ಭಾರತಕ್ಕೆ 35 ಲಕ್ಷ ಟನ್ ಅಮೆರಿಕ ಧಾನ್ಯ: ಹೊಸ ಒಪ್ಪಂದಕ್ಕೆ ಸಹಿ
ನವದೆಹಲಿ, ಡಿ. 30– ಭಾರತವು ಅಮೆರಿಕದಿಂದ 35 ಲಕ್ಷ ಟನ್ ಆಹಾರ ಧಾನ್ಯವನ್ನು ಪಿ.ಎಲ್. 480 ಕಾರ್ಯಕ್ರಮದಂತೆ ಕೊಳ್ಳಲು ಇಂದು ಒಪ್ಪಂದವೊಂದಕ್ಕೆ ಸಹಿಬಿತ್ತು.
ಈ ಆಹಾರ ಧಾನ್ಯಕ್ಕೆ 2007 ದಶಲಕ್ಷ ಡಾಲರ್ (150.03 ಕೋಟಿ ರೂ.) ಬೆಲೆ ಕಟ್ಟಲಾಗಿದೆ.
ಇದರಲ್ಲಿ ಕೊಂಡ ಆಹಾರ ಧಾನ್ಯವನ್ನು ಜನವರಿ ತಿಂಗಳಲ್ಲಿ ಕಳುಹಿಸಲಾಗುವುದು. ಇಡೀ ಪ್ರಮಾಣವನ್ನು 1968ರ ಮಧ್ಯ ಭಾಗದ ವೇಳೆಗೆ ಅಮೆರಿಕದಿಂದ ಕಳುಹಿಸಲಾಗುವುದು.
ಉಳುವವನಿಗೆ ಭೂಮಿ: ಜನಸಂಘ ರೈತರ ಸಭೆ ಕರೆ
ಶ್ರೀನಾರಾಯಣನಗರ, ಡಿ. 30– ಉಳುವವನಿಗೆ ಭೂಮಿ, ಮಧ್ಯವರ್ತಿಗಳಿಂದ ಶೋಷಣೆ ನಿಲ್ಲಬೇಕು. ಜನಸಂಘದ ಆಶ್ರಯದಲ್ಲಿ ನಡೆದ ಕೃಷಿಗಾರರ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಲ್ಲಿ ಈ ಒತ್ತಾಯಪೂರ್ವಕ ಬೇಡಿಕೆಯನ್ನು ಮಂಡಿಸಲಾಗಿದೆ.
ಅಧಿಕೃತ ಭಾಷಾ ಮಸೂದೆ ರಾಜ್ಯಾಂಗಕ್ಕೆ ವಿರುದ್ಧ ಜನಸಂಘದ ಟೀಕೆ
ಶ್ರೀನಾರಾಯಣನಗರ, ಡಿ. 30– ಇತ್ತೀಚೆಗೆ ಪಾರ್ಲಿಮೆಂಟ್ ಅಂಗೀಕರಿಸಿರುವ ಅಧಿಕೃತ ಭಾಷಾ ತಿದ್ದುಪಡಿ ಮಸೂದೆಯನ್ನು ಜನಸಂಘವು ಇಂದು ಖಂಡಿಸಿತು.
ಈ ಮಸೂದೆಯನ್ನು ‘ತಪ್ಪಾಗಿ ರೂಪಿಸಲಾಗಿದೆ. ಅಲ್ಲದೆ ರಾಜ್ಯಾಂಗಕ್ಕೆ ವಿರುದ್ಧವಾಗಿದೆ’ಯೆಂದೂ ತಿಳಿಸಿತು.
ರಾಷ್ಟ್ರಪತಿ ಎದುರು ಕಪ್ಪು ಬಾವುಟ ಪ್ರದರ್ಶನ: ‘ನಾವ್ ತಮಿಳರ್’ ನಿರ್ಧಾರ
ಮದರಾಸ್, ಡಿ. 30– ಎರಡನೆ ವಿಶ್ವ ತಮಿಳು ಸಮ್ಮೇಳನದಲ್ಲಿ ಭಾಗವಹಿಸಲು ಜನವರಿ 2 ರಂದು ಇಲ್ಲಿಗೆ ಆಗಮಿಸಲಿರುವ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರ ಎದುರು ಕಪ್ಪುಬಾವುಟ ಪ್ರದರ್ಶಿಸಲು ‘ನಾವ್ ತಮಿಳರ್’ ಪಕ್ಷದ ಮದರಾಸ್ ಶಾಖೆಯು ನಿರ್ಧರಿಸಿದೆ. ಡಿಸೆಂಬರ್ 25 ರಂದು ಇಲ್ಲಿ ಸಮಾವೇಶಗೊಂಡಿದ್ದ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.