ADVERTISEMENT

ಭಾನುವಾರ, 8–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2017, 19:30 IST
Last Updated 7 ಜನವರಿ 2017, 19:30 IST
8 ಅಂಶಗಳ ಚುನಾವಣೆ ನಿಯಮಾವಳಿಗೆ ಒಪ್ಪಿಗೆ: ದೆಹಲಿ ಸಭೆಗೆ ನಾಲ್ಕು ಪಕ್ಷಗಳ ಬಹಿಷ್ಕಾರ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಜ. 7– ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಮಹಾ ಚುನಾವಣೆಯಲ್ಲಿ ಮತದಾನವು ಶಿಸ್ತಿನಿಂದ ನಡೆಯುವುದನ್ನು ಖಚಿತಪಡಿಸಲು, ಮತದಾನದ ಕಾಲದಲ್ಲಿ ಹಾಗೂ ಅದಕ್ಕೆ ಮುಂಚೆ ರಾಜಕೀಯ ಪಕ್ಷಗಳು ಪಾಲಿಸಬೇಕಾದ ನೀತಿ ನಿಯಮಾವಳಿಯೊಂದನ್ನು ಇಂದು ಇಲ್ಲಿ ರಚಿಸಲಾಯಿತು.
 
ಗೃಹಸಚಿವ ಶ್ರೀ ವೈ.ಬಿ. ಚವಾಣರು ಕರೆದಿದ್ದ ಪಾರ್ಲಿಮೆಂಟಿನಲ್ಲಿ ಪ್ರಾತಿನಿಧ್ಯವನ್ನುಳ್ಳ ರಾಜಕೀಯ ಪಕ್ಷಗಳ ಸಭೆಯಲ್ಲಿ ಈ ನೀತಿ ನಿಯಮಾವಳಿ ಅಂಗೀಕೃತವಾಯಿತು.
 
ನಾನಾ ಜಾತಿಗಳು ಹಾಗೂ ಮತೀಯ ಅಥವಾ ಭಾಷಾ ವರ್ಗಗಳ ನಡುವೆ ಈಗ ಇರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಿಸುವ ಅಥವಾ ಪರಸ್ಪರ ದ್ವೇಷ ಅಥವಾ ಪ್ರಕ್ಷುಬ್ಧತೆಯನ್ನು ಉಂಟು ಮಾಡುವ ಯಾವುದೇ ಚಟುಚಟಿಕೆಯಲ್ಲಿ ಯಾವ ರಾಜಕೀಯ ಪಕ್ಷವೂ ತೊಡಗಕೂಡದೆಂಬುದು ಎಂಟು ಅಂಶಗಳ ಈ ನಿಯಮಾವಳಿಯಲ್ಲಿನ ಪ್ರಮುಖ ನಿಯಮವಾಗಿದೆ.
 
**
ಬಾಡಿಗೆ ಬೀಡಿನಲ್ಲಿ ಕೋಟ್ಯಧೀಶ ಅರಬ್‌ ಅರಸ
ಲಂಡನ್‌, ಜ. 7–  ನಾಲ್ವರು ಪತ್ನಿಯರು, ಅನೇಕ ಗಣಿಕೆಯರು, ನಪುಂಸಕ ಸೇವಕರು, ಕಾರ್ಯದರ್ಶಿಗಳು ಹಾಗೂ 30 ತರುಣ ಪುತ್ರರ ಪರಿವಾರ ಸಹಿತ ಸೌದಿ ಅರೇಬಿಯದ ಮಾಜಿ ದೊರೆ ಸೌದ್‌ ಅವರು ಕೈರೋವಿನ ನೈಲ್‌ ಹಿಲ್ಟನ್‌ ಹೊಟೆಲ್‌ನಲ್ಲಿ ಬಿಡಾರ ಮಾಡಿದ್ದಾರೆ.
 
ಹೈದರಾಬಾದಿನ ನಿಜಾಮರು ವಿಶ್ವದಲ್ಲೇ ಭಾರಿ ಶ್ರೀಮಂತರೆಂದು ಹೇಳಲಾಗುತ್ತಿತ್ತು. ಆದರೆ ಸೌದರ ಸಂಪತ್ತಿನ  ಮುಂದೆ ನಿಜಾಮರ ಸ್ಥಾನಮಾನ ಏನೂ ಇರದು. ಸೌದರು ತಮ್ಮ ಜೊತೆ ಮೂರು ಕಪಾಟುಗಳಲ್ಲಿ ಒಂದೂವರೆ ಕೋಟಿ ಪೌಂಡ್‌ ಮೌಲ್ಯದ ನಗದು ಹಣ, ಆಭರಣಗಳು, ಸವರನ್‌ ಹಾಗೂ ಬಂಗಾರದ ಗಟ್ಟಿಗಳನ್ನು ತಂದಿದ್ದಾರೆ.
 
ಸೌದರ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಮಾರಿಸ್‌ಫಾಮಿ ಅವರು ‘ಸಂಡೇ ಟೆಲಿಗ್ರಾಫ್‌’ ಪತ್ರಿಕೆಗೆ ತಿಳಿಸಿರುವಂತೆ ಸೌದರು ಸುಮಾರು ನೂರು ಕೋಟಿ ಪೌಂಡ್‌ ಧನವನ್ನು ನಗದಾಗಿ ಸ್ವಿಟ್ಜರ್ಲೆಂಡ್‌, ಜಪಾನ್‌, ಅಮೆರಿಕಗಳ ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ. ಇದಲ್ಲದೆ ಪಶ್ಚಿಮ ಯೂರೋಪ್‌, ಮಧ್ಯ ಪ್ರಾಚ್ಯದ ದೇಶಗಳಲ್ಲೆಲ್ಲ ಅವರು ಭೂಮಿ ಮತ್ತು ಕಟ್ಟಡಗಳ ರೂಪದಲ್ಲಿ ಅಪಾರ ಸಂಪತ್ತನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.