ADVERTISEMENT

ಭಾನುವಾರ, 5–11–1967

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 19:30 IST
Last Updated 4 ನವೆಂಬರ್ 2017, 19:30 IST

ಸಂಸತ್‌ ಪರಿಶೀಲನೆಗೆ ಮುನ್ನ ಕೇಂದ್ರದ ನಿರ್ಧಾರ ಅಗತ್ಯ

ಬೆಂಗಳೂರು, ನ. 4– ಮಹಾಜನ್ ಗಡಿ ಆಯೋಗದ ವರದಿಯ ಬಗ್ಗೆ ಕೇಂದ್ರ ಸರಕಾರ ಮೊದಲು ನಿರ್ಧಾರಕ್ಕೆ ಬಂದು ಆ ನಿರ್ಧಾರವನ್ನು ಸಂಸತ್ ಮುಂದೆ ಮಂಡಿಸುವುದೆಂದು ತಾವು ನಿರೀಕ್ಷಿಸುವುದಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಿಳಿಸಿದರು.

ಕೇವಲ ವರದಿಯನ್ನು ಸಂಸತ್ ಮುಂದೆ ಇಡುವುದಕ್ಕಿಂತ ಆ ಬಗ್ಗೆ ಕೇಂದ್ರದ ನಿರ್ಧಾರವನ್ನು ಇಡುವುದು ಸರಿಯಾದ ಮಾರ್ಗವೆಂದು ಸ್ಪಷ್ಟಪಡಿಸಿದರು.

ADVERTISEMENT

ಶೀಘ್ರವಾಗಿ ತೀರ್ಮಾನಕ್ಕೆ ಬರಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯ ಮಾಡಿರುವುದಾಗಿಯೂ ಮುಖ್ಯಮಂತ್ರಿ ತಿಳಿಸಿದರು.

ನಟ ರಾಧಾಗೆ ಏಳು ವರ್ಷ ಕಠಿಣ ಶಿಕ್ಷೆ

ಮದರಾಸು, ನ. 4– ಚಿತ್ರನಟ ಎಂ.ಜಿ. ರಾಮಚಂದ್ರನ್ ಅವರನ್ನು ಗುಂಡಿಕ್ಕಿ ಕೊಲ್ಲಲೆತ್ನಿಸಿದ ಆಪಾದನೆಗೆ ಗುರಿಯಾಗಿದ್ದ ಚಿತ್ರನಟ ಎಂ.ಆರ್. ರಾಧಾ ಅವರಿಗೆ ವಿಶೇಷ ಸೆಷನ್ಸ್ ನ್ಯಾಯಾಧೀಶ ಶ್ರೀ ಪಿ. ಲಕ್ಷ್ಮಣನ್ ಅವರು ಇಂದು ಒಟ್ಟು ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದರು.

ಈ ವರ್ಷದ ಜನವರಿ ತಿಂಗಳು 12 ರಂದು ಎಂ.ಜಿ.ಆರ್. ಗಾರ್ಡನ್ಸ್‌ನಲ್ಲಿ ಸಂಜೆ 5.30ರ ವೇಳೆಯಲ್ಲಿ ಎಂ.ಜಿ. ರಾಮಚಂದ್ರನ್ ಅವರನ್ನು ಗುಂಡಿಕ್ಕಿ ಕೊಲ್ಲುವ ಯತ್ನ ನಡೆಸಿದರೆಂದೂ ಅಲ್ಲದೆ ಆನಂತರ ಆತ್ಮಹತ್ಯೆಗೆ ಪ್ರಯತ್ನಿಸಿದರೆಂದೂ ಎಂ.ಆರ್. ರಾಧಾ ಅವರ ಮೇಲೆ ಆಪಾದನೆ ಹೊರಿಸಲಾಗಿತ್ತು.

ಹೆಸರಘಟ್ಟದಲ್ಲಿ ಹಣ್ಣು, ತರಕಾರಿ ಸಂಶೋಧನೆ ಕೇಂದ್ರ

ಬೆಂಗಳೂರು, ನ. 4– ಈಗಾಗಲೇ ಮೀನು, ಕುಕ್ಕುಟ, ಹಸು ಇವುಗಳ ಅಭಿವೃದ್ಧಿಗೆ ಸಂಶೋಧನಾ ಚಟುವಟಿಕೆಗಳ ಕೇಂದ್ರವಾಗಿರುವ ಹೆಸರಘಟ್ಟವು ಹಣ್ಣು, ತರಕಾರಿ, ಪುಷ್ಪಇವುಗಳ ಬಗ್ಗೆ ಸಂಶೋಧನೆಗೆ ಮತ್ತೊಂದು ಭಾರಿ ಅಖಿಲ ಭಾರತ ಸಂಸ್ಥೆ ಪಡೆಯಲಿದೆ.

ಕೇಂದ್ರ ಕೃಷಿ ಸಂಶೋಧನಾ ಮಂಡಲಿಯ ಆಶ್ರಯದಲ್ಲಿ ನಡೆಯಲಿರುವ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್’ ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ದೆಹಲಿಯ ಬಳಿ ಪೂಸಾದಲ್ಲಿ ಕೃಷಿ ಸಂಶೋಧನೆಗಾಗಿ ನಡೆಸುತ್ತಿರುವ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಮಾದರಿಯಲ್ಲಿಯೇ ಹೆಸರಘಟ್ಟದಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.