ADVERTISEMENT

ಉತ್ತರ ವಿಯಟ್ನಾಂ ಮೇಲೆ ಮತ್ತೆ ಬಾಂಬ್ ದಾಳಿ ಸಂಭವ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 7:39 IST
Last Updated 19 ಜೂನ್ 2018, 7:39 IST
ಸಾಂದರ್ಭಿಕ ಚಿತ್ರ (ಕೃಪೆ: ಹಿಸ್ಟರಿನೆಟ್‌)
ಸಾಂದರ್ಭಿಕ ಚಿತ್ರ (ಕೃಪೆ: ಹಿಸ್ಟರಿನೆಟ್‌)   

ಉತ್ತರ ವಿಯಟ್ನಾಂ ಮೇಲೆ ಮತ್ತೆ ಬಾಂಬ್ ದಾಳಿ ಸಂಭವ
ವಾಷಿಂಗ್‌ಟನ್, ಜೂನ್ 18– ಉತ್ತರ ವಿಯಟ್ನಾಂ ಮೇಲೆ ಅನಿರ್ಬಂಧಿತ ಬಾಂಬ್ ದಾಳಿಯನ್ನು ಅಮೆರಿಕ ಪುನಃ ಆರಂಭಿಸಬಹುದು.

ಬಾಂಬ್ ದಾಳಿಯನ್ನು ತೀವ್ರಗೊಳಿಸಲುವಾಷಿಂಗ್‌ಟನ್ ಹಾಗೂ ಸೈಗಾನಿನ ಮಿಲಿಟರಿ ಸಲಹೆಗಾರರು ಜಾನ್‌ಸನ್ ಮೇಲೆ ಒತ್ತಡ ತರುತ್ತಿದ್ದಾರೆ.

ಮುಖ್ಯಮಂತ್ರಿಗೆ ಕೊಲೆ ಬೆದರಿಕೆ
ಬೆಂಗಳೂರು, ಜೂನ್ 18– ಮಂತ್ರಿಮಂಡಲ ವಿಸ್ತರಿಸಲು ಪ್ರಯತ್ನಿಸಿದರೆ ರಾಬರ್ಟ್ ಕೆನಡಿಗೆ ಒದಗಿದ ಗತಿಗೆ ತುತ್ತಾಗಬೇಕಾದೀತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಬೆದರಿಕೆ ಪತ್ರವೊಂದು ಬಂದಿದೆ.

ADVERTISEMENT

ಮುಖ್ಯಮಂತ್ರಿಗೆ ಇಂದು ಬಂದಿರುವ ಪತ್ರದಲ್ಲಿ ‘ನಿಮ್ಮ ಪ್ರಾಣ ಅಪಾಯದಲ್ಲಿದೆ. ನಿಮ್ಮನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ’ ಎಂದು ಬೆದರಿಸಲಾಗಿದೆ.

ಶ್ರೀ ಪಾಟೀಲರು ಈ ಪತ್ರವನ್ನು ಚೇಂಬರ್ಸ್‌ನಲ್ಲಿ ಪತ್ರಕರ್ತರಿಗೆ ತೋರಿಸಿ ತಮಾಷೆಯಾಗಿ ನಕ್ಕು ಅದರ ವಿಚಾರವನ್ನು ತೇಲಿಸಿಬಿಟ್ಟರು.

ಮುಖ್ಯಮಂತ್ರಿಗೆ ಬಂದಿರುವ ಇನ್‌ಲ್ಯಾಂಡ್ ಪತ್ರವನ್ನು ‘ಮಹೇಂದ್ರ’ ತನ್ನ ಹೆಸರೆಂದು ಹೇಳಿಕೊಂಡಿರುವವನು ಬರೆದಿದ್ದಾನೆ.

ಮದ್ರಾಸಿನಂತಹ ರಾಜ್ಯದಲ್ಲಿ ಹತ್ತೇ ಮಂದಿ ಸಚಿವರಿರುವಾಗ ಈಗಾಗಲೇ ಅಗಾಧವಾಗಿರುವ ತಮ್ಮ ಸಂಪುಟವನ್ನು ಇನ್ನಷ್ಟು ವಿಸ್ತರಿಸುವಿರೇಕೆ ಎಂದು ಮುಖ್ಯಮಂತ್ರಿಗೆ ಅವನ ಪ್ರಶ್ನೆ.

