ADVERTISEMENT

ಬುಧವಾರ, 15–3–1967

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 19:30 IST
Last Updated 14 ಮಾರ್ಚ್ 2017, 19:30 IST

ರಾಜಸ್ತಾನದಲ್ಲಿ ರಾಷ್ಟ್ರಪತಿಗಳ ಆಡಳಿತ: ಹೊಸ ಸರ್ಕಾರದ ಮೊದಲ ತಪ್ಪು ಎಂದು ಜಯಪ್ರಕಾಶ್
ಮುಂಬಯಿ, ಮಾ. 14–
ರಾಜಸ್ತಾನದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತಂದಿರುವುದು ‘ಪ್ರಜಾಸತ್ತೆಗೆ ದೊಡ್ಡಪೆಟ್ಟು ಮತ್ತು ಚುನಾವಣೆಯಲ್ಲಿ ಭಾಗವಹಿಸಿದ ಮತದಾರರಿಗೆ ಮುಖಭಂಗ ಮಾಡಿದಂತಾಗಿದೆ’ ಎಂದು ಸರ್ವೋದಯ ನಾಯಕ  ಜಯಪ್ರಕಾಶ ನಾರಾಯಣ್ ತಿಳಿಸಿದರು.

ಹೊಸ ಕೇಂದ್ರ ಸರ್ಕಾರ ತನ್ನ ಆಡಳಿತವನ್ನು ‘ತಪ್ಪು ನಿರ್ಧಾರದಿಂದ’ ಪ್ರಾರಂಭಿಸಿರುವುದು ತೀರ ದುರದೃಷ್ಟಕರ ಎಂದು ಶ್ರೀ ನಾರಾಯಣ್ ತಿಳಿಸಿದರು.

ಮತ್ತೆ ಅಧ್ಯಕ್ಷರಾಗಿ ಬಾಳಿಗ ಆಯ್ಕೆ ಖಚಿತ
ಬೆಂಗಳೂರು, ಮಾ. 14–
ನಾಳೆ ಬೆಳಿಗ್ಗೆ ಆರಂಭವಾಗುವ ನೂತನ ವಿಧಾನ ಸಭೆಯ ಪ್ರಥಮ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷ ಬಿ. ವೈಕುಂಠ ಬಾಳಿಗ ಅವರು ಮತ್ತೆ ಸಭಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ADVERTISEMENT

ಬೆಳಿಗ್ಗೆ 9.30ಕ್ಕೆ ಸೇರುವ ಅಧಿವೇಶನದಲ್ಲಿ ಹೊಸ ಸದಸ್ಯರಿಂದ ಪ್ರಮಾಣವಚನ ಸ್ವೀಕಾರ ಮುಗಿದ ನಂತರ ನೂತನ ಅಧ್ಯಕ್ಷರ ಆಯ್ಕೆ ನಡೆಯುವುದು. ಕಾಂಗ್ರೆಸ್ಸೇತರ ಕಡೆಯಿಂದ ಜಿ. ದುಗ್ಗಪ್ಪ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಗಿದೆ.

ಮೇ 7 ರಂದು ರಾಷ್ಟ್ರಪತಿ ಚುನಾವಣೆ
ನವದೆಹಲಿ, ಮಾ. 14–
ಹೊಸ ರಾಷ್ಟ್ರಪತಿಗಳ ಚುನಾವಣೆಯು ಮೇ 7 ರಂದು ನಡೆಯುವುದು.
ನಾಮಪತ್ರ ಸ್ವೀಕರಿಸಲು ಕೊನೆಯ ದಿನಾಂಕ ಏಪ್ರಿಲ್ 16. ನಾಮಪತ್ರಗಳ ಪರಿಶೀಲನೆಗೆ ಏಪ್ರಿಲ್ 18, ನಾಮಪತ್ರಗಳ ಹಿಂದೆಗೆದುಕೊಳ್ಳುವಿಕೆಗೆ ಏಪ್ರಿಲ್ 20.

ನಾಮಪತ್ರಗಳ ಸ್ವೀಕಾರದ ಬಗ್ಗೆ ಕರೆಕೊಟ್ಟು ಚುನಾವಣಾ ಆಯೋಗ ಏಪ್ರಿಲ್ 6 ರಂದು ಒಂದು ಪ್ರಕಟಣೆ ಹೊರಡಿಸಲಿದೆ. ಈಗಿನ ರಾಷ್ಟ್ರಪತಿಗಳ ಅಧಿಕಾರಾವಧಿ ಮೇ 12ಕ್ಕೆ ಮುಗಿಯುವುದು.

ಶ್ರೀ ಕೆಂಗಲ್ ಅವರಿಂದ ರಾಷ್ಟ್ರಪತಿ ಭಾಷಣ ಬಗ್ಗೆ ಅಭಿನಂದನಾ ನಿರ್ಣಯ ನವದೆಹಲಿ, ಮಾ. 14– ಪಾರ್ಲಿಮೆಂಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡುವ ಭಾಷಣವನ್ನು ಅಭಿನಂದಿಸಲು ಲೋಕಸಭೆಯ ಹಿರಿಯ ಸದಸ್ಯರಾದ ಮೈಸೂರಿನ ಶ್ರೀ ಕೆ. ಹನುಮಂತಯ್ಯನವರು ನಿರ್ಣಯ ಮಂಡಿಸುವ ಸಂಭವವಿರುವುದಾಗಿ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.