ADVERTISEMENT

ಭಾನುವಾರ, 22–1–1967

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಗೆ ಅವಿರೋಧ: ಪ್ರತಿಸ್ಪರ್ಧಿಗಳೆಲ್ಲರ ಅರ್ಜಿ ವಾಪಸ್‌
ಬೆಂಗಳೂರು, ಜ. 21–
ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪ ಅವರು ಧಾರವಾಡ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಅವಿರೋಧವಾಗಿ ಆರಿಸಲ್ಪಟ್ಟು, ಮೈಸೂರು ಪ್ರದೇಶ ಕಾಂಗ್ರೆಸ್ಸಿಗೆ ಪ್ರಥಮ ಹಾಗೂ ಮಹತ್ವಪೂರ್ಣ ವಿಜಯವನ್ನು ತರಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸೊಂಡೂರು ಕ್ಷೇತ್ರದಿಂದ ವಿಧಾನಸಭೆಯ ಪ್ರಸಕ್ತ ಸದಸ್ಯ ಶ್ರೀ ಎಂ.ವೈ. ಘೋರ್ಪಡೆ ಅವರೂ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಸುಕರ್ನೊ ಪದಚ್ಯುತಿ ಸನ್ನಿಹಿತ
ಜಕಾರ್ತ, ಜ. 21–
ಇಂಡೊನೀಸಿಯದ ಬಲಿಷ್ಠ ವ್ಯಕ್ತಿ ಜನರಲ್‌ ಸುಕರ್ನೊ ಅವರು ನಾಲ್ಕು ಲಕ್ಷ ಸೈನಿಕರಿರುವ ಇಂಡೊನೀಸಿಯ ಸೇನಾಬಲಕ್ಕೆ ಸಜ್ಜು ಸ್ಥಿತಿಯಲ್ಲಿರುವಂತೆ ತಿಳಿಸಿದ್ದಾರೆ. 1965ರಲ್ಲಿ ನಡೆದ ಬಾಲಗ್ರಹ ಪೀಡಿತ ಕಮ್ಯುನಿಸ್ಟರ ಕ್ರಾಂತಿ ಸಂಬಂಧದಲ್ಲಿ ಅಧ್ಯಕ್ಷ  ಸುಕರ್ನೊರವರ ತಪ್ಪನ್ನು ರುಜುವಾತು ಪಡಿಸುವ ದಾಖಲೆಗಳು ಇತ್ತೀಚೆಗೆ ಸಿಕ್ಕಿರುವುದೇ ಈ ಕ್ರಮಕ್ಕೆ ಕಾರಣ.

ಶ್ರೀ ಬಿ. ವೆಂಕಟಸ್ವಾಮಿ ಹೈಕೋರ್ಟಿನ ನೂತನ ನ್ಯಾಯಾಧೀಶರು
ಬೆಂಗಳೂರು, ಜ. 21–
ಹಿರಿಯ ವಕೀಲರಾದ ಶ್ರೀ ಬಿ. ವೆಂಕಟಸ್ವಾಮಿ ಅವರನ್ನು ಮೈಸೂರು ಹೈಕೋರ್‍ಟಿನ ಅಡಿಷನಲ್‌ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.

ಚುನಾವಣಾ ಸಭೆಗಳಲ್ಲಿ ಸರ್ಕಾರಿ ನೌಕರರ ಪಾತ್ರ: ನಿಷೇಧಾಜ್ಞೆಯ ಪುನರ್‍ವಿಮರ್ಶೆ ಸಂಭವ
ನವದೆಹಲಿ, ಜ. 21–
ರಾಜಕೀಯ ಪಕ್ಷಗಳು ಏರ್ಪಡಿಸಿದ ಚುನಾವಣಾ ಸಭೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಕೂಡದೆಂಬ ತನ್ನ ‘ಸಲಹೆ’ಯನ್ನು ಬದಲಾಯಿಸಬೇಕೆ ಬೇಡವೆ ಎಂಬ ವಿಷಯವನ್ನು ಕೇಂದ್ರ ಸರಕಾರವು ಪರಿಶೀಲಿಸುತ್ತಿದೆ. ಹಾಗೆ ಬದಲಾಯಿಸಿದ್ದಾದರೆ, ನೌಕರನ ನಡತೆಯು ಯಾವ ನಿರ್ದಿಷ್ಟ  ಪಕ್ಷಕ್ಕೂ ಸೇರದಂತಿರಬೇಕು.

ಅಲ್ಲಾವುದ್ದೀನ್‌ ಖಿಲ್ಜಿ ನಾಣ್ಯಗಳ ಪತ್ತೆ
ಹೊಸಪೇಟೆ, ಜ. 21–
ಹಂಪೆಯ ನಿವೇಶನವೊಂದರಲ್ಲಿ ನೆಲವನ್ನು ಅಗೆಯುತ್ತಿದ್ದಾಗ ಸುಮಾರು 2200 ಗ್ರಾಂ ತೂಕದ 219 ಹಳೆಯ ತಾಮ್ರದ ನಾಣ್ಯಗಳು ಸಿಕ್ಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.