ADVERTISEMENT

ಗುರುವಾರ, 10–8–1967

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2017, 19:30 IST
Last Updated 9 ಆಗಸ್ಟ್ 2017, 19:30 IST

ನಗರದಲ್ಲಿ ಸಂಸತ್ ಅಧಿವೇಶನ ನಡೆಸುವ ಸಲಹೆಗೆ ಬೆಂಬಲ
ನವದೆಹಲಿ, ಆ. 9–
ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಪಾರ್ಲಿಮೆಂಟ್ ಅಧಿವೇಶನ ಸಾಧ್ಯತೆ ಪರಿಶೀಲನೆಗೆ ಇಂದು ಇಲ್ಲಿ ಸೇರಿದ ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಕಾರ್ಯಕಾರಿ ಸಮಿತಿಯು ಬೆಂಬಲ ನೀಡಿತೆಂದು ತಿಳಿದುಬಂದಿದೆ.

ಈ ಕ್ರಮವು ರಾಷ್ಟ್ರೀಯ ಸಮಗ್ರತೆಗೆ ನಾಂದಿಯಾಗುವುದಲ್ಲದೆ ಜನರಲ್ಲಿ ‘ನಾವೆಲ್ಲಾ ಒಂದು’ ಎಂಬ ಭಾವನೆ ಮೂಡಿಬರಲು ಸಹಕಾರಿಯಾಗುವುದೆಂದು ಕೇವಲ ಇಬ್ಬರು ಹೊರತು ಉಳಿದೆಲ್ಲಾ ಸದಸ್ಯರು ಪ್ರತಿಪಾದಿಸಿದರು.

ಇದರಿಂದ ಪ್ರತ್ಯೇಕತಾ ಭಾವನೆ ತೊಲಗಿ ಉತ್ತರ–ದಕ್ಷಿಣದ ನಡುವೆ ನಿಕಟವಾದ ಭಾವೈಕ್ಯತೆ ಉಂಟಾಗುವುದೆಂದು ಸಲಹೆಯ ಪ್ರಮುಖ ಬೆಂಬಲಿಗರಾದ ಶ್ರೀ ಕೆ. ಹನುಮಂತಯ್ಯನವರು ಹೇಳಿದರು.

ADVERTISEMENT

ಸ್ವಲ್ಪವೇ ಪಾರ್ಲಿಮೆಂಟ್ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ದಕ್ಷಿಣಕ್ಕೆ ರವಾನಿಸುವುದು ಹೆಚ್ಚುವರಿ ವೆಚ್ಚ ಬಿಟ್ಟಲ್ಲಿ ಅಧಿವೇಶನಕ್ಕಾಗಿ ಹೆಚ್ಚು ಹಣ ವ್ಯಯದ ಅಗತ್ಯವಿಲ್ಲ ಎಂದು ಶ್ರೀಮತಿ ಲಲಿತಾ ರಾಜಗೋಪಾಲನ್ ತಿಳಿಸಿದರು.

ದಕ್ಷಿಣದಲ್ಲಿ ಪಾರ್ಲಿಮೆಂಟ್ ನಡೆಯುವುದಕ್ಕೆ ಶ್ರೀ ತುಲಸೀದಾಸ್ ಜಾಧವ್, ಶ್ರೀ ಕೆ.ಎಸ್. ಬಜಾಜ್ ಹಾಗೂ ಇತರರು ಬೆಂಬಲ ನೀಡಿದರು. ಶ್ರೀಮತಿ ಶಾರದಾ ಮುಖರ್ಜಿ ಹಾಗೂ ಪಾರ್ಲಿಮೆಂಟರಿ ವ್ಯವಹಾರಗಳ ಉಪಮಂತ್ರಿ ಶ್ರೀ ಜೆ.ಬಿ. ಮುತ್ಯಾಲರಾವ್ ಅವರು ಸಲಹೆಯನ್ನು ವಿರೋಧಿಸಿದರು.

ರಾಜಕೀಯ ಸಂತ್ರಸ್ತರಿಗೆ 50 ರೂ. ವಿಶ್ರಾಂತಿ ವೇತನ
ಬೆಂಗಳೂರು, ಆ. 9–
ರಾಜ್ಯದಲ್ಲಿ 55 ವರ್ಷ ವಯಸ್ಸಿಗೆ ಮೀರಿದ ರಾಜಕೀಯ ಸಂತ್ರಸ್ತರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ತಿಂಗಳಿಗೆ 50 ರೂ. ವಿಶ್ರಾಂತಿ ವೇತನ ನೀಡಲು ಸರಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.