ADVERTISEMENT

ಭಾನುವಾರ, 9–4–2017

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST

ಮುಂದಿನ ಕೆಲ ತಿಂಗಳು ಬೆಲೆಗಳ ಏರಿಕೆ ಅನಿವಾರ್ಯ: ಪ್ರಧಾನಿ ಸ್ಪಷ್ಟನೆ
ನವದೆಹಲಿ, ಏ. 8–
ಬರುವ ಕೆಲ ತಿಂಗಳುಗಳಲ್ಲಿ ಬೆಲೆಗಳು ಇನ್ನಷ್ಟು ಏರುವುದು ‘ಅನಿವಾರ್ಯ‘ ಎಂದು ಪ್ರಧಾನಿ ಇಂದಿರಾಗಾಂಧಿ ಇಂದು ನುಡಿದರು.

ಮುಖ್ಯಮಂತ್ರಿಗಳ ಸಮ್ಮೇಳನವನ್ನು ಇಲ್ಲಿ ಉದ್ಘಾಟಿಸುತ್ತಿದ್ದ ಅವರು, ಉದ್ಯಮ ಮತ್ತು  ವ್ಯವಸಾಯ ಕ್ಷೇತ್ರದಲ್ಲಿನ ಉತ್ಪನ್ನ ಕಡಿಮೆಆಗುತ್ತಿರುವುದು ಮತ್ತು ಕಳೆದ ವರ್ಷ ಕೇಂದ್ರವೂ ರಾಜ್ಯಗಳೂ ಖೋತಾ ಆಯವ್ಯಯವನ್ನು ಅನುಸರಿಸಿದ್ದೂ ಬೆಲೆಏರಿಕೆಗೆ ಕಾರಣವೆಂದು ನುಡಿದರು.

‘ಇದು ಒಂದು ಕಠಿಣ ಪರಿಸ್ಥಿತಿಯೇ ಆಗಿದ್ದು, ಇದರಿಂದ ಪಾರಾಗಲು ಸುಲಭ ಮಾರ್ಗಗಳಿಲ್ಲ’ ಎಂದು ಅವರು ಎಚ್ಚರಿಸಿದರು.

ADVERTISEMENT

ಕುದುರೆಮುಖದಲ್ಲಿ ಮಾತ್ರ ಹೆಚ್ಚು ಮ್ಯಾಗ್ನಟೈಟ್: ವಿಶ್ವಸಂಸ್ಥೆ ತಜ್ಞರ ಹೇಳಿಕೆ
ಮಂಗಳೂರು, ಏ. 8– 
ಮಂಗಳೂರು ಬಂದರು ಯೋಜನಾ ಪ್ರದೇಶಕ್ಕೆ ಸುಮಾರು 60 ಮೈಲಿ ದೂರದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಪ್ರದೇಶದಲ್ಲಿ ಹೆಚ್ಚು ಕಬ್ಬಿಣದ ಅಂಶದಿಂದ ಕೂಡಿದ (ಮ್ಯಾಗ್ನಟೈಟ್) ಅದುರು ಇದೆಯೆಂದು ವಿಶ್ವರಾಷ್ಟ್ರ ಸಂಸ್ಥೆಯ ವಿಶ್ವ ಕಬ್ಬಿಣದ ಅದುರು ಸಂಪತ್ತಿನ ಸರ್ವೆ ತಜ್ಞರ ತಂಡದ ಸದಸ್ಯ ಚಿಕಾವೊ ನಿಷಿವಾಕಿ ಅವರು ಇಂದು ಇಲ್ಲಿ ಪಿ.ಟಿ.ಐ. ಪ್ರತಿನಿಧಿಗೆ ತಿಳಿಸಿದರು.

ರಾಷ್ಟ್ರಪತಿ ಆಯ್ಕೆ ಇಂದಿರಾ ಆಹ್ವಾನ: ವಿರೋಧ ಪಕ್ಷಗಳ ಷರತ್ತು
ನವದೆಹಲಿ, ಏ. 8–
  ರಾಷ್ಟ್ರಪತಿ ಚುನಾವಣೆ ಸಂಬಂಧ ಮಾತುಕತೆಗಾಗಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ನೀಡಿದ್ದ ಆಹ್ವಾನವನ್ನು ವಿರೋಧ ಪಕ್ಷಗಳ ನಾಯಕರು ಇಂದು ತಿರಸ್ಕರಿಸಿ, ಈ ಸಭೆಗೆ ಬದಲು ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್‌ರವರೂ ಸೇರಿ ಎಲ್ಲ ಪಕ್ಷಗಳ ನಾಯಕರ ಸಭೆಯೊಂದನ್ನು ಕರೆಯಬೇಕೆಂದು ಸೂಚಿಸಿದ್ದಾರೆ.

ಈ ಸಲಹೆಯು ನಿಮಗೆ ಒಪ್ಪಿಗೆಯಾದರೆ ನಾಳೆಯೇ ಸಭೆ ನಡೆಯಬಹುದೆಂದು ವಿರೋಧ ಪಕ್ಷಗಳ ನಾಯಕರು ಇಂದಿರಾಗಾಂಧಿಯವರಿಗೆ ತಿಳಿಸಿದ್ದಾರೆ.

ರಾಜಾಜಿ ಅವರಿಗೆ ಯಶಸ್ವಿ ಶಸ್ತ್ರಕ್ರಿಯೆ
ಮದ್ರಾಸ್, ಏ,  8–
ಖಾಸಗಿ ಚಿಕಿತ್ಸಾಲಯವೊಂದರಲ್ಲಿ ಇಂದು ಬೆಳಿಗ್ಗೆ ಹರ್ನಿಯ ರೋಗಕ್ಕಾಗಿ ಶಸ್ತ್ರಚಿಕಿತ್ಸೆಗೊಳಗಾದ ಶ್ರೀ ಸಿ. ರಾಜಗೋಪಾಲಾಚಾರಿ ಅವರ ದೇಹಸ್ಥಿತಿ ಉತ್ತಮಗೊಳ್ಳುತ್ತಿದೆಯೆಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.