ADVERTISEMENT

ಮಂಗಳವಾರ, 14–3–1967

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 19:30 IST
Last Updated 13 ಮಾರ್ಚ್ 2017, 19:30 IST

ಪೂಣಚ್ಚ, ವಿ.ಕೆ.ಆರ್‌.ವಿ. ರಾವ್‌ ಕೇಂದ್ರ ಸಚಿವರು: 33 ಜನ ಸಚಿವರ ಇಂದಿರಾ ಸಂಪುಟದ ಪ್ರಮಾಣವಚನ (ವರದಿ: ಟ.ಎಸ್‌. ರಾಮಚಂದ್ರರಾವ್‌)
ನವದೆಹಲಿ, ಮಾ. 13–
ಕನ್ನಡಿಗರ ಅನುಭವ, ಸಾಮರ್ಥ್ಯಕ್ಕೆ ಮಾನ್ಯತೆ ಎದ್ದು ಕಾಣುವ ಇಂದಿರಾ ಸಂಪುಟದ ಪ್ರಮಾಣವಚನ ಸಮಾರಂಭ ರಾಷ್ಟ್ರಪತಿ ಭವನದ ಅಶೋಕ ಹಾಲ್‌ನಲ್ಲಿ ನಡೆಯಿತು.

ಕ್ಯಾಬಿನೆಟ್‌ ದರ್ಜೆ ಸಚಿವರಲ್ಲಿ ಕನ್ನಡಿಗ ಪೂಣಚ್ಚ, ಡಾ. ವಿ.ಕೆ.ಆರ್‌ .ವಿ. ರಾವ್‌ ಇವರೂ ಸೇರಿರುವುದು ಮಾತ್ರವಲ್ಲದೆ, ಅವರಿಗೆ ಪ್ರಮುಖ ಖಾತೆಗಳೂ ಕೊಡಲ್ಪಟ್ಟಿವೆ. ಕೇಂದ್ರ ಸಂಪುಟದಲ್ಲಿ ಮೈಸೂರಿಗೆ ಸಾಕಷ್ಟು ಪ್ರಾತಿನಿಧ್ಯವಿಲ್ಲವೆಂಬ ಕೊರತೆಯನ್ನು ಇಂದಿರಾಜಿ ನಿವಾರಿಸಿದ್ದಾರೆ. ರಾಷ್ಟ್ರದ ಆಗುಹೋಗುಗಳಲ್ಲಿ ಸಮಭಾಗಿಗಳಾಗಿ ಸೇವೆ ಸಲ್ಲಿಸಲು, ಕೀರ್ತಿ ಗಳಿಸಲು ಅವಕಾಶ ಮಾಡಲಾಗಿದೆ.

ಪ್ರಧಾನಿಯಾಗಿ ಆಯ್ಕೆಯಾದ ಮರುಕ್ಷಣದಲ್ಲೇ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದ್ದಂತೆ, ಇಂದಿರಾಜಿ ರಚಿಸಿರುವ ಸಂಪುಟದಲ್ಲಿ ಪ್ರಜಾಸತ್ತಾತ್ಮಕ ಸಮಾಜವಾದದಲ್ಲಿ ನಂಬಿಕೆ ಇರುವವರಿಗೆ ಪ್ರಾತಿನಿಧ್ಯ ಸಿಕ್ಕಿದೆ. ಸಂಪುಟದ ರಚನೆಯಲ್ಲಿ, ರಚನೆಯಾದ ಮೇಲೆ, ಸರ್ಕಾರದ ಯಂತ್ರದ ಮೇಲೆ ಗುತ್ತೇದಾರಿ ಸ್ಥಾಪಿಸುವ ಚಪಲದ ಶಕ್ತಿಗಳಿಗೆ ನೂತನ ಪ್ರಧಾನಿ ನಿರಾಶೆಗೊಳಿಸಿದ್ದಾರೆ.

ದೇಶದ ಹಿತಕ್ಕೆ ಲಕ್ಷ್ಯ ಕೊಡಲಾಗಿದೆಯೇ ಹೊರತು, ವ್ಯಕ್ತಿಗಳ ಪ್ರಭಾವಕ್ಕೆ ಮಾನ್ಯತೆ ಇಲ್ಲವೆಂಬುದು ಇಂದು ಪ್ರಮಾಣವಚನ ಸ್ವೀಕರಿಸಿದ ಸಂಪುಟದ ಸ್ವರೂಪದಿಂದ ವೇದ್ಯವಾಗುತ್ತದೆ.

ಸಂಪುಟದಲ್ಲಿ ಶ್ರೀ ಎನ್‌. ಸಂಜೀವರೆಡ್ಡಿ, ಶ್ರೀ ಜಿ.ಎಸ್‌. ಪಾಠಕ್‌ ಅವರನ್ನು ಕೈಬಿಟ್ಟಿರು ವುದು ಒಂದು ರೀತಿ ಸೋಜಿಗವೆ. ಪಕ್ಷದೊಳಗಿನ ಗುಂಪುಗಾರಿಕೆ ನಿರ್‍ಮೂಲನಕ್ಕೆ ಈ ಕ್ರಮದ ಅನುಸರಣೆ ಎಂದು ದೆಹಲಿಯ ರಾಜಕೀಯ ವಲಯಗಳಲ್ಲಿ ಭಾವಿಸಲಾಗಿದೆ.

‘ಸದ್ಯದಲ್ಲಿ’ ಸಂಪುಟದ ವಿಸ್ತರಣೆಯಿಲ್ಲ: ಮುಖ್ಯಮಂತ್ರಿ
ಬೆಂಗಳೂರು, ಮಾ. 13–
ಈಗ ತಾವು ರಚಿಸಿರುವ ಮಂತ್ರಿಮಂಡಲಕ್ಕೆ ‘ತತ್‌ಕ್ಷಣದಲ್ಲಿ’ ಹೆಚ್ಚು ಸದಸ್ಯರನ್ನು ಸೇರಿಸುವ ಸಂಭವವಿಲ್ಲವೆಂದು ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪ ಅವರು ಸಂಜೆ ವರದಿಗಾರರಿಗೆ ತಿಳಿಸಿದರು. ಸಂಜೆ ವಿಮಾನದಲ್ಲಿ ಹಿಂದಿರುಗಿದ ಮುಖ್ಯಮಂತ್ರಿಗಳು ನೇರವಾಗಿ ತಮ್ಮ ನಿವಾಸವಾದ ‘ಬಾಲಬ್ರೂಯಿ’ಗೆ ಆಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.