ADVERTISEMENT

ಸತ್ಯ ಕಾಣದ ಎರಡು ವರ್ಷಗಳು

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ
Published 30 ಆಗಸ್ಟ್ 2017, 19:30 IST
Last Updated 30 ಆಗಸ್ಟ್ 2017, 19:30 IST

ಶರಣ ಚಳವಳಿ ಮತ್ತು ವಚನ ಸಾಹಿತ್ಯವನ್ನು ಸಮಗ್ರವಾಗಿ ಪರಿಚಯಿಸುವ ಮತ್ತು ಮುಂದಿನ ಪೀಳಿಗೆಗಾಗಿ ಅದನ್ನು ದಾಖಲಿಸಿಡುವ ಸಂಶೋಧನಾ ಕೆಲಸವನ್ನೇ ಬದುಕನ್ನಾಗಿಸಿಕೊಂಡ ಡಾ. ಎಂ.ಎಂ. ಕಲಬುರ್ಗಿಯವರ ಹಣೆಗೆ ಗುಂಡಿಟ್ಟು ಇಂದಿಗೆ ಎರಡು ವರ್ಷಗಳು ಸಂದಿವೆ. ತನ್ನ ಸಾವನ್ನೂ ಸತ್ಯ ಶೋಧನೆಯ ವಸ್ತುವಾಗಿ ಬಿಟ್ಟುಹೋದ ಅವರನ್ನು ಕೊಂದವರ ಕೃತ್ಯ ಕಣ್ಣೆದುರಿಗಿದೆಯೇ ಹೊರತು, ಆ ವ್ಯಕ್ತಿಗಳ ಮತ್ತು ಅವರ ಹಿಂದಿನ ಶಕ್ತಿಗಳ ಗುರುತಿನ ಸತ್ಯ ಮಾತ್ರ ಬಯಲಾಗಿಲ್ಲ.

ಕಳ್ಳರು ಮತ್ತು ಕುಕೃತ್ಯ ಎಸಗುವವರು ನಮ್ಮ ಅಧಿಕೃತ ಪೊಲೀಸ್‌ ಅಪರಾಧ ಶೋಧನಾ ವ್ಯವಸ್ಥೆಗಿಂತ ಹೆಚ್ಚು ದಕ್ಷರಾಗಿರುತ್ತಾರೆ ಎನ್ನುವುದು ಇದರಿಂದ ಸಾಬೀತಾಗುತ್ತಾ ಹೋಗುತ್ತಿದೆ. ಇದುನಮ್ಮ ರಾಜ್ಯ ರಕ್ಷಣಾ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ನಂಬಿಕೆಯನ್ನು ಕುಗ್ಗಿಸುವಂತಹ ಕೆಲಸವೂ ಆಗಿದೆ.

ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸಿಗಬೇಕಾದ ರಾಜ್ಯ ರಕ್ಷಣೆಯು ಸಿಗದೇ ಹೋದಾಗ ಅವರ ವರ್ತನೆಗಳು ಹೇಗಿರುತ್ತವೆ ಎನ್ನುವುದಕ್ಕೆ ಈ ರಾಜ್ಯ ಮತ್ತು ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಅರಾಜಕತೆಯೇ ಸಾಕ್ಷಿಯಾಗುತ್ತಿದೆ. ಇದು ನಮ್ಮ ಬದುಕಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳನ್ನೆಲ್ಲವನ್ನೂ ವ್ಯಾಪಿಸಿಕೊಳ್ಳುತ್ತಿರುವುದರಿಂದ, ಹಳ್ಳಿ ಮತ್ತು ನಗರಗಳಲ್ಲಿ ದುಷ್ಟಶಕ್ತಿಗಳ ಹಾವಳಿಗೆ ಜನ ತತ್ತರಿಸುತ್ತಿರುವುದರ ಜೊತೆಗೆ ಅದನ್ನು ವಿರೋಧಿಸುವ ಮತ್ತು ಸರಿಪಡಿಸುವ ಶಕ್ತಿಯನ್ನೂ ಜನರು ಕಳೆದುಕೊಂಡು ಅಸಹಾಯಕ ನೆಲೆಯಲ್ಲಿ ಹಿಂಸೆಯನ್ನು ಸಹಿಸಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ರಾಜ್ಯಾಡಳಿತದ ದೌರ್ಬಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ADVERTISEMENT

