಪಾಲು ನೀಡಲಾಗುತ್ತಿದೆ! ಸರ್ಕಾರಿ ಕಾಲೇಜುಗಳಲ್ಲಿರುವ ಶೇ 50ರಷ್ಟು ಸ್ನಾತಕೋತ್ತರ ಸೀಟುಗಳನ್ನು ರಾಷ್ಟ್ರೀಯ ಮಟ್ಟದ ಸೀಟು ಹಂಚಿಕೆಗೆ ಬಿಟ್ಟುಕೊಡಲಾಗುತ್ತಿದೆ.
 
ಅದಾಗಿ ರಾಜ್ಯಕ್ಕೆ ಉಳಿಯುವ ಸೀಮಿತ ಸೀಟುಗಳನ್ನು ಇಲ್ಲಿ ಎಂಬಿಬಿಎಸ್ ಓದಿರುವ ಹೊರರಾಜ್ಯದ ವಿದ್ಯಾರ್ಥಿಗಳಿಗೂ ನೀಡಲಾಗುತ್ತದೆ! ಅಂದರೆ, ನಮ್ಮ ರಾಜ್ಯದ ಖಾಸಗಿ ಕಾಲೇಜೊಂದರಲ್ಲಿ ಲಕ್ಷಗಟ್ಟಲೆ ಕೊಟ್ಟು ಎಂಬಿಬಿಎಸ್ ಪಡೆದ ಹೊರರಾಜ್ಯದ ವಿದ್ಯಾರ್ಥಿಗೆ ರಾಜ್ಯ ಸರ್ಕಾರವು ತನ್ನ ಕಾಲೇಜಿನಲ್ಲಿ ಸ್ನಾತಕೋತ್ತರ ಸೀಟನ್ನು ದಯಪಾಲಿಸುತ್ತದೆ!
 
ಹೀಗೆ, ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ಸ್ವಪ್ರತಿಭೆಯಿಂದ ರಾಜ್ಯದಲ್ಲಿ ದೊರೆಯುವ ಎಂಬಿಬಿಎಸ್ ಸೀಟುಗಳಲ್ಲಿ ಮೂರರಲ್ಲೆರಡು ಪಾಲನ್ನು ಪಡೆಯುತ್ತಾರೆ. ಆದರೆ, ಸ್ನಾತಕೋತ್ತರ ವ್ಯಾಸಂಗಕ್ಕೆ ಕೇವಲ ಐದರಲ್ಲೊಂದು ಪಾಲನ್ನಷ್ಟೇ ಪಡೆಯುತ್ತಾರೆ. ಆದರೆ, ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಹಣ ಕೊಟ್ಟು ಮೂರರಲ್ಲೊಂದು ಸೀಟನ್ನು ಪಡೆಯುವ ಹೊರರಾಜ್ಯದ ವಿದ್ಯಾರ್ಥಿಗಳು ಸ್ನಾತಕೋತ್ತರ ವ್ಯಾಸಂಗಕ್ಕೆ ಐದರಲ್ಲಿ ನಾಲ್ಕು ಸೀಟು ಪಡೆಯಲು ಅರ್ಹರಾಗುತ್ತಾರೆ!
 
ಹೀಗೆ ಕರ್ನಾಟಕದ ಸರ್ಕಾರಿ ಸೀಟುಗಳಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದವರು ಮೂರು ವರ್ಷ ಸೇವೆ ಸಲ್ಲಿಸದಿದ್ದರೆ ₹ 50 ಲಕ್ಷ ದಂಡ ಕಟ್ಟುವ ಮುಚ್ಚಳಿಕೆ ನೀಡಬೇಕೆಂಬ ನಿಯಮವೂ ರಾಜ್ಯದಲ್ಲಿದೆ. ಆದರೆ ಇಲ್ಲಿ ಎಂಡಿ– ಎಂಎಸ್ ಮಾಡಿದ ಹೊರರಾಜ್ಯದ ಎಷ್ಟು ಮಂದಿ ಇಲ್ಲಿ ಉಳಿದು ಸೇವೆ ಮಾಡಿದ್ದಾರೆ? ಈ ನಿಯಮಗಳು ಕನ್ನಡಿಗರಿಗೆ ಮಾತ್ರ ಅನ್ವಯವಾಗುತ್ತವೆಯೇ? ಹೊರರಾಜ್ಯದವರಿಗೆ ಅದರಲ್ಲೂ ರಿಯಾಯಿತಿ ಇದೆಯೇ? 
 
ಒಂದೆಡೆ ಪ್ರತೀ ಎಂಬಿಬಿಎಸ್ ವಿದ್ಯಾರ್ಥಿಗೆ ₹ 25 ಲಕ್ಷ ಖರ್ಚಾಗುವುದರಿಂದ ಅವರೆಲ್ಲ ಹಳ್ಳಿಗೆ ಹೋಗಬೇಕೆನ್ನುವ ಸರ್ಕಾರವು ಇನ್ನೊಂದೆಡೆ ತನ್ನ ಬಹುತೇಕ ಸ್ನಾತಕೋತ್ತರ ಸೀಟುಗಳನ್ನು ಹೊರರಾಜ್ಯದವರಿಗೆ ಷರತ್ತುರಹಿತವಾಗಿ ನೀಡುತ್ತಿದೆಯೇ? ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗೆ ಸಂಬಂಧಿಸಿದ ನೀಟ್‌ ಪರೀಕ್ಷೆಗೆ  ಈ ವರ್ಷ ಕೇಂದ್ರ ಹೊಸ  ನಿಯಮ ಜಾರಿಗೆ ತಂದಿದೆ.
 
ಹಾಗಾಗಿ  ರಾಜ್ಯದ ನಿಯಮಗಳೆಲ್ಲವೂ ತಂತಾನೇ ಅನೂರ್ಜಿತಗೊಂಡಿವೆ. ಅವನ್ನು ಪರಿಷ್ಕರಿಸಬೇಕಾಗಿರುವ ಈ ಸುಸಂದರ್ಭದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯವನ್ನೂ ಸರಿಪಡಿಸಬೇಕಾಗಿದೆ. 
 
ಎಲ್ಲಾ ವೈದ್ಯಕೀಯ ಸೀಟುಗಳನ್ನು ಸರ್ಕಾರದ ನಿಗಾವಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮೂಲಕ ಹಂಚುವುದು, ಖಾಸಗಿ ಸಂಸ್ಥೆಗಳ ಶೇ 50ರಷ್ಟು ಸೀಟುಗಳನ್ನು ಸರ್ಕಾರವು ಪಡೆಯುವುದು, ಸರ್ಕಾರಿ  ಮತ್ತು ಖಾಸಗಿ ಕಾಲೇಜುಗಳಲ್ಲಿ ರಾಜ್ಯ ಸರ್ಕಾರಕ್ಕೆ ದಕ್ಕುವ ಎಲ್ಲಾ ಸೀಟುಗಳಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡುವುದಕ್ಕೆ ಈ ಕೂಡಲೇ ಸುಗ್ರೀವಾಜ್ಞೆ ಹೊರಡಿಸಿ, ರಾಜ್ಯದ ವಿದ್ಯಾರ್ಥಿಗಳಿಗೂ, ವೈದ್ಯಕೀಯ ಶಿಕ್ಷಣಕ್ಕೂ ಈ ವರ್ಷದಿಂದಲೇ ನ್ಯಾಯ ಒದಗಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.