ADVERTISEMENT

ಬುಧವಾರ, 30–8–1967

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2017, 19:30 IST
Last Updated 29 ಆಗಸ್ಟ್ 2017, 19:30 IST

ಹೆಚ್ಚುವರಿ ತುಟ್ಟಿಭತ್ಯೆ ಸೆಪ್ಟೆಂಬರ್ 1 ರಿಂದ ಪೂರ್ತಾ ನಗದು ಪಾವತಿ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಆ. 29– ತಿಂಗಳಿಗೆ ರೂ. 70 ರಿಂದ 449ರ ವರೆಗೆ ಸಂಬಳ ಬರುವ ಕೇಂದ್ರ ನೌಕರರಿಗೆ ಸೆಪ್ಟೆಂಬರ್ 1 ರಿಂದ ಹೆಚ್ಚುವರಿ ತುಟ್ಟಿಭತ್ಯವನ್ನು ಪೂರ್ಣವಾಗಿ ನಗದು ರೂಪದಲ್ಲಿ ಪಾವತಿ ಮಾಡಲು ಉಪಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿಯವರು ಇಂದು ಒಪ್ಪಿದರು.

ADVERTISEMENT

ಇದರಿಂದ ಸೆಪ್ಟೆಂಬರ್ 11 ರಂದು ನಡೆಯಲಿದ್ದ ಮುಷ್ಕರವನ್ನು ತಡೆದಂತಾಗಿದೆ.

ಈ ನಿರ್ಧಾರದಿಂದ ಶ್ರೀ ದೇಸಾಯಿಯವರು ಕೊನೆಯಪಕ್ಷ ಈ ತಿಂಗಳಿನಿಂದಾದರೂ ಹೆಚ್ಚು ತುಟ್ಟಿಭತ್ಯದ ಹಣವನ್ನು ನಗದು ರೂಪದಲ್ಲಿ ಕೊಡಬೇಕೆಂದು ನಿನ್ನೆ ನೌಕರರ ಪ್ರತಿನಿಧಿಗಳು ಮುಂದಿಟ್ಟ ‘ಅತ್ಯಂತ ಕನಿಷ್ಠ’ ಬೇಡಿಕೆಯನ್ನು ಈಡೇರಿಸಿದಂತಾಗಿದೆ.

ಶ್ರೀ ದೇಸಾಯಿಯವರ ಈ ಒಪ್ಪಿಗೆಯ ಬಗ್ಗೆ ತನ್ನ ನಿರ್ಧಾರವನ್ನು ಕೇಂದ್ರ ನೌಕರರ ಜಂಟಿ ಕ್ರಿಯಾಸಮಿತಿಯು ನಾಳೆ ಬೆಳಿಗ್ಗೆ 10 ಗಂಟೆಯ ವೇಳೆಗೆ ಉಪಪ್ರಧಾನ ಮಂತ್ರಿಗೆ ತಿಳಿಸಲಿವೆ.

ರಾಜ್ಯಕ್ಕೆ ಮಹಾರಾಷ್ಟ್ರದ 200 ಕ್ಕೂ ಹೆಚ್ಚು ಗ್ರಾಮ ಕಾಸರಗೋಡಿನ ಎರಡು ಪಿರ್ಕಾಗಳು?

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಆ. 29– ಕಾಸರಗೋಡು ತಾಲ್ಲೂಕಿನ ಮೂರು ‍ಪಿರ್ಕಾಗಳಲ್ಲಿ ಎರಡು ಫಿರ್ಕಾಗಳೂ, ಮಹಾರಾಷ್ಟ್ರದ 200ಕ್ಕೂ ಹೆಚ್ಚು ಗ್ರಾಮಗಳು ಮೈಸೂರು ರಾಜ್ಯಕ್ಕೆ ಸೇರುವ ಸಂಭವವಿದೆ.

ಮೈಸೂರಿಗೆ 200ಕ್ಕೂ ಗ್ರಾಮಗಳನ್ನು ವರ್ಗಾವಣೆ ಮಾಡಲು ಮಹಾರಾಷ್ಟ್ರವೇ ಒಪ್ಪಿಕೊಂಡಿದೆ. ಬೆಳಗಾವಿ, ನಿಪ್ಪಾಣಿಯಂಥ ದೊಡ್ಡ ಪಟ್ಟಣಗಳ ಭವಿಷ್ಯ ಸ್ಪಷ್ಟವಾಗಿಲ್ಲ.  ಈ ಅಂಶಗಳನ್ನು ಮಹಾಜನ ಆಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿರುವುದಾಗಿ ತಿಳಿದು ಬಂದಿದೆ.