ಕಲಬುರ್ಗಿಯವರ ಪರಿಚಯವಿರುವ ಈ ನಾಡಿನಪ್ರತಿಯೊಬ್ಬ ವ್ಯಕ್ತಿಗೂ ಹೊರನೋಟಕ್ಕೆ ತಿಳಿದಿರುವ ವಿಷಯ ಎಂದರೆ, ಅವರ ಪ್ರಗತಿಪರ ಧೋರಣೆ, ಪುರೋಹಿತಶಾಹಿ ವ್ಯವಸ್ಥೆಯ ಕುತಂತ್ರಗಳನ್ನು ಬಯಲಿಗೆಳೆಯುವ ಬೌದ್ಧಿಕ ಶಕ್ತಿ ಮತ್ತು ಮೌಢ್ಯಗಳನ್ನು ಬಿತ್ತುವ-ಬೆಳೆಯುವ ಕೃತ್ಯಗಳಲ್ಲೇ ಬೆವರಿಳಿಸದೆ ಬದುಕನ್ನು ಸಾಗಿಸುವ ವರ್ಗದ ವಿರುದ್ಧದ ನಿರಂತರ ಹೋರಾಟದ ಕಾರಣಕ್ಕೇ ಹತ್ಯೆಯಾದರು ಎನ್ನುವುದು.

ಆದರೆ, ಅದನ್ನು ಕಾನೂನುಸಮ್ಮತ ಸಾಕ್ಷ್ಯಾಧಾರಗಳಿಂದ ಸಾಬೀತುಪಡಿಸಲಾಗಿಲ್ಲ. ಏಕೆಂದರೆ ಈ ಎರಡು ವರ್ಷಗಳಲ್ಲಿ ಹತ್ಯೆಗೈದವರ ಸುಳಿವೇ ಸಿಕ್ಕಿಲ್ಲ! ಇದೇ ಮಾದರಿಯಲ್ಲಿ ಈ ಹಿಂದೆ ಕೊಲೆಯಾದ ಇಬ್ಬರು ಪ್ರಗತಿಪರ ಚಿಂತಕರ ಕೊಲೆಯ ಹಿಂದಿನ ವ್ಯಕ್ತಿ ಮತ್ತು ಸತ್ಯಗಳೂ ಕೂಡ ಬಯಲಾಗಿಲ್ಲ. ಈ ಮೂರೂ ಜನರ ಮೆದುಳಿನ ಕ್ರಿಯೆಯಾದ ಜೀವಪರ ಮತ್ತು ಮೌಢ್ಯವಿರೋಧಿ ಬುದ್ಧಿಮತ್ತೆಯನ್ನು ನೋಡಿಯೇ, ಅವರ ಭ್ರೂ ಮಧ್ಯೆಯನ್ನು ಗುರಿಯಾಗಿಸಿ ಗುಂಡಿಟ್ಟ ಕೃತ್ಯ ಈ ಸತ್ಯವನ್ನೇ ಹೇಳುತ್ತಿದೆ. ಆದರೆ, ಅದನ್ನು ಪ್ರಾಮಾಣೀಕರಿಸುವ ಸಾಕ್ಷ್ಯಗಳು ಹೊರಬಿದ್ದಿಲ್ಲ. ಈ ನಿಟ್ಟಿನ ಅಪರಾಧ ಶೋಧನೆಯ ಪ್ರಯತ್ನಗಳು ನಿಧಾನವಾದಷ್ಟೂ ನಿಗೂಢವಾದಷ್ಟೂ ಆ ಹತ್ಯೆಗಳ ಹಿಂದಿನ ವ್ಯಕ್ತಿ ಮತ್ತು ಶಕ್ತಿಗಳ ಪ್ರಾಬಲ್ಯ ಪ್ರಾಮಾಣೀಕೃತವಾಗುತ್ತದೆಯೇ ಹೊರತು ತನಿಖಾ ತಂಡದ ದಕ್ಷತೆಯಲ್ಲ. ಅಪರಾಧ ಶೋಧನೆಯಲ್ಲಿ ತೊಡಗಿರುವವರನ್ನು ಇದು ಮತ್ತಷ್ಟು ದಿಕ್ಕು ತಪ್ಪಿಸುತ್ತದೆ, ಧೃತಿಗೆಡಿಸುತ್ತದೆ.

