ADVERTISEMENT

ಶಿಕ್ಷಣ ಇಲಾಖೆ: ಕಳೆ ಕಿತ್ತ ಮೇಲೆ...

ಡಾ.ಚಂದ್ರಶೇಖರ ದಾಮ್ಲೆ
Published 9 ಡಿಸೆಂಬರ್ 2016, 19:30 IST
Last Updated 9 ಡಿಸೆಂಬರ್ 2016, 19:30 IST

ರೈಲಿನಲ್ಲಿ ಪಕ್ಕದ ಆಸನದಲ್ಲಿದ್ದವರು ಸರ್ಕಾರಿ ಶಾಲೆಯ ಶಿಕ್ಷಕಿ ಎಂದು ತಿಳಿದಾಗ ಸಹಜವಾಗಿಯೇ ಶಿಕ್ಷಣದ ಸಮಸ್ಯೆಗಳತ್ತ ಮಾತುಕತೆ ಹೊರಳಿತು. ಸರ್ಕಾರಿ  ಶಾಲೆಗಳಲ್ಲಿ ಕಡಿಮೆಯಾಗುತ್ತಿರುವ ಮಕ್ಕಳ ಸಂಖ್ಯೆ, ಆ ಲೆಕ್ಕಾಚಾರದಲ್ಲಿ ಕೊರತೆಯಾಗುತ್ತಿರುವ ಶಿಕ್ಷಕರ ಸಂಖ್ಯೆ, ದಾಮಾಶಯವನ್ನು ಲೆಕ್ಕ ಹಾಕಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ಮಾಡಿ ಪರಿಸ್ಥಿತಿಯನ್ನು ಮತ್ತೂ ದುರ್ಬಲಗೊಳಿಸಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಹಿನ್ನಡೆ, ಹೆತ್ತವರಲ್ಲಿ  ಸರ್ಕಾರಿ ಶಾಲೆಗಳ ಬಗ್ಗೆ ಹೆಚ್ಚುತ್ತಿರುವ ಅಸಹನೆ, ಖಾಸಗಿ ಶಾಲೆಗಳತ್ತ ತಳ್ಳಲಾಗುತ್ತಿರುವ ಮಕ್ಕಳು, ಅನಾಸಕ್ತ ಮತ್ತು ಅನ್ಯಾಸಕ್ತ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿರುವ ಸರ್ಕಾರಿ ಶಾಲಾ ಶಿಕ್ಷಕ ಸಮುದಾಯ... ಹೀಗೆಲ್ಲಾ ವಿಷಯಗಳ ವಿಸ್ತೃತ ಚರ್ಚೆ ಆಗಿ ಕೊನೆಗೆ ತಲುಪಿದ್ದು ಭ್ರಷ್ಟಾಚಾರದ ಮಜಲಿಗೆ.

ಕಡಿಮೆ ಸಂಬಳಕ್ಕೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಆಕೆಗೆ ಎಂಟು ತಿಂಗಳ ಹಿಂದೆ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ನೇಮಕವಾಯಿತು. ಆಕೆಯ ನೇಮಕಾತಿ ಆಗಿದೆ ಎಂದು ತಿಳಿಸಲಾಗಿ, ಆಕೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ಹೋದಾಗ ಅಲ್ಲಿದ್ದ ಮ್ಯಾನೇಜರ್‌ ನೇಮಕಾತಿ ಆದೇಶ ಪತ್ರ ನೀಡಿದರು. ಈಕೆ ‘ಥ್ಯಾಂಕ್ಸ್’ ಹೇಳಿ ಮುಂದೇನು ಮಾಡಬೇಕೆಂದು ಕೇಳಿದಾಗ ‘ಈ ಸಂತೋಷಕ್ಕೆ ನಮಗೇನೂ ಇಲ್ವಾ’ ಎಂದರಂತೆ.

