ADVERTISEMENT

ಸಂಗತ | ₹ 10ರ ನಾಣ್ಯ ಹೇಳುವುದೇನು?

ಜನರಲ್ಲಿ ಹತ್ತು ರೂಪಾಯಿ ನಾಣ್ಯದ ಕುರಿತು ಇರುವ ಅಪನಂಬಿಕೆಯನ್ನು, ಬ್ಯಾಂಕಿಂಗ್ ವಲಯದ ಬಗ್ಗೆ ಅವರಲ್ಲಿ ಬೇರೂರತೊಡಗಿರುವ ಅವಿಶ್ವಾಸದ ಸೂಚನೆ ಎಂದು ಪರಿಗಣಿಸಬೇಕಾಗಿದೆ

ಎಚ್.ಕೆ.ಶರತ್
Published 12 ಮಾರ್ಚ್ 2024, 23:54 IST
Last Updated 12 ಮಾರ್ಚ್ 2024, 23:54 IST
   

ಅಂಗಡಿಯಿಂದ ಚಿಲ್ಲರೆ ರೂಪದಲ್ಲಿ 20 ರೂಪಾಯಿ ನೋಟು ಪಡೆದುಕೊಂಡು ಹೋಗಿದ್ದ ಒಬ್ಬ ಯುವಕ ಕೆಲ ಹೊತ್ತಿನ ನಂತರ ಬಂದು, ‘ಪಕ್ಕದ ಬೇಕರಿಯವರು ಈ ನೋಟು ಇಸ್ಕೊಳ್ತಾ ಇಲ್ಲ. ಬೇರೆ ನೋಟು ಕೊಡಿ’ ಅಂತ ಆಗ್ರಹಿಸಿದ. ಅದಕ್ಕೆ ಅಂಗಡಿಯವರು, ‘ಮೊದ್ಲೇ ಚಿಲ್ಲರೆ ಸಿಗೋದು ಕಷ್ಟ. ಅದರಲ್ಲೂ ಹಳೆ ನೋಟು ಬೇಡ, ಚೂರುಪಾರು ಹರಿದಿರುವ ನೋಟು ಬೇಡ ಅಂತೆಲ್ಲ ಡಿಮ್ಯಾಂಡ್ ಮಾಡಿದ್ರೆ ಚಿಲ್ಲರೆ ಹೊಂದಿಸೋದು ಹೇಗೆ? ಬೇಕಿದ್ದರೆ 10 ರೂಪಾಯಿಯ ಕಾಯಿನ್‍ಗಳಿವೆ ಕೊಡ್ಲಾ’ ಅಂದರು. ‘ಆಯ್ತು ಕೊಡಿ’ ಅಂತ ಚೂರು ಹರಿದಿದ್ದ 20 ರೂಪಾಯಿ ನೋಟು ಕೊಟ್ಟು ಎರಡು ನಾಣ್ಯಗಳನ್ನು ಪಡೆದುಕೊಂಡು ಹೋದ. ಕೆಲವೇ ನಿಮಿಷಗಳಲ್ಲಿ ಮತ್ತೆ ವಾಪಸ್ ಬಂದು, ‘ಆ ಬೇಕರಿಯವರು ಈ ಕಾಯಿನ್‍ಗಳನ್ನೂ ತಗೋತಿಲ್ಲ’ ಅಂದ. ‘ಹಾಗಾದ್ರೆ ಸದ್ಯಕ್ಕೆ ಇರೋ ಇಪ್ಪತ್ರೂಪಾಯಿ ನೋಟನ್ನೇ ಕೊಡ್ತೀನಿ. ಎಲ್ಲೂ ಹೋಗ್ಲಿಲ್ಲ ಅಂದ್ರೆ ಇಲ್ಗೇ ತಂದ್ಕೊಡು’ ಎಂದ ಅಂಗಡಿಯವರ ಮಾತಿಗೆ ಯುವಕ ಸಮ್ಮತಿಸಿದ.

