ADVERTISEMENT

ಗುರುವಾರ, 29–12–1966

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 19:30 IST
Last Updated 28 ಡಿಸೆಂಬರ್ 2016, 19:30 IST

ಚೀನದಿಂದ 5ನೇ ಅಣ್ವಸ್ತ್ರ ಸ್ಫೋಟ
ಟೋಕಿಯೋ, ಡಿ. 28–
  ಐದನೇ ಅಣ್ವಸ್ತ್ರ ಸ್ಫೋಟವನ್ನು ತಾವು ಯಶಸ್ವಿಯಾಗಿ ನಡೆಸಿರುವುದಾಗಿ ಚೀನವು ಇಂದು ಪ್ರಕಟಿಸಿದೆ. ಚೀನದ ಪಶ್ಚಿಮ ವಿಭಾಗದ ಪ್ರದೇಶದಲ್ಲಿ ಈ ಸ್ಫೋಟ ನಡೆಸಲಾಯಿತೆಂದೂ ನವ ಚೀನ ವಾರ್ತಾ ಸಂಸ್ಥೆ ತಿಳಿಸಿದೆ.

***
ಕಾಶ್ಮೀರದಲ್ಲಿ ಜನಮತಗಣನೆ ನಡೆಸಿದರೆ ದುಷ್ಟ ಶಕ್ತಿಗಳು ತಲೆ ಎತ್ತುವ ಅಪಾಯ: ಗಜೇಂದ್ರ ಗಡ್ಕರ್‌
ನವದೆಹಲಿ, ಡಿ. 28–
‘ರಾಜ್ಯಾಂಗ, ಕಾಯಿದೆ, ರಾಜಕೀಯ ಹಾಗೂ ಮಾನವೀಯತೆಯ ಕಾರಣಗಳಿಂದಾಗಿ ಕಾಶ್ಮೀರದಲ್ಲಿ ಜನಮತಗಣನೆ ನಡೆಸುವುದನ್ನು ಕುರಿತ ಯಾವುದೇ ಸಲಹೆಗಳನ್ನು ಪರಿಶೀಲಿಸಲು ಭಾರತ ಸಮ್ಮತಿಸಿಲ್ಲ’ ಎಂದು ಭಾರತದ ಮಾಜಿ ಶ್ರೇಷ್ಠ ನ್ಯಾಯಾಧೀಶ ಡಾ।। ಪಿ.ಬಿ. ಗಜೇಂದ್ರ ಗಡ್ಕರ್‌ ಇಂದು ಇಲ್ಲಿ ನುಡಿದರು.

‘ಜನಮತಗಣನೆಯ ಫಲಿತಾಂಶ ಪ್ರತಿಕೂಲವಾಗಬಹುದೆಂಬ ಹೆದರಿಕೆ ಅದಕ್ಕೆ ಕಾರಣವಲ್ಲ’ ಎಂದೂ ಅವರು ನುಡಿದರು. ಸರ್ದಾರ್‌ ಪಟೇಲ್‌ ಸ್ಮಾರಕ ಉಪನ್ಯಾಸ ಮಾಲೆಯಲ್ಲಿ ‘ಕಾಶ್ಮೀರ–ಹಿನ್ನೋಟ ಹಾಗೂ ಮುನ್ನೋಟ’ ಎಂಬ ವಿಷಯವನ್ನು ಕುರಿತು ಡಾ।। ಗಜೇಂದ್ರ ಗಡ್ಕರ್‌ ಭಾಷಣ ಮಾಡುತ್ತಿದ್ದರು.

***
ಮೈಸೂರಿಗೆ ಸೇರಲು ನೆರವಾಗುವವರಿಗೆ ತಾಳವಾಡಿ ಜನರ ಮತ
ಬೆಂಗಳೂರು, ಡಿ. 28–
ಮುಂದಿನ ಚುನಾವಣೆಗಳಲ್ಲಿ ತಾಳವಾಡಿ ಫಿರ್ಕ ಮೈಸೂರು ರಾಜ್ಯದಲ್ಲಿ ಸೇರಲು ಸಹಾಯ ಮಾಡುವ ವಾಗ್ದಾನ ನೀಡುವ ಪಕ್ಷ (ಅಭ್ಯರ್ಥಿಗೆ) ಅಲ್ಲಿನ ಸುಮಾರು 13,000 ಜನ ಕನ್ನಡಿಗರ ಮತ ನೀಡಲು ನಿರ್ಧರಿಸಲಾಗಿದೆ ಎಂದು ತಾಳವಾಡಿ ಫಿರ್ಕದ ಕನ್ನಡಿಗರ ಸಂಘದ ಅಧ್ಯಕ್ಷ ಶ್ರೀ ಕೆ. ಪುಟ್ಟಸ್ವಾಮಿ ಅವರು ಇಂದು ವರದಿಗಾರರಿಗೆ ತಿಳಿಸಿದರು.

ಖ್ಯಾತ ಕನ್ನಡ ಚಿತ್ರನಟ ಶ್ರೀ ರಾಜ್‌ಕುಮಾರ್‌, ಸಂಘದ ಶ್ರೀ ಪುಟ್ಟಸ್ವಾಮಿ, ಕಾರ್ಯದರ್ಶಿ ಶ್ರೀ ಡಿ. ಕೆಂಪಯ್ಯ, ನಗರದ ಚಿತ್ರಪ್ರೇಮಿಗಳ ಸಂಘದ ಉಪಾಧ್ಯಕ್ಷ ಶ್ರೀ ಎಚ್‌.ಎಸ್‌. ರೇಣುಕಾಪ್ರಸಾದ್‌ ಮತ್ತು ಶ್ರೀ ಎ. ಗೋಪಾಲ್‌ ಅವರನ್ನೊಳಗೊಂಡ ನಿಯೋಗವೊಂದು ಇಂದು ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರಿಗೆ ತಾಳವಾಡಿ ಕನ್ನಡಿಗರ ಆಕಾಂಕ್ಷೆ ಮತ್ತು ಅದಕ್ಕೆ ಪೂರಕವಾದ ವಾದಗಳನ್ನೊಳಗೊಂಡ ಮನವಿ ಪತ್ರವನ್ನು ಅರ್ಪಿಸಿತು.

***
ಕಾಮರಾಜ್‌ ಕೊಲೆಗೆಸಂಚು? ‘ರಹಸ್ಯ ವರದಿಗಳ’ ಬಗ್ಗೆ ಶ್ರೀ ಮದುಲಿಮಯೆ
ಬೆಂಗಳೂರು, ಡಿ. 28–
ದೆಹಲಿಯಲ್ಲಿ ಗೋಹತ್ಯೆ ನಿರೋಧ ಚಳವಳಿ ನಡೆದ ದಿನ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಕಾಮರಾಜ್‌ರವರನ್ನು ಕೊಲೆ ಮಾಡುವ ಸಂಚು ನಡೆದಿತ್ತೆಂದೂ ಅದರಲ್ಲಿ ಪಶ್ಚಿಮ ಬಂಗಾಳದ ಕೆಲವು ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದರೆಂದೂ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳಿಗೆ ರಹಸ್ಯ ವರದಿಗಳು ಬಂದಿರುವುದಾಗಿ ತಮ್ಮ ತಿಳುವಳಿಕೆಗೆ ಬಂದಿದೆಯೆಂದು ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ಮಧು ಲಿಮಯೆಯವರು ಇಂದು ಇಲ್ಲಿ ತಿಳಿಸಿದರು. ‘ಈ ಸಂಚು ಕಾಂಗ್ರೆಸ್‌ ಪಕ್ಷದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟದ ಸೂಚನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.