ADVERTISEMENT

ಸಂಕಷ್ಟದಲ್ಲಿ ಸಕ್ಕರೆ ಉದ್ಯಮ

ಕಬ್ಬಿನ ಫಸಲು ಕಡಿಮೆಯಾಗಿರುವುದರಿಂದ ರಾಜ್ಯದ ಗ್ರಾಮೀಣ ಅರ್ಥವ್ಯವಸ್ಥೆ ತೀವ್ರ ಕಷ್ಟಕ್ಕೆ ಸಿಲುಕಿದೆ

ಮಲ್ಲಿಕಾರ್ಜುನ ಹೆಗ್ಗಳಗಿ
Published 27 ಫೆಬ್ರುವರಿ 2017, 5:18 IST
Last Updated 27 ಫೆಬ್ರುವರಿ 2017, 5:18 IST
ಸಕ್ಕರೆ ಕಾರ್ಖಾನೆಗಳು  ಕರ್ನಾಟಕದ ಪ್ರಮುಖ ಕೃಷಿ ಆಧಾರಿತ ಉದ್ಯಮಗಳಾಗಿವೆ. ರಾಜ್ಯದ ಸಕ್ಕರೆ ಉದ್ದಿಮೆ ದೇಶದಲ್ಲಿ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ನಂತರ ಮೂರನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ 66 ಸಕ್ಕರೆ ಕಾರ್ಖಾನೆಗಳು ಉತ್ಪಾದನೆಯಲ್ಲಿ ತೊಡಗಿವೆ. ಇನ್ನೂ 39 ಹೊಸ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಹೊಸ ಕಾರ್ಖಾನೆಗಳ ನಿರ್ಮಾಣ ಕೆಲಸ ಕೂಡ ಆರಂಭವಾಗಿದೆ. ಆತಂಕದ ಸಂಗತಿಯೆಂದರೆ 3 ವರ್ಷಗಳಿಂದ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕೊರತೆಯಿಂದ ನರಳುತ್ತಿವೆ. 
 
2014–15ನೇ ಸಾಲಿನಲ್ಲಿ ರಾಜ್ಯದಲ್ಲಿ 5.6 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಆ ವರ್ಷ 5 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಯಿತು. 2015–16ರಲ್ಲಿ  4.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಆ ವರ್ಷ 4.45 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದೆ. ಪ್ರಸಕ್ತ ಹಂಗಾಮಿನಲ್ಲಿ ಅಂದರೆ 2016–17ನೇ ಸಾಲಿನಲ್ಲಿ ಕೇವಲ 3 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಈ ವರ್ಷ ಸಕ್ಕರೆ ಉತ್ಪಾದನೆ 2.85 ಲಕ್ಷ ಟನ್ ದಾಟುವ ಸಾಧ್ಯತೆಯಿಲ್ಲ.
 
ಸಕ್ಕರೆ ಕಾರ್ಖಾನೆಗಳು ಪ್ರತೀ ಹಂಗಾಮಿನಲ್ಲಿ ಅಕ್ಟೋಬರ್‌ನಿಂದ ಏಪ್ರಿಲ್‌– ಮೇವರೆಗೆ  ಉತ್ಪಾದನೆಯಲ್ಲಿ ತೊಡಗಿರುತ್ತವೆ. ಕಾರ್ಖಾನೆಗಳು ಹೆಚ್ಚು ದಿನ ಉತ್ಪಾದನೆಯಲ್ಲಿ ತೊಡಗಿದರೆ ಸಹಜವಾಗಿ ಉತ್ಪಾದನೆ ಪ್ರಮಾಣ ಹೆಚ್ಚುತ್ತದೆ. ಆದರೆ ಈ ವರ್ಷ ಬಹಳಷ್ಟು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕೊರತೆಯಿಂದ ಫೆಬ್ರುವರಿ ಮೊದಲ ವಾರದಲ್ಲಿಯೇ ಉತ್ಪಾದನೆ ಸ್ಥಗಿತಗೊಳಿಸಿವೆ. 
 