ಹತ್ತು ರೂಪಾಯಿಯ ನಾಣ್ಯಗಳ ಚಲಾವಣೆಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಯಾವುದೇ ನಿರ್ಬಂಧ ಹೇರದಿದ್ದರೂ, ಇಂದಿಗೂ ಜನಸಾಮಾನ್ಯರು, ವ್ಯಾಪಾರಸ್ಥರು ಇವುಗಳನ್ನು ಸ್ವೀಕರಿಸಲು ಹಿಂಜರಿಯು
ತ್ತಿದ್ದಾರೆ. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಬೇರೆ ಆಯ್ಕೆಗಳು ಲಭ್ಯವಾಗದಿದ್ದಲ್ಲಿ ಮಾತ್ರ ಒಲ್ಲದ ಮನಸ್ಸಿ
ನಿಂದಲೇ ನಾಣ್ಯಗಳನ್ನು ಪಡೆಯಲು ಮುಂದಾಗುತ್ತಿದ್ದಾರೆ. ಹತ್ತು ರೂಪಾಯಿಯ ನಾಣ್ಯದ ಕುರಿತು ಜನರ ಮನಸ್ಸಿನಲ್ಲಿ ಬೇರೂರಿರುವ ತಪ್ಪು ತಿಳಿವಳಿಕೆ ಹೋಗಲಾಡಿಸುವ ಸಲುವಾಗಿ ಆರ್‌ಬಿಐ
ಸುತ್ತೋಲೆಗಳನ್ನೇ ಹೊರಡಿಸಿದ್ದರೂ ಅವು ಜನರ ಮೇಲೆ ಬೀರಿರುವ ಪರಿಣಾಮ ಮಾತ್ರ ನಗಣ್ಯ.

₹ 10ರ ನಾಣ್ಯಕ್ಕೆ ಕೂಡ ಬೇರೆ ನಾಣ್ಯಗಳು ಹಾಗೂ ನೋಟುಗಳಿಗೆ ಇರುವಷ್ಟೇ ಮಾನ್ಯತೆ ಇದೆ ಎನ್ನುವುದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ವನ್ನು ಯಾರಾದರೂ ಮಾಡಲು ಮುಂದಾದರೆ, ಅವರಿಗೆ ಎದುರಾಗುವ ಪ್ರಶ್ನೆ, ‘ಬೇರೆ ಕಡೆ ಕೊಡೋಕೆ ಹೋದ್ರೆ ಯಾರೂ ಇಸ್ಕೊಳಲ್ಲ. ಇವನ್ನ ಇಟ್ಕೊಂಡು ಏನ್ ಮಾಡೋದು?’

ADVERTISEMENT

ಜನರಿಂದಲೇ ಭಾಗಶಃ ‘ನಿಷೇಧ’ಕ್ಕೆ ಒಳಗಾಗುತ್ತಿರುವ ಹತ್ತು ರೂಪಾಯಿ ನಾಣ್ಯವು ದೇಶದ
ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಜನರಲ್ಲಿ ಸುಪ್ತವಾಗಿ ಬೇರೂರತೊಡಗಿರುವ ಅಪನಂಬಿಕೆಗೆ ಹಿಡಿದ ಕನ್ನಡಿಯಂತೆ ಭಾಸವಾಗುವುದಿಲ್ಲವೇ? 2016ರಲ್ಲಿ ಯಾವುದೇ ಮುನ್ಸೂಚನೆ ನೀಡದೆ ದಿಢೀರನೆ ₹ 500 ಹಾಗೂ ₹ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಲಾಯಿತು. ಈ ಬೆಳವಣಿಗೆ ಅದುವರೆಗೂ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಅದರ ನಿಯಂತ್ರಣದ ಹೊಣೆ ಹೊತ್ತಿರುವ ರಿಸರ್ವ್ ಬ್ಯಾಂಕ್ ಮೇಲೆ ಜನಸಾಮಾನ್ಯರು ಇಟ್ಟಿದ್ದ ನಂಬಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಹೀಗಾಗಿಯೇ, ರಿಸರ್ವ್ ಬ್ಯಾಂಕ್ ಅಧಿಕೃತವಾಗಿ ಹೇಳದಿರುವ ಅಂಶಗಳಿಗೂ ಜನಸಾಮಾನ್ಯರ ವಲಯದಲ್ಲಿ ಮಾನ್ಯತೆ ದೊರೆತು, ಅವು ಅನುಷ್ಠಾನಕ್ಕೂ ಬರುತ್ತಿವೆ. ನೋಟು ರದ್ದತಿಯ ನಂತರ ಚಲಾವಣೆಗೆ ಬಿಟ್ಟಿದ್ದ ₹ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ. ದೈನಂದಿನ ವಹಿವಾಟಿನ ವೇಳೆ ಕೈ ಬದಲಾವಣೆಯಾಗುತ್ತಿದ್ದ ₹ 10 ಮತ್ತು ₹ 20 ಮುಖಬೆಲೆಯ ನೋಟುಗಳನ್ನು ಗಮನಿಸುತ್ತಿದ್ದವರಿಗೆ, ಕಡಿಮೆ ಮುಖಬೆಲೆಯ ಹೊಸ ನೋಟುಗಳು ಸಿಗುವುದು ತೀರಾ ಅಪರೂಪವಾಗುತ್ತಿದೆ.
ನಾಣ್ಯಗಳ ಚಲಾವಣೆಯನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಬ್ಯಾಂಕುಗಳು ಹೀಗೆ ಮಾಡುತ್ತಿರಬಹುದೇನೊ ಎನ್ನುವ ಅನುಮಾನ ವ್ಯಾಪಾರಸ್ಥರದ್ದು.

