ADVERTISEMENT

ಭಾನುವಾರ, 31–3–1968

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ತಿ. ನರಸೀಪುರದ ಬಳಿ ಪ್ರಬುದ್ಧ ನಾಗರಿಕತೆ
ಬೆಂಗಳೂರು, ಮಾ. 30–
ತಿರುಮಕೂಡಲು ನರಸೀಪುರದ ಕಾವೇರಿಯ ದಂಡೆಯಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ಈಗ ಸಾಕಷ್ಟು ಪ್ರಬುದ್ಧವೆಂದು ಪರಿಗಣಿಸಲಾಗಿರುವ ನಾಗರಿಕತೆಯೊಂದು ಅಸ್ತಿತ್ವದಲ್ಲಿತ್ತು.

1959 ರಿಂದ 1962ರ ನಡುವೆ ಮೈಸೂರಿನಿಂದ ಸುಮಾರು 20 ಮೈಲು ದೂರವಿರುವ ಈ ಪ್ರದೇಶದಲ್ಲಿ ನಡೆದ ಭೂಗರ್ಭ ಶೋಧನೆಯಲ್ಲಿ ಕಂಡು ಬಂದ ಎಲುಬುಗಳು, ಮಣ್ಣಿನ ಪಾತ್ರೆ, ಕಟ್ಟಡ ಅವಶೇಷಗಳು ಹಾಗೂ ಇಂಗಾಲದ ಪರಿಶೋಧನೆಯಿಂದ ಈ ವಿಷಯ ಈಚೆಗೆ ಸ್ವಷ್ಟಪಟ್ಟಿದೆ.

ಸುಮಾರು ಇನ್ನೂರು ಗಜ ಅಗಲ ಮತ್ತು ಐನೂರು ಗಜಗಳುದ್ದದ ಭೂಪ್ರದೇಶದಲ್ಲಿ ರಾಜ್ಯ ಭೂಗರ್ಭ ಇಲಾಖೆಯ ಅಧಿಕಾರಿಗಳು ಸುಮಾರು 200 ಮಂದಿ ಕಾರ್ಮಿಕರ ಸಹಾಯದಿಂದ ನಡೆಸಿದ ಅಗೆತದಲ್ಲಿ ಕಂಡ ಬಂದ ಪದರಗಳು ಮೂರು. ಮೂರು ಪದರಗಳಲ್ಲಿ ಒಂದೊಂದು ಕಾಲದ ನಾಗರಿಕತೆಯ ಅವಶೇಷಗಳು ಕಂಡು ಬಂದಿವೆ.

ADVERTISEMENT

ಜಾತೀಯತೆ ವಿರುದ್ಧ ಉಗ್ರಕ್ರಮ: ರಾಜ್ಯಗಳಿಗೆ ಮತ್ತೆ ಚವಾಣ್ ಕರೆ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಮಾ. 30–
ಜಾತೀಯತೆಯ ಅನಿಷ್ಟವನ್ನು ತೊಡೆದು ಹಾಕಲು ಉಗ್ರ ಕ್ರಮ ಕೈಗೊಳ್ಳಬೇಕೆಂದು ಗೃಹಸಚಿವ ಶ್ರೀ ವೈ.ಬಿ. ಚವಾಣರು ರಾಜ್ಯದ ಮುಖ್ಯಮಂತ್ರಿಗಳಿಗೆ ಹೊಸ ಸುತ್ತೋಲೆಯೊಂದನ್ನು ಕಳಿಸಿದ್ದಾರೆ.

ರಾಂಚಿಯಲ್ಲಿ ನಡೆದ ಭೀಕರ ಕೋಮುಗಲಭೆಯ ನಂತರ ಸೆಪ್ಟೆಂಬರ್‌ನಲ್ಲಿ ಶ್ರೀ ಚವಾಣರು ಇದೇ ರೀತಿಯ ಸುತ್ತೋಲೆಯೊಂದನ್ನು ರಾಜ್ಯ ಸರ್ಕಾರಗಳಿಗೆ ಕಳಿಸಿದ್ದರು.

ಪೂರ್ಣ ಸಸ್ಯಾಹಾರಿಗಳ ಗ್ರಾಮ
ವೆಲ್ಲೂರು, ಮಾ. 30–
ಇಲ್ಲಿಗೆ ಸುಮಾರು ಹನ್ನೆರಡು ಮೈಲಿಗಳ ದೂರದಲ್ಲಿರುವ ತಿರುವಳ್ಳಂ ಗ್ರಾಮದ ಜನ ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿದ್ದಾರೆ. ಗ್ರಾಮದ ಜನಸಂಖ್ಯೆ ಐದು ಸಾವಿರ.

ಆ ಗ್ರಾಮದಲ್ಲಿ ಒಂದು ಕಸಾಯಿ ಅಂಗಡಿಯೂ ಇಲ್ಲ. ಅಲ್ಲದೆ ಒಣ ಅಥವಾ ಹಸಿ ಮೀನಿನ ಮಾರಾಟವೂ ಇಲ್ಲ. ಒಂದೇ ಮಾತಿನಲ್ಲಿ ಹೇಳುವುದಾ
ದರೆ ಆ ಗ್ರಾಮದಲ್ಲಿ ಮಾಂಸಾಹಾರದ ಮಾರಾಟವೇ ಇಲ್ಲ.

ಪಕ್ಷಕ್ಕೆ ‘ಬೇಡವಾದರೆ ಅಧ್ಯಕ್ಷ ಸ್ಥಾನ ಬಿಡುತ್ತೇನೆ’ ಎಂದು ಎಸ್ಸೆನ್
ಬೆಂಗಳೂರು, ಮಾ. 30–
ನಾನು ಅಧ್ಯಕ್ಷನಾಗಿರುವುದು ಬೇಡ ಅನ್ನುವುದಾದರೆ ಹೊರಟು ಹೋಗುತ್ತೇನೆ.

ಇದು ‘ಹದಗೆಡುತ್ತಿರುವ’ ಕಾಂಗ್ರೆಸ್ ಸಂಸ್ಥೆಯ ವ್ಯವಹಾರಗಳನ್ನು ಚರ್ಚಿಸಲು ಎ.ಐ.ಸಿ.ಸಿ.ಯ ವಿಶೇಷ ಸಭೆಯನ್ನು ಕರೆಯಬೇಕೆಂದು ಕೇಳಿರುವವರು ಕಾಂಗ್ರೆಸ್ ಅಧ್ಯಕ್ಷರನ್ನು ಟೀಕಿಸಿದ್ದಾರೆಂಬ ವರದಿಗೆ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ವ್ಯಕ್ತಪಡಿಸಿದ ಪ್ರತಿಕ್ರಿಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.