ADVERTISEMENT

ಗುರುವಾರ, 27–4–1967

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2017, 19:30 IST
Last Updated 26 ಏಪ್ರಿಲ್ 2017, 19:30 IST

ತ್ರಿಭಾಷಾ ಸೂತ್ರ ರದ್ದಿಗೆ ಸಲಹೆ
ನವದೆಹಲಿ, ಏ. 26–
ತ್ರಿಭಾಷಾ ಸೂತ್ರವನ್ನು ಪೂರ್ಣವಾಗಿ ರದ್ದುಪಡಿಸಬೇಕೆಂದು ಶಿಕ್ಷಣದ ಬಗೆಗೆ ನೇಮಕವಾಗಿದ್ದ ಪಾರ್ಲಿಮೆಂಟ್ ಸದಸ್ಯರ ಸಮಿತಿಯು ಇಂದು ಸಲಹೆ ಮಾಡಿತು.

ಇದಕ್ಕೆ ಬದಲಾಗಿ ವಿದ್ಯಾರ್ಥಿಯು ಮಾತೃಭಾಷೆ ಮತ್ತು ಸಂವಿಧಾನದ ಎಂಟನೆಯ ನಿಬಂಧನೆಯಲ್ಲಿರುವ ಹದಿನಾಲ್ಕು ಭಾಷೆಗಳಲ್ಲಿ ಒಂದು ಭಾಷೆ ಅಥವಾ ಇಂಗ್ಲೀಷ್ ಅಥವಾ ಯಾವುದೇ ಒಂದು ವಿದೇಶೀ ಭಾಷೆಯನ್ನು ಅಧ್ಯಯನ ಮಾಡಬೇಕೆಂದು ಸಮಿತಿಯು ಸಲಹೆ ಮಾಡಿದೆ.

ಕೇರಳದಲ್ಲಿ ಪಾನನಿರೋಧ ರದ್ದು: ಇ.ಎಂ.ಎಸ್. ಪ್ರಕಟಣೆ
ತಿರುವನಂತಪುರ, ಏ. 26–
ಕೇರಳದಲ್ಲಿ ಪಾನನಿರೋಧವನ್ನು ಕೆಲವು ನಿರ್ಬಂಧಗಳೊಡನೆ ರದ್ದುಗೊಳಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ಕೇರಳ ಮಂತ್ರಿ ಮಂಡಲವು ಇಂದು ಈ ನಿರ್ಧಾರವನ್ನು ಕೈಗೊಂಡಿದೆಯೆಂದು ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದಿರಿಪಾಡ್‌ರವರು  ಪತ್ರಕರ್ತರಿಗೆ ತಿಳಿಸಿದರು. ಪಾನನಿರೋಧ ರದ್ದಿನ ವಿವರಗಳನ್ನು ಈಗ ರೂಪಿಸಲಾಗುತ್ತಿದೆಯೆಂದು ಅವರು ಹೇಳಿದರು.

ಕೇರಳ ಸಂಪುಟವು ಕೈಗೊಂಡಿರುವ ಈ ನಿರ್ಧಾರದ ಜಾರಿ ದಿನವನ್ನು ಕಾಲಕ್ರಮದಲ್ಲಿ ನಿರ್ಧರಿಸಲಾಗುವುದೆಂದು ಇ.ಎಂ.ಎಸ್. ನುಡಿದರು.
ಇ.ಎಂ.ಎಸ್. ರವರು ಪ್ರಕಟಿಸಿದ ನಿರ್ಬಂಧಗಳು: 18 ವರ್ಷ ವಯಸ್ಸಿನ ಕೆಳಗಿನವರಿಗೆ ಮಾದಕಪಾನೀಯ ಮಾರಬಾರದು. ರೆಸ್ಟೊರಾಂಟ್ ಮತ್ತು ಹೊಟೇಲುಗಳಲ್ಲಿ  ಮಾದಕ ಪಾನೀಯ ಮಾರಾಟ ಕೂಡದು.

‘ಮಹಾರಾಷ್ಟ್ರದಲ್ಲಿ ಕನ್ನಡಿಗರ ಸ್ಥಿತಿ ಅಸಹನೀಯ’
ಗುಲ್ಬರ್ಗ, ಏ. 26–
ಮಹಾರಾಷ್ಟ್ರದಲ್ಲಿ ಕನ್ನಡಿಗರ ಪಾಡು ಹೇಳತೀರದೆಂದು ಇತ್ತೀಚೆಗೆ ಖಾಸಗಿಯಾಗಿ ಅಲ್ಲಿಗೆ ಭೇಟಿಯಿತ್ತು ಇಲ್ಲಿಗೆ ಮರಳಿದ ರಾಜ್ಯದ ವಿಧಾನ ಪರಿಷತ್ತಿನ ಸದಸ್ಯ ಶ್ರೀ ಜಿ.ವಿ. ಹಳ್ಳಿಕೇರಿ ಅವರು ನಿನ್ನೆ ಇಲ್ಲಿ ತಿಳಿಸಿದರು.

ಪೋಲೀಸರು ಯಾವಾಗಲೂ ಅಲ್ಲಿನ ಕನ್ನಡಿಗರನ್ನು ಸಂಶಯ ದೃಷ್ಟಿಯಿಂದ ನೋಡುತ್ತಿರುವುದಲ್ಲದೆ ಅವರಿಗೆ ನಾನಾ ರೀತಿಯ ಕಿರುಕುಳ ಕೊಡುತ್ತಿದ್ದಾರೆಂದು  ಶ್ರೀ ಹಳ್ಳಿಕೇರಿ ಅವರು ತಿಳಿಸಿ, ಅಲ್ಲಿನ ಕನ್ನಡಿಗರ ಕರುಣಾಜನಕ ಬದುಕನ್ನು ಸ್ಥಳೀಯ ಪತ್ರಕರ್ತರಿಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.