ADVERTISEMENT

ಹೆಣ್ಣು ಜಾತಿ: ಅಸ್ಮಿತೆ ಪ್ರಶ್ನೆ

ರೂಪ ಹಾಸನ
Published 13 ಏಪ್ರಿಲ್ 2015, 19:30 IST
Last Updated 13 ಏಪ್ರಿಲ್ 2015, 19:30 IST

ಈಗ್ಗೆ ಕೆಲವು ತಿಂಗಳ ಹಿಂದೆ, ಉತ್ತರ ಭಾರತದ ಧಾರ್ಮಿಕ ಸಂಘಟನೆಯೊಂದು ‘ಬೇಟಿ ಬಚಾವೊ, ಬಹೂ ಲಾವೊ’ ಆಂದೋಲನವನ್ನು ಪ್ರಾರಂಭಿಸಿದ ಸುದ್ದಿ, ಪತ್ರಿಕೆಗಳಲ್ಲಿ ಓದಿ ದಿಗ್ಭ್ರಾಂತಳಾದೆ. ಇದರ ಹಿಂದೆ ಇರುವುದು ಹೆಣ್ಣಿನ ಬಗೆಗಿನ ಅಪರಿಮಿತ ಪ್ರೀತಿ-ಗೌರವ ಎಂದುಕೊಂಡರೆ ಮೂರ್ಖರಾದೇವು.

‘ನಮ್ಮ ಧರ್ಮ, ಜಾತಿಯಲ್ಲಿ ಹುಟ್ಟಿರುವ ಹೆಣ್ಣು ಮಗಳನ್ನು ನಮ್ಮ ಧರ್ಮ–ಜಾತಿಯಲ್ಲೇ ಉಳಿಸಿಕೊಳ್ಳಿ. ಬೇರೆ ಧರ್ಮ–ಜಾತಿಯ ಹೆಣ್ಣನ್ನು ಮದುವೆಯಾಗಿ ನಮ್ಮ ಜಾತಿ–ಧರ್ಮಕ್ಕೆ ಕರೆತನ್ನಿ’ ಎಂಬ ಸಂದೇಶ ಆ ಘೋಷಣೆಯ ಹಿಂದಿರುವುದನ್ನು ಅರ್ಥಮಾಡಿಕೊಳ್ಳಬೇಕು. ಅದೊಂದು ಧಾರ್ಮಿಕ ಸಂಘಟನೆಯ ಬಹಿರಂಗ ಹೇಳಿಕೆಯಷ್ಟೇ. ಆದರೆ ಹೆಣ್ಣನ್ನು ಒಂದು ಜೀವವೆಂದು ಕಾಣುವ ಕಣ್ಣಿಲ್ಲದ, ‘ಆಸ್ತಿ’ಯಂತೆ ಪರಿಗಣಿಸುವ ಎಲ್ಲ ಧರ್ಮಗಳ ಗುಪ್ತ ಅಜೆಂಡಾ ಇದಕ್ಕಿಂಥ ಭಿನ್ನವಾಗಿಲ್ಲ.

ಇಡೀ ಸಮಾಜದ ದೃಷ್ಟಿಕೋನವೇ ಹೆಣ್ಣನ್ನು ಲಾಭ-ನಷ್ಟದ ಸರಕಿನಂತೆ ಕಾಣುವುದಾಗಿರುವಾಗ ಹೆಣ್ಣಿನ ಅಸ್ಮಿತೆಯನ್ನು, ಕುರುಹನ್ನು ಯಾವ ಮಾಯಾದೀಪ ಹಿಡಿದು ಹುಡುಕೋಣ? ಇದಕ್ಕೆ ಮುಖ್ಯ ಕಾರಣ, ಪುರುಷ ತನ್ನ ಮೂಗಿನ ನೇರಕ್ಕೇ ಸೃಷ್ಟಿಸಿಕೊಂಡಿರುವ ಕೌಟುಂಬಿಕ ವ್ಯವಸ್ಥೆ. ಇಲ್ಲಿ ಹೆಣ್ಣು ತನ್ನ ಮೂಲ ಮಣ್ಣಿಗೆ ಊರಿಕೊಂಡಿರುವ ತಾಯಿಬೇರನ್ನು ಕಿತ್ತುಕೊಂಡು ಮದುವೆಯ ಹೆಸರಿನಲ್ಲಿ ಬೇರೊಂದು ಮಣ್ಣಿನಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಅನುವಾಗಬೇಕು.

