ADVERTISEMENT

ಬುಧವಾರ, 6–9–1967

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 19:30 IST
Last Updated 5 ಸೆಪ್ಟೆಂಬರ್ 2017, 19:30 IST

ಭಾಷೆ ಪ್ರಶ್ನೆ ಬಗ್ಗೆ ವಿದೇಶಾಂಗ ಸಚಿವ ಚಾಗಲಾ ರಾಜೀನಾಮೆ
ನವದೆಹಲಿ, ಸೆ. 5–
ಶಿಕ್ಷಣ ಕ್ಷೇತ್ರದಲ್ಲಿನ ಭಾಷೆಯನ್ನು ಕುರಿತ ನೀತಿಯ ಬಗ್ಗೆ ಭಿನ್ನಾಭಿಪ್ರಾಯ ಉಂಟಾದುದರಿಂದ ವಿದೇಶಾಂಗ ಸಚಿವ ಶ್ರೀ ಎಂ.ಸಿ. ಚಾಗಲಾ ಅವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಹಿಂದೆ ಶಿಕ್ಷಣ ಸಚಿವರಾಗಿದ್ದ ಶ್ರೀ ಚಾಗಲಾ ಅವರು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಆಗಸ್ಟ್ 31ರಂದು ತಮ್ಮ ರಾಜೀನಾಮೆಯ ಪತ್ರವನ್ನು ಸಲ್ಲಿಸಿದ್ದರು.

‘ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಮಾಧ್ಯಮದ ಬದಲಾವಣೆ ಬಗ್ಗೆ ಗೊತ್ತುಪಡಿಸಲಾಗುವ ಕಾಲಮಿತಿಯು ತೀರಾ ಅವ್ಯಾವಹಾರಿಕ ಹಾಗೂ ಆವಾಸ್ತವಿಕವಾಗಿದೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ADVERTISEMENT

ಇಂಗ್ಲಿಷ್ ಮೂಲೆಗುಂಪಾಗದಿರಲಿ: ‘ಭಾರತೀಯ ಭಾಷೆಗಳ ಏಳ್ಗೆಯ ಬಯಕೆ ನನಗಿದೆ. ಕಟ್ಟ ಕಡೆಗೆ ಇಂಗ್ಲೀಷ್‌ನ ಸ್ಥಾನಕ್ಕೆ ಹಿಂದಿಯನ್ನು ತಂದು, ಇಂಗ್ಲೀಷ್ ಈಗ ನಿರ್ವಹಿಸುತ್ತಿರುವ ಒಗ್ಗಟ್ಟನ್ನುಂಟು ಮಾಡುವ ಪಾತ್ರವನ್ನು ಅದು ನಿರ್ವಹಿಸಬೇಕೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ಇಂಗ್ಲೀಷ್‌ನಿಂದ ಪ್ರದೇಶ ಭಾಷೆಗಳಿಗೆ ಬದಲಾವಣೆ ಮಾಡುವಾಗ ಅಂತಹ ಬದಲಾವಣೆಯು ಕ್ರಮೇಣ ಆಗಬೇಕು ಹಾಗೂ ಶಿಕ್ಷಣದ ಮಟ್ಟವನ್ನು ಅದು ಕೆಡಿಸಬಾರದು ಎಂಬುದೂ ನನ್ನ ದೃಢವಾದ ನಂಬಿಕೆ ಹಿಂದಿಯು ಇಂಗ್ಲೀಷ್‌ನ ಸ್ಥಾನಕ್ಕೆ ಬರುವವರೆಗೆ ಇಂಗ್ಲೀಷ್ ಶಿಕ್ಷಣವನ್ನು ಉತ್ತಮಪಡಿಸಬೇಕಲ್ಲದೆ ಅದು ಮೂಲೆಗುಂಪಾಗಬಾರದು’ ಎಂದು ಅವರು ತಿಳಿಸಿದ್ದಾರೆ.

ಸಂಪುಟದ ಸಭೆಯಲ್ಲಿ ನಡೆದ ಬಿರುಸಿನ ವಾಗ್ವಾದವೇ ರಾಜೀನಾಮೆಗೆ ಕಾರಣ

ನವದೆಹಲಿ, ಸೆ. 5– ವಿದೇಶಾಂಗ ಮಂತ್ರಿ ಶ್ರೀ ಎಂ.ಸಿ. ಚಾಗಲಾ ಅವರು ಅನಿರೀಕ್ಷಿತವಾಗಿ ರಾಜೀನಾಮೆ ಕೊಟ್ಟುದ್ದಕ್ಕೆ ಆಗಸ್ಟ್ 31 ರಂದು ಕೇಂದ್ರ ಸಚಿವ ಸಂಪುಟದ ಅನೌಪಚಾರಿಕ ಸಭೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಾದೇಶಿಕ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಮಾಡುವ ಬಗ್ಗೆ ನಡೆದ ವಾಗ್ವದವೇ ಕಾರಣವೆನ್ನಲಾಗಿದೆ.

ಅಶೋಕ ಮೆಹ್ತಾಗೂಶೀಘ್ರವೇ ಚಾಗಲಾ ಗತಿ–ಲಿಮಯೆ

ಮುಂಬೈ, ಸೆ. 5– ‘ಇಬ್ಬರು ಮಂತ್ರಿಗಳನ್ನು ತೆಗೆದುಹಾಕಬೇಕೆಂಬುದು ಪ್ರಧಾನಿ ಅಪೇಕ್ಷೆ. ಅವರಲ್ಲೊಬ್ಬರು ಶ್ರೀ ಚಾಗಲಾ. ರಾಜೀನಾಮೆ ಕೊಡಬೇಕೆಂದು ಪ್ರಧಾನಮಂತ್ರಿಯವರು ಹೇಳಿದ್ದರೂ ಸಹ.

ಶ್ರೀ ಚಾಗಲಾರವರು ಹಾಗೆ ಮಾಡಿರಲಿಲ್ಲ ಎಂದು ಸಂಸತ್ ಸದಸ್ಯ ಶ್ರೀ ಮಧು ಲಿಮಯೆ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಗತಿಪರ ವಿಚಾರಗಳನ್ನು ಹೊಂದಿರುವ ಕೆಲವೇ ಮಂದಿ ಮಂತ್ರಿಗಳಲ್ಲಿ ಶ್ರೀ ಚಾಗಲಾ ಒಬ್ಬರಾಗಿದ್ದರು. ಸರ್ಕಾರದ ಪಶ್ಚಿಮ ಏಷ್ಯ ನೀತಿಗೆ ಬಹುಶಃ ಅವರು ಒಪ್ಪಿರಲಾರರು ಆದರೂ ಸರ್ಕಾರದ ನೀತಿಗೇ ಅಂಟಿಕೊಂಡಿದ್ದು, ಶ್ರೀಮತಿ ಗಾಂಧಿಯವರನ್ನೇ ಅನುಸರಿಸುತ್ತಿದ್ದರು ಎಂದೂ ಶ್ರೀ ಲಿಮಯೆ ತಿಳಿಸಿದರು.‌

‘ಈ ಪಟ್ಟಿಯಲ್ಲಿರುವ ಇನ್ನೊಬ್ಬ ಮಂತ್ರಿ ಶ್ರೀ ಅಶೋಕ ಮೆಹತಾ’ ಎನ್ನುವ ಶ್ರೀ ಲಿಮಯೆಯವರು ‘ಅವರೂ ಸಹ ಶ್ರೀ ಚಾಗಲಾರವರ ಮಾರ್ಗವನ್ನೇ ಅನುಸರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.