‘ಯಾವಾಗ ಎಂಬುದನ್ನು ನಾನು ಹೇಳಲಾರೆ ಸ್ವಲ್ಪ ಕಾಲದಲ್ಲೇ ನಿಮ್ಮನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ನಿಮ್ಮನ್ನು ಕೊಲ್ಲುವೆ, ನಾನು ಸುವರ್ಣ ಅವಕಾಶಕ್ಕಾಗಿ ವೀಕ್ಷಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ಯಾರಿಸ್ ಚರ್ಚೆ: ಅಮೆರಿಕದ ಸಲಹೆಗೆ ಉತ್ತರ ವಿಯಟ್ನಾಂ ಒಪ್ಪಿಗೆ ಸಂಭವ
ಪ್ಯಾರಿಸ್, ಜೂ. 18– ಪ್ರಚಾರವನ್ನು ಕಡಿಮೆ ಮಾಡಿ ವಿಯಟ್ನಾಮಿನಲ್ಲಿ ಯುದ್ಧವನ್ನು ತಗ್ಗಿಸುವ ಅನೌಪಚಾರಿಕ ಮಾತುಕತೆಗೆ ಬರಬೇಕೆಂಬ ಅಮೆರಿಕದ ಸಲಹೆಗೆ ಉ. ವಿಯಟ್ನಾಂ ಒಪ್ಪಬಹುದೆಂದು ಅಮೆರಿಕ ಆಶಿಸಿದೆ.

ರಾಷ್ಟ್ರೀಯ ಆದಾಯದ ಶೇ 6 ರಷ್ಟು ಶಿಕ್ಷಣಕ್ಕೆ: ಸಚಿವ ಶಾಖೆ ಸಲಹೆ ಬಗ್ಗೆ ಭಿನ್ನಾಭಿಪ್ರಾಯ
ನವದೆಹಲಿ, ಜೂ. 18– ರಾಷ್ಟ್ರೀಯ ಆದಾಯದಲ್ಲಿ ಶೇಕಡ ಆರರಷ್ಟನ್ನು ಶಿಕ್ಷಣಕ್ಕೆ ವಿನಿಯೋಗಿಸಬೇಕೆಂಬ ಶಿಕ್ಷಣ ಸಚಿವ ಶಾಖೆಯ ಸಲಹೆಗೆ ಕೇಂದ್ರ ಸಂಪುಟದ ಸಭೆಯಲ್ಲಿ ಇಂದು ಪರಸ್ಪರ ವಿರೋಧಾಭಿಪ್ರಾಯಗಳು ಮೂಡಿದವು.

ರಾಜ್ಯ ಸರ್ಕಾರ ಎಲ್ಲ ಪಕ್ಷಗಳ ಸದಸ್ಯರ ಜತೆ ಕೂಲಂಕಷವಾದ ಸಮಾಲೋಚನೆ ನಡೆಸಿದ ನಂತರ ಶಿಕ್ಷಣ ಸಚಿವ ಶಾಖೆ ಈ ಸಲಹೆಗಳನ್ನು ಆಖೈರುಗೊಳಿಸಿದೆ.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ ಕಟ್ಟೀಮನಿ?
ಬೆಂಗಳೂರು, ಜೂ. 18– ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದಕ್ಕೆ ಹಾಕಿದುದರ ಸಂಬಂಧದಲ್ಲಿ ಶ್ರೀ ತಿ.ತಾ. ಶರ್ಮ ಅವರು ಸಲ್ಲಿಸಿದ ರಿಟ್ ಅರ್ಜಿಯು ಹೈಕೋರ್ಟ್‌ನಲ್ಲಿ ತೀರ್ಮಾನವಾದ ಮೇಲೆ ಅಧ್ಯಕ್ಷ ಸ್ಥಾನದ ಚುನಾವಣೆಗೆ, ವಿಧಾನಪರಿಷತ್ತಿಗೆ ನಾಮಕರಣಗೊಂಡಿರುವ ‘ಖ್ಯಾತ’ ಕಾದಂಬರಿಕಾರ ಶ್ರೀ ಬಸವರಾಜ ಕಟ್ಟೀಮನಿ ಅವರನ್ನು ಸೂಚಿಸುವ ಪ್ರಯತ್ನಗಳು ನಡೆದಿವೆ.

ಶ್ರೀ ಕಟ್ಟೀಮನಿಯವರು ಈ ಸೂಚನೆಗೆ ಅನುಕೂಲಾಭಿಪ್ರಾಯ ನೀಡಿರುವರೆಂದೂ, ಈಗಾಗಲೇ ಸ್ವರ್ಧಿಗಳಾಗಿರುವ ಇತರ ಮೂರು ಮಂದಿಯನ್ನು, ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡುವ ಪ್ರಯತ್ನವೂ ಆರಂಭವಾಗಿದೆ ಎಂದು ವಿಶ್ವಸನೀಯವಾಗಿ ತಿಳಿದುಬಂದಿದೆ.

ಪ್ಯಾರಿಸ್ ಮಾತುಕತೆಗೆ ದೀರ್ಘಕಾಲ ಬಿಕ್ಕಟ್ಟು:ಧಾಂಟ್ ಭಾವನೆ
ವಿಶ್ವಸಂಸ್ಥೆ, ಜೂ. 18– ಅಮೆರಿಕ ಮತ್ತು ಉತ್ತರ ವಿಯಟ್ನಾಂಗಳ ಮಧ್ಯೆ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳು ದೀರ್ಘಕಾಲ ಬಿಕ್ಕಟ್ಟಿನಲ್ಲೇ ತೆವಳುತ್ತ ಉಳಿದಿರುತ್ತದೆಂದು ತಾವು ಭಾವಿಸುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟ್ ಇಂದು ಇಲ್ಲಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.