ಮುಂದಿನ ಹಂಗಾಮಿನ ಸ್ಥಿತಿ ಇನ್ನೂ ಭೀಕರವಾಗಬಹುದು. ರೈತರು ಕಬ್ಬು ಬೆಳೆಯುವುದನ್ನು ಕ್ರಮೇಣ ಕಡಿಮೆ ಮಾಡತೊಡಗಿದ್ದಾರೆ. ಕಬ್ಬು ಬೆಳೆಗೆ ನೀರು ಹೆಚ್ಚು ಬೇಕು. ಬರಗಾಲ ಹಾಗೂ ನೀರಿನ ಕೊರತೆಯಿಂದ ರೈತರು  ಅಲ್ಪಾವಧಿ ಬೆಳೆಗಳನ್ನು ಬೆಳೆಯತೊಡಗಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡತೊಡಗಿದ್ದಾರೆ.
 
ಮುಂದಿನ ಹಂಗಾಮಿನಲ್ಲಿ ಸುಮಾರು 2 ಲಕ್ಷ ಟನ್‌ಗಿಂತ ಕಡಿಮೆ ಸಕ್ಕರೆ ಉತ್ಪಾದನೆ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಕಬ್ಬಿನ ಕೊರತೆಯಿಂದ ಸಕ್ಕರೆ ಉತ್ಪಾದನೆ ಮಾತ್ರ ಕಡಿಮೆಯಾಗುವುದಿಲ್ಲ;  ಉದ್ದಿಮೆ ಉಪಉತ್ಪನ್ನಗಳಾದ ಕಬ್ಬಿನ ಸಿಪ್ಪೆ, ಕಾಕಂಬಿ, ಮಳ್ಳಿ ಉತ್ಪಾದನೆಗಳೂ ಕಡಿಮೆಯಾಗುತ್ತವೆ. ಕಬ್ಬಿನ ಸಿಪ್ಪೆಯನ್ನು ಸಕ್ಕರೆ ಕಾರ್ಖಾನೆಗಳು ವಿದ್ಯುತ್ ಉತ್ಪಾದನೆಗೆ, ಕಾಕಂಬಿಯನ್ನು ಮದ್ಯ ಮತ್ತು ಇಥೆನಾಲ್ ಉತ್ಪಾದನೆಗೆ ಹಾಗೂ ಮಳ್ಳಿಯನ್ನು ಸಾವಯವ ಗೊಬ್ಬರ ಉತ್ಪಾದನೆಗೆ ಬಳಸುತ್ತಿವೆ. ಈ ಉಪ ಉತ್ಪನ್ನಗಳು ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ಸಶಕ್ತಗೊಳ್ಳುವುದಕ್ಕೆ ಮತ್ತು ರೈತರಿಗೆ ಕಬ್ಬಿನ ದರ ಹೆಚ್ಚಿಗೆ ನೀಡಲು ಅನುಕೂಲ ಒದಗಿಸುತ್ತವೆ. 
 
ಕಬ್ಬಿನ ಕೊರತೆ, ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳನ್ನು ತೀವ್ರ ಆತಂಕಕ್ಕೆ ಒಡ್ಡಿದೆ. ಮುಂದಿನ ಹಂಗಾಮಿನಲ್ಲಿ (2017–18) ಸಕ್ಕರೆ ಕಾರ್ಖಾನೆಗಳು ಕೇವಲ 40ರಿಂದ 50 ದಿನಗಳವರೆಗೆ ಉತ್ಪಾದನೆಯಲ್ಲಿ ತೊಡಗಬಹುದು ಮತ್ತು ಉತ್ಪಾದನಾ ಸಾಮರ್ಥ್ಯದ ಶೇ25ರಷ್ಟು ಪ್ರಮಾಣ ಮಾತ್ರ ಬಳಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳನ್ನು ನಡೆಸುವುದಕ್ಕಿಂತ ಮುಚ್ಚಿದರೆ ಹಾನಿ ಪ್ರಮಾಣ ಕಡಿಮೆ ಆಗಬಹುದು.  ಆದ್ದರಿಂದ ಮುಚ್ಚುವುದೇ ಲೇಸು ಎಂದು ಆಡಳಿತ ಮಂಡಳಿಯವರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು, ಈ ಸಮಸ್ಯೆ ಎಷ್ಟು ಉಲ್ಬಣಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
 
