ADVERTISEMENT

ಭಾನುವಾರ, 21–5–1967

​ಪ್ರಜಾವಾಣಿ ವಾರ್ತೆ
Published 20 ಮೇ 2017, 19:30 IST
Last Updated 20 ಮೇ 2017, 19:30 IST

ಗಾಜಾ ಪ್ರದೇಶದಲ್ಲಿ ಸಮರಸ್ಥಿತಿ
ವಿಶ್ವಸಂಸ್ಥೆ, ಮೇ 20– 1956ರಲ್ಲಿ ಸೂಯೆಜ್ ಬಿಕ್ಕಟ್ಟು ನಂತರ ಈಗ ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಸಮರ ಪರಿಸ್ಥಿತಿಯು ತೀವ್ರ ಭಯಾನಕವಾಗಿರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉಥಂಟ್ ಅವರು ಇಂದು ಇಲ್ಲಿ ಭದ್ರತಾ ಸಮಿತಿಗೆ ಎಚ್ಚರಿಕೆ ನೀಡಿದರು.
15 ರಾಷ್ಟ್ರಗಳ ಮಂಡಳಿಗೆ ಸಲ್ಲಿಸಿದ ಅಧಿಕೃತ ವರದಿಯಲ್ಲಿ ಅರಬ್ ಗಾಜಾ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ವಿರುದ್ಧ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ  ಪ್ರಧಾನ ಕಾರ್ಯದರ್ಶಿಗಳು ಅರಬ್ ಪ್ರಾರ್ಥನೆಯಂತೆ  ಅರಬ್ ಪ್ರದೇಶದಿಂದ ವಿಶ್ವಸಂಸ್ಥೆ ತುರ್ತು ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿ ಕೊಂಡುದಾಗಿ ತಿಳಿಸಿದರು.

ಸೊಲ್ಲಾಪುರ ಮೈಸೂರಿಗೆ ಸೇರಲೆಂದು ಮಹಾಜನ್ ಆಯೋಗಕ್ಕೆ ಮನವಿ
(ಪ್ರಜಾವಾಣಿ ಪ್ರತಿನಿಧಿಯಿಂದ)
ಸೊಲ್ಲಾಪುರ, ಮೇ 20–
ಸೊಲ್ಲಾಪುರ ನಗರ ಮತ್ತು ದಕ್ಷಿಣ ಸೊಲ್ಲಾಪುರ ತಾಲ್ಲೂಕುಗಳನ್ನು ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸಬೇಕೆಂದು ಮಹಾರಾಷ್ಟ್ರ ರಾಜ್ಯ ಸಂಯುಕ್ತ ಕರ್ನಾಟಕ ಸಮಿತಿಯ ಅಧ್ಯಕ್ಷ ಶ್ರೀ ಆರ್.ಕೆ. ದುಲಂಗೆ ಅವರು ಇಂದು ಮಹಾಜನ್ ಆಯೋಗದ ಮುಂದೆ ಸಾಕ್ಷ್ಯ ನೀಡುತ್ತ ಮನವಿ ಮಾಡಿದರು.

ಕನ್ನಡದ ಕವಿ ಸಿದ್ಧರಾಮುವಿನಿಂದ ಎಂಟನೇ ಶತಮಾನದಲ್ಲಿ ಸೊಲ್ಲಾಪುರ ನಗರವು ಸ್ಥಾಪಿತವಾಯಿತೆಂದೂ ಸೊಲ್ಲಾಪುರದ ನೂಲಿನ ಹಾಗೂ ಎಣ್ಣೆಯ ಗಿರಣಿಗಳಿಗೆ ಬೇಕಾಗುವ ಎಣ್ಣೆ ಬೀಜ ಮತ್ತು ಹತ್ತಿಗಳು ಕರ್ನಾಟಕದ ಒಳನಾಡಿನಿಂದಲೇ ಬರುವುದೆಂದೂ ಅವರು ತಿಳಿಸಿದರು.

ADVERTISEMENT

ಯೋಜನಾ ಆಯೋಗದ ಉಪಾಧ್ಯಕ್ಷ ಪದವಿ: ಶ್ರೀ ಸುಬ್ರಹ್ಮಣ್ಯಂ ಅವರಿಂದ ಇನ್ನೂ ನಿರ್ಧಾರವಿಲ್ಲ
ಗೋಸಚಿಟ್ಟಿಪಾಳ್ಯಂ, ಮೇ 20–
ಯೋಜನಾ ಮಂಡಳಿಯ ಉಪಾಧ್ಯಕ್ಷ ಸ್ಥಾನವನ್ನು ತಮಗೆ ನೀಡಲಾಗಿದೆಯೆಂಬುದು ನಿಜವೆಂದು ಕೇಂದ್ರದ ಮಾಜಿ ಆಹಾರ ಮಂತ್ರಿ ಶ್ರೀ ಸಿ. ಸುಬ್ರಹ್ಮಣ್ಯಂ ಅವರು ನಿನ್ನೆ ವರದಿಗಾರರಿಗೆ ತಿಳಿಸಿದರು.

ಈ ಹುದ್ದೆಯನ್ನು ಒಪ್ಪಿಕೊಳ್ಳುವುದೇ ಅಥವಾ ಬಿಡುವುದೇ ಎಂಬುದನ್ನು ತಾವು ಇನ್ನೂ ನಿರ್ಧರಿಸಿಲ್ಲವೆಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.