ADVERTISEMENT

ಗುರುವಾರ, 6–7–1967

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:30 IST
Last Updated 5 ಜುಲೈ 2017, 19:30 IST

ನಿಷೇಧಾಜ್ಞೆ ಉಲ್ಲಂಘಿಸಿ ನಕ್ಸಲ್‌ಬರಿ ಬಂಡುಕೋರರ ಮೆರವಣಿಗೆ
ದಾರ್ಜಿಲಿಂಗ್‌, ಜುಲೈ 5–
ಸಿಪಿಎಂ ಬೆಂಬಲಿತ, ಎಡಪಂಥೀಯ ಸುಮಾರು 600 ಬಂಡುಕೋರರು ನಕ್ಸಲ್‌ಬರಿಯಲ್ಲಿ ಇಂದು ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಿದರು.

ಬಿಲ್ಲು, ಬಾಣ ಹಾಗೂ ಇತರ ಮಾರಕಾಸ್ತ್ರಗಳ ಸಹಿತವಾಗಿ ಬಂಡುಕೋರರು ಇಂದು ಮಧ್ಯಾಹ್ನ ನಕ್ಸಲ್‌ಬರಿ ಪೊಲೀಸ್‌ ಠಾಣೆಯತ್ತ ಮೆರವಣಿಗೆಯಲ್ಲಿ ಸಾಗಿದರು. ಪೊಲೀಸ್‌ ಠಾಣೆಗೂ ಸ್ವಲ್ಪ ದೂರದಲ್ಲೇ ಪೊಲೀಸರು ಅವರನ್ನು ತಡೆದು ಮುಂದೆ ಸಾಗದಂತೆ ಎಚ್ಚರಿಕೆ ನೀಡಿದರು. ಅಲ್ಲಿ ಸ್ವಲ್ಪ ಹೊತ್ತು ಘೋಷಣೆಗಳನ್ನು ಕೂಗಿದ ಬಂಡುಕೋರರು, ಮೆರವಣಿಗೆಯನ್ನು ಅಲ್ಲಿಗೇ ಕೊನೆಗೊಳಿಸಿದರು. ಆದರೆ ಠಾಣೆಯ ಸಮೀಪದ ಗ್ರಾಮದಲ್ಲಿ ಸಭೆ ನಡೆಸಿದರು.

ಅಲಿಪ್ತ ರಾಷ್ಟ್ರಗಳ ನಿರ್ಣಯಕ್ಕೆ ವಿಶ್ವಸಂಸ್ಥೆ ತಿರಸ್ಕಾರ
ವಿಶ್ವಸಂಸ್ಥೆ, ಜುಲೈ 5–
ಅರಬ್‌ ಪ್ರದೇಶವನ್ನು ಅತಿಕ್ರಮಣ ಮಾಡಿರುವ ಇಸ್ರೇಲಿ ಪಡೆಗಳನ್ನು ಬೇಷರತ್ತಾಗಿ ವಾಪಸ್‌ ಕರೆಯಿಸಬೇಕು ಎಂಬ 16 ಅಲಿಪ್ತ ರಾಷ್ಟ್ರಗಳ ನಿರ್ಣಯವನ್ನು ವಿಶ್ವ ಸಂಸ್ಥೆ ತಿರಸ್ಕರಿಸಿದೆ.

ADVERTISEMENT

ಮೂಗು ತೂರಿಸಬೇಡಿ: ಚೀನಾಗೆ ಭಾರತ ಎಚ್ಚರಿಕೆ
ನವದೆಹಲಿ, ಜುಲೈ 5–
ಭಾರತದ ಗಡಿ ವಿವಾದ ಹಾಗೂ ಆಂತರಿಕ ವಿಚಾರಗಳ ಬಗ್ಗೆ ತಮ್ಮ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸುವುದನ್ನು ನಿಲ್ಲಿಸಬೇಕು ಎಂದು ಭಾರತ, ಚೀನಾಗೆ ಎಚ್ಚರಿಕೆ ನೀಡಿದೆ.

ನಕ್ಸಲ್‌ಬರಿಯಲ್ಲಿ ನಡೆಯುತ್ತಿರುವ ಬಂಡುಕೋರರ ಸಮಸ್ಯೆ ಬಗ್ಗೆ ರೇಡಿಯೊ ಪೀಕಿಂಗ್‌ ಮಾಡಿರುವ ವರದಿಯ ಬಗ್ಗೆ  ಮತ್ತು ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಪ್ರಕಟಿಸುವ ‘ಚೀನಾದ ಸುದ್ದಿ’ ಪತ್ರಿಕೆಯಲ್ಲಿ ಭಾರತದ ಬಗ್ಗೆ ಅನೇಕ ಸುಳ್ಳು ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ, ಅದನ್ನು ನಿಲ್ಲಿಸಬೇಕು ಎಂದು ಎರಡು ನೋಟಿಸ್‌ಗಳ ಮೂಲಕ ಚೀನಾಗೆ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.