ಕಬ್ಬಿನ ಕೊರತೆಯ ಮೊದಲ ಗದಾಪ್ರಹಾರ ಸಕ್ಕರೆ ಕಾರ್ಖಾನೆಯಲ್ಲಿ ದುಡಿಯುವ ಉದ್ಯೋಗಿಗಳ ಮೇಲೆ ಆಗಿದೆ. ಪ್ರತೀ ಕಾರ್ಖಾನೆ 200 ರಿಂದ 300 ನೌಕರರಿಗೆ ಕೆಲಸಕ್ಕೆ ಬರಬೇಡಿ ಎಂದು ಹೇಳಿದೆ.  ಕಾರ್ಖಾನೆಗಳ ಪರಿಸರದಲ್ಲಿ  ಕುಟುಂಬಸಹಿತ ವಾಸವಾಗಿರುವ ಇವರೆಲ್ಲ ಕಣ್ಣೀರು ಹಾಕತೊಡಗಿದ್ದಾರೆ. ಪ್ರತೀ ಕಾರ್ಖಾನೆಯಲ್ಲಿ  ಕೊನೇಪಕ್ಷ 1000 ಮಂದಿ ಕಾಯಂ ಉದ್ಯೋಗಿಗಳು ಹಾಗೂ 5000 ಮಂದಿ ಅವಲಂಬಿತ ಉದ್ಯೋಗಿಗಳು ದುಡಿಯುತ್ತಾರೆ. ಅಲ್ಲದೇ ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಹಂಗಾಮಿನಲ್ಲಿ ಸುಮಾರು 12 ಸಾವಿರ ಕೂಲಿಕಾರರು ಕೆಲಸ ಮಾಡುತ್ತಾರೆ. ಇವರಲ್ಲಿ ಹಲವರಿಗೆ ಈಗ ನಿರುದ್ಯೋಗ ಸಮಸ್ಯೆ ಕಾಡತೊಡಗಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ನೆಚ್ಚಿಕೊಂಡಿದ್ದ ಕಾರ್ಮಿಕರಲ್ಲಿ ಒಟ್ಟು 22 ಸಾವಿರ ಮಂದಿ ಈಗ ಕೆಲಸವಿಲ್ಲದೆ ಕುಳಿತಿದ್ದಾರೆ. ಇದು ದುಡಿಯುವ ವರ್ಗಕ್ಕೆ  ಆಘಾತಕಾರಿ. 
 
ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಒಟ್ಟು 1,028 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ರಾಜ್ಯ ಸರ್ಕಾರ 120 ಮೆಗಾವಾಟ್ ವಿದ್ಯುತ್ ಮಾತ್ರ ಖರೀದಿಸುತ್ತಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳ ಬಹಳಷ್ಟು ವಿದ್ಯುತ್ ಘಟಕಗಳು ಬಂದ್ ಆಗಿವೆ.
 