‘ಸ್ಸಾರಿ ಸರ್, ನನಗೆ ಸ್ವೀಟ್ಸ್ ತರಲು ಮರೆತು ಹೋಯಿತು. ಈಗಲೇ ತರುತ್ತೇನೆ’ ಎಂದು ಹೇಳುವಷ್ಟರಲ್ಲಿ ‘ಅದು ತನ್ನಿ. ಆದರೆ ನೀವು ಮಾಡಬೇಕಾದ್ದೇನಂದ್ರೆ...’ ಆತ ಹೇಳಿದ ಪ್ರಕಾರ ನಡೆದುಕೊಂಡ ಈಕೆಯ ನೇಮಕಾತಿ ಪ್ರಕ್ರಿಯೆ ಮುಗಿಯಲು ಪ್ರತ್ಯೇಕ ಕವರ್‌ಗಳಲ್ಲಿ ₹ 1000ದಂತೆ ಆತನಿಗೊಂದು, ಸಾಹೇಬರಿಗೊಂದು ಕೊಟ್ಟು ಕೇಸ್‌ವರ್ಕರ್‌ಗೆ ₹ 500 ನೀಡಿ, ಅಲ್ಲಿದ್ದ ಜವಾನನೂ ₹ 300 ಪೀಕಿಸಿದ ನಂತರವೇ ಈಕೆ  ಔಪಚಾರಿಕವಾಗಿ ಸರ್ಕಾರಿ  ಶಾಲೆಯ ಶಿಕ್ಷಕಿ ಎನಿಸಿದ್ದು. ಇಂತಹ ಅನುಭವ ಅದೆಷ್ಟು ನೂತನ ಶಿಕ್ಷಕರಿಗೆ ಆಗಿದೆಯೆಂದು ತಿಳಿಯುವುದು ಕಷ್ಟ. ಏಕೆಂದರೆ ಈ ಸತ್ಯ ಬಾಯಿಬಿಟ್ಟರೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾದ ಕಷ್ಟಗಳ ತೂಗುಕತ್ತಿಯ ಎಚ್ಚರ ಅವರಿಗೆ ಇದೆ.

ಇಲ್ಲಿ ಪ್ರಶ್ನೆ ಏನೆಂದರೆ, ನೇಮಕಾತಿ ಆದೇಶವನ್ನು ಅಂಚೆಯಲ್ಲಿ ಕಳುಹಿಸಿಕೊಡಲು ಏನಾಗಿತ್ತು? ಅದನ್ನು ಸ್ವೀಕರಿಸಲು ಕಚೇರಿಗೆ ಬನ್ನಿ ಎಂದು ಕರೆಯುವ ಅಗತ್ಯವೇನಿತ್ತು? ಉದ್ದೇಶ ಸ್ಪಷ್ಟ: ಮೊದಲ ಮೆಟ್ಟಿಲಲ್ಲೇ ಶಿಕ್ಷಕರ ಆತ್ಮವಿಶ್ವಾಸವನ್ನು ಚಚ್ಚಿ ಹಾಕುವಂತಹ ಹೆದರಿಕೆಯನ್ನು ಹುಟ್ಟಿಸುವುದು. ಅದರಿಂದ ಅಧಿಕಾರ ಚಲಾವಣೆಯ ಲಾಭವಷ್ಟೇ ಅಲ್ಲದೆ ಹಣದ ಲಾಭವನ್ನೂ ಪಡೆಯುವುದು. ಮುಂದೆ ಲಂಚ ಕೊಡುವ ಸಂದರ್ಭಗಳಲ್ಲಿ ಪ್ರತಿಭಟನೆಯ ಬೀಜವೂ ಮೊಳೆಯದಂತೆ ಈ ದೇಣಿಗೆಗಳಿಗೆ ಶಿಕ್ಷಕರ ಮನಸ್ಸನ್ನು ಒಡಂಬಡಿಸಿ ಬಿಡುವುದು.

ಈ ದುರ್ಯೋಚನೆಗೆ ಸಾಕ್ಷಿ ಆಕೆಯ ಮುಂದಿನ ಮಾತುಗಳಲ್ಲೇ ಸಿಕ್ಕಿತು. ನೇಮಕಾತಿ ಪ್ರಕ್ರಿಯೆ ಮುಗಿದು ಎಂಟು ತಿಂಗಳಾದರೂ ಇನ್ನೂ ವೇತನ ನೀಡಿಲ್ಲವಂತೆ. ಅದನ್ನು ನೀಡುವ ಮೊದಲು ₹ 2000 ಕೊಡಬೇಕೆಂದು ಕಚೇರಿಯಿಂದ ಬೇಡಿಕೆ ಇದೆಯಂತೆ. ‘ನಾವ್ಯಾರೂ ಕೊಟ್ಟಿಲ್ಲ. ಯಾಕೆ ಕೊಡಬೇಕೆಂದು ಯೋಚನೆ ಮಾಡ್ತಿದ್ದೇವೆ’ ಎಂದರು.