12ನೇ ಶತಮಾನದ ಯಾವ ಬಸವ ಧರ್ಮವನ್ನುಲಿಂಗಾಯತ ಧರ್ಮದ ಹೆಸರಿನಲ್ಲಿ ಪುನರ್ ಸ್ಥಾಪಿಸಬೇಕೆಂಬ ಆಶಯ ಹೊಂದಿ ತಮ್ಮ ಸಂಶೋಧನೆ ಮತ್ತು ಅನುಷ್ಠಾನ ಮಾರ್ಗಗಳನ್ನು ನಿರಂತರವಾಗಿ ಹೆಣಿಯುತ್ತಿದ್ದರೋ, ಆ ಒಂದು ವಿಚಾರವಾದ, ಅವರ ಹತ್ಯೆಯ ಈ ಎರಡು ವರ್ಷಗಳಲ್ಲಿ ಗಟ್ಟಿಗೊಂಡು, ‘ಲಿಂಗಾಯತ ಸ್ವತಂತ್ರ ಧರ್ಮ’ದ ಬೇಡಿಕೆಯ ಚಳವಳಿಯಾಗಿ ರೂಪುಗೊಂಡಿದೆ. ಈ ಬಗ್ಗೆ ಅವರು ಕ್ರೋಡೀಕರಿಸಿಕೊಟ್ಟ ಮಾಹಿತಿ ಸ್ವತಂತ್ರ ಧರ್ಮ ಸಮರ್ಥನೆಗೆ ಸಾಧನವಾಗಿದೆ. ವಚನಗಳನ್ನು ಒಳಗೊಂಡಂತೆ ಪಾಶ್ಚಿಮಾತ್ಯ ವಿದ್ವಾಂಸರಾದ ಎಡ್ಗರ್ ಥರ್ಸ್ಟನ್, ಫ್ರಾನ್ಸಿಸ್ ಬುಕನನ್, ಎಂಥೋವನ್ ಮೊದಲಾದವರ ಸಮೀಕ್ಷಾ ವರದಿಗಳ ಜೊತೆಗೆ, 1881ರಿಂದ ಭಾರತದಲ್ಲಿ ನಡೆದ ಜನಗಣತಿ ಅಂಕಿ-ಅಂಶಗಳ ಆಧಾರಗಳನ್ನು ಕ್ರೋಡೀಕರಿಸಿಕೊಟ್ಟಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರ ಕೊನೇ ದಿನಗಳ ಕೊನೆಯ ಸಂಪಾದನೆಯಾದ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ಶೂನ್ಯಪೀಠಾರೋಹಣ ಬೆಳ್ಳಿಹಬ್ಬದ ಅಭಿನಂದನಾ ಗ್ರಂಥ, ‘ಶರಣಶ್ರೀ’ಯ ಮೊದಲ ಭಾಗದಲ್ಲಿ ದಾಖಲಿಸಿದ್ದಾರೆ. ಈ ಚಳವಳಿ ತೀವ್ರಗೊಂಡಂತೆ ಮತ್ತು ಸೈದ್ಧಾಂತಿಕ ಹಾಗೂ ಸಂವಿಧಾನಾತ್ಮಕ ನಿಲುವುಗಳು ಸ್ಪಷ್ಟಗೊಂಡಂತೆ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆಯ ಹಿಂದಿನ ಗುಟ್ಟೂ ರಟ್ಟಾಗಬಹುದು. ಹತ್ಯೆಗೆ ಬಳಕೆಯಾದ, ಇಬ್ಬರೆನ್ನಬಹುದಾದ ಹುಡುಗರ ಬದುಕಿನ ಸ್ಥಿತಿಗತಿ, ಇಂದಿನ ನಮ್ಮ ಸಮಷ್ಟಿ ಯುವಶಕ್ತಿಯ ದುರ್ಬಳಕೆಯ ಸ್ಥಿತಿಯನ್ನು ಸಂಕೇತೀಕರಿಸುತ್ತದೆ. ದುಷ್ಟರ ದುಷ್ಕೃತ್ಯಗಳನ್ನು ಬಯಲುಗೊಳಿಸು
ವುದೂ ಸಮಗ್ರ ಅಭಿವೃದ್ಧಿಯ ಒಂದು ಭಾಗವಾಗಿದೆಯಾದ್ದರಿಂದ, ಕಲಬುರ್ಗಿಯವರನ್ನು ಹತ್ಯೆಗೈದ ದುಷ್ಟರನ್ನು ಹಿಡಿಯುವ ಕೆಲಸ ಶೀಘ್ರಗೊಳ್ಳಲಿ ಎನ್ನುವುದು ಈ ನಾಡಿನ ಎಲ್ಲರ ಒತ್ತಾಸೆಯಾಗಿದೆ.

ಹತ್ಯೆಗೆ ಮುಂದಾದ ಶಕ್ತಿಗಳೇ ಅದರ ತನಿಖೆಗೆ ಸಂಬಂಧಿಸಿದ ಸಾಕ್ಷ್ಯಗಳ ನಿವಾರಣೆಗೆ ನಿರಂತರ ಪ್ರಯತ್ನಿಸುತ್ತಿರುತ್ತವೆ ಎನ್ನುವ ಸತ್ಯದ ಸುಳಿವು ಹಿಡಿದು ತನಿಖೆ ಚುರುಕಾಗಲಿ, ನ್ಯಾಯ ಸಿಗಲಿ ಎನ್ನುವುದು ಅವರ ಎಲ್ಲ ಅಭಿಮಾನಿಗಳ ಕೂಗೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.