ADVERTISEMENT

ಬುಧವಾರ, 3–5–1967

​ಪ್ರಜಾವಾಣಿ ವಾರ್ತೆ
Published 2 ಮೇ 2017, 19:30 IST
Last Updated 2 ಮೇ 2017, 19:30 IST
ಹ್ರಸ್ವ ಅಧಿವೇಶನಕ್ಕಾಗಿ ಆಕ್ರೋಶ ವಿಧಾನಸಭೆ ಆರಂಭದ ದಿನ ಉದ್ವೇಗ, ವಾಗ್ವಾದ
ಬೆಂಗಳೂರು, ಮೇ 2– ‘ಹಣಕಾಸಿನ ಬೇಡಿಕೆಗಳ ಚರ್ಚೆಗೆ ಅವಕಾಶವಿಲ್ಲದ, ಈ ಐದು ದಿನಗಳ ಅಧಿವೇಶನ ನಮಗೆ ಬೇಡ. ಅದರ ಆರಂಭವೂ ಬೇಡ’ ಎಂಬ ಹೇಳಿಕೆಯೊಂದಿಗೆ ದಿನದ ಕಾರ್ಯಕಲಾಪಗಳಿಗೆ ನಾಂದಿ ಆಗಬೇಕಾಗಿದ್ದ ಪ್ರಶ್ನೋತ್ತರ ವೇಳೆಯನ್ನು ಮುಂದಕ್ಕೆ ಹಾಕಿ ಎಂದು ವಿರೋಧ ಪಕ್ಷಗಳ ನಾಯಕ ಶ್ರೀ ಶಿವಪ್ಪನವರು ಮಂಡಿಸಿದ ಸೂಚನೆಯ ಮೇಲೆ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಚರ್ಚೆ ವಿಧಾನಸಭೆಯ ವಾತಾವರಣವನ್ನು ನಿರಂತರವಾಗಿ ಬಿಸಿಯಾಗಿಯೇ ಇರಿಸಿತು.
 
ರಷ್ಯದಿಂದ ಶಸ್ತ್ರಾಸ್ತ್ರ ಪಡೆಯಲು ಪುನಃ ಪಾಕ್ ಪ್ರಯತ್ನ
ನವದೆಹಲಿ, ಮೇ 2– ಸೋವಿಯತ್ ಒಕ್ಕೂಟದಿಂದ ಮಿಲಿಟರಿ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯಲು ಪಾಕಿಸ್ತಾನವು ಮತ್ತೊಮ್ಮೆ ದೃಢ ಪ್ರಯತ್ನ ಮಾಡುತ್ತಿದೆ.
ಸದ್ಯದಲ್ಲೇ ಮಾಸ್ಕೋಗೆ ಭೇಟಿ ನೀಡಲಿರುವ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಪೀರ್‌ಜಾದಾ ಅವರು ಈ ಬಗ್ಗೆ ಸೋವಿಯತ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿರುವರೆಂದು ವಲಯಗಳು ತಿಳಿಸಿವೆ.
 
ಪೋಲೀಸ್ ಸಚಿವರ ಜೇಬಿಗೇ ಕತ್ತರಿ
ಪಟ್ನ, ಮೇ 2– ಬಿಹಾರ್ ಪೋಲೀಸ್ ಸಚಿವ ಶ್ರೀ ರಮಾನಂದ ತಿವಾರಿಯವರ ಜೇಬಿಗೇ ಇಂದು ಕತ್ತರಿಯಾಗಿ 1001 ರೂಪಾಯಿಗಳನ್ನು ಕಳೆದುಕೊಂಡರು.
ಬಿಹಾರದ ಪರಿಹಾರ ಕಾರ್ಯಗಳಿಗಾಗಿ ಮಧ್ಯ ಪ್ರದೇಶದ ಜನತೆ ಈ ಹಣವನ್ನು ಶ್ರೀ ತಿವಾರಿಯವರಿಗೆ ನೀಡಿದ್ದರು.
 
ಶ್ರೀ ತಿವಾರಿಯವರಿಗೆ ಇದರಿಂದ ತುಂಬ ಬೇಸರವಾಗಿತ್ತು. ಅವರ ಮನೆಯಲ್ಲಿ ಮತ್ತೊಬ್ಬರು ಯೋಚನೆಗೀಡಾಗಿದ್ದರು. ತಮ್ಮ ಪತಿ ಈ ದಿನ ಊಟ ಮಾಡದಿದ್ದುದ್ದು  ಶ್ರೀಮತಿ ತಿವಾರಿಯವರ ಯೋಚನೆಗೆ ಕಾರಣವಾಗಿತ್ತು. ‘ಹಣ ಸಿಕ್ಕಿತೇ’ ಎಂದು ಯು.ಎನ್.ಐ. ಪ್ರತಿನಿಧಿ ಸಚಿವರ ಮನೆಗೆ ಫೋನ್ ಮಾಡಿದಾಗ ‘ಬಾಬು ಇನ್ನೂ ಊಟವೇ ಮಾಡಿಲ್ಲ’ ಎಂದು ಅವರ ಪತ್ನಿ ಹೇಳಿದರು.
 
ನೆರವಿನ ಪ್ರಮಾಣ ತಿಳಿಯದೆ ಆಯವ್ಯಯ ಸಿದ್ಧತೆ ವಿಳಂಬ: ಮುಖ್ಯಮಂತ್ರಿ ವಿವರಣೆ
ಬೆಂಗಳೂರು, ಮೇ 2– ರಾಷ್ಟ್ರೀಯ ಯೋಜನೆಯಲ್ಲಿ ನಾಲ್ಕು ಸಾವಿರ ಕೋಟಿ ರೂ. ಖೋತಾ ಬಿದ್ದುದರ ಜೊತೆಗೆ ರಾಜ್ಯಕ್ಕೆ ದೊರಕುವ ನೆರವಿನ ಪ್ರಮಾಣ ಸ್ವಷ್ಟವಾಗದಿರುವುದರಿಂದ ಆಯವ್ಯಯದ ಸಿದ್ಧತೆಗೆ ಕಾಲಾವಕಾಶ ಬೇಕಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.