ರಿಸರ್ವ್ ಬ್ಯಾಂಕ್ ತಾನು ಅನುಸರಿಸುವ ಕಾರ್ಯತಂತ್ರದ ಕುರಿತು ಜನಸಾಮಾನ್ಯರಿಗೆ ಮುನ್ಸೂಚನೆ ನೀಡದೆ ಅನುಷ್ಠಾನಕ್ಕೆ ತರುವುದು ತೀರಾ ಅಪರೂಪವೇನಲ್ಲ. ಹೀಗಾಗಿ, ದೈನಂದಿನ ವ್ಯವಹಾರಗಳಲ್ಲಿ ನಗದು ಚಲಾವಣೆಯಾಗುವುದನ್ನು ಗಮನಿಸುವ ಮಂದಿ, ತಮ್ಮದೇ ಆದ ವಿಶ್ಲೇಷಣೆಗಳನ್ನು ಹರಿಯಬಿಡುವುದು ಮತ್ತು ಅವುಗಳಿಗೆ ಜನಸಾಮಾನ್ಯರ ನಡುವೆ ಮನ್ನಣೆ ದೊರೆಯುತ್ತಾ ಸಾಗುವುದು ಮುಂದುವರಿದೇ ಇದೆ.

ದೈನಂದಿನ ವ್ಯಾಪಾರ ವಹಿವಾಟುಗಳಲ್ಲಿ ಯುಪಿಐ ಆಧಾರಿತ ಆನ್‍ಲೈನ್ ಪಾವತಿ ವ್ಯಾಪಕವಾಗಿ
ಇರುವುದರಿಂದ ಚಿಲ್ಲರೆ ಸಮಸ್ಯೆ ವ್ಯಾಪಾರಸ್ಥರನ್ನು ತೀವ್ರವಾಗಿಯೇನೂ ಬಾಧಿಸುತ್ತಿಲ್ಲ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಆನ್‍ಲೈನ್ ಪಾವತಿ ವ್ಯವಸ್ಥೆಯಲ್ಲಿ ತೊಡಕು ಉಂಟಾದಾಗ ಮತ್ತು ಆನ್‍ಲೈನ್ ಪಾವತಿ ವ್ಯವಸ್ಥೆಗೆ ಒಗ್ಗಿಕೊಳ್ಳದ ವ್ಯಾಪಾರಿ ಅಥವಾ ಗ್ರಾಹಕರಿಗೆ ಚಿಲ್ಲರೆಯ ಅಲಭ್ಯತೆ ಕಾಡುತ್ತದೆ.

ಹತ್ತು ರೂಪಾಯಿ ನಾಣ್ಯದ ಕುರಿತು ಮೂಡಿರುವ ಅಪನಂಬಿಕೆಯನ್ನು ಬರೀ ಅದೊಂದಕ್ಕೆ ಮಾತ್ರ ಅನ್ವಯಿಸಿ ನೋಡುವ ಬದಲಿಗೆ, ಬ್ಯಾಂಕಿಂಗ್ ವಲಯದ ಮೇಲೆ ಜನರಲ್ಲಿ ಬೇರೂರತೊಡಗಿರುವ ಅವಿಶ್ವಾಸದ ಸೂಚನೆ ಎಂಬಂತೆ ಪರಿಗಣಿಸುವ ಜರೂರತ್ತಿದೆ.

ಚುನಾವಣಾ ಬಾಂಡ್‍ಗಳಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ಸೂಚಿಸಿದ ನಂತರ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ವರ್ತಿಸಿದ ರೀತಿ ಕೂಡ ಬ್ಯಾಂಕಿಂಗ್ ವಲಯದ ಮೇಲೆ ಜನಸಾಮಾನ್ಯರು ಇಟ್ಟಿರುವ ಭರವಸೆಗೆ ಚ್ಯುತಿ ತರುವಂತೆ ಇತ್ತು. ಬ್ಯಾಂಕಿಂಗ್ ವ್ಯವಸ್ಥೆಗೆ ಗ್ರಾಹಕರ ಹಿತಕ್ಕಿಂತ ಅಧಿಕಾರಸ್ಥರು ಮತ್ತು ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಬೆರಳೆಣಿಕೆಯಷ್ಟು ಉದ್ಯಮಿಗಳ ಹಿತ ಕಾಯುವುದಷ್ಟೇ ಆದ್ಯತೆಯಾದಾಗ ಅದರ ವಿಶ್ವಾಸಾರ್ಹತೆಗೆ ಧಕ್ಕೆ ಒದಗದಿರುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.