ಈಗಿನ ಸರ್ಕಾರ ತಾನು ಖರೀದಿಸುತ್ತಿರುವ ಅಲ್ಪಸ್ವಲ್ಪ ವಿದ್ಯುತ್ತಿಗೆ ಯೋಗ್ಯ ಬೆಲೆ ಕೂಡ ನಿಗದಿ ಮಾಡಿಲ್ಲ. ಪ್ರತೀ ಯೂನಿಟ್‌ಗೆ ₹ 3.10 ಪಾವತಿ ಮಾಡುತ್ತಿದೆ. ಈ ಧೋರಣೆಯಿಂದ ಕಾರ್ಖಾನೆಗಳು ಹಾನಿ ಅನುಭವಿಸುತ್ತಿವೆ. ಇದು, ಹಿಂದಿದ್ದ ಬಿಜೆಪಿ ಸರ್ಕಾರ ಕೊಟ್ಟ ಬೆಲೆಗಿಂತ  ಯೂನಿಟ್‌ಗೆ ₹ 2.70ರಷ್ಟು ಕಡಿಮೆ. ಸೌರವಿದ್ಯುತ್ ಖರೀದಿಗೆ ಒಂದು ಯೂನಿಟ್‌ಗೆ ಸರ್ಕಾರ ₹ 3.80 ಪಾವತಿ ಮಾಡುತ್ತಿದೆ. ಕಾಗದ, ಕಾರ್ಡ್‌ಬೋರ್ಡ್‌ನಂಥ  ವಸ್ತುಗಳ ತಯಾರಿಕೆಗೆ ಬಳಸಬಹುದಾದ ಮೌಲ್ಯಯುತ ಕಬ್ಬಿನ ಸಿಪ್ಪೆಯನ್ನು ಇಂಧನವಾಗಿ ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಖಾನೆಗೆ ಸರ್ಕಾರ ಕಡಿಮೆ ಬೆಲೆ ಕೊಡುತ್ತಿರುವುದು ವಿಚಿತ್ರವಾದರೂ ಸತ್ಯ. 
 
ಕಬ್ಬು ರಾಜ್ಯದ ಪ್ರಮುಖ ಆರ್ಥಿಕ ಬೆಳೆ. ಪ್ರತೀ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಬೆಳೆಯುವ 25 ಸಾವಿರ ದಿಂದ  40 ಸಾವಿರ ರೈತರಿದ್ದಾರೆ. ಕಬ್ಬಿನ ಫಸಲು ಕಡಿಮೆ ಯಾಗಿರುವುದರಿಂದ ಗ್ರಾಮೀಣ  ಅರ್ಥವ್ಯವಸ್ಥೆ  ತೀವ್ರ ಸಂಕಷ್ಟಕ್ಕೆ ಸಿಲುಕಿದೆ. 
 
ಉದ್ಯಮದ ಕಾಯಕಲ್ಪಕ್ಕೆ ಪರಿಹಾರೋಪಾಯಗಳು ಇವೆ. ಅವುಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಕಬ್ಬು ಬೆಳೆಯುವ ಪ್ರದೇಶವನ್ನು ಹನಿ ನೀರಾವರಿ ಸೌಲಭ್ಯಕ್ಕೆ ಒಳಪಡಿಸುವುದು ಅವಶ್ಯವಿದೆ. ಬ್ರೆಜಿಲ್ ದೇಶ ಈ ವಿಧಾನವನ್ನು ಕಡ್ಡಾಯವಾಗಿ ಅನುಸರಿಸುತ್ತಿದೆ.
 
ಅದು ಇಲ್ಲಿಯ ಜನರಿಗೆ ಮಾದರಿಯಾಗಿದೆ. ಕಡಿಮೆ ಮಳೆ ಬಿದ್ದ ಸಂದರ್ಭದಲ್ಲಿಯೂ ಚೆನ್ನಾಗಿ ಬೆಳೆಯುವ ಕಬ್ಬಿನ ತಳಿ ಗಳನ್ನು ಸಂಶೋಧಿಸಲಾಗಿದೆ. ಅವುಗಳನ್ನು ಅಳವಡಿಸಿ ಕೊಳ್ಳಬೇಕು.   ಹೊಸ ಕಾರ್ಖಾನೆಗಳ ಸ್ಥಾಪನೆಯನ್ನು ಕೆಲ ವರ್ಷ ಸ್ಥಗಿತಗೊಳಿಸುವುದು ಅವಶ್ಯವೆನ್ನುವ ಅಭಿಪ್ರಾಯ ಈ ಉದ್ದಿಮೆ ವಲಯದಲ್ಲಿ ಕೇಳಿಬರುತ್ತಿದೆ. ಇರುವ ಕಾರ್ಖಾನೆಗಳನ್ನು ಹೆಚ್ಚು ಸಶಕ್ತಗೊಳಿಸಬೇಕು. 
ಲೇಖಕ  ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.