ಆಯೋಗದ ವರದಿಯಲ್ಲಿನ ಅಂಶಗಳನ್ನು ಸಂಪೂರ್ಣವಾಗಿ ರಹಸ್ಯವಾಗಿಡಲಾಗಿದೆ.

ಮಹಾರಾಷ್ಟ್ರ– ಮೈಸೂರು ಗಡಿ ವಿವಾದದ ಬಗ್ಗೆ ಮಹಾಜನ್ ಆಯೋಗವು ಪಾಟಸ್ಕರ್ ಸೂತ್ರವನ್ನೇ ಸ್ವಲ್ಪ ಬದಲಾಯಿಸಿ ಅನುಸರಿಸಿದೆಯೆಂದು ತಿಳಿದುಬಂದಿದೆ.

ತುಮಕೂರಿನ ವಿದ್ಯಾರ್ಥಿ ತಂಡಗಳ ನಡುವೆ ಘರ್ಷಣೆ: ಲಾಠಿ ಪ್ರಹಾರ– ಅಶ್ರುವಾಯು

(ಪ್ರಜಾವಾಣಿ ಪ್ರತಿನಿಧಿಯಿಂದ)

ತುಮಕೂರು, ಆ. 29– ಇಲ್ಲಿನ ಸರ್ಕಾರಿ ಕಾಲೇಜ್ ಮತ್ತು ಶ್ರೀ ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಸ್ಪರ ಘರ್ಷಣೆಯಿಂದ ಉಂಟಾಗಿದ್ದ ಉದ್ರಿಕ್ತ ಪರಿಸ್ಥಿತಿಯನ್ನು ನಿವಾರಿಸಲು ಇಂದು ಪೋಲೀಸರು ಮಾಡಿದ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದಿಂದ 11 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಇಲ್ಲಿನ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಇವರಲ್ಲಿ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳೆಂದು ಹೇಳಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿರುವ ದೃಶ್ಯ

(ಪ್ರಜಾವಾಣಿ ಪ್ರತಿನಿಧಿಯಿಂದ)

ಕೋಲಾರ, ಆ. 29– ಇನ್ನು ಕೆಲವೇ ದಿನಗಳಲ್ಲಿ ಮಳೆ ಬಾರದಿದ್ದರೆ ಕೋಲಾರ ಜಿಲ್ಲೆಯ ಅನೇಕ ಭಾಗಗಳು ತೊಂದರೆಗೆ ಒಳಗಾಗುವುವೆಂಬ ಅಂಶ ತಮಗೆ ಮನವರಿಕೆಯಾಗಿರುವುದಾಗಿ ರಾಜ್ಯದ ಆಹಾರ ಸಚಿವ ಶ್ರೀ ಬಿ.ಡಿ. ಜತ್ತಿ ಅವರು ಇಲ್ಲಿ ತಿಳಿಸಿದರು.

ಆ. 26 ಮತ್ತು 27 ರಂದು ಜಿಲ್ಲಾದ್ಯಂತ ಪ್ರವಾಸ ಮಾಡಿದ ಸಚಿವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಮಳೆಯಿಲ್ಲದೆ, ಬೆಳೆಗಳು ಒಣಗುತ್ತಿರುವುದನ್ನು ತಾವು ಕಣ್ಣಾರೆ ಕಂಡುದುದಾಗಿ ತಿಳಿಸಿದರು.

ಭಾರತಕ್ಕೆ ಅಮೆರಿಕದ 121,000 ಮೆಟ್ರಿಕ್ಟ ನ್ ಗೋಧಿ

ವಾಷಿಂಗ್ಟನ್, ಆ. 29– ಪಿ.ಎಲ್.480 ಒಪ್ಪಂದದ ನಿಧಿಯನ್ನು ಉಪಯೋಗಿಸಿಕೊಂಡು ಭಾರತವು ಅಮೆರಿಕಾದ 121,000 ಮೆಟ್ರಿಕ್ ಟನ್ ಗೋಧಿಯನ್ನು ಕೊಂಡುಕೊಳ್ಳಲು ಅಮೆರಿಕಾದ ಕೃಷಿ ಶಾಖೆಯು ಇಂದು ಒಪ್ಪಿಕೊಂಡಿತು.

ಈ ವರ್ಷದ ಸೆಪ್ಟೆಂಬರ್ 1 ಮತ್ತು ಡಿಸೆಂಬರ್ ಒಳಗಾಗಿ ಗೋಧಿಯನ್ನು ಭಾರತಕ್ಕೆ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.