ADVERTISEMENT

ಭಾನುವಾರ, 3–9–1967

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 19:30 IST
Last Updated 2 ಸೆಪ್ಟೆಂಬರ್ 2017, 19:30 IST

ಅಧಿಕೃತ ಭಾಷೆ ಕುರಿತು ಯಥಾಸ್ಥಿತಿ

ನವದೆಹಲಿ, ಸೆ. 2– ಇಂಗ್ಲೀಷ್‌ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ಜವಹರಲಾಲ್‌ ನೆಹರೂ ಅವರು ಹಿಂದೀಯೇತರ ರಾಜ್ಯಗಳಿಗೆ ನೀಡಿದ ಭರವಸೆಯನ್ನು ಜಾರಿಗೆ ತರುವುದಕ್ಕಾಗಿ ಮಾಡಬೇಕೆಂದಿದ್ದ ಅಧಿಕೃತ ಭಾಷಾ ಮಸೂದೆಯನ್ನು ಸ್ವಲ್ಪಕಾಲ ಮುಂದಕ್ಕೆ ಹಾಕುವ ಸಂಭವವಿದೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯು ಬಾಷಾ ಸಮಸ್ಯೆ ಮೇಲೆ ನಡೆಸಿದ ಚರ್ಚೆಯ ಫಲಿತಾಂಶವಿದೆಂದು ತಿಳಿದುಬಂದಿದೆ.

ADVERTISEMENT

ಗೋವೆಯ ಮಾಜಿ ಶಿಕ್ಷಣ ಸಚಿವ ಕರ್ಮಾಲಿ ಆತ್ಮಹತ್ಯೆ

ಮುಂಬೈ, ಸೆ. 2– ಗೋವೆಯ ಮಾಜಿ ಸಚಿವ ಶ್ರೀ ವೀಠಲ್‌ ಎಸ್‌. ನಾಯಕ್‌ ಕರ್ಮಾಲಿ ಅವರು ಇಲ್ಲಿನ ಶಾಸಕರ ಭವನದ ಆವರಣದಲ್ಲಿ ಮೃತಪಟ್ಟಿರುವುದು ಇಂದು ಬೆಳಿಗ್ಗೆ ಕಂಡು ಬಂದಿತು. ಅವರಿಗೆ 35 ವರ್ಷ ವಯಸ್ಸಾಗಿತ್ತು.

ದಿವಂಗತರಿಗೆ ಪತ್ನಿ, ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ.

ಭಾರತಕ್ಕೆ ಗೋಧಿ: ಜಾನ್ಸನ್‌ ಪ್ರಕಟನೆಗೆ ಕೇಂದ್ರದ ಸ್ವಾಗತ

ನವದೆಹಲಿ, ಸೆ. 2– ಭಾರತಕ್ಕೆ ಇನ್ನೂ 10 ಲಕ್ಷ ಟನ್‌ ಗೋಧಿಯನ್ನು ರವಾನಿಸಲು ತಾವು ಅನುಮತಿ ನೀಡಿರುವುದಾಗಿ ಅಧ್ಯಕ್ಷ ಜಾನ್ಸನ್‌ ಅವರು ಇತ್ತಿರುವ ಪ್ರಕಟಣೆಯನ್ನು, ಭಾರತ ಸರ್ಕಾರ ಇಂದು ಸ್ವಾಗತಿಸಿದೆ.

ಈ ಪ್ರಕಟಣೆಯನ್ನು ಹೆಚ್ಚು ನೆಮ್ಮದಿಯಿಂದ ಸ್ವಾಗತಿಸಲಾಯಿತೆಂದು ಅಧಿಕೃತ ವಕ್ತಾರರು ಇಂದು ತಿಳಿಸಿದರು.

