ADVERTISEMENT

ಮಂಗಳವಾರ, 24–1–1967

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 19:30 IST
Last Updated 23 ಜನವರಿ 2017, 19:30 IST

ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಪೂರಾ
ಒಮ್ಮುಖ ವಿರೋಧವಿಲ್ಲ

ಬೆಂಗಳೂರು, ಜ. 23– ಮುಖ್ಯಮಂತ್ರಿಗಳೂ ಸೇರಿ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವ ಪ್ರದೇಶ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳಲು 1967ರ ಚುನಾವಣೆಯಲ್ಲಿ ಬಲವಾದ ಹೋರಾಟ ನಡೆಸಬೇಕಾಗಿದೆ.

ನಾಮಪತ್ರಗಳನ್ನು ವಾಪಸು ಪಡೆಯಲು ಕೊನೆಯ ದಿನವಾದ ಇಂದು ಸಾಧ್ಯವಾದಷ್ಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ನೇರ ಸ್ಪರ್ಧೆ ಏರ್ಪಡಿಸಬೇಕೆಂಬ ಉಳಿದ ಪಕ್ಷಗಳ ಹೊಂದಾಣಿಕೆ ಸಮಿತಿಯ ಪ್ರಯತ್ನ ಹಿಂದೆ ಹೇಳಿದ್ದಷ್ಟು ಫಲವನ್ನು ಗಳಿಸಿದಂತೆ ಕಂಡು ಬಂದಿಲ್ಲ.

ರಾಷ್ಟ್ರಾದ್ಯಂತ ಕಾಂಗ್ರೆಸ್‌
ಪಕ್ಷಕ್ಕೆ ಹಲವಾರು
ಅವಿರೋಧ ಆಯ್ಕೆಗಳು

ಮುಂಬೈ ಜ. 23– ಮಹಾರಾಷ್ಟ್ರದ ಗೃಹಸಚಿವ ಶ್ರೀ ಡಿ.ಎಸ್‌. ದೇಸಾಯಿ ಅವರು ರಾಜ್ಯ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅವರ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಸ್ವತಂತ್ರ ಅಭ್ಯರ್ಥಿ ಶ್ರೀ ಬಾಬಾ ಸಾಹೇಬ್‌ ಪಟಂಕರ್‌ ಅವರು ತಮ್ಮ ಉಮೇದುವಾರಿಕೆ ವಾಪಸು ಪಡೆದರು.

ಮದ್ರಾಸಿನ ಮಾಜಿ ರಾಜ್ಯಪಾಲ ಶ್ರೀ ಬಿಷ್ಣುರಾಮ ಮೇಧಿ ಅವರು ಅಸ್ಸಾಂ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಡಾ. ಕೆ.ಎಲ್‌. ರಾವ್‌ ಅವರು ವಿಜಯವಾಡ ಕ್ಷೇತ್ರದಿಂದ ಲೋಕಸಭೆಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಅವಿರೋಧವಾಗಿ ಎಸ್‌.ಎನ್‌. ಆಯ್ಕೆ
ಬೆಂಗಳೂರು, ಜ. 23– ಶಿಗ್ಗಾಂವಿ ಕ್ಷೇತ್ರದ ಚುನಾವಣೆ ಅಧಿಕಾರಿ ಇಂದು ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪ ಅವರು ಅವಿರೋಧವಾಗಿ ಚುನಾಯಿತರಾದರೆಂದು ಘೋಷಿಸಿದರು. ಸಂಡೂರು ಕ್ಷೇತ್ರದಿಂದ ಕಾಂಗ್ರೆಸ್‌ ಸ್ಪರ್ಧಿ ಶ್ರೀ ಎಂ.ವೈ. ಘೋರ್ಪಡೆ ಅವರು ಅವಿರೋಧವಾಗಿ ಚುನಾಯಿತರಾಗಿದ್ದಾರೆಂದು ಘೋಷಿಸಲ್ಪಟ್ಟರು.

ಖ್ಯಾತ ಕರ್ನಾಟಕ ಸಂಗೀತ ವಿದ್ವಾನ್‌
ಶ್ರೀ ಅರಿಯಕುಡಿ ಅವರ ನಿಧನ

ಮದ್ರಾಸು, ಜ. 23– ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸ ಶ್ರೀ ಅರಿಯಕುಡಿ ರಾಮಾನುಜ ಅಯ್ಯಂಗಾರ್‌ ಅವರು ಇಂದು ಇಲ್ಲಿ ನಿಧನರಾದರು.
78 ವರ್ಷ ವಯಸ್ಸಾಗಿದ್ದ ಶ್ರೀ ಅರಿಯಕುಡಿ ಅವರು ಸ್ವಲ್ಪ ಕಾಲದಿಂದ ಅಸ್ವಸ್ಥರಾಗಿದ್ದರು.

ಮಾವೊ ವಿರೋಧಿಗಳ ಪ್ರಾಬಲ್ಯ ಹಾಂಗ್‌ಕಾಂಗ್‌, ಜ:23– ಚೀನದ ಆಡಳಿತ ಹೋರಾಟದಲ್ಲಿ ವಿರೋಧಿಗಳ ಚಳವಳಿಯನ್ನು ಅಧ್ಯಕ್ಷ ಮಾವೊತ್ಸೆತುಂಗರ ಬೆಂಬಲಿಗರು ಸದ್ಯಕ್ಕೆ ಸಂಪೂರ್ಣವಾಗಿ ಮಟ್ಟ ಹಾಕಲು ಅಸಮರ್ಥರಾಗಿರುವರೆಂದು ಚೀನ ಇಂದು ಒಪ್ಪಿಕೊಂಡಿತು.

ಚೀನ ಸರ್ಕಾರದ ಈ ಒಪ್ಪಿಗೆಯನ್ನು ಪ್ರಕಟಿಸಿದ ಸರ್ಕಾರದ ನವಚೀನ ವಾರ್ತಾ ಸಂಸ್ಥೆಯು, ಆದರೆ ಮಾವೊ ಅವರಿಗೆ ರಾಷ್ಟ್ರದ ಸೈನ್ಯ ಮತ್ತು ಕೃಷಿಕರ ಬೆಂಬಲ ಹೆಚ್ಚಾಗುತ್ತಿದೆಯೆಂದೂ ಅಂತಿಮವಾಗಿ ಮಾವೊ ಅವರ ಬೆಂಬಲಿಗರು ನಡೆಸುತ್ತಿರುವ ಸಾಂಸ್ಕೃತಿಕ ಚಳವಳಿಗೆ ಜಯ ಖಂಡಿತವೆಂದು ಸಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.