ADVERTISEMENT

ಕೃಷ್ಣಾ–ಗೋದಾವರಿ ಜಲವಿವಾದ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2017, 19:30 IST
Last Updated 2 ಆಗಸ್ಟ್ 2017, 19:30 IST

ಮೂರೂ ವಿಶ್ವವಿದ್ಯಾಲಯಗಳ ಏಕರೂಪ ಆಡಳಿತದ ಸಲಹೆಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಆ. 2– ಕರ್ನಾಟಕ, ಬೆಂಗಳೂರು ಮತ್ತು ಮೈಸೂರು ಈ ಮೂರೂ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆ ಏಕರೂಪದ್ದಾಗಿರಬೇಕೆಂಬ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇಂದು ವಿಧಾನ ಪರಿಷತ್ತಿನಲ್ಲಿ ವ್ಯಕ್ತಪಟ್ಟಿತು.

ಖಾಸಗಿ ನಿರ್ಣಯ ಒಂದರ ಮೇಲಿನ ಚರ್ಚೆಯಲ್ಲಿ ಉಪಕುಲಪತಿಗಳ ಆಯ್ಕೆಯ ವಿಧಾನ ವಿಶೇಷವಾಗಿ ಪ್ರಸ್ತಾಪಿಸಲ್ಪಟ್ಟಿತು. ‘ರಾಜ್ಯದಲ್ಲಿ ಉನ್ನತ ಶಿಕ್ಷಣವನ್ನು ಕೊಡುವ ಬಗ್ಗೆ ಏಕರೀತಿಯ ಆಡಳಿತ ವ್ಯವಸ್ಥೆಯನ್ನು ದೊರಕಿಸುವ ದೃಷ್ಟಿಯಿಂದ ಮೈಸೂರು, ಕರ್ನಾಟಕ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳ ಶಾಸನಗಳನ್ನು ಕೂಡಲೆ ತಿದ್ದುಪಡಿ ಮಾಡಲು’ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಳುವ ಪಕ್ಷೇತರ ಸದಸ್ಯ ಶ್ರೀ ಜೆ.ಬಿ. ಮಲ್ಲಾರಾಧ್ಯರವರ ನಿರ್ಣಯವು ಇಂದು ಅಪೂರ್ಣವಾಗಿ ಚರ್ಚಿಸಲ್ಪಟ್ಟಿತು.

ADVERTISEMENT

ಕೃಷ್ಣಾ–ಗೋದಾವರಿ ಜಲವಿವಾದ ಸಂಧಾನಕ್ಕೆ ಮೂರು ತಿಂಗಳ ಅವಧಿ: ನಮ್ಮ ಹಿತಕ್ಕೆ ಧಕ್ಕೆ ಇಲ್ಲ

ಬೆಂಗಳೂರು, ಆ. 2– ಕೃಷ್ಣಾ, ಗೋದಾವರಿ ನೀರಿನ ಅಂತರರಾಜ್ಯ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು, ಮೈಸೂರು ಸರ್ಕಾರ, ಕೇಂದ್ರಕ್ಕೆ ಕೊಟ್ಟಿರುವ ಮೂರು ತಿಂಗಳುಗಳ ಅವಧಿಯಲ್ಲಿ ರಾಜ್ಯದ ಹಿತಕ್ಕೆ ಯಾವುದೇ ಧಕ್ಕೆ ಬರಲಾರದು ಎಂದು ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.

‘ವಿವಾದದಲ್ಲಿ ಇದೀಗ ಕೇಂದ್ರ ವಿಷಯವಾಗಿರುವ ಆಂಧ್ರಪ್ರದೇಶದ ನಾಗಾರ್ಜುನ ಸಾಗರ ಯೋಜನೆಯ ಎರಡನೇ ಹಂತದಲ್ಲಿ ಕ್ರೆಸ್ಟ್ ಗೇಟುಗ
ಳನ್ನು ಸ್ಥಾಪಿಸುವ ಘಟ್ಟ ಇನ್ನೂ ತಲುಪಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಗೇಟುಗಳ ಸ್ಥಾಪನೆಗೆ ಸಂಬಂಧಿಸಿದ ಸಿಮೆಂಟ್ ಕೆಲಸವನ್ನು ನಿಲ್ಲಿಸಲಾಗಿದೆ’ ಎಂದು ತಿಳಿಸಿದರು.

ಆಡಳಿತ ಭಾಷಾ ಮಸೂದೆ: ಮುಖ್ಯಮಂತ್ರಿ ಪರಿಶೀಲನೆಯಲ್ಲಿ

ಬೆಂಗಳೂರು, ಆ. 2– ಆಡಳಿತ ಭಾಷೆಗೆ ಸಂಬಂಧಿಸಿದ ಮಸೂದೆಯು ಕೇಂದ್ರ ಗೃಹ ಸಚಿವರಿಂದ ಕಳುಹಿಸಲ್ಪಟ್ಟಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನ ಸಭೆಯಲ್ಲಿ ತಿಳಿಸಿ ‘ನಾನು ಅದನ್ನು ಪರಿಶೀಲಿಸುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.