ಹಿಂದಿ ಸಂಪರ್ಕ ಭಾಷೆಯಾಗಲು ಶ್ರೀ ಕಂಠಿ ಬೆಂಬಲ

(ಪ್ರಜಾವಾಣಿ ಪ್ರತಿನಿಧಿಯಿಂದ)

ನವದೆಹಲಿ, ಸೆ. 2– ಕಾನೂನು ಸಚಿವರ ಸಮ್ಮೇಳನದಲ್ಲಿ ಮೈಸೂರಿನ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸಚಿವ ಶ್ರೀ ಕಂಠಿಯವರು, ಹಿಂದಿಯ ಸಂಪರ್ಕ ಭಾಷೆಯಾಗಿರುವುದಕ್ಕೆ ಮತ್ತು ಪ್ರಾದೇಶಿಕ ಭಾಷೆಗಳಲ್ಲೇ ಕಾನೂನು ಶಿಕ್ಷಣ ನೀಡುವುದಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಹಾಜನ್‌ ವರದಿ ಬಗ್ಗೆ ಮಹಾರಾಷ್ಟ್ರ–ಮೈಸೂರು ಮುಖ್ಯಮಂತ್ರಿಗಳಿಗೆ ಪ್ರಧಾನಿ ಆಶ್ವಾಸನೆ

ದೆಹಲಿ, ಸೆ. 2– ಮೈಸೂರು– ಮಹಾರಾಷ್ಟ್ರ ಗಡಿಯ ಬಗ್ಗೆ ಮಹಾಜನ್‌ ವರದಿ ಸಂಬಂಧ ಕೇಂದ್ರ ಸರ್ಕಾರ ಮೈಸೂರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಯಾವ ಸುಳಿವನ್ನೂ ಕೊಟ್ಟಿಲ್ಲ.

ಕೇಂದ್ರ ಸರ್ಕಾರ ವರದಿಯನ್ನು ಪರಿಶೀಲಿಸಿ ಕೈಗೊಳ್ಳುವ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಮುನ್ನ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಸುವುದಾಗಿ ಪ್ರಧಾನಮಂತ್ರಿ ಆಶ್ವಾಸನೆ ನೀಡಿರುವುದಾಗಿ ಗೊತ್ತಾಗಿದೆ.

ಮೊದಲೇ ನಿರ್ಧಾರವನ್ನು ಮುಖ್ಯಮಂತ್ರಿಗಳಿಗೆ ತಿಳಿಸದೆ, ಕೇಂದ್ರ ಸರ್ಕಾರ ಹಠಾತ್ತನೆ ಪ್ರಕಟಿಸಿದ್ದೇ ಆದರೆ, ರಾಜಕೀಯ ಚಳವಳಿ ಇತ್ಯಾದಿಗಳಿಗೆ ಅವಕಾಶ ದೊರೆಯುತ್ತದೆಂಬ ಉದ್ದೇಶದಿಂದ ಮುಖ್ಯಮಂತ್ರಿಗಳಿಗೆ ಮೊದಲೇ ತಿಳಿಸಲಾಗುತ್ತದೆ.

ಲೋಕಸಭಾ ಸದಸ್ಯ ಶ್ರೀ ಎಂ.ಕೆ. ಶಿವನಂಜಪ್ಪ ಅವರ ನಿಧನ

ಮಂಡ್ಯ, ಸೆ. 2– ಲೋಕಸಭಾ ಸದಸ್ಯ ಶ್ರೀ ಎಂ.ಕೆ. ಶಿವನಂಜಪ್ಪನವರು ಹೃದಯ ಸ್ತಂಭನದಿಂದ ಇಂದು ಸಂಜೆ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 46 ವರ್ಷ ವಯಸ್ಸಾಗಿತ್ತು.

ಮೃತರಿಗೆ ಪತ್ನಿ ಮತ್ತು ಮೂವರು ಪುತ್ರರು ಅಪಾರ ಬಂಧು–ಬಳಗ ಇದ್ದಾರೆ. ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಮಂಡ್ಯದಲ್ಲಿ ಮೃತರ ಅಂತ್ಯಕ್ರಿಯೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.