ಹೆಣ್ಣಿನಂತೆ ಅಪರಿಚಿತ ಪರಿಸರದಲ್ಲಿ, ಕುಟುಂಬದ ಎಲ್ಲರೊಂದಿಗೂ ‘ಹೊಂದಿಕೊಳ್ಳುವ’, ತನ್ನ ಇಷ್ಟಾನಿಷ್ಟಗಳನ್ನು ಅವುಡುಗಚ್ಚಿ ಹೊಟ್ಟೆಯೊಳಗಡಗಿಸಿಟ್ಟು ಬಾಳ್ವೆ ಮಾಡುವ ಸಂಕಷ್ಟ ಪುರುಷನಿಗಿಲ್ಲದಂತೆ ನಾಜೂಕಾಗಿ ಕುಟುಂಬದ ಪದರಗಳನ್ನು ಹೆಣೆಯಲಾಗಿದೆ. ಹೀಗಾಗಿ ತವರಿನವರು ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂದರೆ, ಪತಿಯ ಮನೆಯವರು ‘ಮಗ ನಮ್ಮವನಾದರೆ, ಸೊಸೆ ನಮ್ಮವಳೇ?’ ಎನ್ನುತ್ತಾರೆ. ಹೊರದಬ್ಬುವ, ಒಳ ಸೇರಿಸದ ಎರಡಲುಗಿನ ಕತ್ತಿಯ ಮಧ್ಯೆ ಸಿಕ್ಕ ಹೆಣ್ಣಿಗೆ ತನ್ನ ಅಸ್ತಿತ್ವ ಕಂಡುಕೊಳ್ಳುವುದೇ ಬಹು ದೊಡ್ಡ ಪ್ರಶ್ನೆ.

ಹೆಣ್ಣನ್ನು ಮದುವೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ತರಕಾರಿಯಂತೆ ಭಾವಿಸುತ್ತಾ ಬರಲಾಗಿರುವುದರ ಜೊತೆಗೆ, ಅಂಕೆಯಿಲ್ಲದೇ ನಡೆಸುತ್ತಿರುವ ಹೆಣ್ಣು ಭ್ರೂಣಹತ್ಯೆಯಿಂದಾಗಿ, ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳು ಹುಟ್ಟುವ ಸಂಖ್ಯೆಯೇ  ಕಡಿಮೆಯಾಗುತ್ತಿದೆ. ಇದರಿಂದ, ಎಲ್ಲ ಜಾತಿ, ಧರ್ಮಗಳಲ್ಲೂ ವಧುವಿನ ತೀವ್ರ ಕೊರತೆ ಉಂಟಾಗಿದೆ! 2001ರ ಜನಗಣತಿಯಂತೆ ಧರ್ಮಾಧಾರಿತವಾಗಿ ಪ್ರತಿ 1000 ಪುರುಷರಿಗೆ ಉಳಿದಿರುವ ಹೆಣ್ಣು ಮಕ್ಕಳ ಸಂಖ್ಯೆ ಹೀಗಿದೆ: ಸಿಖ್-786, ಜೈನ-870, ಹಿಂದೂ-925, ಬೌದ್ಧ-942, ಮುಸ್ಲಿಂ-950, ಕ್ರೈಸ್ತ- 964.   
  
ಹಾಗಾದರೆ, ತಮ್ಮ ಧರ್ಮಗಳಲ್ಲಿ ಉಂಟಾಗಿರುವ ಹೆಣ್ಣಿನ ಕೊರತೆಯನ್ನು ನೀಗುವುದು ಹೇಗೆ? ಹೀಗಾಗಿ ಹೆಣ್ಣು ‘ಬೇಟಿ ಬಚಾವೊ, ಬಹೂ ಲಾವೊ’ ಎಂಬ ಕುತಂತ್ರದ ಬಲಿಪಶುವಾಗಬೇಕಾಗಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ... ಹೆಣ್ಣಿಗಾಗಿ ಜಾತಿ-ಧರ್ಮಗಳ ನಡುವೆ ಭೀಕರ ಕಾಳಗಗಳೇ ಸೃಷ್ಟಿಯಾಗುವ ಮುನ್ಸೂಚನೆ ಇದು. ಹೆಣ್ಣಿನ ಆಯ್ಕೆಯ ಹಕ್ಕನ್ನು ಎಲ್ಲ ರೀತಿಯಿಂದಲೂ ದಮನಿಸುವ ನೀಚತನಗಳು, ಮರ್ಯಾದೆ  ಹೆಸರಿನ ಕೊಲೆಗಳು, ಕೆಲವೆಡೆ ಹೆಣ್ಣುಮಕ್ಕಳು ಅನ್ಯ ಜಾತಿ, ಧರ್ಮದವರನ್ನು ಪ್ರೀತಿಸುತ್ತಿದ್ದರೆ, ಕೇವಲ ಸಲಿಗೆಯಿಂದಿದ್ದರೂ ಅವರ ಮೇಲೆ ದಾಳಿ ನಡೆಸುವ ದೌರ್ಜನ್ಯದ ಕರಾಳ ರೂಪವನ್ನು ಈಗಾಗಲೇ ಕಾಣುತ್ತಿದ್ದೇವೆ.

