ADVERTISEMENT

ಭಾನುವಾರ, 26–2–1967

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST

ಭದ್ರನೆಲೆ ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ಸಿನ ಪದಚ್ಯುತಿ: ಮದ್ರಾಸಿನ ಎಲ್ಲ ಕೇಂದ್ರ ಮಂತ್ರಿಗಳ ಸೋಲು
ನವದೆಹಲಿ, ಫೆ. 25–
ಕಾಂಗ್ರೆಸ್ ಪಕ್ಷದ ಭದ್ರನೆಲೆಯೆಂದು ಇಷ್ಟು ವರ್ಷಗಳೂ ಖ್ಯಾತಿ ಪಡೆದಿದ್ದ ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷ ಪ್ರಾಬಲ್ಯವನ್ನು ನೀಗಿಕೊಂಡಿದೆ. ವಿಧಾನಸಭೆಯಲ್ಲಿ ನಿಚ್ಚಳ ಬಹುಮತವನ್ನು ಪಡೆಯಲು ವಿಫಲಗೊಂಡಿದೆ.

425 ಸಂಖ್ಯಾಬಲದ ಸದನದಲ್ಲಿ 407 ಫಲಿತಾಂಶಗಳು ಪ್ರಕಟವಾದಾಗ ಕಾಂಗ್ರೆಸ್ಸಿಗೆ 188 ಸ್ಥಾನಗಳು ಮಾತ್ರ  ದೊರೆತಿತ್ತು. 96 ಜನಸಂಘಕ್ಕೂ, ಸಂಯುಕ್ತ ಸೋಷಲಿಸ್ಟ್ ಪಕ್ಷಕ್ಕೆ 41 ಸ್ಥಾನಗಳೂ, ಉಳಿದ ಪಕ್ಷಗಳಿಗೆ 47, ಪಕ್ಷೇತರರಿಗೆ 35 ಸ್ಥಳಗಳೂ ದೊರೆತಿವೆ. ಹದಿನೆಂಟು ಫಲಿತಾಂಶಗಳು ಪ್ರಕಟವಾಗಬೇಕಾಗಿತ್ತು.

ಉಳಿದಿರುವ 27 ಸ್ಥಾನಗಳೂ ಕಾಂಗ್ರೆಸ್ಸಿಗೆ ದೊರೆತರೂ ನಿಚ್ಚಳ ಬಹುಮತ ಬಂದಂತಾಗುವುದಿಲ್ಲ.  ಕಾಂಗ್ರೆಸ್ ಪದಚ್ಯುತವಾದ ಪಂಜಾಬ್, ರಾಜಸ್ತಾನ್, ಪಶ್ಚಿಮ ಬಂಗಾಳ, ಒರಿಸ್ಸಾ, ಕೇರಳ, ಮದ್ರಾಸ್ ಹಾಗೂ ಬಿಹಾರಗಳ ಸಾಲಿಗೆ ಉತ್ತರ ಪ್ರದೇಶವೂ ಸೇರಿದೆ.

ADVERTISEMENT

ಪಕ್ಷದ ನಾಯಕರಾಗಿ ನಿಜಲಿಂಗಪ್ಪನವರ ಆಯ್ಕೆ ಸಂಭವ
ಬೆಂಗಳೂರು, ಫೆ. 25–
ಮಾರ್ಚಿ 2ರಂದು ನಡೆಯುವ ವಿಧಾನಸಭೆಯ ನೂತನ ಕಾಂಗ್ರೆಸ್ ಸದಸ್ಯರ ಸಭೆ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ಸರ್ವಾನುಮತದಿಂದ ತನ್ನ ನಾಯಕರನ್ನಾಗಿ ಆರಿಸುವ ಸಂಭವವಿದೆ.

ಪರಿಣಾಮವಾಗಿ ಶ್ರೀ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿ ಮುಂದುವರಿಯುವರು.

ಬ್ರಹ್ಮಾನಂದರೆಡ್ಡಿ: ಮತ್ತೆ ಆಂಧ್ರದ ಮುಖ್ಯಮಂತ್ರಿ?
ಹೈದರಾಬಾದು, ಫೆ. 25–
ಆಂಧ್ರ ಪ್ರದೇಶದ ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿಯವರು ಮತ್ತೆ ಆಯ್ಕೆಯಾಗುವುದು ಖಚಿತವೆಂದು ಈಗ ತೋರುತ್ತಿದೆ.

ಪಕ್ಷದ ನಾಯಕತ್ವಕ್ಕೆ ಸ್ಪರ್ಧೆಯನ್ನುಂಟು ಮಾಡಬಾರದೆಂದು ಕೇಂದ್ರ ಸಚಿವ ಶ್ರೀ ಎನ್. ಸಂಜೀವರೆಡ್ಡಿಯವರು ಭಿನ್ನಮತೀಯ ಕಾಂಗ್ರೆಸ್ಸಿಗರ ನಾಯಕ ಶ್ರೀ ಎ.ಸಿ. ಸುಬ್ಬಾರೆಡ್ಡಿಯವರಿಗೆ ಸಲಹೆ ನೀಡಿರುವರೆಂದು ವರದಿಯಾಗಿದೆ.

ಕಾಂಗ್ರೆಸ್ ಪರಾಭವದ ಪ್ರತಿಧ್ವನಿ: ರಾಷ್ಟ್ರಪತಿ ಆಯ್ಕೆಯಲ್ಲಿ ಕೌತುಕಕಾರಿ ಪರಿಸ್ಥಿತಿ
ನವದೆಹಲಿ, ಫೆ. 25–
  ಒಟ್ಟು ಸ್ಥಾನಗಳ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿರುವುದರಿಂದ ಮುಂದಿನ ರಾಷ್ಟ್ರಪತಿಯನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿಚಿತ್ರ ಪರಿಸ್ಥಿತಿಯೇ ಉಂಟಾಗಿದೆ.

ಪಾರ್ಲಿಮೆಂಟಿನ ಉಭಯ ಸದನಗಳ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳ ಸದಸ್ಯರನ್ನೊಳಗೊಂಡ ಮತದಾರರ ಕಾಲೇಜಿನಿಂದ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕು. ಆದರೆ ಒಟ್ಟು ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದಿಲ್ಲ. ಆದರೆ ರಾಜ್ಯಸಭೆಯಲ್ಲಿ ಅದು ಇನ್ನೂ ಗಮನಾರ್ಹ ಪ್ರಮಾಣದಲ್ಲಿ ಬಹುಮತ ಪಡೆದಿರುವುದರಿಂದ ಅದರ ಅಭ್ಯರ್ಥಿಯು ರಾಷ್ಟ್ರಪತಿಯಾಗಿ ಆಯ್ಕೆಯಾಗಬಹುದೆಂಬ ಭರವಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.