‘ಅದೇ ಸರಿ. ಕೊಡಬೇಡಿ ನೀವು’ ಎಂದೆ. ‘ಸರ್, ಆದ್ರೆ ಅದ್ರಲ್ಲಿಯೂ ತೊಂದ್ರೆ ಇದೆ ಎಂತ ನಮ್ಮ ಹಿರಿಯ ಶಿಕ್ಷಕರು ಹೇಳ್ತಾರೆ. ನಾವು ಇದಕ್ಕೆ ವಿರೋಧ ಮಾಡಿದ್ರೆ ಮತ್ತೆ ಹೆಜ್ಜೆ ಹೆಜ್ಜೆಗೆ ನಮ್ಮ ತಪ್ಪು ಹುಡುಕಿ ಬೈತಾರಂತೆ. ಯಾಕ್ ಸರ್ ಬೈಸಿಕೋತ ಇರಬೇಕು ಅನ್ನಿಸ್ತದೆ. ಅಧಿಕಾರಿಗಳು ಬೇಡುವ ಭಿಕ್ಷೆ ಸರ್ ಇದು’ ಎಂದು ತಿರಸ್ಕಾರದಿಂದ ಕಿಟಕಿಯ ಹೊರಗೆ ಉಗುಳಿ ಮೌನವಾದರು. ಪರಿಸ್ಥಿತಿ ಎಷ್ಟೊಂದು ಕೆಟ್ಟಿದೆ ಎಂದರೆ, ವ್ಯವಸ್ಥೆಯನ್ನು ಸರಿಗೊಳಿಸಬೇಕೆಂದಿರುವ ಹೊಸಬರಿಗೆ ಹಳಬರು ಭ್ರಷ್ಟಾಚಾರಕ್ಕೆ ಹೊಂದಿಕೊಳ್ಳುವ ಪಾಠ ಮಾಡುತ್ತಿದ್ದಾರೆ! ಏಕೆಂದರೆ ತಮ್ಮ ತಿಂಗಳ ವೇತನ ತಖ್ತೆ ಸಿದ್ಧವಾಗಿ ಕೈಗೆ ಹಣ ಬರುವುದು ಪ್ರತಿ ತಿಂಗಳೂ ನಿಗದಿತ ದಕ್ಷಿಣೆಯಿತ್ತ ಬಳಿಕವೇ! 

ಶಿಕ್ಷಣ ಇಲಾಖೆಯ ಕಚೇರಿ ವಲಯದೊಳಗೆ ಸೇರಿದ ಯಾರಿಗೇ ಆದರೂ ತಮ್ಮ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗಿಂತ ಹೆಚ್ಚಾಗಿ ವೇತನ ಬಟವಾಡೆ ಹಾಗೂ ಖಾಸಗಿ ಶಾಲೆಗಳ ಮಾನ್ಯತೆಯ ಫೈಲ್‌ಗಳ ಗಣಿಗಾರಿಕೆ ಮಾಡುವುದೇ ಇಷ್ಟವೆಂದೆನಿಸುತ್ತದೆ. ಸರ್ಕಾರ ಮಾಡುವ ಒಂದೊಂದು ಕಾನೂನು ಕೂಡ ಇವರ ಕೈಗೆ ಬಂದಾಗ ಅದು ಚಿನ್ನದ ಮೊಟ್ಟೆ ಕೊಡುವ ಕೋಳಿಯಾಗುತ್ತದೆ. ಒಂದು ಉದಾಹರಣೆ ಎಂದರೆ, ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡಿದ ಬಗೆಯನ್ನು ನೋಡಿ. ಕಾಯ್ದೆ ಪ್ರಕಾರ, ಪ್ರತಿ ಮಗುವಿಗೆ ಮನೆಯ ನೆರೆಹೊರೆಯಲ್ಲಿರುವ ಶಾಲೆಗೆ ಸೇರಿ ಶಿಕ್ಷಣ ಪಡೆಯುವ ಹಕ್ಕು ಇದೆ.