ನಮ್ಮ ಜಾತ್ಯತೀತ ದೇಶದಲ್ಲಿ ಜಾತಿ, ಧರ್ಮವನ್ನು ಒಲ್ಲದವರು, ಮೀರಿದವರು, ಮೀಸಲಾತಿ ಪಟ್ಟಿಯಲ್ಲಿ ಸೇರದವರೂ ಪ್ರತ್ಯೇಕವಾಗಿ ತಮ್ಮನ್ನು ಗುರುತಿಸಿಕೊಳ್ಳುವ ಅವಕಾಶ ಈವರೆಗೆ ಇಲ್ಲದುದರಿಂದ ಜಾತಿ, ಧರ್ಮಗಳನ್ನು ಮೀರಲು ಬಯಸುವವರೂ ಮತ್ತೆ ತಾವು ಹುಟ್ಟಿದ ಜಾತಿ–ಧರ್ಮಕ್ಕೆ, ಹೆಣ್ಣು ಬೇರೆ ಜಾತಿ–ಧರ್ಮದವನನ್ನು ವಿವಾಹವಾದರೆ ಪತಿಯ ಜಾತಿ–ಧರ್ಮದಿಂದ ಅವಳೂ, ಅವಳಿಗೆ ಹುಟ್ಟುವ ಮಕ್ಕಳೂ ಗುರುತಿಸಿಕೊಳ್ಳಬೇಕಾದ ಅನಿವಾರ್ಯಕ್ಕೆ ಒಳಗಾಗಬೇಕಾಗುತ್ತದೆ.

ಇಲ್ಲಿ ಸದ್ದಿಲ್ಲದೇ ಇಂತಹ ಮದುವೆಯಾದ ಹೆಣ್ಣು ಮಕ್ಕಳ ಮತಾಂತರ, ಜಾತ್ಯಂತರ ಆಗುತ್ತಿದೆಯಲ್ಲ? ಇಲ್ಲೇಕೆ ‘ಘರ್ ವಾಪಸಿ’ ಎಂದು ಯಾರೂ ಬೊಬ್ಬೆ ಹೊಡೆಯುತ್ತಿಲ್ಲ? ಮೂಲದಲ್ಲಿಯೇ ಹೆಣ್ಣಿನ ಹಕ್ಕು, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆಯ ಅಡಿಪಾಯವೇ ಹೀಗೆ ಮುಕ್ಕಾಗಿರುವಾಗ ಹೆಣ್ಣಿನ ಅಸ್ಮಿತೆಯನ್ನು ಯಾವ ಲೆಕ್ಕದಿಂದಳೆಯುವುದು? ಈ ಪ್ರಶ್ನೆಗಳು ಹೆಣ್ಣು ಮಕ್ಕಳಾದ ನಮ್ಮನ್ನು  ಎಚ್ಚರಿಸಿ ನಮ್ಮ ಆಯ್ಕೆಯನ್ನು ದೃಢಪಡಿಸಿಕೊಳ್ಳಲು ಪ್ರೇರೇಪಿಸಬೇಕಿದೆ.

ಈ ಎಲ್ಲ ಪ್ರಶ್ನೆಗಳಿಗೆ  ಪುಟ್ಟದೊಂದು ಉತ್ತರವಾಗಿ ಬೆಳ್ಳಿರೇಖೆಯಂತೆ, ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಜಾತಿ ಸಮೀಕ್ಷೆ, ಜಾತಿ–ಧರ್ಮ ಒಲ್ಲದವರನ್ನು, ಇಲ್ಲದವರನ್ನು, ಅದರಡಿ ಗುರುತಿಸಿಕೊಳ್ಳಲು ಒಲ್ಲದವರನ್ನು ಪ್ರತ್ಯೇಕವಾಗಿ ಗುರುತಿಸಲೂ ಅನುವು ಮಾಡಿಕೊಟ್ಟಿದೆ. ಅಂತರ್ಜಾತಿ, ಅಂತರ್‌ಧರ್ಮೀಯ ವಿವಾಹವಾದವರೂ ಪ್ರತ್ಯೇಕವಾಗಿ ನಮೂದಿಸಿಕೊಳ್ಳಲೂ ಇಲ್ಲಿ ಅವಕಾಶವಿದೆ. ಅವರಿಗೆ ಹುಟ್ಟಿದ ಮಕ್ಕಳಿಗೂ ತಮಗಿಷ್ಟ ಬಂದ ಜಾತಿ, ಧರ್ಮ ಅಥವಾ ಯಾವುದಕ್ಕೂ ಸೇರದಿರುವ ಆಯ್ಕೆ ಇದೆ.