ಆದರೆ ಅದಕ್ಕೆ ಹತ್ತಿರದಲ್ಲಿ ಸರ್ಕಾರಿ ಶಾಲೆ ಇಲ್ಲದಿದ್ದಾಗ ಖಾಸಗಿ ಅನುದಾನ ರಹಿತ ಶಾಲೆಯಾದರೂ ಸರಿ, ಅಲ್ಲಿಗೆ ಸೇರಿ ಶಿಕ್ಷಣ ಪಡೆಯುವ ಹಕ್ಕು ಇದೆ. ಅಲ್ಲದೆ ಸರ್ಕಾರ ತನ್ನ ಶಾಲೆಗಳಲ್ಲಿ ಅಗತ್ಯವಿರುವಷ್ಟು ಶಿಕ್ಷಕರ ನೇಮಕಾತಿ ಮಾಡುವ ಹೊಣೆಯನ್ನು ಶಿಕ್ಷಣ ಇಲಾಖೆಗೆ ವಿಧಿಸಿದೆ. ಆದರೆ ಈ ಹೊಣೆ ನಿರ್ವಹಣೆಯ ವಿಷಯವನ್ನೇ ಅಡಗಿಸಿಟ್ಟ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ 25% ಸೀಟುಗಳ ವಾರಸುದಾರರಂತೆ ವರ್ತಿಸಿದರು. ತಮ್ಮ ಸರ್ಕಾರಿ  ಶಾಲೆಗಳಿಗೆ ಮಕ್ಕಳನ್ನು ಸೇರಿಸುವಲ್ಲಿ ಯಾವುದೇ ಆಸಕ್ತಿ ತೋರದ ಇವರು, ಖಾಸಗಿ ಶಾಲೆಗಳಲ್ಲಿ ಸೀಟುಗಳನ್ನು ಬಡ ಮಕ್ಕಳ ಹೆಸರಿನಲ್ಲಿ ತಮ್ಮ ಆಪ್ತ ವಲಯದವರಿಗೆ ನೀಡಿದರು.

ಅಲ್ಲದೆ ಬಡವರೆಂದು ಹೇಳಿಕೊಂಡವರು ಮುಂದಿಟ್ಟ ಆಮಿಷಗಳಿಗೆ ಪ್ರತಿಯಾಗಿ ಅಂತಹವರ ಮಕ್ಕಳನ್ನು ಅವರ ಆಯ್ಕೆಯ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕಾಗಿ ಸೇರ್ಪಡೆಗೊಳಿಸುವಲ್ಲಿ ಬದ್ಧತೆ ತೋರಿದರು. ಹೀಗೆ ಮಾಡಿದ್ದರ ಪರಿಣಾಮವಾಗಿ ಒಂದು ಕಡೆ ಸರ್ಕಾರಿ ಶಾಲೆಗಳಿಗೆ ಮಕ್ಕಳಿಲ್ಲ. ಇನ್ನೊಂದು ಕಡೆ ಖಾಸಗಿ ಶಾಲೆಗಳಿಗೆ ‘ಶುಲ್ಕ ಮರುಪಾವತಿ’ ಹೆಸರಿನಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ಹೊರೆ ಹೆಚ್ಚಿಸಿದ್ದಾರೆ. ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯ ದುಡ್ಡಲ್ಲವೇ ಅದು? ಇನ್ನು, ಶುಲ್ಕ ಮರುಪಾವತಿಯನ್ನು ನಿಗದಿ ಮಾಡುವ ಹಕ್ಕು ಕೂಡ ಈ ಅಧಿಕಾರಿಗಳದ್ದೇ ಆಗಿದ್ದು ಇಲ್ಲಿಯೂ ‘ಒಳಪೆಟ್ಟು’ ನಡೆದಿರುವುದರಲ್ಲಿ ಅನುಮಾನವಿಲ್ಲ. ಆದರೆ ಕಂಡು ಹುಡುಕಿ ಹೇಳುವವರಾರು?

ಕೆದಕಿದರೆ ನೂರಾರು ರೀತಿಯಲ್ಲಿ ಭ್ರಷ್ಟಾಚಾರ ನಡೆಯುವ ಶಿಕ್ಷಣ ಇಲಾಖೆಯನ್ನು ‘ಸರ್ಜಿಕಲ್ ಸ್ಟ್ರೈಕ್’ ಮೂಲಕ ಶುದ್ಧಗೊಳಿಸಲು ಸರ್ಕಾರ ಬಯಸಿದರೆ, ಈಗ ಇಲಾಖೆಯಲ್ಲಿರುವ ಎಷ್ಟು ಮಂದಿ ಉಳಿದಾರು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ‘ಬೇತಾಳನ ಹೆಗಲೇರಿದ ವಿಕ್ರಮಾದಿತ್ಯ’ನಿಗೂ ಕಷ್ಟವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.