ಮನೆಯ ಒಡೆಯ ಅಥವಾ ಒಡತಿ ಯಾವುದೇ ಧರ್ಮಕ್ಕೆ ಸೇರಿದವರು, ಅನುಸರಿಸುತ್ತಿರುವವರು ಆಗಿದ್ದರೂ ಇತರ ಸದಸ್ಯರೂ ಪ್ರತ್ಯೇಕವಾಗಿ ತಾವು ನಂಬಿರುವ, ಅಥವಾ ಮತಾಂತರ ಹೊಂದಿದ್ದರೆ ಆ ಧರ್ಮವನ್ನು ನಮೂದಿಸುವ, ಯಾವುದೇ ಧರ್ಮದಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ ಅದನ್ನು ತಿರಸ್ಕರಿಸುವ ಆಯ್ಕೆಯುಳ್ಳವರಾಗಿದ್ದಾರೆ. ಇವೆಲ್ಲಕ್ಕೂ ಈ ಬಾರಿಯ ಜಾತಿ ಸಮೀಕ್ಷೆಯಲ್ಲಿ ಪ್ರತ್ಯೇಕ ಕೋಡ್ ನೀಡಲಾಗಿದೆ. ಈ ರೀತಿಯ ಆಯ್ಕೆಗಳು ದೇಶದ ಪ್ರಜಾಪ್ರಭುತ್ವವಾದಿ, ಜಾತ್ಯತೀತ ಮನೋಧರ್ಮವನ್ನು ಎತ್ತಿಹಿಡಿಯುವಂತಹವು. ಜೊತೆಗೆ ಇದು ಪ್ರಜಾಪ್ರಭುತ್ವವಾದಿ ದೇಶದ ನಾಗರಿಕರಿಗಿರುವ ಆಯ್ಕೆಯ ಸ್ವಾತಂತ್ರ್ಯಕ್ಕೆ ನೀಡುವ ಗೌರವವೂ ಆಗಿದೆ.

ಹೆಣ್ಣಿನ ‘ಆಯ್ಕೆ’ ಕುರಿತು ಇತ್ತೀಚೆಗೆ ವಿಪರೀತ ಚರ್ಚೆಯಾಗುತ್ತಿದೆ. ಜಾತಿ ಸಮೀಕ್ಷೆ ಮೂಲಕ ಇದೇ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೂ ಪ್ರತ್ಯೇಕ ಮತ್ತು ನಿರ್ದಿಷ್ಟ ‘ಆಯ್ಕೆಯ ಹಕ್ಕ’ನ್ನು ಚಲಾಯಿಸುವ, ಯಾವುದು ಹೆಣ್ಣು ಜಾತಿಯ ‘ಅಸ್ಮಿತೆ’ ಎಂದು ಗುರುತಿಸಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಒದಗಿಬಂದಿದೆ.

ಹಿಂದುಳಿದ ಜಾತಿ-ಸಮುದಾಯಗಳ ಹೆಣ್ಣು ಮಕ್ಕಳು, ಅದರಲ್ಲೂ ಹಿಂದುಳಿದ ವರ್ಗದವರು ಸಮಾನತೆಯ ಗುರಿ ಸಾಧಿಸಲು ಬೇಕಿರುವ ಅಭಿವೃದ್ಧಿ ಯೋಜನೆಗಳ ಲಾಭ ಪಡೆಯಲು ತಮ್ಮ ಜಾತಿ, ಧರ್ಮಗಳನ್ನು ದಾಖಲಿಸುವುದು ಅನಿವಾರ್ಯವಾಗಿರುತ್ತದೆ. ಅದರಿಂದ ಹೊರತಾದ ಹೆಣ್ಣು ಮಕ್ಕಳು ತಮ್ಮ ಆಯ್ಕೆ ಒತ್ತಾಯದ್ದೋ, ಒತ್ತಡದ್ದೋ, ಕುರುಡಿನದೋ, ರೂಢಿಗತದ್ದೋ ಆಗದೇ ತಮ್ಮ ಬುದ್ಧಿಪೂರ್ವಕ ಆಯ್ಕೆಯೇ ಆಗುವಂತೆ ನೋಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.